ರಾಮರಥ-೧೦
ಯಗಟಿ ರಘು ನಾಡಿಗ್
naadigru@gmail.com
‘ಗುಣನಿಧಿ’ ಶ್ರೀರಾಮನ ಗುಣಗಾನ ಮಾಡುತ್ತಾ ಹೋದರೆ ಅದಕ್ಕೆ ಪುಟಗಳು ಸಾಲವು. ರಾಮನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವ ಹೇರಳ ಪ್ರಸಂಗಗಳು ರಾಮಾ ಯಣದಲ್ಲಿ ಕೆನೆಗಟ್ಟಿವೆ. ಇವನ್ನು ಹಾಗೇ ಸುಮ್ಮನೆ ಅವಲೋಕಿಸಿ, ಕೇಳಿ ಇಲ್ಲವೇ ವೀಕ್ಷಿಸಿ ಸುಮ್ಮನಾಗುವ ಬದಲು, ಇಂಥ ಒಂದೊಂದೂ ಪ್ರಸಂಗದ ಆಳಕ್ಕಿಳಿದರೆ ನಮ್ಮ ಬದುಕಲ್ಲೂ ಅಳವಡಿಸಿಕೊಳ್ಳಬಹುದಾದ ಸಾಕಷ್ಟು ಹೊಳಹುಗಳು ಸಿಗುತ್ತವೆ. ಇಂಥ ಬಿಡಿ ಘಟನೆಯೊಂದರ ಕಡೆಗೊಮ್ಮೆ ಕಣ್ಣು ಹಾಯಿಸೋಣ.
ವನವಾಸದಲ್ಲಿರುವಾಗ ಅಪಹರಿಸಲ್ಪಟ್ಟ ಸೀತೆಯನ್ನು ಹುಡುಕಿಕೊಂಡು ಕಾಡೆಲ್ಲಾ ಸುತ್ತುವ ರಾಮ-ಲಕ್ಷಣರಿಗೆ ಹನುಮಂತನ ಭೇಟಿಯಾಗಿದ್ದು, ತಾನು ವರ್ಷ ಗಳಿಂದ ಕಾಯುತ್ತಿದ್ದ ಸ್ವಾಮಿಯ ದರ್ಶನಭಾಗ್ಯ ಒದಗಿದ್ದಕ್ಕೆ ಧನ್ಯ ನಾಗುವ ಹನುಮಂತ ಅವರಿಬ್ಬರನ್ನೂ ತನ್ನೊಡೆಯ ಹಾಗೂ ಕಿಷ್ಕಿಂಧೆಯ ಪದಚ್ಯುತ ಕಪಿರಾಜ ಸುಗ್ರೀವನಲ್ಲಿಗೆ ಒಯ್ದಿದ್ದು ಇವೆಲ್ಲಾ ನಿಮಗೆ ಗೊತ್ತು. ನಡೆದ ವೃತ್ತಾಂತ ವನ್ನೆಲ್ಲಾ ರಾಮನಿಂದ ಆಲಿಸುವ ಸುಗ್ರೀವ, ಸೀತಾನ್ವೇಷಣೆಯ ಕಾರ್ಯಕ್ಕೆ ತಾನು ಮತ್ತು ತನ್ನ ಪಡೆ ಬದ್ಧ ಎನ್ನುತ್ತಾನೆ. ಈ ಸುಗ್ರೀವನ ಆಪ್ತ ಸಚಿವರಲ್ಲಿ ಒಬ್ಬನಾಗಿ ದ್ದವನೇ ‘ಜಾಂಬವಂತ’ ಎಂಬ ಕರಡಿ. ಸೀತಾನ್ವೇಷಣೆಗೆ ಹನುಮಂತ ಮುಂದಾದಾಗ ಅವನೊಂದಿಗೆ ಸಮಸಮನಾಗಿ ಹೆಜ್ಜೆಹಾಕಿದನು ಈ ಜಾಂಬವಂತ.
