ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಮುಂದಾಗಿದ್ದ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಮಂಗಳವಾರ ರೇಸ್ನಿಂದ ಹೊರಗೆ ಬಂದಿದ್ದಾರೆ. ಅವರು ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಭಾರತ ಮೂಲದ ಅಮೆರಿಕನ್ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್ ವಲಯದಲ್ಲಿ ಖ್ಯಾತ ಉದ್ಯಮಿ, ಲೇಖಕ ವಿವೇಕ್ ರಾಮಸ್ವಾಮಿ (Vivek Ramaswamy) ಈ ಹಿಂದೆ ತಾವು ಅಭ್ಯರ್ಥಿ ಎಂದು ಪ್ರಕಟಿಸಿದ್ದರು. ಆದರೆ ಅಯೋವಾದ ಲೀಡ್ ಆಫ್ ಕಾಕಸ್ಗಳಲ್ಲಿ ಅವರು ನಿರಾಶಾದಾಯಕ ಬೆಂಬಲ ಪಡೆದ ಪರಿಣಾಮ, ಶ್ವೇತಭವನದ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.
ಅಮೆರಿಕದ ಅತ್ಯಂತ ಹಳೇ ಪಕ್ಷವಾಗಿರುವ ರಿಪಬ್ಲಿಕನ್ ಪಾರ್ಟಿ ಸದಸ್ಯರಾಗಿರುವ ವಿವೇಕ್ ರಾಮಸ್ವಾಮಿ ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿ, ‘ಅಮೆರಿಕ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಹಾಗೇ ಬಳಿಕ ಟ್ವೀಟ್ ಮಾಡಿದ್ದ ಅವರು ‘ನಾವು ವೈವಿದ್ಯತೆ ಯನ್ನು ಪ್ರೀತಿಸಿ ಒಪ್ಪಿಕೊಳ್ಳುವ ಭರದಲ್ಲಿ 250 ವರ್ಷಗಳ ಹಿಂದಿನ, ಒಗ್ಗಟ್ಟಿನ ಸಿದ್ಧಾಂತಗಳನ್ನೇ ಮರೆತಿದ್ದೇವೆ. ಅದನ್ನು ಮತ್ತೆ ಪುನರುಜ್ಜೀವನ ಗೊಳಿಸಲು ನಾನು ಅಧ್ಯಕ್ಷನಾಗಲು ಬಯಸುತ್ತೇನೆ’ ಎಂದಿದ್ದರು.
ವಿವೇಕ್ ರಾಮಸ್ವಾಮಿಯವರು ಚಿಕ್ಕವಯಸ್ಸಿನಲ್ಲಿಯೇ ಪ್ರಭಾವಿ ಎನ್ನಿಸಿಕೊಂಡವರು. ಅವರ ತಂದೆ-ತಾಯಿ ಮೂಲತಃ ಕೇರಳದವರಾಗಿದ್ದು, ಇಲ್ಲಿಂದ ಯುಎಸ್ಗೆ ವಲಸೆ ಹೋಗಿದ್ದರು. ವಿವೇಕ್ ರಾಮಸ್ವಾಮಿ ಹುಟ್ಟಿದ್ದು-ಬೆಳೆದಿದ್ದೆಲ್ಲ ಅಮೆರಿಕದಲ್ಲಿ. ಅವರಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ.