Saturday, 14th December 2024

ಇವರ ಮಾತೆಂಬುದು ಜ್ಯೋತಿರ್ಲಿಂಗ

ಸಂಸ್ಮರಣೆ

ಡಾ.ಮಹಾಂತಪ್ರಭು ಸ್ವಾಮೀಜಿ

ಅಜ್ಞಾನಿಗಳು ಮಾತನಾಡಿದರೆ ಬೆಂಕಿ ಹೊತ್ತಿ ಉರಿಯುತ್ತದೆ, ಸುಜ್ಞಾನಿಗಳು ಮಾತನಾಡಿದರೆ ಜ್ಞಾನಜ್ಯೋತಿ ಬೆಳಗುತ್ತದೆ. ಇದೇ ಜೀವಸೆಲೆಯಲ್ಲಿ ಗ್ರಾಮೀಣಭಾಗದ ಜನಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಆಗುವ ರೀತಿಯಲ್ಲಿ ಪೂಜ್ಯರು ಆಧ್ಯಾತ್ಮಿಕ ಸಾರ ಕಟ್ಟಿಕೊಟ್ಟವರು. ತಮ್ಮ ಜೀವನ ಅನುಭವಗಳ ಮನೋಜ್ಞ  ಮಾತುಗಳಿಂದ ಲಕ್ಷ, ಲಕ್ಷ ಹೃದಯಗಳಲ್ಲಿ ಸುಜ್ಞಾನದ ಹಣತೆ ಹಚ್ಚಿದವರು ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರು.

ಏಳೆಂಟು ವರ್ಷಗಳ ಹಿಂದಿನ ಮಾತು. ಆಧ್ಯಾತ್ಮಿಕ ದಾರಿ ತುಳಿದಿದ್ದ ಯುವ ಸನ್ಯಾಸಿಯಾದ ನನಗೆ ಒಂದು ದಿನ ಅನಿರೀಕ್ಷಿತವಾಗಿ ಸಿದ್ಧೇಶ್ವರ ಶ್ರೀಗಳ
ಭೇಟಿಯ ಯೋಗಾಯೋಗ ಕೂಡಿಬಂತು. ಪ್ರವಚನ ನಿಮಿತ್ತ ರಾಯಭಾಗ ಪಟ್ಟಣಕ್ಕೆ ಭಕ್ತರ ಆಹ್ವಾನದ ಮೇರೆಗೆ ನಾನು ಹೋಗಿದ್ದೆ. ಅದೇ ಸಂದರ್ಭದಲ್ಲಿ ಸಿದ್ಧೇಶ್ವರ ಶ್ರೀಗಳ ಭೇಟಿಯಾಯಿತು. ಕಾರ್ಯಕ್ರಮ ನಿರೂಪಣೆ ಹಾಗೂ ಪ್ರವಚನವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಸ್ವಾಮೀಜಿ ಅಂದು ಆಡಿದ್ದ ಸ್ಪೂರ್ತಿ ದಾಯಕ ಮಾತುಗಳು ಯಾವತ್ತೂ ಮನಸ್ಸಿಗೆ ವಿಶೇಷ ಅನುಭೂತಿ ನೀಡುತ್ತವೆ.

ಲಕ್ಷಾಂತರ ಜನ ಭಕ್ತರ ಸಮ್ಮುಖದಲ್ಲಿ ಮಾತನಾಡುವ ಶ್ರೀಗಳಿಗೆ ಯಾವುದೇ ಅಹಂ ಎಂಬುದು ಇರಲಿಲ್ಲ. ಮತ್ತೊಬ್ಬರ ವಿಶೇಷ ಗುಣಗಳ ಕುರಿತು ಮೆಚ್ಚುಗೆಯ ಮಾತನಾಡುವ ಮೂಲಕ ಇನ್ನೊಬ್ಬರ ಏಳ್ಗೆಗೆ ಸಹಕಾರಿ ಯಾಗುವ ಮಾತು ಪೂಜ್ಯರದ್ದಾಗಿತ್ತು. ಮೊದಲ ಭೇಟಿಯ ನಂತರ ಆಗಾಗ್ಗೆ ಶ್ರೀಗಳ ಪ್ರವಚನದ ಸಂದರ್ಭದಲ್ಲಿ ನಮ್ಮನ್ನು ಕರೆದು ಮಾತನಾಡಲು ಅವಕಾಶ ನೀಡುತ್ತಿದ್ದರು. ನೆರೆದಿದ್ದ ಸಹಸ್ರಾರು ಜನರ ಮುಂದೆ ವಿಷಯ ಮಂಡನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಅವರ ನಿಸ್ವಾರ್ಥರೂಪ ಬಲು ಅಪರೂಪ. ಭಾರತೀಯ ಸಂಸ್ಕೃತಿ-ಸಂಸ್ಕಾರಗಳ ಕುರಿತು ಆಳವಾದ ಅಧ್ಯಯನ ಮಾಡಿದ್ದ ಪೂಜ್ಯರು ವೇದ, ಉಪನಿಷತ್ತು, ಆಗಮ ಗಳು ಹಾಗೂ ವಚನಗಳು ಹೀಗೆ ಎಲ್ಲ ದರ್ಶನಗಳ ಮೂಲತತ್ವವನ್ನು ಆಮೂಲಾಗ್ರವಾಗಿ ಗ್ರಹಿಸಿ ತಾವು ಕಂಡಂಥ ಸಾರ್ವಕಾಲಿಕ ಸತ್ಯವನ್ನು ತಮ್ಮ ಪ್ರಬುದ್ಧ ಪ್ರವಚನಗಳ ಮೂಲಕ ಜನಮಾನಸಕ್ಕೆ ತಲುಪಿಸಿದ ರೀತಿ ಅದ್ಭುತ.

