ಅಶ್ವತ್ಥಕಟ್ಟೆ
ranjith.hoskere@gmail.com
ಮೈತ್ರಿ ಅಧಿಕೃತವಾಗುತ್ತಿದ್ದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿಯ ಪ್ರತಿ ಹೆಜ್ಜೆಯನ್ನು ಬಿಜೆಪಿ ನಾಯಕರಿಗಿಂತ ಉತ್ತಮ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್‌ನ ಮೂಲ ಸಿದ್ಧಾಂತಗಳಿಗೆ ಸರಿ ಎನಿಸದೇ ಇರುವ ವಿಷಯಗಳನ್ನೂ ಅವರು ಅಪ್ಪಿ-ಒಪ್ಪಿ ಮುದ್ದಾಡುತ್ತಿರುವುದು ಸ್ಪಷ್ಟ.
ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಮಿತ್ರರಾಗಿದ್ದವರು ನಾಳೆ ಶತ್ರುವಾಗಬಹುದು. ನಿನ್ನೆಯವರೆಗೆ ಒಬ್ಬರ ಮುಖ ಒಬ್ಬರು ನೋಡದವರು ಇಂದು ಹೆಗಲ ಮೇಲೆ ಕೈಹಾಕಿಕೊಂಡು ‘ಸ್ನೇಹ’ ಬೆಳೆಸಬಹುದು. ರಾಜ್ಯದ ಮಟ್ಟಿಗೆ ಈ ಮಾತು ಹೇಳುವುದಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿಯೇ ಕಾರಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಅಧಿಕೃತ ಮೈತ್ರಿಯ ಘೋಷಣೆಯ ಬಳಿಕ ಈ ಎರಡೂ ಪಕ್ಷಗಳು ‘ಒಂದಾಗಿರುವ’ ಪರಿ ನೋಡಿದರೆ ವಿಲೀನವಾದರೂ ಅಚ್ಚರಿಯಿಲ್ಲ ಎನ್ನುವ ಮಟ್ಟಿಗೆ ಬಂದು ನಿಂತಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಗುಸುಗುಸು ಶುರುವಾಗಿ ವರ್ಷಗಳೇ ಕಳೆದರೂ, ಅಽಕೃತ ಘೋಷಣೆಯಾಗಿದ್ದು ಮಾತ್ರ ಕೆಲ ತಿಂಗಳ ಹಿಂದೆ. ೨೦೧೮ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಮುರಿದು ಬೀಳುವುದಕ್ಕೆ ಕಾರಣ ಬಿಜೆಪಿ ಎನ್ನುವುದು ಗೊತ್ತಿದ್ದರೂ, ಸರಕಾರ ಬಿದ್ದ ಕೆಲವೇ ತಿಂಗಳಿಗೆ ಬಿಜೆಪಿಯೊಂದಿಗೆ ಸಖ್ಯ ಬೆಳೆಸಲು ಜೆಡಿಎಸ್ ಮುಂದಾಗಿತ್ತು. ಆದರೆ ಈಗ ಹಲವು ತಿಂಗಳ ಕಾಲ ಸಖ್ಯ ‘ಗುಪ್ತ’ವಾಗಿತ್ತು. ಮೈತ್ರಿ ಬಹಿರಂಗವಾಗಿ ತಿಂಗಳು ಕಳೆಯುವ ಮೊದಲೇ, ಈ ಮೈತ್ರಿ ಗಾಢವಾಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಹಾಗೆ ನೋಡಿದರೆ, ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಭಾಗವಾಗುವುದು ಖಚಿತವಾಗುತ್ತಿದ್ದಂತೆ ಆರಂಭದಲ್ಲಿ ಈಗಿರುವ ಮೈತ್ರಿಪಕ್ಷಗಳ ರೀತಿಯಲ್ಲಿ ಜೆಡಿಎಸ್ ಸಹಯೋಗ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಆತ್ಮೀಯತೆ ಬೆಳೆಯುತ್ತಲೇ ಹೋಗಿದ್ದು ಗಮನಿಸಿದರೆ, ಮೈತ್ರಿಯ ಗಾಢತೆ ಅರ್ಥವಾಗುತ್ತದೆ. ಅದರಲ್ಲಿಯೂ ಬಿಜೆಪಿ ವರಿಷ್ಠರನ್ನು ಭೇಟಿ ಯಾಗಲು ರಾಜ್ಯ ಬಿಜೆಪಿ ನಾಯಕರಿಗೆ ಸಿಗದ ‘ಸಮಯ’ ಜೆಡಿಎಸ್ ನಾಯಕರಿಗೆ ಸಿಕ್ಕಿದ್ದು, ಹಲವರ ಅಚ್ಚರಿಗೆ ಕಾರಣವಾಯಿತು. ಅದಷ್ಟೇ ಅಲ್ಲದೇ, ದೇವೇಗೌಡರ ಇಡೀ ಕುಟುಂಬದವರು ಒಟ್ಟಾಗಿ ಹೋಗಿ ಮೋದಿ ಅವರೊಂದಿಗೆ ಚರ್ಚಿಸಿದ್ದು, ಬಳಿಕ ಅರ್ಧ ತಾಸಿಗೂ ಹೆಚ್ಚು ಕಾಲ ದೇವೇಗೌಡರು, ಮೋದಿ ಹಾಗೂ ಕುಮಾರಸ್ವಾಮಿ ಅವರು ನಡೆಸಿದ ‘ಒನ್ ಟು ಒನ್’ ಮೀಟಿಂಗ್ ಎಲ್ಲವನ್ನೂ ಗಮನಿಸಿದಾಗ ಕೇಂದ್ರದ ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರಿಗಿಂತ ಜೆಡಿಎಸ್ ನಾಯಕರ ಮೇಲೆಯೇ ಒಲವಿದೆಯೇ ಎನ್ನುವ ಸಂಶಯ ಹುಟ್ಟಿದರೆ ಅಚ್ಚರಿಯಿಲ್ಲ.
ಇನ್ನೊಂದು ಬದಿಯಲ್ಲಿ ಈ ವಿಷಯವನ್ನು ಗಮನಿಸಬೇಕಿದೆ. ಹಳೇ ಮೈಸೂರು ಭಾಗವನ್ನು ನೆಚ್ಚಿಕೊಂಡಿರುವ ಜೆಡಿಎಸ್ ಕನಿಷ್ಠ ನಾಲ್ಕೈದು ಸೀಟುಗಳಿಗೆ ಬೇಡಿಕೆಯಿಡಲಿದೆ ಎನ್ನುವ ಮಾತುಗಳು ಆರಂಭದಲ್ಲಿ ಕೇಳಿಬಂದಿತ್ತು. ಆದರೆ ಜೆಡಿಎಸ್ ನಾಯಕರ ಈಗಿನ ನಡೆಯನ್ನು ಗಮನಿಸಿದರೆ ‘ಬಿಜೆಪಿ ವರಿಷ್ಠರು ಕೊಟ್ಟಷ್ಟು ಕೊಡಲಿ. ಮೈತ್ರಿಯೊಂದಿರಲಿ’ ಎನ್ನುವ ಮನಸ್ಥಿತಿಯಲ್ಲಿದ್ದಾರೆ ಎನ್ನುವ ಅನುಮಾನಗಳು ಕಾಡುತ್ತಿವೆ. ಮೈತ್ರಿ ಅಽಕೃತವಾಗುತ್ತಿದ್ದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿಯ ಪ್ರತಿ ಹೆಜ್ಜೆಯನ್ನು ಬಿಜೆಪಿ ನಾಯಕರಿಗಿಂತ ಉತ್ತಮ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಜೆಡಿಎಸ್‌ನ ಮೂಲ ಸಿದ್ಧಾಂತಗಳಿಗೆ ಸರಿ ಎನಿಸದೇ ಇರುವ ವಿಷಯಗಳನ್ನೂ ಅವರು ಅಪ್ಪಿ-ಒಪ್ಪಿ ಮುದ್ದಾಡುತ್ತಿರುವುದು ಸ್ಪಷ್ಟ. ಬಿಜೆಪಿಯ ಬಳಗ ಸೇರುವ ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಾ- ಆಗಿ, ಕಾಂಗ್ರೆಸ್ ಅನ್ನೇ ಟಾರ್ಗೆಟ್ ಮಾಡಿದ್ದರು ಕುಮಾರಸ್ವಾಮಿ. ಪ್ರತಿಪಕ್ಷ ಸ್ಥಾನದಲ್ಲಿದ್ದಾಗಲೂ, ಬಿಜೆಪಿ ಸರಕಾರವನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಅಧಿಕೃತ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಅನ್ನು ಟೀಕಿಸುವುದಕ್ಕೆ ಕುಮಾರಸ್ವಾಮಿ ಅವರು ತಮ್ಮ ಭಾಷಣ ಹಾಗೂ ಮಾತನ್ನು ಮೀಸಲಿಟ್ಟಿದ್ದರು. ಇದೀಗ ಅಽಕೃತವಾಗಿಯೇ ಬಿಜೆಪಿಯ ವಕ್ತಾರಿಕೆ ಮಾಡುತ್ತಿರುವ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಅವರ ಕಾಲೇಜು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಗೊತ್ತಿರುವ ಸಂಗತಿಯೇ. ಈಗ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕುಟುಂಬ ಸಮೇತರಾಗಿ ತೆರಳಲು ಸಜ್ಜಾಗಿದ್ದಾರೆ.
