ಸಂಗತ
ಡಾ.ವಿಜಯ್ ದರಡಾ
ಮಧ್ಯರಾತ್ರಿ ಕಳೆದ ಮೇಲೆ ನಿದ್ದೆಗಣ್ಣಿನಲ್ಲಿ ಹಾಡಿದಂತೆ ಅನುಪಮ ತಾದಾತ್ಮ್ಯದೊಂದಿಗೆ ಕವಿತೆಯನ್ನು ಗುನುಗುನಿಸುತ್ತಿದ್ದ ಆ ಕವಿಯನ್ನು ನೋಡುವುದೇ ಒಂದು ಸೊಗಸು. ಆ ರಸಧಾರೆಯಲ್ಲಿ ಮಿಂದಷ್ಟೂ ನಮಗೆ ಸಾಲುತ್ತಿರಲಿಲ್ಲ. ಅವರು ಇನ್ನೊಂದು ಸ್ವಲ್ಪ ಹೆಚ್ಚು ಹೊತ್ತು ಹಾಡಿದ್ದರೆ… ನಾವೂ ಇನ್ನೊಂದು ಸ್ವಲ್ಪ ಹೆಚ್ಚು ಕೇಳುತ್ತಿದ್ದೆವು…!
ಅದು ಆ ಕವಿಯಲ್ಲಡಗಿದ್ದ ಮಾಂತ್ರಿಕತೆ. ಅವರು ಬರೀ ಕವಿಯಲ್ಲ, ಒಬ್ಬ ಶಾಯರ್, ಅದರ ಜತೆಗೆ ಗೀತ ರಚನೆಕಾರ ಕೂಡ! ಗೋಪಾಲದಾಸ್ ಸಕ್ಸೇನಾರನ್ನು ಕಾಲ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅವರು ಇಹಲೋಕದ ಯಾತ್ರೆ ಮುಗಿಸಿ ಅಷ್ಟೆಲ್ಲಾ ವರ್ಷಗಳು ಕಳೆದಿದ್ದರೂ ಅವರ ಕವಿತೆಗಳನ್ನು ಕೇಳಿದವರು ಅವರನ್ನು ಮರೆಯಲುಂಟೇ? ‘ಗೋಪಾಲದಾಸ್ ನೀರಜ್’ ಆಗಿ ಅವರು ನಮ್ಮೆಲ್ಲರ ಹೃದಯಗಳಲ್ಲಿ ಸದಾ ಹಚ್ಚಹಸಿರು.
ಆದರೆ ಇದಕ್ಕೆ ತದ್ವಿರುದ್ಧ ಭಾವವನ್ನು ಅವರೇ ಅನುಭ ವಿಸಿದಂತೆ ಬರೆದಿದ್ದರು: ‘ಇತನಾ ಬದನಾಮ್ ಹುಯೇ ಹಮ್ ತೋ ಇಸ್ ಜಮಾನೇ ಮೇ, ತುಮಕೋ ಲಗ್ ಜಾಯೇಂಗಿ ಸದಿಯಾ ಹಮೇ ಭುಲಾನೇ ಮೇ’- ಈ ಜನ್ಮದಲ್ಲಿ ಎಷ್ಟೆಲ್ಲಾ ಕೆಟ್ಟ ಹೆಸರು ಸಂಪಾದಿಸಿಬಿಟ್ಟೆ. ಅದನ್ನು ಮರೆಯಲು ನಿನಗೆ ವರ್ಷಗಳೇ ಬೇಕಾಗಬ ಹುದು. ಜನವರಿ ೪ರಂದು ಅವರ ಜನ್ಮಶತಮಾನೋತ್ಸವ ವರ್ಷ ಆರಂಭವಾಯಿತು. ಅದರ ಬೆನ್ನಲ್ಲೇ ಅವರ ನೆನಪುಗಳೂ ನನ್ನೊಳಗೆ ಹೊಳೆಯತೊಡಗಿದವು. ನನಗೆ ಮೊದಲ ಬಾರಿ ಗೋಪಾಲದಾಸ್ ನೀರಜ್ರನ್ನು ಪರಿಚಯಿಸಿದ್ದು ಡಾ.ಹರೀಶ್ ಭಲ್ಲಾ. ನಂತರ ನನ್ನ ಹಾಗೂ ಅವರ ನಡುವೆ ಗಾಢವಾದ ಸ್ನೇಹ ಬೆಳೆಯಿತು. ಅವರ ಜತೆಗಿನ ಪ್ರೀತ್ಯಾದರದ ಭೇಟಿಗಳು, ಅಸಂಖ್ಯ ಸಭೆಗಳು, ಬಿಡುವಾಗಿದ್ದಾಗ ಅವರು ಹೇಳುತ್ತಿದ್ದ ತತ್ವಜ್ಞಾನ ಬೋಧೆಯುಂಟುಮಾಡುವಂಥ ಕತೆಗಳು, ಒರಟು ಧ್ವನಿಯಲ್ಲಿ ಅವರು ಗುನುಗುತ್ತಿದ್ದ ಕವಿತೆಗಳು.. ಹೀಗೆ ಎಲ್ಲ ನೆನಪುಗಳೂ ಮತ್ತೊಮ್ಮೆ ಮನಸ್ಸನ್ನು ತಡಕಾಡಿದವು.
