Thursday, 12th December 2024

ಮಣ್ಣಿನ ಫಲವತ್ತತೆಯನ್ನು ರಕ್ಷಿಸೋಣ

ಕೃಷಿರಂಗ

ಬಸವರಾಜ ಶಿವಪ್ಪ ಗಿರಗಾಂ

ಭಾರತವು ಕೃಷಿ ಪ್ರಧಾನ ದೇಶ. ನಮ್ಮಲ್ಲಿನ ಕೃಷಿಕಾರ್ಯಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಭಾರತದಲ್ಲಿರುವಷ್ಟು ವೈವಿಧ್ಯಮಯ ಹವಾಮಾನ, ಮಣ್ಣು, ನೀರು ಹಾಗೂ ಬೆಳೆಗಳು ವಿಶ್ವದ ಯಾವುದೇ ಭಾಗದಲ್ಲಿಲ್ಲ. ಹೀಗಾಗಿ ಭಾರತವನ್ನು ವಿಶ್ವದ ಕೃಷಿಯ ತೊಟ್ಟಿಲು ಎಂದರೆ ತಪ್ಪಾಗಲಾರದು.

ವಿಶ್ವದಲ್ಲಿ ಕೃಷಿಗೆ ಸಂಬಂಧಿಸಿದ ಯಾವುದೇ ಸಂಶೋಧನೆಗಳಾಗಲಿ, ಅವುಗಳ ಮೂಲವು ಬಹುತೇಕವಾಗಿ ಭಾರತದ್ದಾಗಿರುತ್ತದೆ. ಇಸ್ರೇಲ್, ಚೀನಾ, ಕ್ಯಾಲಿಫೋರ್ನಿಯಾ ಸೇರಿದಂತೆ ಕೃಷಿಯಲ್ಲಿ ಮುಂದುವರಿಯುತ್ತಿರುವ ದೇಶಗಳು, ಕೃಷಿಗೆ ಪೂರಕವಾಗಿರುವ ವ್ಯವಸ್ಥೆಯನ್ನು ಕೃತಕವಾಗಿ ಸೃಷ್ಟಿಸಿ ಕೊಂಡು ಸಾಧನೆ ಮಾಡುತ್ತಿವೆ. ಆದರೆ ಭಾರತವು ಸಮಶೀತೋಷ್ಣ ವಲಯದ ಪ್ರದೇಶದಲ್ಲಿರುವುದರಿಂದ, ಕೃಷಿಗೆ ಅವಶ್ಯವಿರುವ ಹವಾಮಾನದ ಎಲ್ಲ ಆಯಾಮಗಳು ನಮ್ಮಲ್ಲಿ ನೈಸರ್ಗಿಕ ವಾಗಿಯೇ ಲಭ್ಯವಿವೆ. ಭಾರತವನ್ನು ಉಪಖಂಡವೆಂದೂ ಕರೆಯುವುದು ವಾಡಿಕೆ; ಕಾರಣ ನಮ್ಮಲ್ಲಿರುವ ಭಾಷೆಗಳು, ಆಹಾರ ಪದ್ಧತಿ, ಸಂಪ್ರದಾಯ, ವೇಷಭೂಷಣ ಹಾಗೂ ಜೀವನಕ್ರಮಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿವೆ.

ಭಾರತವು ಕಳೆದ ೯೦ರ ದಶಕಗಳಾಚೆ, ಪ್ರಪಂಚದಲ್ಲಿಯೇ ಶ್ರೀಮಂತವಾಗಿದ್ದ ಮತ್ತು ಮಾದರಿಯಾಗಿದ್ದ ಕೃಷಿಯನ್ನು ಹೊಂದಿತ್ತು. ಅಂದರೆ ನಮ್ಮ ಪೂರ್ವಜರು ತಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಮನುಕುಲದ ಹಾಗೂ ಪ್ರಾಣಿ- ಪಕ್ಷಿಗಳ ಆರೋಗ್ಯದ ಜತೆಗೆ ಮಣ್ಣಿನ ಫಲವತ್ತತೆಯನ್ನು
ಕಾಪಾಡುವ ಶೇಷ್ಠ ನೈಪುಣ್ಯವನ್ನು ಅಳವಡಿಸಿಕೊಂಡಿದ್ದರು. ಸ್ಥಳೀಯ ಹವಾಮಾನಕ್ಕೆ ಸೂಕ್ತವಾದ ಬೆಳೆಯನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯು ತ್ತಿದ್ದರು. ಅವರು ನವಧಾನ್ಯಗಳ ಉತ್ಪಾದನೆಗೆ ವಿಶೇಷ ಒತ್ತು ಕೊಟ್ಟಿದ್ದರಿಂದಲೇ ಅವನ್ನು ನಿಯತವಾಗಿ ಸೇವಿಸಿ ಗಟ್ಟಿಮುಟ್ಟಾಗಿದ್ದರು.