ಜಾತ್ಯತೀತತೆಯ ತತ್ವವನ್ನೇ ಉಸಿರಾಗಿಸಿಕೊಂಡು ಬಂದಿರುವ ದೇವೇಗೌಡರ ಪಕ್ಷದಲ್ಲಿ ಈ ಪ್ರಮಾಣದ ಬದಲಾವಣೆ ಆಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ದಿನದಿಂದ ದಿನಕ್ಕೆ ಪಕ್ಷವು ಅಸ್ತಿತ್ವ ಕಳೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ೨೦೧೯ರ ಲೋಕಸಭಾ ಚುನಾವಣೆ ಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಜೆಡಿಎಸ್, ರಾಷ್ಟ್ರೀಯ ಪಕ್ಷವೊಂದರ ಆಸರೆಯ ನಿರೀಕ್ಷೆಯಲ್ಲಿತ್ತು. ಆದರೆ ಪ್ರಾದೇಶಿಕ ಅಸ್ಮಿತೆಯ ಕಾರಣಕ್ಕೆ ಸ್ವತಂತ್ರ ವಾಗಿಯೇ ಮುಂದುವರಿಯುವ ಸಣ್ಣ ಆಸೆಯನ್ನು ತೋರಿಸಿತ್ತು. ೨೦೨೩ರ ವಿಧಾನಸಭಾ ಫಲಿತಾಂಶದ ಬೆನ್ನಲ್ಲೇ, ಸ್ವತಂತ್ರವಾಗಿ ಹೋದರೆ ಮುಂದಿನ ಚುನಾವಣೆ ವೇಳೆಗೆ ಪಕ್ಷದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎನ್ನುವ ಕಾರಣಕ್ಕೆ ನಾಯಕರು ಮೈತ್ರಿಗೆ ಸಮ್ಮತಿಸಿದ್ದಾರೆ.
ಇನ್ನಾರು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಗಟ್ಟಿತನ ತೀರ್ಮಾನವಾಗಲಿದೆ. ಆರಂಭದಲ್ಲಿ ಜೆಡಿಎಸ್‌ಗೆ ನಾಲ್ಕೈದು ಟಿಕೆಟ್ ಹಂಚಿಕೆಯಾಗಬಹುದು ಎನ್ನುವ ನಿರೀಕ್ಷೆಯಿತ್ತು. ಆದರೀಗ ಹಾಸನ ಮತ್ತು ಮಂಡ್ಯ ಎರಡು ಲೋಕಸಭಾ ಕ್ಷೇತ್ರಗಳು ಸಿಕ್ಕರೆ ಸಾಕು, ಬಿಜೆಪಿಯೊಂದಿಗೆ ಸೇರಿಕೊಂಡು ಅಧಿಕಾರ ಮಾಡೋಣ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ಜೆಡಿಎಸ್ ನಾಯಕರು. ಸೀಟು ಹಂಚಿಕೆಯ ವಿಷಯ ಬಂದಾಗಲೆಲ್ಲ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇದಿಷ್ಟೇ ಅಲ್ಲದೆ, ರಾಜ್ಯದಲ್ಲಿ ಏನು ಮಾಡಲೂ ಸಾಧ್ಯವಿಲ್ಲ ಎನ್ನುವು ದಾದರೆ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಲೆಕ್ಕಚಾರದಲ್ಲಿ ಬಿಜೆಪಿಯಿದೆ.
