Thursday, 12th December 2024

ಜಾತೀಯತೆಯ ಚಕ್ರವ್ಯೂಹದಲ್ಲಿ ಬಂಧಿಯಾಗಿರುವ ರಾಜಕೀಯ !

ವಿಚಾರ ವೇದಿಕೆ

ಮರಿಲಿಂಗಗೌಡ ಮಾಲಿಪಾಟೀಲ್

ಕುರುಕ್ಷೇತ್ರ ಯುದ್ಧದ ೧೪ನೆಯ ದಿನ; ಕೌರವ ಸೈನ್ಯದ ಸೇನಾಽಪತಿ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ಬಲಿದು ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸಿದ್ದರು. ಆಗ ಚಕ್ರವ್ಯೂಹವನ್ನು ಭೇದಿಸಿ ಹೊರಬರುವ ವಿದ್ಯೆ ತಿಳಿದಿದ್ದವರು ಕೇವಲ ೪ ಜನ. ಶ್ರೀಕೃಷ್ಣ, ಬಲರಾಮ, ಅರ್ಜುನ ಮತ್ತು ಸ್ವತಃ ಚಕ್ರವ್ಯೂಹವನ್ನು ಬಲಿದಿದ್ದ ಪ್ರತಿಪಕ್ಷದ ನಾಯಕ ದ್ರೋಣರು. ಶ್ರೀಕೃಷ್ಣ ಮತ್ತು ಅರ್ಜುನ ಸಮಶಪ್ತಕರೊಡನೆ ಯುದ್ಧಕ್ಕೆ ಹೋಗಿ ಆಗಿತ್ತು. ಬಲರಾಮ ಪ್ರತಿಪಕ್ಷದಲ್ಲಿದ್ದ ಮತ್ತು ಯುದ್ಧದ
ಸಂದರ್ಭದಲ್ಲಿ ತೀರ್ಥಯಾತ್ರೆಯನ್ನು ಕೈಗೊಂಡಿದ್ದ (ಬಲರಾಮನೂ ಕೌರವ ಪಕ್ಷದಲ್ಲಿದ್ದ) ಹೀಗಾಗಿ ಚಕ್ರವ್ಯೂಹವನ್ನು ಭೇದಿಸಿ ಯುದ್ಧ ಗೆಲ್ಲಬಲ್ಲ ಯಾರೂ ಲಭ್ಯ ರಿಲ್ಲದೇ ಸಂಭವನೀಯ ಸೋಲಿನ ನಿರೀಕ್ಷೆಯದಲ್ಲಿದ್ದ ಯುಧಿಷ್ಠಿರ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಈ ಹಂತದಲ್ಲಿ ಯುಧಿಷ್ಠಿರನನ್ನು ಭೇಟಿಯಾದ ಅರ್ಜುನನ ಪುತ್ರ ಅಭಿಮನ್ಯು ತನಗೆ ಚಕ್ರವ್ಯೂಹವನ್ನು ಭೇದಿಸಲು ತಿಳಿದಿದ್ದು ಯುದ್ಧಕ್ಕೆ ಹೋಗಲು ಅನುಮತಿ ಕೇಳುತ್ತಾನೆ.