ಇಂದಿನಂತೆ ಎಲ್ಲೆಂದರಲ್ಲಿ ಕೃಷಿಯನ್ನು ಕೈಗೊಳ್ಳದೆ, ಕೃಷಿಗೆ ಪೂರಕವಾಗಿ ರುವ ಸೂಕ್ತ ಮೂಲಸೌಕರ್ಯಗಳು ಲಭ್ಯರುವ ಭೂಮಿಯಲ್ಲಿ ಮಾತ್ರ ಕೃಷಿಕಾರ್ಯಕ್ಕೆ ಮುಂದಾಗುತ್ತಿದ್ದರು. ಅಂದರೆ ನೈಸರ್ಗಿಕವಾಗಿ ಸಂಪದ್ಭರಿತವಾದ ಮಣ್ಣು, ನೀರು ಮತ್ತು ಹವಾಮಾನಗಳು ಲಭ್ಯವಿರುವಲ್ಲಿ ಮಾತ್ರ ಕೃಷಿ ಕೈಗೊಳ್ಳುತ್ತಿದ್ದರು. ಅದರಂತೆ ಕೃಷಿ ಕ್ಷೇತ್ರದಷ್ಟೇ ಸರಿಸಮಾನ ಭೂಮಿಯನ್ನು ಅರಣ್ಯಕ್ಕಾಗಿ ಮೀಸಲಿರಿಸಿದ್ದರು. ಹೀಗೆ ಅರಣ್ಯದ ಸಂರಕ್ಷಣೆಯಿಂದಲೇ ಕೃಷಿಯ ಅವಶ್ಯಕತೆಗೆ ತಕ್ಕಂತೆ ಅಂದಿನ ದಿನಮಾನಗಳಲ್ಲಿ ಮಳೆ ಬೀಳುತ್ತಿತ್ತು ಎಂಬುದನ್ನು ನಾವು ಮನಗಾಣಬೇಕು.

ಕೃಷಿ ಕೈಗೊಳ್ಳುವ ಜಮೀನಿನಲ್ಲಿ ಹಾಗೂ ಸೂಕ್ತ ಸ್ಥಳದಲ್ಲಿ ಸಮರ್ಪಕವಾದ ಒಡ್ಡುಗಳು, ಬಸಿಗಾಲುವೆ ಗಳು ಹಾಗೂ ಹಳ್ಳ-ಕೊಳ್ಳಗಳು ಇರುವುದನ್ನು ಅರಿತುಕೊಂಡೆ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದರು. ‘ಒಡ್ಡುಗಳಿಲ್ಲದ ಭೂಮಿಗೊಡ್ಡು ದನವಿದ್ದಂತೆ’ ಎಂಬ ಘೋಷವಾಕ್ಯದಂತೆ ಭೂಮಿಯನ್ನು ಶಿಸ್ತಿನಿಂದ ತಯಾರು ಮಾಡುತ್ತಿದ್ದರು. ಅಂದಿನ ಕಾಲದ ಕೃಷಿಯಲ್ಲಿ ನಾಟಿಯಿಂದ ಕೊಯ್ಲಿನವರೆಗೆ ಇಂದಿನಂತೆ ಯಾವುದೇ ಯಂತ್ರೋಪಕರಣಗಳ ಬಳಕೆಯಿಲ್ಲದೆ ಸಂಪೂರ್ಣವಾಗಿ ಮಾನವ ಹಾಗೂ ಜಾನುವಾರುಗಳನ್ನು ಬಳಸಲಾಗುತ್ತಿತ್ತು ಎಂಬುದು ವಿಶೇಷ.