ರಾವಣನಿಂದಲೇ ಸೀತಾಪಹರಣವಾಗಿರುವ ಸಂಗತಿಯು ಪಕ್ಷಿರಾಜ ಜಟಾಯುವಿನಿಂದ ಅರಿವಾಗುತ್ತಿದ್ದಂತೆ, ರಾವಣನಲ್ಲಿಗೆ ಓರ್ವ ದೂತನನ್ನು ಕಳಿಸಬೇಕೆಂಬ ವಿಷಯ ಚರ್ಚೆಗೆ ಬಂದಾಗ, ಹನುಮಂತನನ್ನು ಹುರಿದುಂಬಿಸಿ ಸಾಗರೋಲ್ಲಂಘನಕ್ಕೆ ಸಜ್ಜುಗೊಳಿಸಿದ ‘ಮಹಾನ್ ಮೋಟಿವೇಟರ್’ ಕೂಡ ಈ ಜಾಂಬವಂತನೇ! ಅಷ್ಟೇಕೆ, ಲಂಕೆಯಲ್ಲಿ ರಾವಣನೊಂದಿಗೆ ನಡೆದ ಯುದ್ಧದಲ್ಲಿ ರಾಮನಿಗೆ ಹಲವು ನೆಲೆಗಟ್ಟಿನಲ್ಲಿ ನೆರವಾಗುವ ಜಾಂಬವಂತ, ಒಂದು ಸಂದರ್ಭದಲ್ಲಿ ಎದುರಾಳಿಯ ಬಾಣದೇಟಿಗೆ ಲಕ್ಷ್ಮಣನು ಮೂರ್ಛೆ ಹೋಗಿ ಉಸಿರು ಕಳೆದುಕೊಳ್ಳುವ ಸ್ಥಿತಿ ತಲುಪಿದಾಗ, ಅವನನ್ನು ಬದುಕುಳಿಸಿಕೊಳ್ಳಲು ‘ಸಂಜೀವಿನಿ’ ಮೂಲಿಕೆಯನ್ನು ಹೆಕ್ಕಿ ತರುವಂತೆ ಹನುಮಂತನಿಗೆ ಸಲಹೆ ಯಿತ್ತವನೂ ಈ ಜಾಂಬವಂತನೇ!
ಅಂತಿಮವಾಗಿ, ಯುದ್ಧ ದಲ್ಲಿ ರಾವಣನ ಸಂಹಾರವಾಗಿ ರಾಮನಿಗೆ ಗೆಲುವಾಗುತ್ತದೆ. ಹೀಗೆ ಸೀತಾಶೋಧನೆ, ಹನುಮಂತನ ಸಾಗರೋಲ್ಲಂಘನ ಮತ್ತು ಯುದ್ಧದಂಥ ವಿವಿಧ ಮಜಲುಗಳಲ್ಲಿ ತನಗೆ ಅನನ್ಯ ಕೊಡುಗೆಯಿತ್ತ ಜಾಂಬವಂತನ ಮೇಲೆ ರಾಮನಿಗೆ ಮಮಕಾರ ಉಕ್ಕಿ, ಏನಾದರೂ ವರವನ್ನು
ಕೇಳುವಂತೆ ಅವನಿಗೆ ಸೂಚಿಸುತ್ತಾನೆ. ಅದಕ್ಕೆ ಜಾಂಬವಂತ, ‘ನಾನು ಕೇಳಿದ ವರವನ್ನು ಖಂಡಿತಾ ಕೊಡುವೆಯಾ ಪ್ರಭೂ?’ ಎಂದು ಪ್ರಶ್ನಿಸುತ್ತಾನೆ. ಜಾಂಬವಂತನ ಕಣ್ಣುಗಳಲ್ಲಿ ಇಣುಕುತ್ತಿದ್ದ ಸಂದೇಹ ಮತ್ತು ತುಂಟತನದ ಹದವಾದ ಮಿಶ್ರಣವನ್ನು ಗ್ರಹಿಸುವ ರಾಮ, ‘ಆಯಿತು ಕೇಳು’ ಎಂದು ತಲೆಯಾಡಿಸುತ್ತಾನೆ. ಹೇಳಿ-ಕೇಳಿ ಜಾಂಬವಂತ ಒಂದು ಕರಡಿ; ಅದಕ್ಕೆ ದ್ವಂದ್ವಯುದ್ಧ ವೆಂದರೆ ಹಬ್ಬ.
