Saturday, 14th December 2024

ಭಗವಂತನಿಗೇ ಧಿಕ್ಕಾರ, ಭಾಗವತರ ಸಾತ್ವಿಕ ಸಿಟ್ಟು

ರಾಮರಥ

ವಿನಾಯಕ ವೆಂ.ಭಟ್ಟ ಅಂಬ್ಲಿಹೊಂಡ 

ನೇತುರ್ನಿತ್ಯ ಸಹಾಯಿನಿ ಜನನಿ
ನ: ತ್ರಾತುಂ ತ್ರಮತ್ರಾಗತಾ
ಲೋಕೇ ತ್ವನ್ಮಹಿಮಾಬೋಧ
ಬಧಿರೇ ಪ್ರಾಪ್ತಾ ವಿಮರ್ದಂ ಬಹು
ಕ್ಲಿಷ್ಟಂ ಗ್ರಾವನು ಮಾಲತೀ ಮೃದುಪದಂ
ವಿಶ್ಲಿಸ್ಯ ವಾಸೋ ವನೇ
ಜಾತೋ ಧಿಕ್ ಕರುಣಾಂ ಧಿಗಸ್ತು ಯುವಯೋ:

ಸ್ವಾತಂತ್ರ್ಯಂ ಅತ್ಯಂಕುಶಂ
ಭಾಗವತರ ಹೃದಯವನ್ನೇ ಮಿಡಿದುಬಿಡಬಹುದಾದ ಪರಾಶರ ಭಟ್ಟರ ‘ಗುಣರತ್ನಕೋಶ’ ವೆಂಬ ಗ್ರಂಥದ ಒಂದು ಶ್ಲೋಕ ಇದು.

ನಿಜಸ್ವರೂಪದಲ್ಲಿ ಮಹಾಲಕ್ಷ್ಮಿಯಾಗಿದ್ದ ರಾಮಾಯಣದ ಸೀತಾ ಮಾತೆಗೆ ಹೇಳಿದ ಮಾತಿದು. ‘ಎಲೈ ಲಕ್ಷ್ಮಿದೇವಿಯೇ, ನೀವುಗಳು ಈ ವಿಶ್ವವಾಸಿಗಳನ್ನು ಉದ್ದರಿಸಲೇಂದಲ್ಲವೇ ಈ ಲೋಕದಲ್ಲಿ ಅವತರಣಗಯ್ಯುವುದು? ಆದರೆ ಇದು ಎಂಥಾ ಲೋಕವೆನ್ನುವೆ? ರಾಮಾಯಣಕಾಲದಲ್ಲಿ ನೀನು ರಾಜ ರುಷಿ ಜನಕ ಸುತಯಾಗಿ ರಾಮನರ್ಧಾಂಗಿಯಾಗಿ ಮಹಾ ಮಹಿಮಳೆಂದೂ, ಪರಿಶುದ್ಧಳೆಂದೂ ಅರಿಯುವಲ್ಲಿ ಶುದ್ಧ ಕುರುಡುತನವನ್ನೂ ಕಿವುಡುತನವನ್ನೂ ನಾಚಿಕೆಯಿಲ್ಲದೇ ಪ್ರದರ್ಶಿಸಿದ ಲೋಕ ಇದು. ಮಾಲತೀ ಹೂವಿನಷ್ಟು ಮೃದುವಾಗಿದ್ದ ನಿನ್ನ ಮತ್ತು ನಿನ್ನ ಪತಿಯ ಸುಕೋಮಲ ಪಾದಗಳು, ಕಲ್ಲು ಮುಳ್ಳುಗಳಿಂದ ತುಂಬಿದ ಕಾನನದಲ್ಲಿ ನಡೆದಾಡುವಂತೆ ಮಾಡಿದ ಲೋಕ ಇದು.

ಪ್ರಿಯ ಪತಿಯನ್ನಗಲಿ ಅಶೋಕವನದಲ್ಲಿ ನಾನಾ ಚಿತ್ರಹಿಂಸೆ ಗಳನ್ನು ಅನುಭವಿಸಿ ನೀನು ವಿನಾಕಾರಣ ಶೋಕಿಸುವಂತೆ ಮಾಡಿದ ಲೋಕ ಇದು. ನಿನ್ನಂಥಾ ಪರಿಶುದ್ಧಾತ್ಮಳನ್ನೂ ಶಂಕಿಸಿದ ಲೋಕ ಇದು. ಹೀಗೆ, ಸಮಾಜ ನಿಮಗೆ ನೀಡಿದ ಕಷ್ಟ ಒಂದೇ ಎರಡೇ!

