Sunday, 15th December 2024

ಪರಮೇಶ್ವರ್‌ ಕಿವಿಗೆ ಬಿತ್ತಾ ಪರಮರಹಸ್ಯ ?

ಮೂರ್ತಿಪೂಜೆ

ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಚರ್ಚಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು
ಗೋಪಾಲ್ ಅವರು ವೆಸ್ಟ್ ಎಂಡ್ ಹೋಟೆಲಿನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ನೋಡಲು ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೋಗಿದ್ದಾರೆ. ಅಂದು ವೇಣುಗೋಪಾಲ್‌ರ ಜತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದ ಪರಮೇಶ್ವರ್ ಮಾತಿನ ಮಧ್ಯೆ, ‘ಸರ್, ನಿಮ್ಮ ಬಳಿ ಒಂದು ವಿಷಯ ಕೇಳಬೇಕು ಅಂತ ತುಂಬ ದಿನಗಳಿಂದ ಯೋಚಿಸುತ್ತಿದ್ದೆ’ ಎಂದಿದ್ದಾರೆ. ಈ ಮಾತಿಗೆ ಅಚ್ಚರಿಗೊಂಡ ವೇಣುಗೋಪಾಲ್ ಅವರು, ‘ಖಂಡಿತ ಕೇಳಿ ಪರಮೇಶ್ವರ್ ಜೀ, ಅದರಲ್ಲೇಕೆ ಸಂಕೋಚ?’ ಅಂತ ಹೇಳಿದ್ದಾರೆ.

ಅವರು ಇಷ್ಟು ಹೇಳಿದ್ದೇ ತಡ, ಮುಖ್ಯ ವಿಷಯಕ್ಕೆ ಬಂದ ಪರಮೇಶ್ವರ್, ‘ಸರ್, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಯಾರು ಮುಖ್ಯ ಮಂತ್ರಿಯಾಗಬೇಕು ಅಂತ ದಿಲ್ಲಿಯಲ್ಲಿ ನೀವು ಚರ್ಚಿಸಿದಿರಲ್ಲ, ಆ ವೇಳೆ ಈ ಹುದ್ದೆಯನ್ನು ಇಬ್ಬರಿಗೆ ಹಂಚಿಕೆ ಮಾಡಬೇಕು ಅಂತ ಹೈಕಮಾಂಡ್ ಏನಾ ದರೂ ನಿರ್ಧಾರ ತೆಗೆದುಕೊಂಡಿದೆಯೇ?’ ಅಂತ ಪ್ರಶ್ನಿಸಿದ್ದಾರೆ. ಪರಮೇಶ್ವರ್ ಮಾತಿನಿಂದ ಇನ್ನಷ್ಟು ಅಚ್ಚರಿಗೊಂಡ ವೇಣುಗೋಪಾಲ್, ‘ಇದೇಕೆ ಇದ್ದಕ್ಕಿದ್ದಂತೆ ಈ ಪ್ರಶ್ನೆ ಪರಮೇಶ್ವರ್ ಜೀ, ನಾಯಕತ್ವದ ವಿಷಯದ ಬಗ್ಗೆ ಯಾವ ಗೊಂದಲವೂ ಬೇಡ, ಈ ಕುರಿತಂತೆ ಯಾರೂ ಚರ್ಚಿಸಬಾರದು ಅಂತ ಈಗಾಗಲೇ ನಾವು ಎಲ್ಲರಿಗೂ ಕಟ್ಟುನಿಟ್ಟಾಗಿ ಹೇಳಿದ್ದೇವಲ್ಲ? ಅಂದ ಮೇಲೆ ಈ ಪ್ರಶ್ನೆ ಏಕೆ?’ ಅಂತ ಕೇಳಿದ್ದಾರೆ.