ಇದರಿಂದ ತಮಗೆ ರಾಜ್ಯ ರಾಜಕಾರಣದ ಹಿಡಿತ ತಪ್ಪಲಿದೆ ಎನ್ನುವ ಸ್ಪಷ್ಟ ಅರಿವು ಕುಮಾರಸ್ವಾಮಿ ಅವರಿಗಿದ್ದರೂ, ಮೋದಿ ಕೊಟ್ಟಿರುವ ಆಫರ್ ಅನ್ನು ರಿಜೆಕ್ಟ್ ಮಾಡದಿರುವುದರ ಮೂಲಕ ‘ಏನಾದರೂ ಆಗಲಿ, ಬಿಜೆಪಿಯೊಂದಿಗೆ ಇರೋಣ‘ ಎನ್ನುವ ತೀರ್ಮಾನಕ್ಕೆ ಜೆಡಿಎಸ್ ಬಂದಿರುವುದು ಸ್ಪಷ್ಟ. ಜೆಡಿಎಸ್ ಈ ಪ್ರಮಾಣದಲ್ಲಿ ‘ಡಿಫೆನ್ಸಿವ್’ ರಾಜಕಾರಣ ಮಾಡಲು ಪ್ರಮುಖ ಕಾರಣವೆಂದರೆ, ದಿನದಿಂದ ದಿನಕ್ಕೆ ಅದು ಕಳೆದುಕೊಳ್ಳುತ್ತಿರುವ ಮತಬ್ಯಾಂಕ್ ಮೇಲಿನ ಹಿಡಿತಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಜಾತ್ಯತೀತ ಬ್ರ್ಯಾಂಡ್ ನಲ್ಲಿದ್ದರೂ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳು ಎಂದಿಗೂ ಜೆಡಿಎಸ್ ಕೈ ಹಿಡಿಯುತ್ತಿಲ್ಲ. ಇನ್ನು ಒಕ್ಕಲಿಗ ಸಮುದಾಯದ ಮತಗಳು ದೇವೇಗೌಡರ ಕಾರಣಕ್ಕೆ ಪಕ್ಷ ದೊಂದಿಗೆ ಗಟ್ಟಿಯಾಗಿದ್ದವು. ಆದರೆ ದೇವೇಗೌಡರ ವಯೋಸಹಜ ಆರೋಗ್ಯ ಸಮಸ್ಯೆ, ಅತಿಯಾದ ಕುಟುಂಬ ರಾಜಕಾರಣ ಹಾಗೂ ಕುಮಾರಸ್ವಾಮಿ ಅವರು ಇಡೀ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡ ಬಳಿಕ ಪಕ್ಷದೊಂದಿಗಿದ್ದ ಒಕ್ಕಲಿಗ ಸಮುದಾ ಯವೂ ದಿನದಿಂದ ದಿನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯತ್ತ ವಾಲುತ್ತಿದೆ. ಇನ್ನು ಜೆಡಿಎಸ್‌ನ ಭದ್ರಕೋಟೆ ಎನಿಸಿದ್ದ ಹಾಸನ, ಮಂಡ್ಯ ಭಾಗದಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ನ ವೋಟ್ ಶೇರ್ ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ಬಿಜೆಪಿಯೊಂದಿಗೆ ಹೋಗಲು ದೇವೇಗೌಡರು ಒಪ್ಪಿದ್ದಾರೆ.
ಬಿಜೆಪಿಯೊಂದಿಗೆ ಹೋಗುವುದರಿಂದ ಐಡೆಂಟಿಟಿಗೆ ಹೊಡೆತ ಬೀಳಲಿದೆ ಎನ್ನುವ ಆತಂಕ ದೇವೇಗೌಡರಿಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನವನ್ನು ನೋಡಿದ ದೇವೇಗೌಡರು, ಇನ್ನು ಬಿಜೆಪಿ ಯೊಂದಿಗೆ ಹೋದರೂ, ಹೋಗದಿದ್ದರೂ ಕಳೆದುಕೊಳ್ಳುವುದು ಏನಿಲ್ಲ ಎನ್ನುವ ತೀರ್ಮಾನಕ್ಕೆ ಬಂದು, ಮೈತ್ರಿಗೆ ಒಪ್ಪಿದ್ದಾರೆ ಎನ್ನುವುದು ಮೊದಲಿನಿಂದಲೂ ಇರುವ ಮಾತು. ಜಾತ್ಯತೀತ ತತ್ವದೊಂದಿಗೆ ಇದ್ದರೂ ಅಲ್ಪಸಂಖ್ಯಾತ, ದಲಿತ ಮತಗಳು ಪಕ್ಷದತ್ತ ಬರುವುದಿಲ್ಲ ಎನ್ನುವುದಾದರೆ ಬಿಜೆಪಿ ಯೊಂದಿಗೆ ಹೋಗುವುದರಲ್ಲಿ ತಪ್ಪೇನಿದೆ ಎನ್ನುವುದು ಜೆಡಿಎಸ್ ಲೆಕ್ಕಾಚಾರವಾಗಿದೆ.
