Thursday, 19th September 2024

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಲು ಆಗ್ರಹ

ತುಮಕೂರು: ಉತ್ತರ ಪ್ರದೇಶದ ಹತಾರ್ ಜಿಲ್ಲೆಯಲ್ಲಿ ನಡೆದಿರುವ ಮನಿಷಾ ವಾಲ್ಮೀಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ,ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟದ ವತಿ ಯಿಂದ ಮಹಿಳೆಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಾಂತಲಾ ರಾಜಣ್ಣ ಅವರ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು. ಈ ವೇಳೆ ಮಾತನಾಡಿದ ಶ್ರೀಮತಿ ಶಾಂತಲಾ ರಾಜಣ್ಣ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಡೆಸುತ್ತಿರುವುದು ರಾಮ ರಾಜ್ಯವಲ್ಲ. ಅದು ಗುಂಡಾ ರಾಜ್ಯ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.

ಸಂತ್ರಸ್ಥರಿಗೆ ರಕ್ಷಣೆ ನೀಡಬೇಕಾದ ಅಲ್ಲಿನ ಸರಕಾರ, ಆರೋಪಿಗಳಿಗೆ ರಕ್ಷಣೆ ನೀಡುವ ಮೂಲಕ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.ಸಂತ್ರಸ್ಥರ ಕುಟುಂಬಕ್ಕೆ ಶವಸಂಸ್ಕಾರಕ್ಕೂ ಅವಕಾಶ ನೀಡದೆ, ಪೊಲೀಸರೇ ಮುಂದೆ ನಿಂತು ರಾತ್ರೋರಾತ್ರಿ ದಹನ ಮಾಡುವ ಮೂಲಕ ಸಾಕ್ಷವನ್ನು ನಾಶಪಡಿಸಿದ್ದಾರೆ.ತಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಬೇಕು. ಆದ್ದರಿಂದ ಸರಕಾರ ಕೂಡಲೇ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಮಧುಗಿರಿ ತಾ.ಪಂ. ಅಧ್ಯಕ್ಷೆ ಶ್ರೀಮತಿ ಇಂದಿರಾ ದೇನಾನಾಯಕ್ ಮಾತನಾಡಿ,ರಾಮರಾಜ್ಯದ ಆಡಳಿತ ನೀಡುತ್ತೇವೆ ಎಂದು ಆಧಿಕಾರಕ್ಕೆ ಬಂದ ಬಿಜೆಪಿ ಪಕ್ಷ,ತದ್ವಿರುದ್ದವಾದ ಆಡಳಿತ ನೀಡುತ್ತಿದೆ.ದಲಿತ ಮಹಿಳೆಯರು ಸೇರಿದಂತೆ ಯಾವುದೇ ಸಮುದಾ ಯದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಂತ್ರಸ್ಥ ಮಹಿಳೆಯ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ನಗರಸಭೆಯ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್ ಮಾತನಾಡಿ, ಉತ್ತರ ಪ್ರದೇಶದ ಯೋಗಿ ಸರಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದೇಶದಲ್ಲಿ ಇಷ್ಟು ದೊಡ್ಡ ಘಟನೆ ನಡೆದರೂ ನರೇಂದ್ರಮೋದಿ ಬಾಯಿ ಬಿಡದೆ ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಪ್ರತಿಭಟನೆಯಲ್ಲಿ ಸರಸ್ವತಿ, ಸುವರ್ಣಮ್ಮ, ಮುಖಂಡರಾದ ಟಿ.ಪಿ.ಮಂಜುನಾಥ್, ಪ್ರತಾಪ್ ಮದಕರಿ, ರಾಜೇಶ್ ದೊಡ್ಡಮನಿ, ಅರ್ಜುನ್ ಪಾಳ್ಳೇಗಾರ, ಪುರುಷೋತ್ತಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.