Sunday, 15th December 2024

ಮೀರಾ – ದಿ ವೇ ಆಫ್ ದಿ ಸ್ಟಾರ್ಮ್: ಜನವರಿ ೧೩ಕ್ಕೆ ಮೊದಲ ಪ್ರದರ್ಶನ

ಆಸ್ಟಿನ್: ಸಂತ ಮೀರಾ ಬಾಯಿ ಜೀವನಾಧಾರಿತ ಮೀರಾ – ದಿ ವೇ ಆಫ್ ದಿ ಸ್ಟಾರ್ಮ್ ಎಂಬ ಶೀರ್ಷಿಕೆಯಡಿ ತಯಾರಾಗಿರುವ ಒರಿಜಿನಲ್ ಮ್ಯೂಸಿಕಲ್ ನ ಮೊದಲ ಹಾಡು “ಮುಖಡಾನೀ ಮಾಯಾ ಲಾಗಿರೇ”ಎಂಬ “ಘುಮರ್” ಹಾಡು ಮತ್ತು ಥೀಮ್ ಮ್ಯೂಸಿಕ್ ಅನ್ನು  ಶಾಸಕ, ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಸಿ ಎನ್ ಅಶ್ವಥ ನಾರಾಯಣರವರು ಬಿಡುಗಡೆ ಮಾಡಿದರು.

“ವರಮಾಲಧರಿ ಗಿರಿಧರ್” ಎಂಬ ಹಾಡನ್ನು ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಜೀಯರ್ ಸ್ವಾಮೀಜಿ ಬಿಡುಗಡೆ ಮಾಡಿದರು. 

ಜನವರಿ ೭, ಭಾನುವಾರದಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯವರು “ಜೋ ತುಂ ತೊಡೋ ಪಿಯ”ಎಂಬ

ಸುಮಧುರ ಗೀತೆಯನ್ನು ಬೆಂಗಳೂರಿನ ವಿದ್ಯಾಪೀಠದಲ್ಲಿ ಬಿಡುಗಡೆ ಮಾಡಿ ಆಶೀರ್ವದಿಸಿದರು. ಭಾರತದ ದೊಡ್ಡ ಸಂಪತ್ತು ನಮ್ಮ ಆಧ್ಯಾತ್ಮ ಸಂಪತ್ತು ಬದುಕಿನಲ್ಲಿ ಕೇವಲ ಭೋಗ ಭಾಗ್ಯ ಅನುಭವಿಸುವುದು ಅಷ್ಟೇ ಅಲ್ಲ ಪರದಲ್ಲಿ ಭಗವಂತನನ್ನು ಸೇರಬೇಕು, ಬದುಕು ಸಾರ್ಥಕವಾಗುವುದು ಭಕ್ತಿಯ ಮೂಲಕ ಭಗವಂತನನ್ನು ಸೇರಿದಾಗ ಎಂದು ತೋರಿಸಿದ ಮೀರಾ ಬಾಯಿಯವರ ಗೀತೆಗಳನ್ನು  ಅವರ ಜೀವನ ಆಧಾರಿತ ಚಿತ್ರವನ್ನು ದೇಶ ವಿದೇಶ ಗಳಲ್ಲಿ ಪಸರಿಸುತ್ತಿರುವ ಮಹೇಶ್ ಮಹದೇವ್, ಪ್ರಿಯದರ್ಶನಿ ಹಾಗೂ ವಿನಿತಾ

ಸುಬ್ರಮಣ್ಯನ್ ರವರ ಈ ಪ್ರಯತ್ನ ಶ್ಲಾಘನೀಯವಾದದ್ದು ಭಗವಂತನು ಇವರಿಗೆ ಕೀರ್ತಿ ಯಶಸ್ಸನ್ನು ನೀಡಲಿ ಎಂದು ಆಶೀರ್ವದಿಸಿದರು. ಮೀರಾ – ದಿ ವೇ ಆಫ್ ದಿ ಸ್ಟಾರ್ಮ್ ನಲ್ಲಿ ಒಟ್ಟು ೧೩ ಹಾಡುಗಳಿದ್ದು ಎಲ್ಲಾ ಮೀರಾಬಾಯಿ ರಚನೆ, ಒಂದು ಇಂದಿರಾದೇವಿ ರಚನೆಯಾಗಿದೆ. ಹಿನ್ನೆಲೆ ಸಂಗೀತ ಹಾಗೂ ಸಂಗೀತ ನಿರ್ದೇಶನ ಮಹೇಶ್ ಮಹದೇವ್ ನೀಡಿದ್ದು ಎಲ್ಲಾ ಗೀತೆಗಳನ್ನು ಹಿನ್ನೆಲೆಗಾಯಕಿ ಡಾ.ಪ್ರಿಯದರ್ಶಿನಿಯವರು ಹಾಡಿದ್ದಾರೆ.

ದಿಶಾ ನಿಸ್ತಾಲಾ, ಪ್ರಸೇನ್‌ಜಿತ್ ಬಿಸ್ವಾಸ್, ತನ್ವಿ ಸಿರುವೂರಿ ಮತ್ತು ಕೈಲಾಸ್ ಜಾವಡೇಕರ್ ತಾರಾಗಣದಲ್ಲಿ ಕಾಣಿಸಲಿದ್ದಾರೆ. ಸುಬ್ರಮಣ್ಯನ್ ನಿರ್ಮಾಣ, ಕನಕ ಹಾಗೂ ಅನು ನಿಸ್ತಲಾ ನಿರ್ದೇಶದ ಮೀರಾಬಾಯಿ ಜೀವನ ಕುರಿತ ಈ ಒರಿಜಿನಲ್ ಮ್ಯೂಸಿಕಲ್ ಅಮೆರಿಕಾದ ಆಸ್ಟಿನ್ ನಲ್ಲಿ ಜನವರಿ ೧೩ಕ್ಕೆ ಮೊದಲ ಪ್ರದರ್ಶನಗೊಳ್ಳಲಿದೆ ಎಂದು ಮಹೇಶ್ ಮಹದೇವ್  ತಿಳಿಸಿದರು.