ವಿಶ್ಲೇಷಣೆ
ರಮಾನಂದ ಶರ್ಮಾ
ಸಮಸ್ಯೆಗಳನ್ನು ಮೊಳಕೆಯಲ್ಲೇ ಚಿವುಟದಿದ್ದರೆ ಅವು ಹೆಮ್ಮರವಾಗಿ ಬೆಳೆದು ಬುಡವನ್ನೇ ಅಲುಗಾಡಿಸುತ್ತವೆ. ಬಿಜೆಪಿಯ ರಾಜ್ಯ ಘಟಕದಲ್ಲಿನ ಇತ್ತೀಚಿನ
ವಿದ್ಯಮಾನಗಳನ್ನು ಗಮನಿಸಿದರೆ, ಈ ಮಾತಿನ ಸತ್ಯತೆ ಅರಿವಾಗುತ್ತದೆ. ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ, ಅಶಿಸ್ತು ತೋರುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಆಂತರಿಕ ವ್ಯವಸ್ಥೆ ಸರಿಯಾಗಿಲ್ಲ.
ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸಿದರೆ, ಇಂದಿರಾ ಗಾಂಧಿಯವರಿಗೆ ಎದುರಾದ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತದೆ. ಮುನಿಸಿಕೊಂಡ ಮತ್ತು ಬೇಸರಗೊಂಡ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಾಗಲು ಪಕ್ಷದ ನಾಯಕರು ವೇದಿಕೆ ಕಲ್ಪಿಸಬೇಕು. ರಾಜ್ಯ ನಾಯಕರಿಗೆ ಹೇಳಬೇಕಾದ ಬುದ್ಧಿಮಾತನ್ನೆಲ್ಲಾ ರಾಷ್ಟ್ರ ನಾಯಕರು ಹೇಳಬೇಕು.
ಪಕ್ಷದಲ್ಲಿ ಕೆಲವು ತೀರ್ಮಾನಗಳು ಏಕಪಕ್ಷೀಯವಾಗಿ ನಡೆಯುತ್ತವೆ. ಡಜನ್‌ಗಟ್ಟಲೆ ವ್ಯಕ್ತಿಗಳು ಪಕ್ಷದ ಪ್ರಮುಖ ಸ್ಥಾನದಲ್ಲಿರುವವರ ಕುರಿತು ನಿರಂತರ ವಾಗಿ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದಲ್ಲಿ ಸಮಾಲೋಚನೆಗೆ ಆದ್ಯತೆ ನೀಡ ಬೇಕಾಗಿದೆ ಎಂಬ ಸದಾನಂದ ಗೌಡರ ಹೇಳಿಕೆ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಪಕ್ಷದ ಆಂತರಿಕ ಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಇದು ದ್ಯೋತಕ; ಇದು ವಿಪಕ್ಷಗಳ ಆರೋಪ ಎಂದು ಗೂಬೆ ಕೂರಿಸ ಲಾಗದು.
ಸದಾನಂದ ಗೌಡರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಳ್ಳುವ ಸಂಭಾವ್ಯರ ಪಟ್ಟಿಯಲ್ಲಿದ್ದು, ಈಶ್ವರಪ್ಪ, ಸವದಿ ಮತ್ತು ಜಗದೀಶ ಶೆಟ್ಟರ್‌ರಿಗೆ ಹಿಂದೆ ನೀಡಿದಂತೆ ಗೌಡರಿಗೂ ಸೂಚನೆ ನೀಡಲಾಗಿದೆ ಎಂಬ ವದಂತಿಗಳಿವೆ. ಚುನಾವಣಾ ರಂಗದಿಂದ ನಿವೃತ್ತಿಯಾಗುವ ಇಂಗಿತ ವನ್ನು ವ್ಯಕ್ತಪಡಿಸಿದ್ದ ಗೌಡರೂ ಈಗ ಪ್ಲೇಟ್ ತಿರುಗಿ ಸಿದ್ದು, ಸ್ಪರ್ಧಿಸುವಂತೆ ತಮಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರಿಂದ ಭಾರಿ ಒತ್ತಡ ಬರುತ್ತಿದೆ ಎನ್ನುವ ಮೂಲಕ ಮತ್ತೆ ಸ್ಪರ್ಧಿಸುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ. ಹಿರಿಯ ನಾಯಕ ಮತ್ತು ಭಿನ್ನಮತೀಯ ದನಿಯಾಗಿರುವ ಯತ್ನಾಳರು ವರ್ಷಗಳಿಂದ ಯಡಿಯೂರಪ್ಪನ ವರನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ.