ರೈತರಾದವರು ಸಂಪೂರ್ಣವಾಗಿ ಭೂಮಿಯೊಂದಿಗೆ ಭೂಮಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆಯ ಅರಿವು ಅಂದಿನ ದಿನಮಾನಗಳಲ್ಲಿ ಗೊತ್ತೇ ಇರಲಿಲ್ಲ. ಕೃಷಿಯಲ್ಲಿ ದೇಶೀಯ ಬೀಜಗಳ ಬಳಕೆ ಸರ್ವೇಸಾಮಾನ್ಯ ವಾಗಿತ್ತು. ಇದರಿಂದ ಅಂದಿನ ಪೀಳಿಗೆಯು ರೋಗನಿರೋಧಕ ಶಕ್ತಿಯನ್ನು ಹೊಂದಿತ್ತಲ್ಲದೆ ಆರೋಗ್ಯದಾಯಕ ಬದುಕನ್ನೂ ಕಟ್ಟಿಕೊಂಡಿತ್ತು. ನೀರಾವರಿ ಸೌಕರ್ಯಗಳ ಕೊರತೆಯ
ಪರಿಣಾಮ ದೀರ್ಘಾವಧಿ ಬೆಳೆಗಳ ಮೇಲೆ ಅಂದಿನ ರೈತರು ಅಷ್ಟೊಂದು ಅವಲಂಬಿತರಾಗಿರಲಿಲ್ಲ. ಕೇವಲ ಅಲ್ಪಾವಧಿ ಬೆಳೆಗಳನ್ನು ಬೆಳೆದು ಬೇಸಗೆಯಲ್ಲಿ ಕಡ್ಡಾಯವಾಗಿ ಮಾಗಿ ಉಳುಮೆ ಕೈಗೊಳ್ಳಲಾಗುತ್ತಿತ್ತು. ಮಾಗಿ ಉಳುಮೆಯು ಪ್ರಾರಂಭದಲ್ಲಿ ಬರುವ ರೋಗ ಮತ್ತು ಕೀಟಗಳನ್ನು
ನಿಯಂತ್ರಿಸುವ ಅತ್ಯಂತ ಶ್ರೇಷ್ಠ ಕೃಷಿ ಪದ್ಧತಿಯಾಗಿತ್ತು.

ಬೆಳೆಗೆ ಕೊಟ್ಟ ನೀರು ಭೂಮಿಯಲ್ಲಿ ಬಹಳ ದಿನದವರೆಗೆ ನಿಲ್ಲದಂತೆ ಭೂಮಿಯ ಬದುಗಳಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಿ ಅಂದಿನವರು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡಿದ್ದರು. ಭೂಮಿಯಿಂದ ಬಂದ ಫಲದಷ್ಟು ಸಾವಯವ ಪದಾರ್ಥಗಳನ್ನು ಮರಳಿ ಭೂಮಿಗೆ ಸೇರಿಸಲಾಗುತ್ತಿತ್ತು.
ಅಂದಿನ ದಿನಮಾನಗಳಲ್ಲಿ ಅತಿಯಾದ ನೀರು ಕೃಷಿಗೆ ಮಾರಕ ಎಂಬುದನ್ನು ಬಹುವಾಗಿ ನಂಬಿದ್ದರು. ಒಟ್ಟಾರೆಯಾಗಿ ಅಂದಿನ ಕೃಷಿಯು ಮಳೆಯಾಶ್ರಿತವಾಗಿದ್ದರಿಂದ ಭೂಮಿಗೆ ಮತ್ತು ಬೆಳೆಗೆ ಅತ್ಯಂತ ಶುದ್ಧವಾದ ಖನಿಜಯುಕ್ತ ನೀರು ದೊರೆತು ಮಣ್ಣು ಮತ್ತಷ್ಟು ಫಲವತ್ತತೆಯನ್ನು ಪಡೆದು
ಕೊಳ್ಳುತ್ತಿತ್ತು.