ಇಷ್ಟಾದರೂ, ಉದ್ದಕ್ಕೂ ಜನಹಿತವನ್ನೇ ಬಯಸಿದ ನಿನ್ನ ಮತ್ತು ನಿನ್ನ ಪತಿಯ ವಿಲಕ್ಷಣ ಲೋಕ ಕಾರುಣ್ಯ ಭಾವಕ್ಕೆ ಧಿಕ್ಕಾರವಿರಲಿ ! ಅವತಾರ ಜೀವನದಲ್ಲಿ ನೀವುಗಳು ಅನಗತ್ಯವಾಗಿ ಈ ಜನರ ಕಾರಣದಿಂದಾಗಿ ಪಡಬಾರದ ಶ್ರಮಪಡುವಂತಾದರೂ, ಪ್ರತಿಯಾಗಿ ಲೋಕಕ್ಕೆ ಮಾತ್ರ ಹಿತವನ್ನೇ
ಬಯಸಿದ ಈ ನಿಮ್ಮ ಬಗ್ಗೆ ಅತಿರೇಕವಾಯಿತು. ನಿಮಗೆ ಹೇಳುವವರು, ಕೇಳುವವರೂ ಯಾರೂ ಇಲ್ಲವೇ? ನಿಮ್ಮ ಸ್ವಾತಂತ್ರ್ಯ ಮಿತಿಮೀರಿದಂತೆ ಕಾಣುತ್ತದೆ.’

ಸಮಾಜವನ್ನು ಜರೆಯದೇ ನಿಜ ಭಕ್ತನಾಗಿ ದೇವರನ್ನೇ ಜರೆಯುವ, ಭಗವಂತನಿಗೇ ಧಿಕ್ಕಾರವೆನ್ನುವ ಮೂಲಕ ತನ್ನನೋವನ್ನು, ಸಾತ್ವಿಕ ಸಿಟ್ಟನ್ನು ಪ್ರದರ್ಶಿಸುವ ಈ ಪರಿ ಪರಾಶರ ಭಟ್ಟರಂಥ ಭಾಗವತಜನರ ಅಂತರ್ಭಾವವನ್ನು ತೋರಿಸುತ್ತದೆ. ಪರಮಾತ್ಮನ ಅಸಾಧಾರಣ ಲೋಕ ಕಾರುಣ್ಯ ಸ್ವಭಾವಕ್ಕೆ ವಿಲಕ್ಷಣವಾಗಿ ಪರಾಶರ ಭಟ್ಟರು ಮಾಡಿದ ಮಂಗಳಶಾಸನ ಇದಾಗಿದೆ. ರಾಮಾಯಣಾಚಾರ್ಯರೆಂದೇ ಖ್ಯಾತಿ ಹೋದಿದ್ದ ಕೆ.ಎಸ್.ನಾರಾಯ ಣಾಚಾರ್ಯರ ‘ರಾಮಾಯಣ ಸಾಹಸ್ರ’ ಗ್ರಂಥದಲ್ಲಿ ಈ ಶ್ಲೋಕವನ್ನು ಉಲ್ಲೇಖಿಸಿದ್ದಾರೆ.