ಆದರೆ ಚಕ್ರವ್ಯೂಹವನ್ನು ಭೇದಿಸಲು ತಿಳಿದಿದ್ದರೂ ಅದರಿಂದ ಹೊರಬರಲು ತಿಳಿಯದ ಬಾಲಕನನ್ನು ಯುದ್ಧಕ್ಕೆ ಕಳುಹಿಸಲು ಯುಧಿಷ್ಠಿರ ಒಪ್ಪುವುದಿಲ್ಲ. ಅಂತಿಮ ವಾಗಿ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸುವುದೆಂದೂ ಭೀಮ ಮುಂತಾದವರು ಅವನ ಜತೆಗೇ ಇದ್ದು ಅವನನ್ನು ರಕ್ಷಿಸುವುದೆಂದೂ ನಿರ್ಧರಿಸಿ ಯುದ್ಧಕ್ಕೆ ಹೋಗುತ್ತಾರೆ. ಅಭಿಮನ್ಯು ಚಕ್ರವ್ಯೂಹವನ್ನೇನೋ ಭೇದಿಸುತ್ತಾಬಂಧನೆ. ಆದರೆ ಜಯದ್ರಥ (ಒಂದು ದಿನದ ಮಟ್ಟಿಗೆ ಅರ್ಜುನನು ಹೊರತಾದ ಪಾಂಡವರನ್ನು ತಡೆಯುವ ಸಾಮರ್ಥ್ಯ ಶಿವನ ವರಬಲದಿಂದ ಆತನಿಗೆ ಸಿದ್ಧಿಸಿತ್ತು). ಭೀಮನನ್ನು ತಡೆದ ಪರಿಣಾಮವಾಗಿ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿದರೂ ಭೀಮ ಮತ್ತು ಇತರರನ್ನು ಚಕ್ರವ್ಯೂಹವನ್ನು ಪ್ರವೇಶಿಸಲಾಗದೇ ಅಭಿಮನ್ಯು ಒಬ್ಬನೇ ಚಕ್ರವ್ಯೂಹದೊಳಗೆ ಸಿಲುಕುತ್ತಾನೆ.

ಅಲ್ಲಿ ಅಭಿಮನ್ಯು ಅಮೋಘ ಪರಾಕ್ರಮ ತೋರಿದರೂ ಒಬ್ಬಂಟಿಯಾಗಿ, ನಿಸ್ಸಹಾಯಕನಾಗಿ ಕೌರವ ಸೈನ್ಯದ ಕುತಂತ್ರಕ್ಕೆ ಸಿಲುಕಿ ವೀರಮರಣವನ್ನಪ್ಪುತ್ತಾನೆ.
ಮಹಾಭಾರತದ ಈ ಕಥೆ ಇಂದಿನ ಭಾರತದ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಜಾತೀಯತೆ ಎನ್ನುವ ಚಕ್ರವ್ಯೂಹಕ್ಕೆ ಸಿಲುಕಿ ನಲುಗುತ್ತಿದೆ. ಈ ಚಕ್ರವ್ಯೂಹವನ್ನು ಬಲಿದವರು ಯಾರೋ ಗೊತ್ತಿಲ್ಲ. ಭೇದಿಸುವುದು ಹೇಗೆಂದು ಯಾರಿಗೂ ಗೊತ್ತಿಲ್ಲ. ಒಂದುವೇಳೆ ಭೇದಿಸಿದರೂ ಹೊರಬರಲು ತಿಳಿದಿಲ್ಲ. ಭೇದಿಸದಂತೆ ತಡೆ ಯುವ ಜಯದ್ರಥರು ಎಲ್ಲೂ ಇದ್ದಾರೆ.

ಕೆಲವು ಬಿಸಿರಕ್ತದ ಯುವಕರು ಈ ಜಾತೀಯತೆಯ ಚಕ್ರವ್ಯೂಹವನ್ನು ಭೇದಿಸಿದಂತೆ ಕಂಡರೂ ಹೊರಬರುವಲ್ಲಿ ದಾರುಣವಾಗಿ ಸೋಲುತ್ತಾರೆ. ಸದ್ಯಕ್ಕೆ ಗುಬ್ಬಿಸಿರುವ ಕಾಂತರಾಜ್ ವರದಿಯನ್ನೇ ನೋಡಿ. ಲಿಂಗಾಯತ ಸಮೂಹ ಕಾಂತರಾಜ್ ವರದಿಯನ್ನು ತಿರಸ್ಕರಿಸಿ ಬೃಹತ್ ಆಂದೋಲನವನ್ನೇ ನಡೆಸುತ್ತಿದೆ. ವರದಿಯ ಮಂಡನೆಯೇ ಆಗಿಲ್ಲ; ಆಗಲೇ ತಿರಸ್ಕರಿಸುವ ಮಾತು ಯಾಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಅಂದರೆ ಮಂಡನೆಗೂ ಮೊದಲೇ ವರದಿ ಸೋರಿಕೆ ಆಗಿದೆ ಎಂದೇ ಅರ್ಥ. ರಾಜ್ಯದಲ್ಲಿ ೨ ಕೋಟಿ ಯಷ್ಟು ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯಿತರಿದ್ದಾರೆ.

