ತುಮಕೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಸ್ಥಾನಗಳಲ್ಲೂ ಸ್ಪರ್ಧೆ ಮಾಡಲಿದೆ ಜಿಲ್ಲಾಧ್ಯಕ್ಷ ಗಜೇಂದ್ರ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸಕ್ತ ಚುನಾವಣಾ ಸ್ಪರ್ಧಾಕಾಂಕ್ಷಿಗಳನ್ನು ಸಂದರ್ಶನಕ್ಕೆ ಆಹ್ವಾನಿಸುತ್ತಿದೆ. ಸಂದರ್ಶನವು 2024ರ ಜನವರಿ 6 ಮತ್ತು 7 ರಂದು ಪಕ್ಷದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದರು.
ಕೆಆರ್‌ಎಸ್ ಪಕ್ಷವು, ಪಕ್ಷದ ಆರಂಭದಿಂದಲೂ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ನಿರಂತರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದೆ. 2023ರ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 195 ಕ್ಷೇತ್ರಗಳಿಂದ ಸ್ಪರ್ಧಿಸಿತ್ತು. ಪಕ್ಷವು ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ವ್ಯವಸ್ಥೆಯಲ್ಲಿನ ಅಕ್ರಮ, ಅನ್ಯಾಯ, ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ, ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆ ಗಾಗಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಾ ಬಂದಿದೆ ಎಂದರು.
ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪುನರ್ ರಚನೆ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಹೊಸದಾಗಿ ನೇಮಕ ವಾದ ಪದಾಧಿಕಾರಿಗಳಿಗೆ ನಿರಂತರ ತರಬೇತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತಿದೆ. ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರದೀಪಕುಮಾರ್ , ಜಿಲ್ಲಾ ಕಾರ್ಯದರ್ಶಿ ಆನಂದ್, ಜಿಲ್ಲಾ ಜಂಟಿ ಕಾರ್ಯದರ್ಶಿ ಪ್ರಭಾಕರ್ ಮತ್ತು ನಗರಾಧ್ಯಕ್ಷ ಮಹಂತೇಶ್ ಹಾಜರಿದ್ದರು.