ಬೆಂಗಳೂರು: ಶ್ರೀನಗರದ ಲಾಲ್‍ಚೌಕದಲ್ಲಿ ಕಾರ್ಯಕರ್ತರು ಮುರಳಿ ಮನೋಹರ್ ಜೋಷಿಯವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ಪೊಲೀಸರ ರಾಜ್ಯ ಸರಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದರು.
ರಾಮ ವಿರೋಧಿ ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇಂದು ನಡೆದ ಬಿಜೆಪಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳಿಗೆ 48 ಗಂಟೆಗಳ ಗಡುವು ಕೊಡುತ್ತೇವೆ. ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಮಾಡದಿದ್ದರೆ, ಬಿಜೆಪಿ ಯುವಮೋರ್ಚಾ ವತಿ ಯಿಂದ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇವತ್ತು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಅವಶ್ಯಕತೆ ಬಂದರೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೊಘಲರ ಆಡಳಿತ, ತಾಲಿಬಾಲ್ ಆಡಳಿತ ಇದೆಯೇ ಎಂದು ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಹಿಂದೂ ಹಕ್ಕುಗಳನ್ನು ತುಳಿಯುವ ಕೆಲಸ, ಹಿಂದೂ ವಿರೋಧಿ ನೀತಿ ನಿಮ್ಮದು. ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಪಿಎಫ್‍ಐ ವಿರುದ್ಧ ಇದ್ದ ಕೇಸುಗಳನ್ನು ರದ್ದು ಮಾಡಿದ್ದ ಸರಕಾರ ಕಾಂಗ್ರೆಸ್ಸಿನದು. ಡಿ.ಜೆ.ಹಳ್ಳಿ, ಕೆಜೆ ಹಳ್ಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮುಂದಾ ಗಿದ್ದಾರೆ. ಕನ್ನಡ ವಿರೋಧಿ ಸರಕಾರ ಇದು. ರೈತರ ವಿರುದ್ಧ ಕೇಸು ಹಾಕುತ್ತಿದ್ದಾರೆ. ಹಿಂದೂ, ರಾಮ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ನರೇಂದ್ರ ಮೋದಿಜೀ ಅವರ ನೇತೃತ್ವ ದಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿದೆ. ಎಲ್ಲ ಕಡೆ ಉತ್ಸಾಹ, ಸಂತಸದ ವಾತಾವರಣ ಇದೆ ಎಂದು ವಿವರಿಸಿದರು.
ರಾಜ್ಯ, ದೇಶದಲ್ಲಿ ಹಬ್ಬದ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ಹಿಂದೂವಿರೋಧಿ ಕಾಂಗ್ರೆಸ್ ಸರಕಾರ, ಪ್ರಭು ಶ್ರೀರಾಮಚಂದ್ರ ವಿರೋಧಿ ಸರಕಾರವು ಮಂತ್ರಾಕ್ಷತೆ ಕೊಡುವುದನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಹಿಂದೂಗಳ ಮನಸ್ಸಿಗೆ ನೋವಾಗುವ ಹೇಳಿಕೆ ಕೊಡುತ್ತಿದ್ದಾರೆ. ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಯವರ ಬಂಧನದ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿದೆ. 31 ವರ್ಷಗಳ ಹಿಂದಿನ ಕೇಸು ಇದಾಗಿದೆ. ಈ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷರಾದ ಮಾಳವಿಕಾ ಅವಿನಾಶ್ ಅವರು ಮಾತನಾಡಿ, ಹೆಸರಿನಲ್ಲಿ ರಾಮ ಇದ್ದರೆ ಸಾಕೇ? ನಿಮ್ಮ ಮನಸ್ಸಿನಲ್ಲಿ ರಾಮ ಇರಬೇಕಿತ್ತು ಎಂದು ಮುಖ್ಯಮಂತ್ರಿಗಳ ಕ್ರಮವನ್ನು ಟೀಕಿಸಿದರು. ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಆಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು. ಓಲೈಕೆ ರಾಜಕಾರಣ ನಿಮ್ಮದಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ನೀತಿ ಕುಲಗೆಟ್ಟದ್ದು. ಹಿಜಾಬ್ ಪರ, ಶ್ರೀರಾಮನ ವಿರುದ್ಧ ನೀತಿಯಿಂದ ಜನತೆ ರಾಜ್ಯ ಸರಕಾರದ ವಿರುದ್ಧ ಒಗ್ಗಟ್ಟಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ ಅವರು ನುಡಿದರು.