‘ಹಾಗಲ್ಲ ಸರ್, ಹಾಗೊಂದು ವೇಳೆ ಹೈಕಮಾಂಡ್ ಇಂಥ ನಿರ್ಧಾರ ತೆಗೆದುಕೊಂಡಿದ್ದರೆ ಶುರುವಿನಲ್ಲೇ ಕ್ಲಾರಿಫೈ ಮಾಡಿಬಿಡಿ. ಹಾಗೇನಾದರೂ ನೀವು ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಪರ್ಯಾಯ ನಾಯಕರನ್ನು ತಂದು ಕೂರಿಸುವುದೇ ಆದರೆ
ನಿಮ್ಮ ಗಮನದಲ್ಲಿರಲಿ, ಮುಂದಿನ ಸಿಎಂ ಹುದ್ದೆಗೆ ನಾನೂ ಸೀರಿಯಸ್ ಕಂಟೆಂಡರ್’ ಎಂದಿದ್ದಾರೆ. ಇದನ್ನು ಕೇಳಿ ಇನ್ನಷ್ಟು ವಿಸ್ಮಿತರಾದ ವೇಣು ಗೋಪಾಲ್, ‘ಈಗ ಆ ಮಾತೆಲ್ಲ ಏಕೆ ಬಿಡಿ ಪರಮೇಶ್ವರ್ ಜೀ, ಅಂಥ ಸಂದರ್ಭ ಬಂದಾಗ ತಾನೇ ಆ ಪ್ರಶ್ನೆ? ಸದ್ಯಕ್ಕೆ ಹೈಕಮಾಂಡ್ ಈ ಕುರಿತು ಅಧಿಕೃತ
ತೀರ್ಮಾನವನ್ನೇನೂ ತೆಗೆದುಕೊಂಡಿಲ್ಲವಲ್ಲ’ ಎಂದಿದ್ದಾರಾದರೂ ಪಟ್ಟು ಬಿಡದ ಪರಮೇಶ್ವರ್, ‘ಸರ್, ಇದು ಸುಮ್ಮನಿರುವ ವಿಷಯವಲ್ಲ. ನಾಳೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ. ಅವರ ಜಾಗಕ್ಕೆ ಇಂಥವರನ್ನು ತರಲು ಪಕ್ಷ ನಿರ್ಧರಿಸಿದೆ ಅಂತ ನೀವು
ಷಾಕ್ ಕೊಡುವುದು ಬೇಡ. ಹೀಗಾಗಿ ಈ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.

ಹಾಗೊಂದು ವೇಳೆ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಪರ್ಯಾಯ ನಾಯಕರನ್ನು ಸಿಎಂ ಹುದ್ದೆಗೆ ತರುವುದೇ ಹೈಕಮಾಂಡ್ ಉದ್ದೇಶವಾದರೆ ನಾನೂ ಸಿಎಂ ಹುದ್ದೆಯ ಆಕಾಂಕ್ಷಿ. ಹೀಗಾಗಿ ಅಂಥ ಸಂದರ್ಭ ಎದುರಾದರೆ ವಿಷಯ ಶಾಸಕಾಂಗ ಸಭೆಯಲ್ಲಿ ಇತ್ಯರ್ಥವಾಗಲಿ. ಯಾರಿಗೆ ಹೆಚ್ಚು ಶಾಸಕರ ಬೆಂಬಲ ಇದೆಯೋ ಅವರು ಮುಖ್ಯಮಂತ್ರಿಯಾಗಲಿ. ಅಂದ ಹಾಗೆ, ನಾವು ಕೂಡಾ ಪಕ್ಷಕ್ಕಾಗಿ ದುಡಿದವರು. ೨೦೧೩ರಲ್ಲಿ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಹಿಡಿದಾಗ ಕೆಪಿಸಿಸಿ ಅಧ್ಯಕ್ಷನಾಗಿದ್ದವನು ನಾನು. ಅವತ್ತು ಪಕ್ಷವನ್ನು ಅಧಿಕಾರಕ್ಕೆ ತರಲು ನಾನೆಷ್ಟು ಕಷ್ಟ ಪಟ್ಟಿದ್ದೇನೆ ಅಂತ ನಿಮಗೂ ಗೊತ್ತು. ಆದರೆ
ಅವತ್ತು ನಾನು ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದೆ ಎಂಬ ಕಾರಣಕ್ಕಾಗಿ ಸಿಎಂ ಹುದ್ದೆಯಿಂದ ದೂರವಾಗಬೇಕಾಯಿತು.

ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ, ಕನಿಷ್ಠ ಡಿಸಿಎಂ ಹುದ್ದೆ ಪಡೆಯಲು ನಾನು ೫ ವರ್ಷ ಕಾಯಬೇಕಾಯಿತು. ಆದರೆ ಇನ್ನು ನಾನು
ತುಂಬ ಕಾಲ ಕಾಯುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಈ ಸಲ ಸಿದ್ದರಾಮಯ್ಯರನ್ನು ಕೆಳಗಿಳಿಸುವ ನಿರ್ಣಯಕ್ಕೇನಾದರೂ ಹೈಕಮಾಂಡ್ ಬಂದರೆ ನಿಶ್ಚಿತವಾಗಿ ನಾನು ಸಿಎಂ ಹುದ್ದೆಯ ರೇಸಿನಲ್ಲಿರುತ್ತೇನೆ. ಇದನ್ನು ಇವತ್ತು ನಿಮಗೇಕೆ ಹೇಳಿದೆ ಎಂದರೆ, ನಾಳೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ಯಿಂದ ಕೆಳಗಿಳಿಯುತ್ತಾರೆ, ಅವರ ಜಾಗಕ್ಕೆ ಇಂಥವರನ್ನು ತಂದು ಕೂರಿಸಲು ಹೈಕಮಾಂಡ್ ಮೊದಲೇ ನಿರ್ಣಯಿಸಿತ್ತು ಅಂತ ನೀವು ಹೇಳಿದರೆ ಅದನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಹಾಗೊಂದು ವೇಳೆ ಅಧಿಕಾರ ಹಂಚಿಕೊಡಲು ಹೈಕಮಾಂಡ್ ಈಗಾಗಲೇ ತೀರ್ಮಾನಿಸಿದ್ದರೆ ಈಗಲೇ ಅದನ್ನು ಹೇಳಿಬಿಡಿ’ ಎಂದಿದ್ದಾರೆ.

ಪರಮೇಶ್ವರ್ ಹೀಗೆ ಕಡ್ಡಿ ಮುರಿದಷ್ಟು ಸ್ಪಷ್ಟವಾಗಿ ಮಾತನಾಡಿದ್ದರಿಂದ ಸ್ವಲ್ಪ ಹೊತ್ತು ಮೌನಕ್ಕೆ ಜಾರಿದ ವೇಣುಗೋಪಾಲ್, ‘ನೋ, ನೋ, ನಿರ್ದಿಷ್ಟ ಅವಧಿಯ ನಂತರ ಸಿದ್ದರಾಮಯ್ಯರನ್ನು ಕೆಳಗಿಳಿಸಬೇಕು ಅಂತ ಹೈಕಮಾಂಡ್ ತೀರ್ಮಾನಿಸಿಲ್ಲ. ಹೀಗಾಗಿ ಆ ಬಗ್ಗೆ ತುಂಬ ಯೋಚಿಸುವುದು ಬೇಡ’ ಅಂತ ಮಾತಿಗೆ ತೆರೆ ಎಳೆದಿದ್ದಾರೆ. ವೇಣುಗೋಪಾಲ್ ಜತೆ ಈ ಮಾತುಕತೆ ನಡೆದ ನಂತರ ಪರಮೇಶ್ವರ್ ಸಿಎಂ ಹುದ್ದೆಯ ರೇಸಿಗೆ ಮತ್ತಷ್ಟು ತೀವ್ರವಾಗಿ
ಅಣಿಯಾಗತೊಡಗಿದ್ದಾರೆ. ಅಂದ ಹಾಗೆ, ಇತ್ತೀಚೆಗೆ ಪರಮೇಶ್ವರ್ ಅವರ ನಿವಾಸದಲ್ಲಿ ಮತ್ತು ಕಳೆದ ಗುರುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದ ಭೋಜನ ಕೂಟಗಳಿಗೆ ಇದ್ದ ಅಜೆಂಡಾ ಬೇರೇನೂ ಅಲ್ಲ; ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಇಳಿಯುವುದೇ ಆದರೆ ಆ ಜಾಗದಲ್ಲಿ ಪರಮೇಶ್ವರ್‌ರನ್ನು ಕೂರಿಸುವುದು ಹೇಗೆ ಅಂತ ಪ್ಲಾನು ಮಾಡುವುದೇ ಅದರ ಉದ್ದೇಶವಾಗಿತ್ತು.