ಆದರೆ ಕಾಂತರಾಜ್ ವರದಿಯ ಪ್ರಕಾರ ಕೇವಲ ೭೦ ಲP ಕಾಂತರಾಜ್ ವರದಿ ವೈಜ್ಞಾನಿಕವಾಗಿಲ್ಲ. ಹೀಗಾಗಿ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ಲಿಂಗಾಯಿತ ಸಮೂಹದ ಪ್ರತಿಪಾದನೆ.

ಏನಿದು ಕಾಂತರಾಜ್ ವರದಿ?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ನ್ಯಾಯದ ಉದ್ದೇಶದಿಂದ ಕಾಂತರಾಜ್ ಆಯೋಗವನ್ನು ರಚಿಸಲಾಗಿತ್ತು. ಮುಖ್ಯವಾಗಿ ಮೀಸಲಾತಿಯ ಪ್ರಮಾಣ ನಿರ್ಧರಿಸುವ ಉದ್ದೇಶದಿಂದ ಜಾತಿಗಣತಿ ನಡೆಸಲು ತೀರ್ಮಾನಿಸಲಾಗತ್ತು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮೀಕ್ಷೆ ನಡೆಸುವುದು ಕಾಂತರಾಜು ಆಯೋಗದ ರಚನೆಯ ಹಿಂದಿನ ಕಾರಣವಾಗಿತ್ತು. ೨೦೧೩ರಲ್ಲಿ ರಚನೆಯಾದ ಈ ಸಮಿತಿ ಮನೆಮನೆಗೂ ಹೋಗಿ ೫೫ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿತ್ತು. ಮನೆಗಳಿಲ್ಲದ ಅಲೆಮಾರಿಗಳನ್ನೂ ಮಾತನಾಡಿಸಲಾಗಿತ್ತು. ಊರ ಹೊರಗಡೆ ಇದ್ದವರು, ಮನೆ ಇಲ್ಲದ ನಿರಾಶ್ರಿತರು ಹೀಗೆ ಎಲ್ಲರನ್ನೂ ಪ್ರಶ್ನಿಸಿ ಮಾಹಿತಿ ಸಂಗ್ರಹಿಸಲಾಗಿತ್ತು. ಶಿಕ್ಷಣ, ಉದ್ಯೋಗ, ಜಾತಿ ಹೀಗೆ ಎಲ್ಲಾ ಮಾಹಿತಿಯನ್ನೂ ಪಡೆಯಲಾಗಿತ್ತು.

ಆದರೆ ಈ ಬೃಹತ್ ಕೆಲಸ ಮುಗಿಯುವ ಹೊತ್ತಿಗೆ ಸಿದ್ದರಾಮಯ್ಯನವರ ಅಧಿಕಾರ ಮುಗಿದಿತ್ತು. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮೆಂಬರ್ ಸೆಕ್ರೆಟರಿಗೆ ಕಾಂತರಾಜು ಆಯೋಗ ವರದಿ ನೀಡಿತ್ತು. ಅದನ್ನು ಸರಕಾರ ಸ್ವೀಕರಿಸಿಲ್ಲ. ನಂತರ ಮತ್ತೆ ಚುನಾವಣೆ ನಡೆದು ಪುನಃ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈಗ ಸಿದ್ದರಾಮಯ್ಯನವರು ವರದಿಯನ್ನು ಒಪ್ಪಿದ್ದಾರೋ ಇಲ್ಲವೋ ತಿಳಿಯುವುದಕ್ಕೂ ಮುನ್ನವೇ ವರದಿ ಅವೈಜ್ಞಾನಿಕ; ತಿರಸ್ಕರಿಸಿ ಎಂಬ ಕೂಗೆದ್ದಿದೆ. ಆದರೆ ಇದನ್ನು ಆಯೋಗದ ಅಧ್ಯಕ್ಷ ಡಾ. ಕಾಂತರಾಜು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.