ಅವರು ಬರೆಯುವ ಪ್ರೇಮ ಕವಿತೆಗಳು ಎಷ್ಟು ಉತ್ಕಟವಾಗಿರುತ್ತಿದ್ದವು ಅಂದರೆ ಅವುಗಳನ್ನು ಕೇಳಿದವರೆಲ್ಲ ಉನ್ಮತ್ತರಾಗುತ್ತಿದ್ದರು. ‘ಶೋಖಿಯೋ ಮೇ ಘೋಲಾ
ಜಾಯೇ -ಲೋ ಕಾ ಶಬಾಬ್, ಉಸಮೇ ಫಿರ್ ಮಿಲಾಯಿ ಯೇ ಥೋಡಿ ಸಿ ಶರಾಬ್, ಹೋಗಾ ಯೂಂ ನಶಾ ಜೋ ತಯ್ಯಾರ್ ವೋ ಪ್ಯಾರ್ ಹೈ’- ಚಾಂಚಲ್ಯದಲ್ಲಿ ಹೂವಿನ ಸೌಂದರ್ಯ ಬೆರೆಸಿ, ಅದರಲ್ಲೊಂಚೂರು ಮದ್ಯವನ್ನೂ ಸೇರಿಸಿ ಕಲಕಿ, ಆಗ ಹುಟ್ಟುವ ನಶೆಯಿದೆಯಲ್ಲಾ, ಅದೇ ಪ್ರೇಮ. ಅವರು ಪದಗಳಿಗೆ ಪ್ರೀತಿಯನ್ನು ಬೆರೆಸಿ ಸುಂದರ ಆಭರಣ ತೊಡಿಸಿದಂತೆ ಸಿಂಗಾರ ಮಾಡುತ್ತಿದ್ದ ಪರಿಯೇ ಅದ್ಭುತವಾಗಿತ್ತು. ಅಂಥ ಪದಲಾಲಿತ್ಯ ಬೇರೆಲ್ಲೂ ಕಾಣಸಿಗುವುದು ಬಹಳ ಅಪರೂಪ. ‘ದೇಖತಿ ಹೀ ರಹೋ ಆಜ್ ದರ್ಪಣ್ ನ ತುಮ್, ಪ್ಯಾರ್ ಕಾ ಯೇ ಮುಹೂರತ್ ನಿಕಲ್ ಜಾಯೇಗಾ, ಚೂಡಿಯಾ ಹಿ ನ ತುಮ್ ಖಣಖಣಾತಿ ರಹೋ, ಯೇ ಶರಮ್ಶಾರ್ ಮೌಸಮ್ ಬದಲ್ ಜಾಯೇಗಾ. ಮುಸ್ಕುರಾವೋ ನ ಐಸೇ ಚುರಾಕರ್ ನಜರ್, ಐನಾ ದೇಖ್ ಸೂರತ್ ಮಚಲ್ ಜಾಯೇಗಾ’- ಹೀಗೆ ಕನ್ನಡಿ
ನೋಡುತ್ತಾ ನಿಂತುಬಿಡಬೇಡ, ಪ್ರೀತಿಯ ಮುಹೂರ್ತ ಕಳೆದುಹೋದೀತು.