ವಿಜಯೇಂದ್ರ ಪಾಲಿಗೆ ಹೊಸ ತಲೆನೋವು

ಆಂದ ಹಾಗೆ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹೊಸ ತಲೆನೋವು ಶುರುವಾಗಿದೆ. ಕಾರಣ? ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಅವರು ನೇಮಿಸಿದ್ದ ಉಸ್ತುವಾರಿಗಳು ಕಾಂಕ್ರೀಟ್ ಆಗಿ ಕೆಲಸ ಮಾಡಿಲ್ಲ. ಅರ್ಥಾತ್, ಆಯಾ ಜಿಲ್ಲೆಯಲ್ಲಿ ಯಾರು ಅಧ್ಯಕ್ಷ ರಾಗಬೇಕು ಅಂತ ೨-೩ ಹೆಸರುಗಳನ್ನು ಶಿಫಾರಸು ಮಾಡಿ ಅಂತ ಈ ಉಸ್ತುವಾರಿಗಳಿಗೆ ಸೂಚಿಸಿದರೆ,  ಜಿಲ್ಲಾಧ್ಯಕ್ಷ ರಾಗಲು ಯಾರ‍್ಯಾರು ರೇಸಿನಲ್ಲಿದ್ದಾರೆ ಅಂತ ಅವರು ದೊಡ್ಡ ದೊಡ್ಡ ಪಟ್ಟಿ ತಂದುಕೊಟ್ಟಿದ್ದಾರೆ. ಹೀಗಾಗಿ ಅವರು ಶಿಫಾರಸು ಮಾಡಿದ ೧೦-೧೫ ಆಕಾಂಕ್ಷಿಗಳ ಪಟ್ಟಿಯಲ್ಲಿ ತಲಾ ಒಬ್ಬರನ್ನು ಆಯ್ಕೆ ಮಾಡುವುದು ವಿಜಯೇಂದ್ರರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಮಧ್ಯೆ ಕೆಲ ಜಿಲ್ಲಾಧ್ಯಕ್ಷರ ನೇಮಕಾತಿ ವಿಷಯದಲ್ಲಿ ವಿಜಯೇಂದ್ರ ಪರ್ಸನಲ್ ಇಂಟರೆಸ್ಟ್ ತೆಗೆದುಕೊಂಡಿದ್ದಾರೆ ಎಂಬ ಮಾತು ಪಕ್ಷದ ಒಳವಲಯ ಗಳಲ್ಲಿ ಸುನಾಮಿಯಂತೆ ಹರಡಿ ಒಡಕಿನ ಧ್ವನಿ ಕೇಳಿಬರುತ್ತಿದೆ. ಈ ಪೈಕಿ ಬೆಂಗಳೂರು ಉತ್ತರ ಜಿಲ್ಲೆಗೆ ತಮ್ಮ ಆಪ್ತ ತಮ್ಮೇಶ್ ಗೌಡರನ್ನು ತಂದು ಕೂರಿ ಸಲು ವಿಜಯೇಂದ್ರ ಬಯಸಿದ್ದರೆ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ ಮತ್ತು ದಾಸರ ಹಳ್ಳಿ ಮುನಿರಾಜು ಅವರು ರಾಜಣ್ಣ ಎಂಬ ಕ್ಯಾಂಡಿಡೇಟನ್ನು ತಂದು ಕೂರಿಸಲು ಬಯಸಿದ್ದಾರೆ. ಇನ್ನು ಬೆಂಗಳೂರು ಸೆಂಟ್ರಲ್‌ಗೆ ಹಿರಿಯ ನಾಯಕ ರಾಮಚಂದ್ರೇಗೌಡರ ಮಗ ಸಪ್ತಗಿರಿ ಗೌಡರನ್ನು ತಂದು ಕೂರಿಸುವ ವಿಷಯದಲ್ಲಿ ಭಿನ್ನಾಭಿಪ್ರಾಯ ಕೇಳಿ ಬರುತ್ತಿಲ್ಲವಾದರೂ ಬೆಂಗಳೂರು ಸೌತ್‌ಗೆ ರಾಮಮೂರ್ತಿ ಅವರನ್ನು ತಂದು ಕೂರಿಸುವ ವಿಜಯೇಂದ್ರರ ಆಸಕ್ತಿಗೆ ಯಡಿಯೂರಪ್ಪ ವಿರೋಧಿ ಬಣ ತಕರಾರೆತ್ತಿದೆ.