‘ಅದೊಂದು ಸಂಪೂರ್ಣ ವೈಜ್ಞಾನಿಕ ವರದಿ. ಮೊದಲು ವರದಿಯಲ್ಲಿ ಏನಿದೆ ಎಂದು ನೋಡಿ, ಪರಿಶೀಲಿಸಿ. ನಂತರ ಹೇಳಿ. ಮನೆಮನೆಗೂ ಹೋಗಿ ೫೫ ಪ್ರಶ್ನೆ ಕೇಳಿದೇವೆ. “ಹಿಂದುಳಿದವರು” ಎಂದು ನಿರ್ಧರಿಸಲು ಏನೇನು ಮಾಹಿತಿ ಬೇಕೋ ಎಲ್ಲವೂ ವರದಿಯಲ್ಲಿದೆ. ವರದಿ ವೈಜ್ಞಾನಿಕ’ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಆಯೋಗದ ಅಧ್ಯಕ್ಷ ಡಾ. ಕಾಂತರಾಜು. ರಾಜಕೀಯ ಟೂಲ್ ಆಗುತ್ತಿದೆಯಾ? ಆದರೆ ಅಷ್ಟರಗಲೇ ಕಾಂತರಾಜು ವರದಿ ರಾಜಕಾರಣಗೊಂಡಿದೆ. ಒಕ್ಕಲಿಗ ಸಮುದಾಯದ ಸಂಘಟನೆಗಳು ಮತ್ತು ಲಿಂಗಾಯತ ಸಮುದಾಯ ವರದಿಯನ್ನು ತಿರಸ್ಕರಿಸಿದ್ದಾರೆ.

ಹಿಂದುಳಿದ ವರ್ಗಗಳ ಸಂಘಟನೆಗಳಿಂದ ಒಕ್ಕೂಟ ವರದಿಯನ್ನು ಸ್ವೀಕರಿಸಬೇಕೆಂದು ಪಟ್ಟು ಹಿಡಿದಿದೆ. ಈ ಮಧ್ಯೆ ಮೂಲಪ್ರತಿ ಮಿಸ್ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಕಾಂತರಾಜು ವರದಿಯನ್ನು ತಮಗೆ ಬೇಕಾದಂತೆ ತಿರುಚಲಾಗಿದೆ ಎಂದೂ ಅರ್ಥವಾಗುತ್ತದೆ. ‘೨ ಕೋಟಿ ಜನಸಂಖ್ಯೆ ಇರುವ ಲಿಂಗಾಯಿತ
ಸಮುದಾಯ ಕಾಂತರಾಜು ವರದಿಯ ಪ್ರಕಾರ ೭೦ ಲಕ್ಷ ಎನ್ನುವುದು ಲಿಂಗಾಯಿತ ಸಮುದಾಯದ ಪ್ರಬಲ ಆಕ್ಷೇಪ. ಅದಕ್ಕೆ ಕಾರಣ ಕಾಂತರಾಜು ಆಯೋಗ ಸರ್ವೇ ಮಾಡುವಾಗ ಲಿಂಗಾಯಿತ ಸಮುದಾಯ ಒಳಪಂಗಡಗಳ ಮೂಲಕ ಗುರುತಿಸಿಕೊಂಡಿದೆ. ಇದು ಸರಿಯಲ್ಲ, ಸರ್ವೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಲಿಂಗಾಯಿತರೂ ವೀರಶೈವ ಲಿಂಗಾಯಿತ ಎಂದೇ ಗುರುತಿಸಿಕೊಳ್ಳಬೇಕು.