ಭಾಗವತಕಾರರೂ ರಾಮಯಣ ಸಂಕ್ಷೇಪದಲ್ಲಿ ಇದೇ ಭಾವವನ್ನು ವ್ಯಕ್ತಪಡಿಸಿದ್ದಾರೆ. ಗುರ್ವರ್ಥೇ ತ್ಯಕ್ತ ರಾಜ್ಯ: ವೈಚರದನುವನಂ ಪದ್ಮಪದ್ಮಾಂ ಪ್ರಿಯಾಯಾ: ಪಾಣಿಸ್ಪರ್ಶಾಕ್ರಮಾಭ್ಯಾಂ ಮೃದಿತ ಪಥರುಜೋ ಯೋ ಹರೀಂದ್ರಾನುಜಾಭ್ಯಾಂ ತಂದೆ ದಶರಥನ ಮಾತನ್ನುಳಿಸುವ ಸಲುವಾಗಿ
ಅಯೋಧ್ಯೆಯ ರಾಜ್ಯ ತ್ಯಾಗಮಾಡಿ ಕಾಡಿಗೆ ಹೋದದ್ದಾಯಿತು. ಪ್ರಿಯ ಪತ್ನಿಯ ಪಾದ ಸೇವೆಯಿಂದಲೇ ಬಾಡಿ ಹೋಗುವಂತಿದ್ದ ಮೃದು ಚರಣಗಳಿಂದ ವನದ ಕಲ್ಲು ಮುಳ್ಳಿನ ಹಾದಿಯನ್ನು ಸವೆಸುವಂತಾಯಿತು.

ಮನುಷ್ಯರಿಗಾಗಿ ಸದಾ ತುಡಿಯುವ ರಾಮ ಹೃದಯಕ್ಕೆ ಕೊನೆಗೆ ಮನುಷ್ಯರಿಂದ ಏನಾದರೂ ಸಹಾಯವಾಯಿತೋ? ಎಂದು ಕೇಳಿದರೆ ! ಅದೂ ಇಲ್ಲ. ಕಪಿಗಳಿಂದ ಸಹಾಯ ಪಡೆಯುವಂತಾಯಿತು. ಭಗವದವತಾರದ ವಿಶಾಲವಾದ ಉದ್ದೇಶವನ್ನೂ ಅರಿಯದ ಈ ಜನರ ಮೇಲೂ ಕರುಣಾ ವರ್ಷವನ್ನು ಸುರಿಸಿ ತನ್ನ ಅವತಾರ ಸಮಾಪ್ತಿಯ ಕಾಲದಲ್ಲಿ ತಾನು ನಡೆದ ಆದರ್ಶದ ದಾರಿಯ ಸ್ಮರಣೆಗಾಗಿ, ನನ್ನ ದಾರಿ ನಿಮ್ಮ ದಾರಿಯೂ ಆಗಲಿ ಎನ್ನುವ ಆಶಯದಿಂದ ತಾನು ಪ್ರೀತಿಸುವ ತನ್ನ ಪ್ರಜೆಗಳಿಗಾಗಿ ಶ್ರೀರಾಮ ತನ್ನ ಪಾದಗಳನ್ನು ಇಲ್ಲಿಯೇ ಬಿಟ್ಟು ಪರಂಧಾಮಕ್ಕೆ ತೆರಳಿದನಂತೆ. ನಮಗಾಗಿ ಇಷ್ಟೆಲ್ಲ ಪಾಡು ಪಟ್ಟ ಭಗಂತ ಭಕ್ತರಿಂದ ಬಯಸುವುದು ಸ್ಮರಣೆಯನ್ನು ಮತ್ತು ಪ್ರೀತಿಯುಕ್ತ ಭಕ್ತಿಯನ್ನಷ್ಟೇ ಎನ್ನುವ ಭಾಗವತದ ಈ ವ್ಯಾಖ್ಯಾನ ಭಕ್ತಿ ಸಾಹಿತ್ಯದ ಅತ್ಯಪೂರ್ವವಾದದ್ದು.