ಅದರಲ್ಲೂ ಮನುಷ್ಯರ ಜತೆಗಿನ ಮಲ್ಲಯುದ್ಧವೆಂದರೆ ಅದಕ್ಕೆ ಹಬ್ಬದ ರಸಕವಳ. ರಾವಣನ ಜತೆಗಿನ ಹಣಾಹಣಿಯಲ್ಲಿ ರಾಮನ ಸೆಣಸಾಟದ ಕೌಶಲವನ್ನು
ಕಣ್ತುಂಬಿ ಕೊಂಡು ಆಕರ್ಷಿತನಾಗಿದ್ದ ಜಾಂಬವಂತ ತುಂಟದನಿಯಲ್ಲೇ, ‘ಪ್ರಭೂ, ಅದು ಮತ್ತೇನಿಲ್ಲ. ನಿನ್ನೊಂದಿಗೆ ನಾನು ಮಲ್ಲಯುದ್ಧ ಮಾಡಬೇಕು’ ಎಂದು ಪ್ರಾರ್ಥಿಸುತ್ತಾನೆ! ಆದರೆ ರಾಮನೋ, ಮಿತ್ರರೊಂದಿಗೆ ತಮಾಷೆಗೂ ಜಗಳ ವಾಡುವವನಲ್ಲ, ಕೈ-ಕೈ ಮಿಲಾಯಿಸುವವನಲ್ಲ; ಹೀಗಿರು ವಾಗ ಜಾಂಬವಂತ ನೊಂದಿಗೆ ಮಲ್ಲಯುದ್ಧ ಸಾಧ್ಯವೇ? ಆದರೆ ಈ ‘ಕಿಲಾಡಿ ಕರಡಿ’ ರಾಮನನ್ನು ಮಾತಿನಲ್ಲೇ ಕಟ್ಟಿಹಾಕಿಬಿಟ್ಟಿರುತ್ತದೆ.
ಜತೆಗೆ, ರಾಮ ತಾನು ನೀಡಿದ ವಚನಕ್ಕೆ ತಪ್ಪುವುದಿಲ್ಲ, ತಾನು ಕೇಳಿದ ವರವನ್ನು ಕರುಣಿಸದೆಯೇ ಹಿಂದಡಿ ಇಡುವುದಿಲ್ಲ ಎಂಬ ದೃಢನಂಬಿಕೆ ಬೇರೆ! ಜಾಂಬವಂತನ ನಿರೀಕ್ಷೆಯನ್ನು ಹುಸಿ ಗೊಳಿಸುವುದು ರಾಮನಿಗೂ ಇಷ್ಟವಿರುವುದಿಲ್ಲ; ಹಾಗಂತ, ಗೆಳೆಯನಿಗೆ ಎದುರಾಗಿ ತೊಡೆತಟ್ಟಲೂ ಅವನಿಗೆ ಮನಸ್ಸಿರು ವುದಿಲ್ಲ. ಆಗ ರಾಮ, ‘ನೀ ಕೋರಿದ ವರ ನೀಡುವೆ. ಆದರೆ ಅದಕ್ಕಾಗಿ ನೀನು ಕಾಯಬೇಕಾಗುತ್ತದೆ. ಆ ತಾಳ್ಮೆ ನಿನಗಿದೆಯೇ?’ ಎಂದು ಕೇಳುತ್ತಾನೆ. ಆಗ ಜಾಂಬವಂತ ಹಿಂದು-ಮುಂದು ಯೋಚಿಸದೆ, ‘ನನ್ನೊಂದಿಗೆ ಮಲ್ಲ ಯುದ್ಧ ಮಾಡಲು ನೀನು ಸಿದ್ಧವೆಂದರೆ ನಾನು ಒಂದಿಡೀ ಯುಗ ಕಾಯಲೂ ಸಿದ್ಧ’ ಎಂದುಬಿಡುತ್ತಾನೆ!