ಒಳಪಂಗಡಗಳು ಒಂದಾದರೆ ಸಮುದಾಯಕ್ಕೆ ವಜ್ರಮುಷ್ಟಿಯ ಶಕ್ತಿ ಬರಲಿದೆ. ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಲಕ್ಷಾಂತರ ಕಡುಬಡವರಿದ್ದು ಕೇಂದ್ರ ಸರಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ) ಸೇರಿಸಲು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಮತ್ತು ಕೇಂದ್ರ ಸರಕಾರ ಈ ಶಿ-ರಸು ಅಂಗೀಕರಿಸಬೇಕು’ ಎಂಬುದು ಲಿಂಗಾಯಿತ ಸಮುದಾಯದ ಒತ್ತಾಯ. ಆದರೆ ಸ್ವತಃ ಕಾಂತರಾಜು ಅವರೇ ಹೇಳುವಂತೆ ‘ಮುಖ್ಯಮಂತ್ರಿ
ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಆಶಯದಂತೆ ವರದಿ ಸಿದ್ಧಗೊಂಡಿದೆ. ಈ ಸಮೀಕ್ಷೆಯಲ್ಲಿ ಜಾತಿ ಒಂದು ಅಂಶ ಅಷ್ಟೇ. ಉಳಿದಂತೆ ಇದೊಂದು ಸಾಮಾಜಿಕ, ಶೈಕ್ಷಣಿಕ ಗಣತಿ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಒಪ್ಪುತ್ತಾರೆ. ನಿಮ್ಮ ಬಳಿ ಏನು ಮಾಹಿತಿ ಇದೆ’ ಎಂದು ಸರ್ವೋಚ್ಛ ನ್ಯಾಯಾಲಯ ಕೇಳುತ್ತದೆ. ಅದಕ್ಕಾಗಿ ಮಾಹಿತಿ ಕಲೆಹಾಕಿದೆವೆ ಎನ್ನುತ್ತಾರೆ ಸಿದ್ದರಾಮಯ್ಯನವರು.

ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯ ಪ್ರಾಬಲ್ಯ ಹಿಂದುಳಿದವರಿಗೆ ಮೀಸಲಾತಿ ಕೊಡಲಿ, ತಪ್ಪಿಲ್ಲ. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಲಿ. ಯಾರದೂ ಆಕ್ಷೇಪವಿಲ್ಲ. ಆದರೆ ಈ ದೇಶದಲ್ಲಿ ಜಾತಿಯೇ ಎಲ್ಲದಕ್ಕೂ ಕಾರಣವಾಗಿದೆ, ಎಲ್ಲವನ್ನೂ ನಿರ್ಧರಿಸುತ್ತದೆ ಯಾಕೆ? ಜಾತ್ಯತೀತ ರಾಷ್ಟ್ರದಲ್ಲಿ ಅಧಿಕಾರದ ಸೂತ್ರ ಹಿಡಿದಿರುವ,
ಅಽಕಾರಕ್ಕೆ ಬರಲು ಪ್ರಯತ್ನಿಸುವ ಪ್ರತಿಯೊಬ್ಬ ರಾಜಕಾರಣಿಯೂ ಜಾತಿಯ ಮೂಲಕವೇ ರಾಜಕೀಯ ನಡೆಸುತ್ತಿರುವುದು ಕಣ್ಣ ಮುಂದಿನ ವಾಸ್ತವ.
ಜಾತ್ಯತೀತತೆಯ ಮಾತನಾಡುತ್ತಲೇ ಚುನಾವಣೆಯ ಸಂದರ್ಭದಲ್ಲಿ ಜಾತಿ ನೋಡಿ ಟಿಕೇಟ್ ಕೊಡುತ್ತಾರೆ. ಜಾತಿ ಇಲ್ಲದ ಸಮಾಜವನ್ನು ನಿರ್ಮಿಸುವುದು ಕನಸಿನಲ್ಲಿ ಮಾತ್ರ ಸಾಧ್ಯ ಎನ್ನುವಂಥ ಸ್ಥಿತಿ ನಿರ್ಮಾಣವಾಗುತ್ತಿದೆ.

ಬಸವಾದಿ ಶರಣರು ಅನುಭವ ಮಂಟಪವನ್ನು ನಿರ್ಮಾಣ ಮಾಡಿ ಸಮಾನತೆಯ ಕನಸು ಕಂಡರು. ಸಮಾಜದಲ್ಲಿರುವ ಜಾತಿ, ವರ್ಗ ಆರ್ಥಿಕ ಸಮಾನತೆಗಳನ್ನು
ಹೋಗಲಾಡಿಸುವ ಪ್ರಯತ್ನ ಮಾಡಿದರು. ಮನುಷ್ಯ ಕುಲ ಒಂದೇ ಎಂದು ಸಾರಿದರು. ಸಮಾಜ ಸುಧಾರಕರು ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ಎಂದು ಕೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತ ತನ್ನ ಸಂವಿಧಾನದಲ್ಲಿಯೇ ಜಾತ್ಯತೀತ ಎಂದು ತನ್ನನ್ನು ತಾನು ಉದ್ಘೋಷಿಸಿಕೊಂಡಿತು. ಆದರೂ ಭಾರತದಿಂದ ಜಾತಿ ತೊಲಗಿತಾ? ಎಂದು ಕೇಳಿದರೆ ಬರುವ ಉತ್ತರ ವಿಷಾದಕ್ಕೆ ಕಾರಣವಾಗುತ್ತದೆ.

ಜಾತಿಯ ಬೆಂಬಲವಿಲ್ಲದೇ ಭಾರತದಲ್ಲಿ ಚುನಾವಣೆಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ. ಕೆಲಸಕ್ಕೆ ಸೇರಬೇಕಿದ್ದರೆ, ಬಡ್ತಿ ಪಡೆಯಬೇಕಿದ್ದರೆ, ಜಾತಿಯ ಅಂಶಗಳು ಪ್ರಧಾನವಾಗಿ ಕೆಲಸ ಮಾಡುತ್ತಿದೆ ಎಂಬ ಭಾವನೆ ಎಡೆ ಹರಡಿದೆ. ಜಾತಿಯ ಆಧಾರದ ಮೇಲೆ ಟ್ರಾನ್ಸರ್ಗಳು ನಡೆಯುತ್ತವೆ. ರಾಜಕಾರಣಿಗಳು ಜಾತಿಗಣತಿ ಬೇಡ ಎಂದು ಎಲ್ಲೂ ಹೇಳುತ್ತಿಲ್ಲ. ಜಾತಿಗಣತಿ ಬೇಕು. ಆದರೆ ಅವರಿಗೆ ಅನುಕೂಲವಾಗುವಂತೆ ಬೇಕು. ಒಬ್ಬರಿಗೆ ಅನುಕೂಲವಾದದ್ದು ಇನ್ನೊಬ್ಬರಿಗೆ ಒಪ್ಪಿಗೆಯಾಗದು. ರಾಜಕೀಯವಾಗಿ ಎಲ್ಲರೂ ಸಮ್ಮತಿಸುವಂಥ ವರದಿ ಬರುವುದು ಸಾಧ್ಯವೆ? ಗಣತಿಗಳ ಪರಿಣಾಮವಾಗಿ ಹಿಂದುಳಿದವರನ್ನು ಮುಂದೆ ತರಲು ಸಾಧ್ಯವಾಗಲಿ ಎನ್ನುವುದು ಸದಾಶಯ. ಗಣತಿಗಳು ರಾಜಕೀಯಕ್ಕೆ ದಾಳವಾಗದಿರಲಿ. ಭಾರತ ಮುಂದುವರಿದ ರಾಷ್ಟ್ರವಾಗಬೇಕಿದ್ದರೆ ಸಮಸಮಾಜ ನಿರ್ಮಾಣವಾಗಬೇಕು. ಹಾಗಾಗಬೇಕಿದ್ದರೆ ಹಿಂದುಳಿದವರು ಮುಂದೆ ಬರಬೇಕು. ಅದಕ್ಕೆ ರಾಜಕಾರಣ ಅಡ್ಡಿಯಾಗದಿರಲಿ.