ಬಳೆಗಳನ್ನು ಹೀಗೆ ಕಣಕಣ ಮಾಡುತ್ತಿರಬೇಡ, ಲಜ್ಜೆಯ ಈ ಹವೆ ಕಾಣೆಯಾದೀತು. ಕಣ್ಣುತಪ್ಪಿಸಿ ಹೀಗೆ ಮುಗುಳ್ನಗಬೇಡ, ಕನ್ನಡಿ ನೋಡುತ್ತಾ ಮುಖ
ಹುಚ್ಚನಾದೀತು. ಜಗತ್ತು ಗೋಪಾಲದಾಸ್ ನೀರಜ್ ಅವರನ್ನು ಪ್ರೀತಿಯಲ್ಲಿ ಮುಳುಗೆದ್ದ ಕವಿ, ಶಾಯರ್ ಹಾಗೂ ಗೀತರಚನೆಕಾರ ಎಂದು ನೆನಪಿಸಿಕೊಳ್ಳುತ್ತದೆ. ಆದರೆ ಅಸಂಖ್ಯ ಸಂಜೆಗಳನ್ನು ಅವರೊಂದಿಗೆ ಕಳೆದ ನಾನು ಈ ಕವಿಯನ್ನು ಇನ್ನೂ ಮಿಗಿಲಾಗಿ ಕಾಣುತ್ತೇನೆ. ಆ ಸಂಜೆಗಳಲ್ಲಿ ಅವರು ನನಗೆ ತುಂಬಾ ಕತೆಗಳನ್ನು ಹೇಳಿದ್ದಾರೆ. ಅವುಗಳನ್ನು ಕೇಳಿ ಬೆರಗಾಗಿದ್ದೇನೆ. ಬಳಿಕ ಅವರ ಬಗ್ಗೆಯೇ ಸಾಕಷ್ಟು ಓದಿದ್ದೇನೆ.
ಹೀಗಾಗಿ, ನನ್ನ ಪ್ರಕಾರ, ಅವರ ಸೃಜನಶೀಲ ರಚನೆಗಳು ಬದುಕಿನ ಸಾರವನ್ನೇ ಹಿಡಿದಿಟ್ಟುಕೊಂಡಿವೆ. ಹಾಗೆ ನೋಡಿದರೆ ಅವರ ಬದುಕೇ ನಾನಾ ಅನುಭವಗಳ ಸಾಗರ. ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ದಿನಗಳಿಂದ ಹಿಡಿದು ಪ್ರೊಫೆಸರ್ ಆಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ದಿನಗಳವರೆಗೆ ಅವರ ಬದುಕು ನಾನಾ ತಿರುವುಗಳನ್ನು ಪಡೆದಿದೆ. ಬದುಕಿನ ಬಹುಮುಖಗಳಿಗೆ ಅವರ ಬದುಕೇ ಸಾಕ್ಷಿ. ಎತ್ತರಕ್ಕೇರಿದಾಗ ಹಾಗೂ ಕೆಳಕ್ಕೆ ಬಿದ್ದಾಗ, ಶ್ರೀಮಂತಿಕೆಯನ್ನು ಅನುಭವಿಸುವಾಗ ಹಾಗೂ ಬಡತನದ ಬೇಗೆಯಲ್ಲಿ ಬೇಯುವಾಗ, ಯಶಸ್ಸಿನ ಉತ್ತುಂಗಕ್ಕೇರಿ ‘ಮೆಹಫಿಲ್ಗಳ ರಾಜ’ ಎಂಬ ಹೆಸರು ಪಡೆಯುವವರೆಗೆ ಅವರು ಬದುಕಿದ ರೀತಿಯನ್ನು
ಯಾರಾದರೂ ಮೆಚ್ಚಿಕೊಳ್ಳಲೇಬೇಕು. ಬದುಕು ತನ್ನ ಕೈಯಿಂದ ಜಾರಿಹೋಗಲು ಅವರು ಯಾವತ್ತೂ ಬಿಡಲಿಲ್ಲ.