ಪಕ್ಷದ ಶಿಸ್ತನ್ನು ಮೀರಿ ವರ್ತಿಸಿದರೂ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಗೌಡರು ಅವರನ್ನು ಹೆಸರಿಸದೆಯೇ ಹೇಳಿದ್ದಾರೆ. ಪಕ್ಷದ ನೀತಿ-ನಡಾವಳಿ ಮತ್ತು ನಾಯಕರ ವಿರುದ್ಧ ಮಾತನಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಪಕ್ಷವು, ಯತ್ನಾಳ್ ವಿಷಯದಲ್ಲಿ ಇಷ್ಟು ರಿಯಾಯಿತಿ ನೀಡುತ್ತಿರುವುದೇಕೆ ಎಂದು ಅವರು ಕೇಳುತ್ತಿರುವಂತಿದೆ.
ಯತ್ನಾಳರು ವರಿಷ್ಠರ ಭಯವಿಲ್ಲದೆ ಪಕ್ಷ ಹಾಗೂ ಕೆಲ ನಾಯಕರ ಬಗ್ಗೆ ದೃಢವಾಗಿ ಟೀಕಿಸುವುದನ್ನು ನೋಡಿ, ‘ಅವರಿಗೆ ದೆಹಲಿಯಲ್ಲಿ ಕೆಲವು ಪ್ರಭಾವಿ ಗಳ ಅಗೋಚರ ಬೆಂಬಲವಿರಬೇಕು’ ಎಂದು ವಿಶ್ಲೇಷಕರು ಭಾವಿಸುತ್ತಿದ್ದಾರೆ. ಯತ್ನಾಳರು ಈಗ ತಮ್ಮ ಪಕ್ಷದ ವಿರುದ್ಧವೇ ೪೦,೦೦೦ ಕೋಟಿ ರು. ಭ್ರಷ್ಟಾಚಾರದ ಆರೋಪ ಹೊರಿಸಿದ್ದು, ಇದು ೪೦ ಪರ್ಸೆಂಟ್ ಕಮಿಷನ್ ಬಾಂಬ್‌ನಷ್ಟೇ ಹಾನಿಮಾಡುವಂತಿದೆ. ಲೋಕಸಭಾ ಚುನಾವಣೆಯ ಪೂರ್ವ ದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ಗೆ ನಿರಾಯಾಸವಾಗಿ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಈ ಆರೋಪದ ಸತ್ಯಾಸತ್ಯತೆ ತಿಳಿಯದು.
ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಮಾಮೂಲು. ಇಂಥ ಆರೋಪಗಳು ತಾರ್ಕಿಕ ಅಂತ್ಯ ಕಂಡ ನಿದರ್ಶನಗಳು ತೀರಾ ವಿರಳ. ಆದರೆ ಇವು ಕೆಲವರಿಗೆ ರಾಜಕೀಯ ಲಾಭ ನೀಡಿದರೆ, ಮತ್ತೆ ಕೆಲವರಿಗೆ ನಷ್ಟ ಉಂಟು ಮಾಡುವುದನ್ನು ಅಲ್ಲಗಳೆಯಾಗದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ೪೦ ಪರ್ಸೆಂಟ್ ಕಮಿಷನ್ ಆರೋಪವು ಕಾಂಗ್ರೆಸ್‌ಗೆ ಲಾಭವನ್ನೂ, ಬಿಜೆಪಿಗೆ ನಷ್ಟವನ್ನೂ ಮಾಡಿದ್ದು ಗೊತ್ತಿರುವಂಥದ್ದೇ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಈಗಾಗಲೇ ಸಾಕಷ್ಟು ದಿನಗಳನ್ನು ಕಳೆದಿರುವ ಕಾಂಗ್ರೆಸ್, ತಾನು ಮಾಡಿದ ಈ ‘ಕಮಿಷನ್’ ಆರೋಪಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸಬೇಕಿದೆ. ಹಿಂದೆ ವಿ.ಪಿ.ಸಿಂಗ್ ಅವರು ಚುನಾವಣಾ ಪ್ರಚಾರದ ವೇಳೆ, ತಾವು ಪ್ರಧಾನಿಯಾದರೆ ಮೂರೇ ತಿಂಗಳಲ್ಲಿ ಬೊಫೋರ್ಸ್ ಹಗರಣದ ರೂವಾರಿಗಳನ್ನು ಶಿಕ್ಷಿಸುವುದಾಗಿ ಅಬ್ಬರಿಸಿದ್ದರು. ಅಂತೆಯೇ ಅವರು ಚುನಾವಣೆಯಲ್ಲಿ ಗೆದ್ದು ಪ್ರಧಾನಿಯೂ ಆದರು. ಆದರೆ ಬೊಫೋರ್ಸ್
ಹಗರಣದ ಆರೋಪಿಗಳಿಗೆ ಶಿಕ್ಷೆಯಾಯಿತೇ? ರಾಜೀವ್ ಗಾಂಧಿಯವರು ಪ್ರಧಾನಮಂತ್ರಿ ಹುದ್ದೆಯನ್ನು ಕಳೆದುಕೊಂಡಿದ್ದಷ್ಟೇ ಸಿಕ್ಕಿದ ಶಿಕ್ಷೆ!
ಬಿಜೆಪಿಯ ವರಿಷ್ಠರು ಯತ್ನಾಳರ ವಿರುದ್ಧ ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ತಿಳಿಯದು. ಸಂಸತ್ ಅಧಿವೇಶನ, ಪಂಚರಾಜ್ಯಗಳ ಚುನಾವಣೆಯಲ್ಲಿ ವ್ಯಸ್ತರಾಗಿದ್ದ ಅವರಿಗೆ ಕರ್ನಾಟಕದ ಈ ಸಮಸ್ಯೆಯ ಪರಿಹಾರಕ್ಕೆ ಗಮನ/ಸಮಯ ನೀಡಲು ಆಗಿಲ್ಲದಿರಬಹುದು. ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯ ಮಹತ್ವದ ಘಟ್ಟ ಸನ್ನಿಹಿತವಾಗಿರುವುದರಿಂದ, ಅದು ಮುಗಿಯುವವರೆಗೆ ಅವರು ಕರ್ನಾಟಕದತ್ತ ದೃಷ್ಟಿ ಹರಿಸುವುದೂ ದುಸ್ತರವೇ. ಹಾಗೆ ನೋಡಿದರೆ ಬಿಜೆಪಿಗೆ ದಕ್ಷಿಣದಲ್ಲಿ ನೆಲೆಯಿದೆ ಎಂದರೆ ಅದು ಕರ್ನಾಟಕದಲ್ಲಷ್ಟೇ. ಆದರೆ ವರಿಷ್ಠರ ಇಂಥ ನಿರ್ಲಿಪ್ತತೆ/ಅನಾದರ ದಿಂದಾಗಿ ಈ ರಾಜ್ಯವನ್ನೂ ಪಕ್ಷ ಕಳೆದುಕೊಳ್ಳುತ್ತದೆಯೇ ಎಂಬ ಭಯ ಕಾರ್ಯಕರ್ತರನ್ನು ಆವರಿಸಿದೆ.