ಪೂಜ್ಯರು ಯಾವತ್ತೂ ಆಡಂಬರದ ಬದುಕಿಗೆ ಮಹತ್ವ ನೀಡಲಿಲ್ಲ. ಸರಳ ಬದುಕಿನ ಸೂತ್ರದಲ್ಲೇ ತಮ್ಮ ದಿನಚರಿ ಕಳೆಯುತ್ತಿದ್ದರು. ದೇಶದ ಯಾವುದೇ
ಮೂಲೆಗೆ ಹೋದರೂ ಹುಟ್ಟಿ ಬೆಳೆದ ಮಣ್ಣಿನ ಸೊಗಡನ್ನು ಬಿಡುತ್ತಿರಲಿಲ್ಲ. ಅಧ್ಯಾತ್ಮ, ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನದ ವಿಚಾರವಾಗಿ ಸಾಕಷ್ಟು
ಸಂಶೋಧನಾ ವಿಷಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಈ ಒಂದೇ ಕಾರಣಕ್ಕೆ ಸಿದ್ಧೇಶ್ವರ ಶ್ರೀಗಳ ಪ್ರವಚನ ಎಂದರೆ ಎಲ್ಲಾ ವಿಷಯಗಳನ್ನು ಒಳಗೊಂಡ ದೊಡ್ಡ ಬುತ್ತಿಯಾಗಿರುತ್ತಿತ್ತು.

ನಾನ್ಯಾರು? ಜೀವನ ಎಂದರೇನು? ಜೀವನದ ಸಾರ್ಥಕ್ಯ ಎಲ್ಲಿದೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿದವರು ಭಾರತೀಯ ಸಂತರು, ಶರಣರು ಹಾಗೂ ಧೀಮಂತ ಮಹಾಂತರು. ಸತ್ಯಶೋಧನೆಗಾಗಿ ನಿತ್ಯಶೋಧನೆ ಮಾಡಿದರು. ಕೆಲವರು ಮನೆ, ಮಠ ಮರೆತರು. ಸರ್ವಸ್ವವನ್ನೂ ತ್ಯಾಗ ಮಾಡಿದರು. ಕೇವಲ ಸತ್ಯಶೋಧನೆಗಾಗಿ ಅವರೆಲ್ಲ ತಮ್ಮ ಬದುಕಿನ ಮೂಲತತ್ವವನ್ನೇ ಧಾರೆಯೆರೆದರು. ಇಂಥ ಅನೇಕ ಗಹನವಾದ, ಗಂಭೀರವಾದ ವಿಚಾರವಾಗಿ ಅನನ್ಯ ವಾಗಿ ಮಾತನಾಡುತ್ತಾ ತಾವು ಹೋದ ಕಡೆಗಳಲೆಲ್ಲ ಬೆಳಕಿನ ಬೀಜ ಬಿತ್ತಿ ಆತ್ಮಜ್ಞಾನದ ಬೆಳೆಯನ್ನು ಹುಲುಸಾಗಿ ಬೆಳೆದವರು ಸಿದ್ಧೇಶ್ವರ ಶ್ರೀಗಳು.