ಇದರ ಮಧ್ಯೆ ಆರ್.ಅಶೋಕ್ ಕಳೆದ ವಾರ ಹುಬ್ಬಳ್ಳಿಗೆ ಹೋದಾಗ, ಬೆಂಗಳೂರಿನಲ್ಲಿ ಪಕ್ಷದ ಮಾಜಿ ಕಾರ್ಪೊರೇಟರುಗಳ ಮೀಟಿಂಗು ನಡೆಸಿದ ವಿಜ ಯೇಂದ್ರ, ‘ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರಿನ ಶಾಸಕರು ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿಲ್ಲ. ಹೀಗಾಗಿ ೩ ವರ್ಷದ ಹಿಂದೆ ಮರಳಿ ಕಾರ್ಪೊರೇಟರುಗಳಾಗುವ ಅವಕಾಶ ನಿಮಗೆ ತಪ್ಪಿತು’ ಅಂತ ಹಳಹಳಿಸಿದ ರೀತಿ ಅಶೋಕ್, ಅಶ್ವತ್ಥ ನಾರಾಯಣ್ ಸೇರಿದಂತೆ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಇರಿಸು ಮುರಿಸುಂಟುಮಾಡಿದೆ. ಹೀಗಾಗಿ ನೋಡನೋಡುತ್ತಿದ್ದಂತೆಯೇ ಯಡಿಯೂರಪ್ಪ ಬಣದಲ್ಲೂ ಉಪಬಣಗಳು ಸೃಷ್ಟಿಯಾಗಿ ವಿಜಯೇಂದ್ರ ಅವರ ತಲೆನೋವು ಹೆಚ್ಚಾಗಿದೆ.

ಹೊಸ ದೇವರಿಗಿಂತ ಹಳೆ ದೆವ್ವ ಬೆಟರ್ರು

ಈ ಮಧ್ಯೆ ೪ನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿ ‘ದಕ್ಷಿಣಾಪಥೇಶ್ವರ’ ಎಂಬ ಖ್ಯಾತಿಗೆ ಪಾತ್ರರಾಗಿರುವ ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರು ಮೊನ್ನೆ ಕುಟುಂಬ ಸಮೇತರಾಗಿ ಆನಂದಮಯ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ತಮ್ಮ ಸಮಸ್ಯೆಯನ್ನು ವಿವರಿಸಿದ ಈ ಶಾಸಕರು, ‘ಗುರೂಜಿ, ಈಗ ಪಕ್ಷ ಯಡಿಯೂರಪ್ಪನವರ ಕಂಟ್ರೋಲಿಗೆ ಬಂದಿದ್ದರೂ ಅಲ್ಲಿ ಉಪಬಣಗಳ ಆಟ ಶುರುವಾಗಿದೆ. ಈ ಟೈಮಿನಲ್ಲಿ ಯಾವ ಬಣದ ಜತೆ ನಿಲ್ಲಬೇಕು ಎಂಬುದೇ ನನಗೆ ಗೊಂದಲವಾಗಿದೆ. ಹೀಗಾಗಿ ನೀವೇ ದಾರಿ ತೋರಿಸಬೇಕು’ ಎಂದಿದ್ದಾರೆ. ಆಗ ಆನಂದಮಯ ಗುರೂಜಿ ಈ ಉಪಬಣ ಗಳ ನಾಯಕರ ಜಾತಕವನ್ನು ಪರಿಶೀಲಿಸಿ, ‘ಹೊಸ ದೇವರಿಗಿಂತ ಹಳೆ ದೆವ್ವವೇ ವಾಸಿ’ ಎಂದರಂತೆ. ಇದಾದ ನಂತರ ದಕ್ಷಿಣಾಪಥೇಶ್ವರ ಖ್ಯಾತಿಯ ಶಾಸಕರು ಗುರೂಜಿಯ ಮಾತು ಪಾಲಿಸಲು ನಿರ್ಧರಿಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.