ಒಂದು ರೀತಿಯಲ್ಲಿ ಬಿಜೆಪಿ ರಾಜ್ಯ ಘಟಕದಲ್ಲಿನ ಇಂದಿನ ಹತಾಶ ಸ್ಥಿತಿಗೆ ಮುಖ್ಯ ಕಾರಣ ಅದರ ವರಿಷ್ಠರೇ; ಪ್ರತಿಯೊಂದನ್ನೂ ದೆಹಲಿಯಿಂದ ನಿರ್ವಹಿ ಸುವ ಅವರ ಕಾರ್ಯವೈಖರಿ ಮತ್ತು ಯಾವುದೇ ವಿಷಯದಲ್ಲಿ ರಾಜ್ಯ ನಾಯಕರೊಂದಿಗೆ ಚರ್ಚಿಸದೇ ತಮ್ಮ ಮೂಗಿನ ನೇರಕ್ಕೆ ನಿರ್ಣಯಿಸುವಿಕೆ, ಒಂದೊಮ್ಮೆ ಸಮಾಲೋಚನೆ ನಡೆದರೂ ಅದು ಏಕಪಕ್ಷೀಯವಾಗಿರುವಂತೆ ನೋಡಿಕೊಳ್ಳುವಿಕೆ- ಇವು ಗಳಿಂದಾಗಿ ರಾಜ್ಯ ಬಿಜೆಪಿ ಹತಾಶೆಯ ಸ್ಥಿತಿ ತಲುಪಿದೆ ಮತ್ತು ಜನರು ಆಡಿಕೊಳ್ಳುವಂತಾಗಿದೆ. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಮುಖ್ಯಮಂತ್ರಿಯ ನಿಯೋಜನೆ, ಮಂತ್ರಿಗಳ ಆಯ್ಕೆ, ಖಾತೆ ಹಂಚಿಕೆ, ನಿಗಮ-ಮಂಡಳಿಗಳಿಗೆ ನೇಮಕ, ಪಕ್ಷದ ಪದಾಧಿಕಾರಿಗಳ ಆಯ್ಕೆ ಹೀಗೆ ಎಲ್ಲಾ ವಿಷಯದಲ್ಲೂ ವರಿಷ್ಠರು ವಿಳಂಬ ತಂತ್ರ ಅನುಸರಿಸಿದ್ದು
ಪಕ್ಷದ ಇಮೇಜನ್ನು ಬಲವಾಗಿ ಘಾಸಿಗೊಳಿಸಿದೆ.
ಅಂತ್ಯವಾಗದ ಯತ್ನಾಳರ ಯಾತನೆಯಂತೆ ಸೋಮಣ್ಣ ನವರ ಸಿಟ್ಟು ಕೂಡ ಶಮನವಾಗುತ್ತಿಲ್ಲ. ಅವರನ್ನು ವರಿಷ್ಠರು ಒಂದೆರಡು ಬಾರಿ ಫೋನ್‌ನಲ್ಲಿ ಸಂಪರ್ಕಿಸಿದ್ದಾರೆ ಎನ್ನಲಾ ಗಿದ್ದು, ಸೋಮಣ್ಣ ತಮ್ಮ ಬಿಗಿಪಟ್ಟನ್ನು ಸ್ವಲ್ಪವೂ ಸಡಿಲಿಸಿಲ್ಲ ಎನ್ನಲಾಗುತ್ತಿದೆ. ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅನುಭವಿಸಿದ ಸೋಲನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ಸೋಮಣ್ಣ, ಈ ಸೋಲಿಗೆ ಕಾರಣರಾದವರ ಕುರಿತು ವರಿಷ್ಠರಲ್ಲಿ ಅಳಲು ತೋಡಿಕೊಳ್ಳಲು ಕಾಯುತ್ತಿದ್ದಾರಂತೆ. ಉತ್ತರ ಕನ್ನಡ ಜಿಲ್ಲೆಯಿಂದ ೬ ಬಾರಿ ಸಂಸದರಾಗಿರುವ ಪ್ರಖರ ಹಿಂದುತ್ವವಾದಿ ಅನಂತಕುಮಾರ ಹೆಗಡೆ, ಕಳೆದ
ನಾಲ್ಕೂವರೆ ವರ್ಷಗಳಿಂದ ವೈಯಕ್ತಿಕ ಕಾರಣಗಳಿಗಾಗಿ ನಿಷ್ಕ್ರಿಯರಾಗಿದ್ದು ಈ ಬಾರಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿ ಎನ್ನಲಾಗುತ್ತಿತ್ತು.