ಸಾಮಾನ್ಯವಾಗಿ ಸಿದ್ಧೇಶ್ವರ ಶ್ರೀಗಳ ಪ್ರವಚನ ಕಾರ್ಯಕ್ರಮ ಆಯೋಜನೆ ಮಾಡಬೇಕಾದರೆ ಅವರು ಸಮಯಾವಕಾಶ ನೀಡುವುದೇ ದೊಡ್ಡ ವಿಷಯ ವಾಗಿತ್ತು. ಪೂಜ್ಯರು ಒಮ್ಮೆ ಬರಲು ಒಪ್ಪಿಕೊಂಡರೆ ಮುಗಿಯಿತು, ನಿಗದಿತ ಸಮಯದಲ್ಲಿ ಆ ಸ್ಥಳಕ್ಕೆ ಹಾಜರಾಗುವುದೇ ಅವರ ಕಾಯಕ. ಯಾವತ್ತೂ ದೊಡ್ಡ ಪೆಂಡಾಲ್ ಹಾಗೂ ತೋರ್ಪಡಿಕೆಯ ವೇದಿಕೆಗೆ ಮಹತ್ವ ನೀಡುತ್ತಿರಲಿಲ್ಲ. ಪ್ರಕೃತಿಯ ಮಧ್ಯೆ ಸ್ವಚ್ಛ ಪರಿಸರದಲ್ಲಿ ಕುಳಿತು  ಸೂರ್ಯೋದಯ ಕ್ಕಿಂತ ಮುಂಚಿತವಾಗಿ ನಿಶ್ಶಬ್ದ ವಾತಾವರಣದಲ್ಲಿ ಪ್ರಾರಂಭ ವಾಗುತ್ತಿದ್ದ ಅವರ ಪ್ರವಚನ ಆಲಿಸುವುದೇ ಒಂದು ಸೊಬಗು. ‘ಸ್ವರ್ಗ ಮೇಲಿದೆ, ನರಕ ಕೆಳಗಿದೆ ಎನ್ನುತ್ತಾ ಜೀವನವನ್ನು ಸಂಕೀರ್ಣಗೊಳಿಸಬಾರದು. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ.

ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ’ ಎಂದರುಹಿ ಜೀವನ ಸರಳಗೊಳಿಸಿದ್ದು ನಮ್ಮ ನಾಡಿನ ಶರಣರು. ಇಂಥ ಸರಳ ಸಜ್ಜನ ಸಾಕಾರಮೂರ್ತಿಯಾಗಿ ಲಕ್ಷಾಂತರ ಜನರ ಆರಾಧ್ಯ ಮೂರ್ತಿ ಆದವರು ನಮ್ಮ ಸಿದ್ಧೇಶ್ವರ ಶ್ರೀಗಳು. ಒಮ್ಮೆ ಮಾತಿನ ನಡುವೆ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಯಾವುದು ಕಲಿಕೆಗೆ ಉತ್ತಮ ಎಂಬ ಮಾತು ಪೂಜ್ಯರ ಬಳಿ ಬಂದಿತ್ತು. ಭಾಷೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮಮತಿಗಳಾಗಿದ್ದ ಶ್ರೀಗಳು, ‘ಇಂಗ್ಲಿಷ್ ಭಾಷೆ ಯನ್ನು ಜ್ಞಾನ ಹೆಚ್ಚಿಸಿಕೊಳ್ಳಲು ಮನೆಯ ಕಿಟಕಿಯಂತೆ ಬಳಸಬೇಕು, ಆದರೆ ಕನ್ನಡ ಎಂಬುದು ಮನೆ ದೊಡ್ಡ ಬಾಗಿಲಾಗಿರಬೇಕು’ ಎಂದು ಕನ್ನಡ ಭಾಷೆಯ ಮಹತ್ವವನ್ನು ಅತ್ಯಂತ ಮಾರ್ಮಿಕವಾಗಿ ಹೇಳಿದ್ದರು.

ಶ್ರೀಗಳು ಜೀವನಜ್ಞಾನವನ್ನು ಎಲ್ಲರಿಗೂ ಧಾರೆಯೆರೆದರು. ಅದರಂತೆ ಪೂಜ್ಯರ ಮಾತುಗಳು ಜೋತಿರ್ಲಿಂಗ ಸದೃಶ್ಯವಾದವು. ನಾವು ವಾಸಿಸುವ ಈ
ಸುಂದರ ಪ್ರಪಂಚವೇ ದೇವರ ಮನೆ. ನಮ್ಮ ನಿಷ್ಕಲ್ಮಶ ಮನಸ್ಸೇ ವರದೇವರ ಪ್ರಸಾದ. ಗಂಭೀರವಾದ ಬೆಟ್ಟ ಗಳು, ಧರೆಗೆ ನೀರೆಯುವ ಮೋಡಗಳು, ಹರಿಯುವ ಝರಿಗಳು, ಭೋರ್ಗರೆವ ಜಲಪಾತಗಳು, ಸುಗಂಧ ಸೂಸುವ ಹೂವುಗಳು, ಮನಕ್ಕೆ ಆಹ್ಲಾದ ಅನುಭವ ನೀಡುವ ಹಾಲ ಬೆಳದಿಂಗಳು ಸೇರಿದಂತೆ ಪ್ರಾಣಿ, ಪಕ್ಷಿ, ಮನುಷ್ಯ ಇಂಥ ನೂರಾರು ವಿಷಯಗಳನ್ನು ಇಟ್ಟುಕೊಂಡು ಪೂಜ್ಯರು ಕೊಡುತ್ತಿದ್ದ ಆ ಪ್ರವಚನ ಗಳನ್ನು ಕೇಳುವುದೇ ಪುಣ್ಯದ ಫಲವಾಗಿತ್ತು.

ಒಮ್ಮೆ ಕಾರ್ಯಕ್ರಮ ಆಯೋಜನೆ ಕಾರಣ ಸಿದ್ಧೇಶ್ವರ ಶ್ರೀಗಳಿಗೆ ಆಹ್ವಾನ ನೀಡಲು ಅಥಣಿ ತಾಲೂಕಿನ ಐನಾಪೂರ ಆಶ್ರಮಕ್ಕೆ ಹೋಗಿದ್ದೆವು. ಆ ಸಂದರ್ಭದಲ್ಲಿ ನಮ್ಮನ್ನು ನೋಡಿದ ಮರುಕ್ಷಣವೇ, ಬಂದ ವಿಷಯ ತಿಳಿದು ತದನಂತರ, ‘ಇವತ್ತು ನಾನು ನಿಮ್ಮ ಮಾತು ಆಲಿಸಬೇಕು’ ಎಂದರು. ಈ ಗಳಿಗೆ, ಒಬ್ಬ ಶ್ರೇಷ್ಠ ಸಂತ ಮತ್ತೊಬ್ಬ ಸ್ವಾಮೀಜಿಗೆ ನೀಡುವ ಗೌರವ ಎಂಥದ್ದು ಎಂದು ತೋರಿಸುತ್ತದೆ. ಇಂಥ ಅನೇಕ ಘಟನೆಗಳು ಪೂಜ್ಯರ ಒಡನಾಟ ದಲ್ಲಿ ನಮಗೆ ಒದಗಿಬಂದಿವೆ. ಹಾಗೆಯೇ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಡೆ-ನುಡಿಗಳು ಒಂದಾಗಬೇಕು, ಆಗಲೇ ಬದುಕು ಬಂಗಾರವಾಗುತ್ತದೆ ಎಂಬ ತತ್ವ ಸಾರುತ್ತಾ ಪೂಜ್ಯ ಸಿದ್ಧೇಶ್ವರ ಶ್ರೀಗಳು ನಡೆದಂತೆ ನುಡಿದರು.