ನಾವಾಡುವ ಮಾತಿಗೆ ಅದರದ್ದೇ ಆದ ಶಕ್ತಿ ಇರುತ್ತದೆ, ಅದಕ್ಕೆ ‘ಅಸ್ತು’ ಎನ್ನುವ ದೇವತೆಗಳೂ ಇರುತ್ತಾರೆ ಎಂಬುದು ನಿಮಗೆ ಗೊತ್ತಿರಬೇಕಲ್ಲ? ‘ಒಂದಿಡೀ ಯುಗ
ಕಾಯಲೂ ಸಿದ್ಧ’ ಎಂಬ ಜಾಂಬವಂತನ ಮಾತಿಗೆ ಮಂದಸ್ಮಿತನಾಗೇ ತಲೆದೂಗುವ ರಾಮ, ‘ನೀನು ಹೇಳಿದಂತೆಯೇ ಆಗಲಿ; ನನ್ನ ಮುಂದಿನ ಅವತಾರದಲ್ಲಿ ನನ್ನೊಂದಿಗೆ ಸೆಣಸುವ ಅವಕಾಶವನ್ನು ನಿನಗೆ ನೀಡುವೆ’ ಎಂದು ವರಮುದ್ರೆ-ಅಭಯಮುದ್ರೆಯನ್ನು ತೋರುತ್ತಾನೆ. ತ್ರೇತಾಯುಗ ಮುಗಿದು ದ್ವಾಪರ ಯುಗ ಬಂತು. ಮತ್ತೊಂದೆಡೆ, ರಾಮಾವತಾರ ಮುಗಿದು ಕೃಷ್ಣಾವತಾರ ವಾಯಿತು. ಆಗಿನ ಘಟ್ಟವೊಂದರಲ್ಲಿ ಅಮೂಲ್ಯವಾದ ‘ಶಮಂತಕ ಮಣಿ’ಯ ಪ್ರಸಂಗ ಬರುತ್ತದೆ ಮತ್ತು ಅದನ್ನು ಕೃಷ್ಣನೇ ಕದ್ದಿದ್ದಾನೆ ಎಂಬ ಆರೋಪವೂ ಅವನ ಹೆಗಲೇರುತ್ತದೆ (ಸ್ಥಳಾವಕಾಶವಿಲ್ಲದ ಕಾರಣ ಈ ಪ್ರಸಂಗವನ್ನು ವಿಸ್ತೃತವಾಗಿ ಹೇಳಿಲ್ಲ, ಜತೆಗೆ ಅದು ನಿಮಗೆ ಗೊತ್ತಿರುವಂಥದ್ದೇ).
ಈ ಆಪಾದನೆಯಿಂದ ಮುಕ್ತನಾಗಲು ಶಮಂತಕಮಣಿಯನ್ನು ಹುಡುಕುತ್ತಾ ಕಾಡಲ್ಲಿ ಅಲೆಯತೊಡಗುತ್ತಾನೆ ಕೃಷ್ಣ. ಅದು ‘ಜಾಂಬವತಿ’ ಎಂಬ ಹೆಣ್ಣು ಕರಡಿಯ ಬಳಿ
ಯಿರುವುದು ಕೃಷ್ಣನಿಗೆ ಗೊತ್ತಾಗಿ ಮಣಿಯ ಮರುವಶಕ್ಕೆ ಕೃಷ್ಣ ಯತ್ನಿಸಿದಾಗ, ಹಿಂದಿನಿಂದ ಆಕೆಯ ತಂದೆಯ ಹೂಂಕಾರ ಕೇಳಿಬರುತ್ತದೆ. ಕೃಷ್ಣ ಹಿಂದಿರುಗಿ ನೋಡಿದಾಗ ಕಂಡವನು ಮತ್ತದೇ ಜಾಂಬವಂತ!