ಸಮಾಜದ ಕ್ರೂರ ಅಣಕಗಳನ್ನು ಜನರೆದುರು ಧೈರ್ಯವಾಗಿ ತೆರೆದಿಟ್ಟರು. ‘ಹೈ ಬಹುತ್ ಅಂಽಯಾ ಅಬ್ ಸೂರಜ್ ನಿಕಲನಾ ಚಾಹಿಯೇ, ಜಿಸ್ ತರಹ ಸೇ ಭೀ ಹೋ ಯೇ ಮೌಸಮ್ ಬದಲನಾ ಚಾಹಿಯೇ. ರೋಜ್ ಜೋ ಚೆಹರೇ ಬದಲತೇ ಹೈ ಲಿಬಸೋಂ ಕಿ ತರಹ, ಅಬ್ ಜನಾಜಾ ಜೋರ್ ಸೇ ಉನಕಾ ನಿಕಲನಾ ಚಾಹಿಯೇ’- ತುಂಬಾ ಕತ್ತಲಾಗಿದೆ, ಈಗ ಸೂರ್ಯ ಹುಟ್ಟಬೇಕು. ಹೇಗಾದರೂ ಸರಿ ಈ ಹವೆ ಬದಲಾಗಬೇಕು. ಪ್ರತಿನಿತ್ಯ ಬಟ್ಟೆಯಂತೆ ಚಹರೆ ಬದಲಿಸು
ವವರಿಗೆ, ಶವಯಾತ್ರೆ ಈಗ ಅದ್ದೂರಿಯಾಗಿ ಹೊರಡಬೇಕು!
ನೀರಜ್ಗೆ ಪ್ರೀತಿಯ ಭಾವನೆಗಳ ಅಲೆಯ ಮೇಲೆ ತೇಲಾಡುತ್ತಾ ಅನ್ಯಾಯವನ್ನು ಬೆಳಕಿಗೆ ತರಬಹುದು ಎಂಬುದು ಚೆನ್ನಾಗಿ ಗೊತ್ತಿತ್ತು. ಆ ಕಲೆ ಅವರಿಗೆ ಕರಗತವಾಗಿತ್ತು. ಅದಕ್ಕೇ ಅವರು ಬರೆದಿದ್ದರು: ‘ಅಬ್ ತೋ ಮಜಬ್ ಕೋಯಿ ಐಸಾ ಭೀ ಚಲಾಯಾ ಜಾಯೇ, ಜಿಸ್ಮೇ ಇನ್ಸಾನ್ ಕೋ ಇನ್ಸಾನ್ ಬನಾಯಾ ಜಾಯೇ’- ಈಗೊಂದು ಧಾರ್ಮಿಕ ಕ್ರಿಯೆಯ ಆವಿಷ್ಕಾರವಾಗಬೇಕು, ಅದರಲ್ಲಿ ಮನುಷ್ಯನನ್ನು ಮನುಷ್ಯನಾಗಿಸುವ ದಾರಿಯಿರಬೇಕು. ನೀರಜ್ರ ಕೃತಿಗಳೆಲ್ಲ ಪ್ರೀತಿ ಹಾಗೂ ನೋವಿನಿಂದಲೇ ತುಂಬಿವೆ. ೧೯೫೮ರಲ್ಲಿ ಲಖನೌ ಆಕಾಶವಾಣಿಯಿಂದ ಅವರ ಕವನಗಳು ಪ್ರಸಾರವಾಗಿದ್ದವು.
‘ಸಪ್ನಾ ಝಾರೇ -ಲ್ ಸೇ, ಮೀತ್ ಚುಭೇ ಶೂಲ್ ಸೇ, ಲುಟ್ ಗಯೇ ಸಿಂಗಾರ್ ಸಭಿ, ಬಾಗ್ ಕೇ ಬಬೂಲ್ ಸೇ, ಔರ್ ಹಮ್ ಖಡೇ ಖಡೇ ಬಾಹರ್ ದೇಖತೇ ರಹೇ, ಕರ್ವಾಂ ಗುಜರ್ ಗಯಾ, ಗುಬರ್ ದೇಖತೇ ರಹೇ’- ಹೂವಿನಿಂದ ಕನಸು ಹೋಯ್ತು, ಶೂಲೆಯಿಂದ ಗೆಳೆಯ ಹೋದ, ಬಿರುಗಾಳಿಗೆ ಸಿಲುಕಿ ಎಲ್ಲಾ
ಸಿಂಗಾರ ಕಳಚಿ ಹಾರಿಹೋಯಿತು, ನಾವು ಹಾಗೇ ನಿಂತು ಹೊರಗೆ ನೋಡುತ್ತಿದ್ದೆವು, ಮೆರವಣಿಗೆ ಹಾದು ಹೋಯಿತು, ಧೂಳು ಮಾತ್ರ ಉಳಿದಿತ್ತು.