ಅಂತೆಯೇ ಹಲವು ಆಕಾಂಕ್ಷಿಗಳು ಆ ಸ್ಥಾನಕ್ಕೆ ಟವೆಲ್ ಹಾಕಲು ಸಜ್ಜಾಗುತ್ತಿದ್ದಂತೆ ದಿಢೀರ್ ಸಕ್ರಿಯರಾದ ಹೆಗಡೆ, ಸ್ಪರ್ಧೆಯ ಬಗ್ಗೆ ಸಂಕ್ರಾಂತಿಯ ನಂತರ
ನಿರ್ಧರಿಸುವುದಾಗಿ ಹೇಳಿದ್ದಾರೆ. ಆದರೆ ಆರು ಬಾರಿ ಆಯ್ಕೆಯಾದರೂ ಅವರ ಸಾಧನೆ ಬಗ್ಗೆ ಅತೃಪ್ತಿ ಇರುವವರು ಮತ್ತು ಪಕ್ಷದ ಹಲವು ಕಾರ್ಯಕರ್ತರು, ಹೊಸಬರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರಂತೆ. ಈ ಹಗ್ಗಜಗ್ಗಾಟವನ್ನು ಪಕ್ಷದ ವರಿಷ್ಠರು ಹೇಗೆ ನಿಭಾಯಿಸುವರೋ ಎಂಬುದನ್ನು ಕಾದು ನೋಡುವಂತಾಗಿದೆ. ಒಟ್ಟಿನಲ್ಲಿ, ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಷಯವು ಸಂಘ ಪರಿವಾರ ಮತ್ತು ಪಕ್ಷದ ವರಿಷ್ಠರು
ಇಬ್ಬರಿಗೂ ತಲೆನೋವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಬಲ್ಲವರು.
ಇನ್ನು ಮಂಡ್ಯ ಕ್ಷೇತ್ರವೂ ಬಿಜೆಪಿ ವರಿಷ್ಠರ ಪಾಲಿಗೆ ಸವಾಲು ಒಡ್ಡುವ ಸಾಧ್ಯತೆಯಿದೆ. ಕಾರಣ, ಬಿಜೆಪಿಯೊಡನೆ ಗುರುತಿಸಿಕೊಂಡಿರುವ ಜೆಡಿಎಸ್ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ; ಹೀಗಾದರೆ, ಇತ್ತೀಚೆಗಷ್ಟೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಸುಮಲತಾ ಅವರು ಆ ಕ್ಷೇತ್ರವನ್ನು ಬಿಟ್ಟು ಕೊಡುವರೇ? ಅದಕ್ಕೆ ಅವರು ಒಪ್ಪುವರೇ? ಎಂಬುದು ಸದ್ಯಕ್ಕೆ ಎದ್ದಿರುವ ಪ್ರಶ್ನೆ. ಹೇಳುತ್ತಾ ಹೋದರೆ ಇಂಥ ಸವಾಲಿನ ಸನ್ನಿವೇಶಗಳು ಸಾಕಷ್ಟಿವೆ. ರಾಜ್ಯ ಬಿಜೆಪಿಯಲ್ಲಿ ಹರಳುಗಟ್ಟಿರುವ ಇಂಥ ಹಲವು ಸವಾಲು-ಸಮಸ್ಯೆಗಳನ್ನು ಹಾಗೂ ಒಂದಷ್ಟು ಹತಾಶೆಗಳನ್ನು ವರಿಷ್ಠರು ಯಾವಾಗ, ಹೇಗೆ ನಿವಾರಿಸು ವರು? ಎಂಬ ಪ್ರಶ್ನೆ ಪಕ್ಷದ ಕಾರ್ಯ ಕರ್ತರನ್ನು ಕಾಡುತ್ತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಪರಿಸ್ಥಿತಿ ಅಂದುಕೊಂಡಷ್ಟು ಪ್ರಕಾಶಮಾನ ವಾಗಿಲ್ಲ.
(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)