ಹೌದು, ರಾಮಾವತಾರ ಮತ್ತು ಕೃಷ್ಣಾವತಾರ ಈ ಎರಡರಲ್ಲೂ ಬಾಳಿ ಬದುಕಿದ ದೀರ್ಘಜೀವಿ ಜಾಂಬವಂತ. ಆದರೆ, ಯುಗಪರಿವರ್ತನೆಯಿಂದಾಗಿ ಅವನಿಗೆ ಹಳೆಯ ದರ ಸ್ಮೃತಿ ಇರಲಿಲ್ಲ; ತನ್ನೆದುರು ನಿಂತಿರುವುದು ತನ್ನ ಸ್ವಾಮಿಯೇ, ಹಿಂದಿನ ಯುಗದಲ್ಲಿ ಮಲ್ಲಯುದ್ಧಕ್ಕಾಗಿ ತಾನು ಹಂಬಲಿಸಿದ ಪರಮಾತ್ಮ ರಾಮನೇ ಎಂಬುದು ಜಾಂಬವಂತನಿಗೆ ಗೊತ್ತಿರುವುದಿಲ್ಲ. ಹೀಗಾಗಿ, ‘ಶಮಂತಕ ಮಣಿ ಬೇಕಿದ್ದರೆ ನನ್ನೊಂದಿಗೆ ಮಲ್ಲಯುದ್ಧಕ್ಕೆ ಸಿದ್ಧನಾಗು’ ಎಂದು ಹೂಂಕರಿಸುತ್ತಾನೆ ಜಾಂಬವಂತ. ಅವರಿಬ್ಬರ ನಡುವೆ ಘೋರ ಮೈಕಾಳಗವೇ ನಡೆದರೂ ಮಹಾಬಲಿ ಜಾಂಬವಂತ ಸೋಲುವುದಿಲ್ಲ; ಆಗ ಮಹಾನ್ ತಂತ್ರಗಾರ ಶ್ರೀಕೃಷ್ಣನು ತ್ರೇತಾಯುಗದ ಶ್ರೀರಾಮನ ರೂಪವನ್ನು ತಳೆಯುತ್ತಾನೆ!
ರಾಮನ ದಿವ್ಯರೂಪವನ್ನು ಕಾಣುತ್ತಿದ್ದಂತೆಯೇ ಜಾಂಬವಂತನಿಗೆ ಸ್ಮೃತಿ ಮರಳಿ, ಕಣ್ಣುಗಳಲ್ಲಿ ಅಶ್ರುಧಾರೆ ಸುರಿಯಲು ಶುರುವಾಗುತ್ತದೆ. ‘ನಾನೊಂದು ಯಃಕಶ್ಚಿತ್ ಕರಡಿಯಾಗಿದ್ದರೂ, ಕೊಟ್ಟ ಮಾತಿಗೆ ತಪ್ಪಬಾರದು ಎಂಬ ಕಾರಣಕ್ಕೆ ಮತ್ತು ಒಂದು ಯುಗವಾದರೂ ಕಾಯುತ್ತೇನೆ ಎಂಬ ನನ್ನ ಮಾತಿಗೆ ಬೆಲೆಕೊಟ್ಟು, ನಾನು ಕೇಳಿದ್ದ ವರವನ್ನು ಈಡೇರಿಸಲು ನನ್ನೊಂದಿಗೆ ಮಲ್ಲಯುದ್ಧವನ್ನು ಮಾಡೇಬಿಟ್ಟೆಯಲ್ಲಾ ಪ್ರಭೂ…’ ಎಂದು ಗದ್ಗದಿತನಾಗೇ ಕೃತಜ್ಞತೆ ಸಲ್ಲಿಸುತ್ತಾನೆ ಜಾಂಬವಂತ. ಅವನನ್ನು ಬಾಚಿ ತಬ್ಬುತ್ತಾನೆ ರಾಮಾವತಾರಿ! ತನಗಾದ ಸಂತೋಷಕ್ಕೆ ಕೃಷ್ಣನಿಗೆ ಶಮಂತಕ ಮಣಿಯನ್ನೂ ಮರಳಿಸಿ,
ಮಗಳು ಜಾಂಬವತಿಯನ್ನೂ ಧಾರೆಯೆರೆದು ಕೊಡುತ್ತಾನೆ ಜಾಂಬವಂತ! ಭಕ್ತನಲ್ಲಿ ಶ್ರದ್ಧಾಭಕ್ತಿಗಳು ಕೆನೆಗಟ್ಟಿದ್ದರೆ, ನಂಬಿಕೆ ದೃಢವಾಗಿದ್ದರೆ ಆತ ಭಗವಂತನಿಗೂ ಮಾವನಾಗ ಬಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?!!