ಆಧುನಿಕ ಕೃಷಿ ಪದ್ಧತಿಯ ಹೆಸರಿನಲ್ಲಿ ಇಂದಿನ ವ್ಯವಸಾಯವು ಸಂಪೂರ್ಣವಾಗಿ ಹಿಂದಿನ ಪದ್ಧತಿಗಳ ಎಳ್ಳಷ್ಟೂ ಬಳಕೆಯನ್ನು ಮಾಡದಿರುವು ದರಿಂದಾಗಿ ಆರೋಗ್ಯ ಮತ್ತು ಇಳುವರಿಯ ಮೇಲೆ ತೀವ್ರ ಹೊಡೆತ ಬಿದ್ದಿದೆ. ಅರಣ್ಯಕ್ಕೆ ಮೀಸಲಾದ ಭೂಮಿಯು ಕರಗುತ್ತಿದೆ. ಇದರಿಂದ ಮಳೆಯ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿದೆಯಲ್ಲದೆ ಪ್ರಕೃತಿಯ ನಿಯಂತ್ರಣ ತಪ್ಪಿಹೋಗಿದೆ. ಕೆಲವೊಮ್ಮೆ ಮಳೆಯಿಂದ ಪ್ರವಾಹ ಹೆಚ್ಚಾದರೆ ಕೆಲವೊಮ್ಮೆ ತೀವ್ರವಾದ ಬರಗಾಲವಾಗಿ ಹಾನಿಯಾಗುತ್ತದೆ. ನೈಸರ್ಗಿಕವಾಗಿ ಸಮತಟ್ಟಾದ ಭೂಮಿಯಲ್ಲಿ ಮಾತ್ರವಲ್ಲದೆ, ಏರಿಳಿತವಿರುವ ಭೂಮಿಯನ್ನು ಸಮಪಾತಲುಗೊಳಿಸಿ ಅಲ್ಲಿಯೂ ಇಂದು ಕೃಷಿ ಕೈಗೊಳ್ಳಲಾಗುತ್ತಿದೆ. ಮಣ್ಣಿನ ಮೇಲ್ಪದರು ಬದಲಾದಲ್ಲಿ ಅಲ್ಲಿನ ಫಲವತ್ತತೆಯು ಮರುಸೃಷ್ಟಿಯಾಗಲು ನೂರಾರು ವರ್ಷಗಳ ಸಮಯ ಅವಶ್ಯವಿದೆ. ಕೃಷಿಯಲ್ಲಿ ಮಾನವ ಬಳಕೆ ಕಡಿಮೆಯಾಗಿ ಬೃಹತ್ ಯಂತ್ರಗಳ ಬಳಕೆ ಹೆಚ್ಚಾಗಿದೆ.

ಇಂದು ಕೃಷಿಯಲ್ಲಿ ಹಲವಾರು ಹೆಸರಿನ ಕೀಟನಾಶಕ ಮತ್ತು ರಾಸಾಯನಿಕಗಳ ಬಳಕೆಯು ವಿಪರೀತವಾಗಿದೆ. ರಾಸಾಯನಿಕಗಳೇ ತುಂಬಿರುವ ಇಂದಿನ ದಿನಮಾನದಲ್ಲಿ ಮಣ್ಣು ಪರೀಕ್ಷೆಯ ಆಧಾರದಲ್ಲಿ ರಸಗೊಬ್ಬರಗಳ ಬಳಕೆ ಅಸಾಧ್ಯವಾಗಿದೆ. ಬೇಸಗೆಯಲ್ಲಿ ಮಾಗಿ ಉಳುಮೆ ಮಾಯವಾಗಿದೆ. ಬಹುಬೆಳೆ ಪದ್ಧತಿ ಅಥವಾ ಕಾಲ್ಗೈ ಪದ್ಧತಿ ಸಂಪೂರ್ಣವಾಗಿ ಇಲ್ಲವಾಗಿದೆ. ದೀರ್ಘಾವಽ ಬೆಳೆಗಳೇ ಇಂದಿನ ಕೃಷಿಯನ್ನು ಆಕ್ರಮಿಸಿಕೊಂಡಿವೆ. ನೀರಾವರಿ ಕ್ಷೇತ್ರವು ಹೆಚ್ಚಾಗಿರುವುದ ರಿಂದ ಭೂಮಿಗೆ ವಿಶ್ರಾಂತಿ ಇಲ್ಲವಾಗಿದೆ. ಇದನ್ನು ನಾವೆಲ್ಲರೂ ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕು.

ಮಣ್ಣಿನ ಫಲವತ್ತತೆಯನ್ನು ಇನ್ನಾದರೂ ಕಾಪಿಟ್ಟುಕೊಳ್ಳದಿದ್ದರೆ ಅನ್ನ ಹುಟ್ಟುವುದಾದರೂ ಹೇಗೆ?

(ಲೇಖಕರು ಕೃಷಿ ತಜ್ಞರು ಹಾಗೂ 
ಸಹಾಯಕ ಮಹಾ ಪ್ರಬಂಧಕರು)