ಬೆಂಗಳೂರು: ಯಶ್ ಬರ್ತ್ಡೇ ಪ್ರಯುಕ್ತ ಫ್ಲೆಕ್ಸ್ ಕಟ್ಟಲು ಹೋದ ಮೂವರು ಯುವಕರು ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದರು. ಇದೀಗ ಮೃತ ಅಭಿಮಾನಿಗಳ ಕುಟುಂಬಕ್ಕೆ ಹಣ ಸಹಾಯವನ್ನು ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಾವಿನ ನಂತರ ಸಂತ್ರಸ್ತ ಕುಟುಂಬಕ್ಕೆ ನೆರವಾಗುತ್ತೇನೆಂದು ಮಾತು ಕೊಟ್ಟಿದ್ದರು.
ಯಶ್ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಅಭಿಮಾನಿಗಳು ನಿಧನರಾದ ನೋವು ಇನ್ನೂ ಹಸಿಯಾಗಿದೆ. ಮೃತ ಅಭಿಮಾನಿಗಳಾದ ಮುರಳಿ, ನವೀನ್ ಮತ್ತು ಹನುಮಂತ ಅವರ ಕುಟುಂಬದವರಿಗೆ ಪರಿಹಾರ ಹಣ ತಲುಪಿಸಲಾಗಿದೆ.
ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪರಿಹಾರದ ಚೆಕ್ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ. ಸ್ನೇಹಿತರು ಬಂದು ಪರಿಹಾರ ಹಣ ನೀಡಿದ್ದಾಗ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.