ರಾಜಕೀಯ ತಜ್ಞರ ಪ್ರಕಾರ ಬಿಜೆಪಿ-ಜೆಡಿಎಸ್ ನಡುವೆ ಭಿನ್ನಮತ ಬರುವುದಕ್ಕೆ ಯಾವುದೇ ಪ್ರಮುಖ ಕಾರಣಗಳಿಲ್ಲ. ಏಕೆಂದರೆ ಹಳೇ ಮೈಸೂರು ಭಾಗದಲ್ಲಿ ಶಕ್ತಿಯುತವಾಗಿರುವ ಜೆಡಿಎಸ್ ರಾಜ್ಯದ ಇತರೆ ಭಾಗದಲ್ಲಿ ಹೇಳಿಕೊಳ್ಳುವ ಸಾಂಪ್ರದಾಯಿಕ ಮತದಾರರನ್ನು ಹೊಂದಿಲ್ಲ. ಆದ್ದರಿಂದ ಮಂಡ್ಯ, ಹಾಸನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಈ ಎರಡು ಸ್ಥಾನದೊಂದಿಗೆ ಬಿಜೆಪಿಗಳಿಗೆ ಅಭ್ಯರ್ಥಿಗಳಿಲ್ಲದ ಎರಡು ಕ್ಷೇತ್ರಕ್ಕೆ ಟಿಕೆಟ್ ಕೇಳಬಹುದು. ಮೈಸೂರು- ಕೊಡಗು, ಬೆಂಗಳೂರಿನ ಕ್ಷೇತ್ರಗಳನ್ನು ಹೊರತುಪಡಿಸಿ ಹಳೇ ಮೈಸೂರು ಭಾಗದಲ್ಲಿ ಉಳಿದಿರುವ ಇತರೆ ಸೀಟುಗಳನ್ನು ಬಿಟ್ಟುಕೊಟ್ಟರೆ ಬಿಜೆಪಿಗೆ ‘ಹೇಳಿಕೊಳ್ಳುವ ಸಮಸ್ಯೆಯೇನೂ’ ಆಗುವುದಿಲ್ಲ.
ಬಿಜೆಪಿ-ಜೆಡಿಎಸ್‌ನ ಇಡೀ ಮೈತ್ರಿಯಲ್ಲಿ ಉದ್ಭವಿಸಬಹುದಾದ ಬಹುದೊಡ್ಡ ಸಮಸ್ಯೆಯೆಂದರೆ ಅದು ಮಂಡ್ಯ ಎನ್ನುವುದು ಸ್ಪಷ್ಟ. ಏಕೆಂದರೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಜೆಡಿಎಸ್‌ನ ಅಸ್ತಿತ್ವಕ್ಕೆ ಹೊಡೆತ ಬೀಳಲಿದೆ. ಜೆಡಿಎಸ್‌ಗೆ ಟಿಕೆಟ್ ಕೊಟ್ಟರೆ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಮಿಸ್ ಆಗಲಿದೆ. ಪಕ್ಷೇತರರಾಗಿ ೨೦೧೯ರಲ್ಲಿ ಸ್ಪರ್ಧಿಸಿದ್ದ ಸುಮಲತಾ ಅವರು ಈಗ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿಗೆ ಬೆಂಬಲಿಸಿರುವ ಸುಮಲತಾ ಅವರಿಗೆ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿರುವುದರಿಂದ, ಈ ಒಂದು ಕ್ಷೇತ್ರ ಗೊಂದಲ ವನ್ನು ಉಂಟುಮಾಡುವ ಸಾಧ್ಯತೆಯಿದೆ.