ಅವರು ಯಾವತ್ತೂ ಹಮ್ಮು-ಬಿಮ್ಮುಗಳಿಗೆ ಒಳಗಾಗ ಲಿಲ್ಲ. ಹಾರ-ತುರಾಯಿಗಳಿಗೆ ಅಂಟಿಕೊಳ್ಳಲಿಲ್ಲ. ಸರಳ ವಾಗಿ ಬದುಕಿ ವಿರಳವಾಗಿ ಬಾಳಿದರು. ಅಡಿ ಇಟ್ಟಲೆಲ್ಲ ಅರಿವಿನ ಮನೆ ಕಟ್ಟಿ, ನೊಂದಜೀವಿಗಳಿಗೆ ಸಾಂತ್ವನ ಹೇಳುತ್ತಾ ಸಹಜವಾಗಿಯೇ ಬದುಕಿ ದಿವ್ಯಸಂದೇಶ ನೀಡಿದರು. ಪೂಜ್ಯರಿಗೆ ಪೂಜ್ಯರೇ ಸಾಟಿ, ಸಂತೃಪ್ತ ಜೀವನ ಸಾಗಿಸಿ ಬಯಲಲ್ಲಿ ಬಯಲಾದರು. ಅವರಿಗೆ ಸಾವಿಲ್ಲ ಏಕೆಂದರೆ ಶರಣರು ಸಾವನರಿಯರು. ಪಾಶ್ಚಿಮಾತ್ಯ ಶ್ರೇಷ್ಠ ಬರಹಗಾರರ ಚಿಂತನೆಗಳ ಕುರಿತು ಶ್ರೀಗಳು ಅಧ್ಯಯನ ಮಾಡುತ್ತಿದ್ದರು. ಜತೆಗೆ ನಮ್ಮ ಶರಣರ ವಿಚಾರಧಾರೆಗಳು ಅಲ್ಲಿ ಯಾವೆಲ್ಲ ರೀತಿ ಯಲ್ಲಿ ಪ್ರಭಾವ ಬೀರಿದೆ ಎಂಬುದನ್ನೂ ಸಿದ್ಧೇಶ್ವರ ಶ್ರೀ ಗಳು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಇದೇ ಕಾರಣಕ್ಕೆ ತಮ್ಮ ಪ್ರವಚನದಲ್ಲಿ ಅಲ್ಬರ್ಟ್ ಕಮು, ಸಾಕ್ರೆಟಿಸ್, ಅರಿಸ್ಟಾಟಲ್ ಕುರಿತು ಮಾತನಾಡುತ್ತಿದ್ದರು. ಹಾಗೂ ಅವರ ಚಿಂತನೆಗಳನ್ನು ನಮ್ಮ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಜನರಿಗೆ ತಿಳಿಸುವ ಕೆಲಸವನ್ನೂ ಮಾಡಿದರು.

ಸತ್ಯ ಯಾವತ್ತೂ ಒಂದೇ ಇದ್ದರೂ ಅದರ ಆಯಾಮಗಳು ಬೇರೆ, ಬೇರೆಯಾಗಿರುತ್ತವೆ. ಅದೇ ರೀತಿಯಲ್ಲಿ ವಿಶಿಷ್ಟ ಆಯಾಮಗಳನ್ನು ಒಟ್ಟುಗೂಡಿಸಿ ಅದನ್ನು ಜನರ ಹೃದಯಕ್ಕೆ ಹತ್ತಿರವಾಗುವ ರೀತಿ ತಿಳಿಸುವ ಪೂಜ್ಯರು ಕಲೆ ಒಂದು ಅಪರಿಮಿತ ಶಕ್ತಿ. ಆಧ್ಯಾತ್ಮಿಕ ಪ್ರಪಂಚದಲ್ಲಿ ಹಲವಾರು ಸೂಕ್ಷ್ಮ
ಸಂವೇದನೆಗಳನ್ನು ಅರಿಯಲು ಸ್ವಂತ ಅನುಭವ ಮುಖ್ಯ. ಇದರಂತೆ ಸ್ವಾನುಭಾವದ ಸೇವೆಯ ಮೂಲಕ ಜನರ ಮನಸ್ಸನ್ನು ಗೆದ್ದ ಶ್ರೇಷ್ಠಸಂತ ಪೂಜ್ಯ
ಸಿದ್ಧೇಶ್ವರ ಶ್ರೀಗಳು.

ಶ್ರೀಗಳು ಭೌತಿಕ ರೂಪದಲ್ಲಿ ನಮ್ಮೊಂದಿಗೆ ಇರದಿದ್ದರೂ ಅವರ ಆಧ್ಯಾತ್ಮಿಕ ಶಕ್ತಿ ನಿರಂತರವಾಗಿ ನಮ್ಮೊಂದಿಗೆ ಸಂಚರಿಸುತ್ತಿದೆ. ಅವರು ಕೊಟ್ಟ ಬದುಕಿನ
ಸಂದೇಶವನ್ನು ಪಾಲಿಸುತ್ತಾ ಮುಂದಿನ ಪೀಳಿಗೆಗೆ ಅವರ ಕುರಿತು ಹೇಳಬೇಕಾದ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಅವರು ಹಾಕಿಕೊಟ್ಟ ಸನ್ಮಾರ್ಗ ವನ್ನು ಹಾಗೂ ಅವರು ನೀಡಿದ ಹಿತವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಿದ್ಧೇಶ್ವರ ಶ್ರೀಗಳಿಗೆ ಶ್ರದ್ಧಾಪೂರ್ವಕವಾಗಿ ನಮನ ಗಳನ್ನು ಸಲ್ಲಿಸೋಣ.

(ಪೂಜ್ಯರು ಶೇಗುಣಸಿ ವಿರಕ್ತಮಠದ ಪೀಠಾಧಿಪತಿಗಳು)