ಗೋಪಾಲದಾಸ್ ನೀರಜ್ರ ಕವಿತೆಗಳಿಗೆ ಆ ಕಾಲದ ಯುವಕರು ಅಕ್ಷರಶಃ ಫಿದಾ ಆಗಿದ್ದರು. ‘ಮೆಹಫಿಲ್’ಗಳಿಗೆ ಬರಬೇಕೆಂದು ನೀರಜ್ಗೆ ತುಂಬಾ ಕರೆಗಳು ಬರುತ್ತಿದ್ದವು. ಮೆಹಫಿಲ್ ಮತ್ತು ಕವಿತ್ವದಿಂದ ಬಂದ ಪ್ರಸಿದ್ಧಿಯಿಂದಾಗಿ ನೀರಜ್ರ ವ್ಯಕ್ತಿತ್ವಕ್ಕೆ ಹೊಸ ಆಯಾಮವೊಂದು ಬಂದೊದಗಿತ್ತು. ಒಂದು ದಿನ ದೇವಾನಂದ್ರನ್ನು ಭೇಟಿಯಾದ ಕತೆಯನ್ನು ನೀರಜ್ ನನಗೆ ಹೇಳಿದರು.
ನನಗೂ ದೇವಾನಂದ್ಗೂ ಸಾಕಷ್ಟು ಪರಿಚಯವಿತ್ತು. ನಾವಿಬ್ಬರೂ ಗೆಳೆಯರಾಗಿದ್ದೆವು. ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ದೇವಾನಂದ್ ಹೋಗಿದ್ದರಂತೆ. ಅಲ್ಲಿ ನೀರಜ್ ಕವಿತೆ ವಾಚಿಸುವುದನ್ನು ಕೇಳಿದರಂತೆ. ಆ ಸಮಯದಲ್ಲಿ ದೇವಾನಂದ್ ಬಾಲಿವುಡ್ ಚಿತ್ರರಂಗದ ಬಹುದೊಡ್ಡ ಹೀರೋ. ನೀರಜ್ರ
ಕವಿತೆ ಕೇಳಿ ಅವರು ಸ್ವತಃ ತಾವೇ ಬಳಿಗೆ ಬಂದು, ‘ನೀವು ಸಿನಿಮಾಗಳಿಗೆ ಬರೆಯುವುದಾದರೆ ನನಗೆ ಹೇಳಿ’ ಎಂದು ಹೇಳಿದರಂತೆ. ಅದಾಗಿ ಸಾಕಷ್ಟು ವರ್ಷಗಳೇ ಕಳೆದಿದ್ದವು. ಒಂದು ದಿನ ನೀರಜ್ಗೆ ಸಿನಿಮಾಕ್ಕೆ ಕವಿತೆ ಬರೆಯುವ ಆಸೆಯಾಯಿತು. ದೇವಾನಂದ್ರನ್ನು ನೆನಪಿಸಿಕೊಂಡು ಪತ್ರ ಬರೆದರು. ಮುಂಬೈಗೆ ಬರುವಂತೆ ದೇವಾನಂದ್ ಹೇಳಿದರು. ನೀರಜ್ ಮುಂಬೈಗೆ ಹೋದಾಗ ಅವರನ್ನು ದೇವಾನಂದ್ ಫೈವ್ ಸ್ಟಾರ್ ಹೋಟೆಲ್ನಲ್ಲಿ ಉಳಿಸಿದ್ದರು. ನಂತರ ಸಚಿನ್
ದೇವ್ ಬರ್ಮನ್ ಜತೆ ಮಾತುಕತೆಯಾಯಿತು.