ಈ ಎಲ್ಲದರ ನಡುವೆ ಹಲವು ರಾಜಕೀಯ ವಿಶ್ಲೇಷಕರಲ್ಲಿ ಕೇಳಿಬರುತ್ತಿರುವ ಸಾಮಾನ್ಯ ಮಾತೆಂದರೆ, ಮುಂದೊಂದು ದಿನ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾದರೂ ಅಚ್ಚರಿ ಯಿಲ್ಲ ಎನ್ನುವುದಾಗಿದೆ. ಹಾಗೆ ನೋಡಿದರೆ, ಬಿಜೆಪಿಯಿಂದ ಕುಮಾರಸ್ವಾಮಿ ಅವರಿಗೆ ಶುರುವಿನಲ್ಲಿ ಬಂದಿದ್ದ ಆಫರ್ ಸಹ ಇದೇ ಆಗಿತ್ತು. ಜೆಡಿಎಸ್‌ಗೆ ಕರ್ನಾಟಕದಲ್ಲಿ ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿಗೆ ಯಡಿಯೂರಪ್ಪ ಬಳಿಕ ಕರ್ನಾಟಕ ದಲ್ಲಿ ಮಾಸ್ ನಾಯಕತ್ವದ ಕೊರತೆಯಿದೆ. ವಿಲೀನ ಮಾಡುವ ಮೂಲಕ, ಕುಮಾರಸ್ವಾಮಿ ಅವರಿಗೆ ಇರುವ ಈ ನಾಯಕತ್ವವನ್ನು ಬಳಸಿಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದು.
ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇರುವ ತನಕ ಈ ವಿಲೀನ ಪ್ರಕ್ರಿಯೆ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ದೇವೇಗೌಡರ ಬಳಿಕ ಬಿಜೆಪಿ-ಜೆಡಿಎಸ್ ವಿಲೀನವಾದರೂ ಅಚ್ಚರಿಯಿಲ್ಲ. ಜೆಡಿಎಸ್‌ನೊಂದಿಗೆ ಮೈತ್ರಿ ಮಾತುಕತೆಗೂ ಮೊದಲು ಬಿಜೆಪಿ ವಿಲೀನದ ಆಫರ್ ಅನ್ನೇ ನೀಡಿತ್ತು. ಮೈತ್ರಿಗಿಂತ ವಿಲೀನವಾದರೆ ಬಿಜೆಪಿಗೆ ಲಾಭ ಹೆಚ್ಚು ಎನ್ನುವ ಕಾರಣಕ್ಕೆ ಈ ಆಫರ್ ನೀಡಲಾಗಿತ್ತು. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮೈತ್ರಿಯಾದರೂ ಕೆಲವೊಂದಷ್ಟು ಮತಗಳು ಬಿಜೆಪಿಯತ್ತ ವಾಲುವುದಿಲ್ಲ. ಆದರೆ ಪಕ್ಷವೇ ಇಲ್ಲವಾದರೆ, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕರ್ನಾಟಕದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಇದರ ನೇರ ಲಾಭ ಬಿಜೆಪಿಗೆ ಆಗಲಿದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.
ಹಾಗೆ ನೋಡಿದರೆ ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಎರಡಕ್ಕೂ ಪ್ರಾದೇಶಿಕ ಪಕ್ಷಗಳ ವೃದ್ಧಿಯ ಅಗತ್ಯವಿಲ್ಲ. ಆದರೆ ‘ಶತ್ರುವಿನ ಶತ್ರು ಮಿತ್ರ’ ಎನ್ನುವ ರೀತಿಯಲ್ಲಿ ಇದೀಗ ಜೆಡಿಎಸ್ ಅನ್ನು ಸಲಹುವುದಕ್ಕೆ ಬಿಜೆಪಿ ತನ್ನ ಮೈತ್ರಿಕೂಟದಲ್ಲಿ ಸೇರಿಸಿಕೊಂಡಿದೆ. ಲೋಕಸಭಾ ಚುನಾವಣಾ ದೃಷ್ಟಿಯಲ್ಲಿ ನೋಡಿದರೆ, ಬಿಜೆಪಿ ಬಲ ಹೆಚ್ಚಿರುವುದರಿಂದ ‘ಇಂಡಿಯ’ ಮೈತ್ರಿಕೂಟದಲ್ಲಿರುವ ‘ಒಡಕುಧ್ವನಿ’ ಎನ್‌ಡಿಎ ಒಕ್ಕೂಟದಲ್ಲಿಲ್ಲ. ಇದನ್ನು ಮೀರಿ ದಿನದಿಂದ ದಿನಕ್ಕೆ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಜೆಡಿಎಸ್ ಪಕ್ಷವು ಬಿಜೆಪಿಯ ಪಾಲಿಗೆ ಹೊರೆಯಾಗುವುದೋ, ವರವಾಗುವುದೋ ಎನ್ನುವುದು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕವೇ ತಿಳಿಯಲಿದೆ.