ನಿಗಮ-ಮಂಡಳಿ : ಮುಗಿಯದ ಕತೆ

ಇನ್ನು ರಾಜ್ಯದ ವಿವಿಧ ನಿಗಮ-ಮಂಡಳಿಗಳಿಗೆ ಶಾಸಕರು, ಕಾರ್ಯಕರ್ತರನ್ನು ನೇಮಿಸುವ ಕೆಲಸ ಮತ್ತಷ್ಟು ವಿಳಂಬವಾಗುವುದು ನಿಶ್ಚಿತವಾಗಿದೆ. ಹಾಗೆ ನೋಡಿದರೆ ಶುರುವಿನಲ್ಲಿ ‘ಶಾಸಕರಿಗೆ ಮಾತ್ರ ನಿಗಮ-ಮಂಡಳಿಯ ಅಧ್ಯಕ್ಷತೆ’ ಅಂತ ಜಬರದಸ್ತು ತೋರಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಇದ್ದಕ್ಕಿ ದ್ದಂತೆ ‘ಕಾರ್ಯಕರ್ತರನ್ನೂ ನೇಮಿಸಬೇಕು; ಹೀಗಾಗಿ ರೆಡಿ ಆಗಿರುವ ಪಟ್ಟಿಯನ್ನು ಪರಿಷ್ಕರಿಸಿ’ ಅಂದಿದೆಯಂತೆ. ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ, ಈ ನೇಮಕಗಳ ವಿಷಯದಲ್ಲಿ ರಾಜ್ಯದ ನಾಯಕರಿಗೆ ಆಸಕ್ತಿಯಿಲ್ಲ. ಕಾರಣ? ಬಹುತೇಕ ನಿಗಮ-ಮಂಡಳಿಗಳನ್ನು ಈಗ ಮಂತ್ರಿಗಳು ಎಂಜಾಯ್ ಮಾಡು ತ್ತಿದ್ದು, ಇವಕ್ಕೆ ಅಧ್ಯಕ್ಷರನ್ನು ನೇಮಿಸಿದರೆ ಎಂಜಾಯ್‌ಮೆಂಟ್‌ಗೆ ಬ್ರೇಕ್ ಬೀಳುತ್ತದೆ ಎಂಬುದು ಅವರ ಯೋಚನೆ.

ಈ ಮಧ್ಯೆ ಕೆಲ ಶಾಸಕರನ್ನು ಹೊರತುಪಡಿಸಿದಂತೆ ಉಳಿದ ವರ ನೇಮಕಾತಿ ವಿಷಯದಲ್ಲಿ ಒಂದು ಸಮಸ್ಯೆಯೂ ಇದೆ. ಅದೆಂದರೆ ಅಧ್ಯಕ್ಷಗಿರಿ ಸಿಗದವರು ಅತೃಪ್ತರ ಗೆಟಪ್ಪಿನಲ್ಲಿ ಮೇಲೆದ್ದು ನಿಲ್ಲುತ್ತಾರೆ. ನಾಳೆ ಇವರೇ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದ ಕ್ಯಾಂಡಿಡೇಟುಗಳಿಗೆ ತಲೆನೋವಾಗುತ್ತಾರೆ. ಹೀಗಾಗಿ ಅನಿವಾರ್ಯವೆನ್ನಿಸುವ ಕೆಲವು ನಿಗಮ-ಮಂಡಳಿಗಳನ್ನು ಹೊರತುಪಡಿಸಿ ಉಳಿದ ಬಹುತೇಕ ನಿಗಮ-ಮಂಡಳಿಗಳ ನೇಮಕಾತಿಯನ್ನು
ಪಾರ್ಲಿಮೆಂಟ್ ಚುನಾವಣೆಯ ತನಕ ಮುಂದೂಡಬೇಕು ಎಂಬುದು ಈ ನಾಯಕರ ವಾದ. ಅವರ ವಾದಕ್ಕೆ ರಾಹುಲ್ ಗಾಂಧಿ ಯೆಸ್ ಎಂದಿದ್ದಾರೆ. ಆಕಾಂಕ್ಷಿಗಳಿಗೆ ಭ್ರಮನಿರಸನ ವಾಗುವಂತೆ ಮಾಡಿದ್ದಾರೆ ಅನ್ನುವುದು ಕಾಂಗ್ರೆಸ್ ಮೂಲಗಳ ಮಾತು.