ಹಾಡು ‘ರಂಗೀಲಾ ರೇ’ ಪದದಿಂದಲೇ ಶುರುವಾಗಬೇಕು ಎಂದು ನೀರಜ್ಗೆ ಷರತ್ತು ಹಾಕಲಾಯಿತು. ಆವತ್ತು ರಾತ್ರಿಯೇ ನೀರಜ್ ಹಾಡು ಬರೆದರು. ಅದು ‘ಪ್ರೇಮ್ ಪೂಜಾರಿ’ ಚಿತ್ರದ ಪ್ರಸಿದ್ಧ ಗೀತೆಯಾಯಿತು. ‘ರಂಗೀಲಾ ರೇ… ತೇರೇ ರಂಗ್ ಮೇ ಯೂ ರಂಗಾ ಹೇ ಮೇರಾ ಮನ್, ಚಲಿಯಾ ರೇ… ನ ಭುಜೇ ಹೈ ಕಿಸಿ ಜಾಲ್ ಸೇ ಯೇ ಜಲನ್’! ನಾನಿಲ್ಲಿ ಈ ಹಾಡಿನ ಎರಡೇ ಸಾಲು ಬರೆದಿದ್ದೇನೆ. ಆದರೆ ದಯವಿಟ್ಟು ಇದನ್ನು ಪೂರ್ತಿ ಕೇಳಿ. ಈ ಹಾಡಿನಲ್ಲಿ ಇಡೀ ಬದುಕಿನ ತತ್ವಜ್ಞಾನವೇ ಅಡಗಿದೆ. ಅವರೊಬ್ಬ ತತ್ವಜ್ಞಾನಿ ಕವಿ. ಹೀಗಾಗಿ ನಾನು ಯಾವಾಗ ನೀರಜ್ರನ್ನು ಭೇಟಿಯಾದಾಗಲೂ ಸುಮ್ಮನೆ ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಾ ಇರುತ್ತಿದ್ದೆ.
ಬರೀ ಕವಿತೆಗಳಷ್ಟೇ ಅಲ್ಲ, ಗಜಲ್ಗಳು, ಶಾಯರಿಗಳು, ಭಾವಗೀತೆಗಳು, ಕೊನೆಗೆ ಅವರ ಆಧ್ಯಾತ್ಮಿಕತೆ ಬೆರೆತ ಮಾತುಗಳು ಕೂಡ ನನ್ನನ್ನು ಮಂತ್ರಮುಗ್ಧ ಗೊಳಿಸುತ್ತಿದ್ದವು. ಅವರ ಮಾತು ಕೇಳಿದ ಯಾರೇ ಆದರೂ ಕೊನೆಗೆ ಅವರ ಅಭಿಮಾನಿಯಾಗಿಯೇ ಹೊರಗೆ ಬರುತ್ತಿದ್ದರು. ಬದುಕಿನ ಪ್ರತಿಯೊಂದು ಅಂಶವನ್ನೂ ನೀರಜ್ ನಮ್ಮೆಲ್ಲರಿಗಿಂತ ಬಹಳ ಭಿನ್ನವಾಗಿ ನೋಡುತ್ತಿದ್ದರು. ಅದಕ್ಕಾಗಿಯೇ ಅವರು ನಮ್ಮೆಲ್ಲ ರಿಗಿಂತ ವಿಭಿನ್ನವಾದ ಬೇರೆಯದೇ ಜಗತ್ತಿನಲ್ಲಿ ಬದುಕುತ್ತಿರುವಂತೆ ಕಾಣಿಸುತ್ತಿತ್ತು. ಸ್ವತಃ ಅವರೇ ಎಲ್ಲಾ ಜಗತ್ತುಗಳಿಂದ ತಮ್ಮನ್ನು ದೂರದಲ್ಲಿ ಪ್ರತ್ಯೇಕವಾಗಿ ಇರಿಸಿಕೊಂಡಿದ್ದರು!
ಅವರ ಆತ್ಮ ಪರಿಶುದ್ಧ ಅಧ್ಯಾತ್ಮದಲ್ಲಿ ಮಿಂದು ಎದ್ದಂತೆ ಭಾಸವಾಗುತ್ತಿತ್ತು. ನೀರಜ್ ಕೂಡ ನಾನು ಪ್ರೇಮಕವಿ ಅಲ್ಲ ಆಧ್ಯಾತ್ಮಿಕ ಕವಿ ಎಂದೇ ಹೇಳಿಕೊಳ್ಳುತ್ತಿದ್ದರು.