ಹಿಂದೂಗಳು ತೂಕಡಿಕೆ ಬಿಡಬೇಕು. ನಮ್ಮ ಸಂಸ್ಕøತಿ, ಆಚಾರ, ವಿಚಾರಗಳನ್ನು ರಕ್ಷಿಸಲು ನಾವು ಕಟಿಬದ್ಧರಾಗಬೇಕು ಎಂದು ತಿಳಿಸಿದರು. ಸಿದ್ದರಾ ಮಯ್ಯನವರ ಸರಕಾರವು ತಮ್ಮ ಕೀಳುಮಟ್ಟದ ರಾಜಕಾರಣವನ್ನು ಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಕರಸೇವಕರನ್ನು ಬಂಧಿಸುತ್ತಿರುವುದು ಖಂಡನೀಯ ಎಂದು ಶಾಸಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ತಿಳಿಸಿದರು. 1992ರಲ್ಲಿ ಕರಸೇವಕರನ್ನು ಹತ್ಯೆ ಮಾಡಲು ಮುಂದಾಗಿತ್ತು. ಈಗ ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಹಿಂದೂವಿರೋಧಿ ನೀತಿ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಬಗ್ಗೆ ಅತಿಯಾದ ಒಲವು ನಿಮ್ಮದು. ಹಿಂದೆ ಟಿಪ್ಪು ಜಯಂತಿ ಮಾಡಿದ್ದೀರಿ. ಕನ್ನಡ ಭಾಷಾ ಹೋರಾಟಗಾರರನ್ನು ಬಂಧಿಸುತ್ತೀರಿ. ರೈತ ವಿರೋಧಿ ನಿಲುವು ನಿಮ್ಮದು ಎಂದು ಸಿದ್ದರಾಮಯ್ಯರ ಸರಕಾರದ ವಿರುದ್ಧ ಆಕ್ಷೇಪ ಸೂಚಿಸಿದರು.
ಈ ಸರಕಾರ ಹಿಂದೂ ವಿರೋಧಿ, ರೈತ ವಿರೋಧಿ, ಕನ್ನಡ ವಿರೋಧಿ ಎಂದು ಟೀಕಿಸಿದರು. ಈ ಹೋರಾಟ ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಆಗುವವರೆಗೆ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಅವರು ಮಾತನಾಡಿ, ರಾಮಮಂದಿರ ನಮ್ಮ ಸ್ವಾಭಿಮಾನದ ಸಂಕೇತ ಎಂದು ನುಡಿದರು. ಹಲವಾರು ಸವಾಲುಗಳ ಬಳಿಕ ಇದರ ಪುನರ್ ನಿರ್ಮಾಣವಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ಸಂಭ್ರಮ ಪಡುವ ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಕ್ರಮ ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ ಎಂದು ತಿಳಿಸಿದರು. ಕರಸೇವಕರು ನೈಜ ರಾಷ್ಟ್ರ ಭಕ್ತರು. ಅವರನ್ನು ಗೌರವಿಸುವ ಬದಲಾಗಿ ಬಂಧಿಸುವ ಕಾರ್ಯ ನಡೆದಿದೆ ಎಂದು ಟೀಕಿಸಿದರು.
ಸರಕಾರ ತನ್ನ ಭಂಡತನ ಕೈಬಿಡಬೇಕು. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಮಾಜಿ ಸಿಎಂ, ಸಂಸದ ಡಿ.ವಿ. ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಸಂಸದ ಪಿ.ಸಿ.ಮೋಹನ್, ಶಾಸಕ ರವಿಸುಬ್ರಹ್ಮಣ್ಯ, ವಿಧಾನಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಸೇರಿ ಅನೇಕ ಮುಖಂಡರು, ಶಾಸಕರು, ಮಾಜಿ ಸಚಿವರು, ರಾಜ್ಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.