ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿ, ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿದಿದೆ.
ಕೇವಲ ಎರಡೇ ದಿನಗಳಲ್ಲಿ ಆತಿಥೇಯರನ್ನು ಬಗ್ಗು ಬಡಿಯುವ ಮೂಲಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನಕ್ಕೆ ಏರಿಕೆ ಕಂಡಿದೆ.
ಮೊದಲ ಟೆಸ್ಟ್ ಸೋಲಿನ ನಂತರ ಟೀಂ ಇಂಡಿಯಾ ಟಾಪ್ 3ರಲ್ಲಿಯೂ ಇರಲಿಲ್ಲ. ಇದರೊಂದಿಗೆ ಸ್ಲೋ ಓವರ್ ರೇಟ್ಗೆ ಎರಡು ಅಂಕ ಕಡಿತ ಮಾಡಿ ಕೊಂಡಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಭಾರತ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ಈ ಗೆಲುವಿ ನೊಂದಿಗೆ ಟೀಂ ಇಂಡಿಯಾ 12 ಅಂಕ ಗಳಿಸಿದೆ.
ಪ್ರಸಕ್ತ ಸಾಲಿನ ಡಬ್ಲ್ಯುಟಿಸಿಯಲ್ಲಿ ಭಾರತ ತಂಡ ನಾಲ್ಕು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಎರಡು ಪಂದ್ಯ ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 54.16 ಗೆಲುವಿನ ಶೇಕಡಾವಾರು ಹೊಂದಿರುವ ಟೀಂ ಇಂಡಿಯಾ ಅತ್ಯಧಿಕ 26 ಅಂಕ ಹೊಂದಿದೆ.
ದಕ್ಷಿಣ ಆಫ್ರಿಕಾ ತಂಡ 12 ಅಂಕ ಹಾಗೂ 50 ಗೆಲುವಿನ ಶೇಕಡಾವಾರುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮೂರನೇ ಸ್ಥಾನ, ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿ ಮತ್ತು ಬಾಂಗ್ಲಾದೇಶ ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ 6, ವೆಸ್ಟ್ ಇಂಡೀಸ್ 7ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 8ನೇ ಸ್ಥಾನದಲ್ಲಿದೆ.