ಗೋಪಾಲದಾಸ್ ನೀರಜ್ ಆಗಿನ ಪ್ರಸಿದ್ಧ ಕವಿ ಹರಿವಂಶ ರಾಯ್ ಬಚ್ಚನ್ ಅವರ ಅಭಿಮಾನಿಯಾಗಿದ್ದರು. ಒಂದು ದಿನ ಹರಿವಂಶರಾಯ್ ಬಚ್ಚನ್ ಹಾಗೂ ನೀರಜ್ ಒಂದೇ ಬಸ್ಸಿನಲ್ಲಿ ಅಕ್ಕಪಕ್ಕ ಕುಳಿತು ಪ್ರಯಾಣಿಸುತ್ತಿದ್ದರಂತೆ. ಆಗ ಬಚ್ಚನ್ ಬಳಿ ‘ಒಂದು ದಿನ ನಾನು ಕೂಡ ನಿಮ್ಮಷ್ಟೇ ಪ್ರಸಿದ್ಧ ಕವಿಯಾಗಬೇಕೆಂಬುದು ನನ್ನ ಆಸೆ’ ಎಂದು ಹೇಳಿದ್ದರಂತೆ. ಆ ಕನಸು ನನಸಾಯಿತು. ನೀರಜ್ ಕೂಡ ಬಹಳ ಪ್ರಸಿದ್ಧ ಹಾಗೂ ಜನಪ್ರಿಯ ಕವಿಯಾದರು.
ಆಧ್ಯಾತ್ಮಿಕತೆಯ ರಸಪಾಕದಲ್ಲಿ ಅದ್ದಿ ಎತ್ತಿದಂತಿರುವ ಅವರ ಇನ್ನಷ್ಟು ಸಾಲುಗಳು ಇಲ್ಲಿವೆ ನೋಡಿ: ಜಬ್ ಚಲೇ ಜಾಯೇಂಗೇ ಹಮ್ ಲೌಟ್ ಕೇ ಸಾವನ್ ಕಿ ತರಹ, ಯಾದ್ ಆಯೇಂಗೇ ಪ್ರಥಮ್ ಪ್ಯಾರ್ ಕೇ ಚುಂಬನ್ ಕಿ ತರಹ, ಆಜ್ ಕಿ ರಾತ್ ತುಜೇ ಆಖಿರಿ ಖತ್ ಔರ್ ಲಿಖ್ ದೂ, ಕೌನ್ ಜಾನೇ ಯಹ ದಿಯಾ ಸುಭಹ್ ತಕ್ ಜಲೇ ನ ಜಲೇ? ಬಮ್ ಬಾರೂದ್ ಕೆ ಇಸ್ ದೌರ್ ಮೇ ಮಾಲೂಮ್ ನಹೀ, ಐಸಿ ರಂಗೀನ್ ಹವಾ ಫಿರ್ ಕಭಿ ಚಲೇ ನ ಚಲೇ’- ಮುಗಿದ ಮಳೆಗಾಲದಂತೆ ನಾವು ಮರಳಿ ಹೋದಮೇಲೆ ನೆನಪುಗಳು ಮುತ್ತಿಕೊಳ್ಳುತ್ತವೆ. ಮೊದಲ ಪ್ರೇಮದ ಮುತ್ತಿನಂತೆ ಇವತ್ತು ರಾತ್ರಿಯೇ ನಿನಗಿದೋ ಇನ್ನೊಂದು ಕೊನೆಯ ಪತ್ರ ಬರೆಯುತ್ತೇನೆ. ಯಾರಿಗೆ ಗೊತ್ತು ಈ ದೀಪ ಬೆಳಗಿನವರೆಗೆ ಉರಿಯುವುದು ಇಲ್ಲವೋ.
ಬಾಜಾ ಬಜಂತ್ರಿಯ ಈ ಕಾಲದಲ್ಲಿ ನನಗಂತೂ ಗೊತ್ತಿಲ್ಲ. ಇಂಥ ಸುಂದರ ಹವೆ ಮತ್ತೆ ಯಾವತ್ತೂ ಬರುವುದೋ ಇಲ್ಲವೋ. ಗೋಪಾಲದಾಸ್ ನೀರಜ್ರ ಕವಿತ್ವವೆಂದರೆ ಇದು. ಅವರನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ!
(ಲೇಖಕರು ಹಿರಿಯ ಪತ್ರಕರ್ತರು)