‘ಭಗವಾನ್ ಕೆ ಘರ್ ದೇರ್ ಭಲೇ ಹೀ ಹೋ, ಲೆಕಿನ್ ಅಂಧೇರ್ ನಹೀ ಹೈ’ ಎಂಬುದೊಂದು ಮಾತಿದೆ. ಅಂದರೆ, ‘ದೇವರ ಮನೆಯಲ್ಲಿ ಬಯಸಿದ ವರ ಅಥವಾ ನ್ಯಾಯ ಸಿಗುವುದು ವಿಳಂಬವಾಗಬಹುದು, ಆದರೆ ಅಲ್ಲಿ ಕತ್ತಲೆ ಯಂತೂ ಇಲ್ಲ’ ಎಂಬುದು ಈ ಮಾತಿನ ಸ್ಥೂಲಾರ್ಥ. ಜಾಂಬವಂತನ ಈ ಪ್ರಸಂಗವನ್ನೇ ನೋಡಿ. ತ್ರೇತಾ ಯುಗದಲ್ಲಿ ಆತ ನಿಜಬಯಕೆಯಿಂದಲೋ ಅಥವಾ ಸ್ವಭಾವ ಸಹಜ ತುಂಟತನದಿಂದಲೋ ಭಗವಂತನೊಂದಿಗೆ ಸೆಣಸುವ ವರವನ್ನು ತಮಾಷೆಗೆ ಕೋರಿದ; ಜತೆಗೇ ‘ಒಂದು ಯುಗವೇ ಕಾಯುವ’ ಮಾತನ್ನೂ ಆಡಿಬಿಟ್ಟ.
ಯುಗ ಧರ್ಮದ ಕಾರಣದಿಂದಾಗಿ ಅದನ್ನು ಮರೆತೂಬಿಟ್ಟಿದ್ದ ಜಾಂಬವಂತ. ಆದರೆ ಭಗವಂತ ರಾಮ ತಾನಿತ್ತ ವಚನ ವನ್ನು ಮರೆಯಲಿಲ್ಲ, ಭಕ್ತನ ಆಸೆ
ಪೂರೈಸಲು ಹಿಂಜರಿ ಯಲಿಲ್ಲ. ಒಂದಿಡೀ ಯುಗದಷ್ಟು ವಿಳಂಬವಾದರೂ ಭಕ್ತ ಜಾಂಬವಂತನಿಗೆ ಮೈಸೆಣಸಾಟದ ಭಾಗ್ಯವನ್ನು ಕರುಣಿ ಸಿದ. ಭಗವಂತನಲ್ಲಿ ನಂಬಿಕೆಯಿದ್ದರೆ ಮತ್ತು ಆತನಲ್ಲಿ ನಾವು ಮಾಡಿಕೊಳ್ಳುವ ಪ್ರಾರ್ಥನೆಯಲ್ಲಿ ಪ್ರಾಮಾಣಿಕತೆ ಯಿದ್ದರೆ, ಲೌಕಿಕದ ದೃಷ್ಟಿಯಲ್ಲಿ ಅದೆಷ್ಟೇ ದುಸ್ಸಾಧ್ಯ ಎನಿಸಿದರೂ, ಭಗವಂತನ ಕೃಪೆಯಿಂದ ಆ ಕೋರಿಕೆ ಪವಾಡ ಸದೃಶವಾಗಿ ನೆರವೇರುತ್ತದೆ ಎಂಬುದಕ್ಕೆ ಮೇಲಿನ ನಿದರ್ಶನವೇ ಸಾಕ್ಷಿ. ಇದರ ಸಾಕ್ಷೀರೂಪವಾಗಿ ನಿಂತ ರಾಮನನ್ನು ಅನುಕ್ಷಣವೂ ನೆನೆಯೋಣ.
(ಲೇಖಕರು ಪತ್ರಕರ್ತರು)