Thursday, 12th December 2024

ಮೋದಿ ತವರಲ್ಲಿ ಜಸ್ಟ್ ಪಾಸ್ ಹಾಡಿನ ಮೋಡಿ!

“ನೋಡಿದ ಕೂಡಲೇ” ಇಷ್ಟ ಪಡೋ ಸೂಪರ್ ಸಾಂಗ್!
ಶ್ರೀ-ರಮಣ
ಗುಜರಾತ್, ಸದ್ಯ ಇಡೀ ದೇಶದ ಗಮನ ಸೆಳೆದಿರೋ ಪ್ರಧಾನ ರಾಜ್ಯ. ಇಡೀ ಭಾರತದ ಆಡಳಿತ ಚುಕ್ಕಾಣಿ ಹಿಡಿದಿರೋ ಶ್ರೀ ನರೇಂದ್ರ ಮೋದಿಯವರ ತವರಿನ ಸಿರಿ. ಅಂಥ ಅದ್ಭುತ ನಾಡಲ್ಲಿ ಕನ್ನಡ ನಾಡಿನ ಹಾಡೊಂದರ ಚಿತ್ರೀಕರಣ ನಡೆದಿದೆ ಎಂದರೆ ನೀವು ನಂಬುತ್ತೀರಾ?!
ಯೆಸ್, ಸದ್ಯ ಯುವ ಜೀವಗಳ ಹೆಗಲು ಕುಣಿಸಲು ರೆಡಿ ಆಗಿರೋ ಕೆ.ಎಂ. ರಘು ನಿರ್ದೇಶನದ ಜಸ್ಟ್ ಪಾಸ್ ಚಿತ್ರದ ‘ನೋಡಿದ ಕೂಡಲೇ’ ಎನ್ನೋ ಹಾಡನ್ನು ಅದೇ ಗುಜರಾತ್‌ನಲ್ಲಿ ಶೂಟ್ ಮಾಡಲಾಗಿದೆ. ಅಲ್ಲಿನ ರನ್ ಆಫ್ ಕಚ್, ಕಾಡಿಯಾದ್ರಿಯೋ,  ಮಾಂಡ್ವಿ ಬೀಚ್ ಸೇರಿದಂತೇ ಸಾಕಷ್ಟು ರಮ್ಯ ರಮಣೀಯ ನ್ಯಾಚುರಲ್ ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ!
ಈ ಸುಮಧುರ ಹಾಡಿಗೆ ಯುವ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಸಂಗೀತ  ಸಂಯೋಜನೆ ಮಾಡಿದ್ದು, ಕಲರ್‌ಫುಲ್ ಗಾಯಕ ಕಾರ್ತಿಕ್ ದನಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ವಿಭಿನ್ನ ಶೈಲಿಯ ಮೂಲಕ ಹೆಸರು ಮಾಡಿರುವ ಡ್ಯಾನ್ಸ್ ಮಾಸ್ಟರ್ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಜಯ್ ಕುಮಾರ್ ಕ್ಯಾಮೆರಾ ಕೈಚಳಕದಲ್ಲಿ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಕಾಂತಾರ ಖ್ಯಾತಿಯ ಗೀತ ರಚನೆಕಾರ ಪ್ರಮೋದ್ ಮರವಂತೆ ತುಂಬಾ ಚೆನ್ನಾಗಿ ಸಾಹಿತ್ಯ ಬರೆದಿದ್ದಾರಂತೆ!
ಜಸ್ಟ್ ಪಾಸ್ ಚಿತ್ರವನ್ನ ರಾಯ್ಸ್ ಎಂಟರ್‌ಟೈನ್‌ಮೆAಟ್ ಬ್ಯಾನರ್ ಅಡಿಯಲ್ಲಿ ಕೆ.ವಿ.ಶಶಿಧರ್ ನಿರ್ಮಾಣ ಮಾಡಿದ್ದು, ಕಾಂತಾರ, ಕಾಟೇರ ಮೊದಲಾದ ಯಶಸ್ವೀ ಚಿತ್ರಗಳ ಸಂಕಲನಕಾರ ಕೆ.ಎಂ. ಪ್ರಕಾಶ್ ಈ ಚಿತ್ರಕ್ಕೆ ಕತ್ತರಿ ಆಡಿಸಿದ್ದಾರೆ. ಕಲಾವಿದರಾದ ಶ್ರೀ ಹಾಗೂ ಪ್ರಣತಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಂಗಾಯಣ ರಘು, ಸಾಧುಕೋಕಿಲಾ, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ಸೇರಿದಂತೇ ಸಾಕಷ್ಟು ಪೋಷಕ ನಟರು ಜಸ್ಟ್ ಪಾಸ್ ಚಿತ್ರದ ಫಸ್ಟ್ ಕ್ಲಾಸ್ ತಾರಬಳಗದಲ್ಲಿದ್ದಾರೆ!
ಫೆಬ್ರವರಿ ಮೊದಲ ವಾರದಲ್ಲಿ ಜಸ್ಟ್ ಪಾಸ್ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಈಗಾಗಲೇ ಚಿತ್ರದ ಟೀಸರ್ ಸಾಕಷ್ಟು ಸದ್ದು ಮಾಡಿ, ಯುವಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.