ತಾಯಿಯ ಗರ್ಭವಾಸ ಅತ್ಯಂತ ಕಷ್ಟಕರ ಎನ್ನುವುದು ಸರ್ವವಿದಿತವಾದ ವಿಷಯ. ಸಾಮಾನ್ಯರು ನವಮಾಸ ಗರ್ಭವಾಸ ಮಾಡುವುದಾದರೆ, ಶ್ರೀರಾಮ ಮಾತ್ರ ಪೂರ್ತಿ ದ್ವಾದಶಮಾಸ ಕೌಸಲೈಯ ಗರ್ಭವಾಸಮಾಡಿ ನಂತರ ಭೂಮಿಗಿಳಿದು ಬಂದವನು. ಅವನ ಕಷ್ಟಪರಂಪರೆ ಜನನದಿಂದಲೇ ಪ್ರಾರಂಭ ವಾದಂತಾಯಿತು ಎಂದು ಹೇಳ ಬಹುದು. ಸತ್ಯಕ್ಕಾಗಿ. ತನ್ನ ಸೂರ್ಯ ಕುಲಮರ್ಯಾದೆಗಾಗಿ, ರಾಜನಿಗಿರಬೇಕಾದ ಆದರ್ಶಗಳನ್ನು ಪರಿಸಾರುವ ರಾಜಧರ್ಮದ ಸಲುವಾಗಿ, ತನ್ನ ಪ್ರಜೆಗಳಿಗೆ ಗೌರವಿಸುವ ಸಲುವಾಗಿ, ಪಿತೃ ವಾಕ್ಯ ಪಾಲನೆಗಾಗಿ. ತನ್ನ ನಡತೆಯಿಂದ ಸಮಾಜದಲ್ಲಿ ಮೌಲ್ಯಗಳನ್ನು ಸ್ಥಾಪಿಸುವ ಸಲುವಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ತೆತ್ತ ಬೆಲೆ ಹೇಳತೀರದು. ತ್ಯಾಗವಂತೂ ಅಸದೃಶವಾದದ್ದು.

ಹಾಗಾಗಿ ರಾಮಯಣವು (ರಾಮ ನಡೆದ ದಾರಿ) ಅಂದಿಗೂ ಇಂದಿಗೂ ಎಂದೆಂದಿಗೂ ಲೋಕಕ್ಕೇ ಆದರ್ಶವಾಗಿದೆ ಮತ್ತು ರಾಮನ ವ್ಯಾಪಾರ ಸಾರ್ವತ್ರಿಕವಾಗಿ ಅನುಸರಣೀಯವಾಗಿದೆ. ಭಾರತೀಯರಿಗಂತೂ ಶ್ರೀರಾಮ ಪ್ರಾತಃಸ್ಮರಣೀಯ ಭರತಭೂಮಿಯ ಅಂತಸ್ಸತ್ವ, ಅವನ ಆದರ್ಶಗಳಿಂದಾಗಿ ಅವನು ಭಾರತದ ಜನರ ಅಸ್ಮಿತೆ. ರಾಮಯಣ ಕಾಲದಲ್ಲಂತೂ ಪಡಬಾರದ ಕೋಟಲೆ ಗಳನ್ನು ರಾಮ ಸಹಿಸಿಯಾಯಿತು. ಅತ್ಯಂತ ನಿಷ್ಕಳಂಕನಾಗಿ ಜೀವಿಸಿದರೂ, ‘ರಾಮೋ ವಿಗ್ರಹವಾನ್ ಧರ್ಮಃ’ ಎನ್ನು ವಂತೆ ಅವನು ಸತ್ಯ ಧರ್ಮಗಳ ಪ್ರತಿರೂಪನಾಗಿದ್ದರೂ, ಕೇಳಬಾರದ ದೂಷಣೆಗಳನ್ನೆಲ್ಲ ಆ ಕಾಲದಲ್ಲೂ ಈ ಕಾಲ ದಲ್ಲೂ ಅವನು ಜನಿಸಿದ ದೇಶದಲ್ಲಿ ಅವನ ಪ್ರಜೆಗಳಿಂದಲೇ ಕೇಳುವಂತಾಯಿತು ಎನ್ನುವುದು ಮನುಷ್ಯ ಜಾತಿ ನಾಚಿಕೆ ಪಡುವ ವಿಷಯ.

೫೦೦ ವರ್ಷಗಳ ನಂತರ, ಭಾರತೀಯರಾದ ನಮ್ಮ ಪಾಪ ಪ್ರಜ್ಞೆಯನ್ನು ಸ್ವಲ್ಪ ತಗ್ಗಿಸುವ ಪ್ರಯತ್ನವಾಗಿ ಮತ್ತು ನಮ್ಮ ಯುಗ ಯುಗಾಂತರದ ಪ್ರಮಾದಕ್ಕಾಗಿ ಒಂದು ಬಗೆಯ ಪ್ರಾಯಶ್ಚಿತ್ತ ಕಾರ್ಯವಾಗಿ ಈ ಮಂದಿರ ನಿರ್ಮಾಣ ಕಾರ್ಯ ಎಂದು ಅರ್ಥೈಸುವುದು ಸೂಕ್ತ. ನಾವು ಶ್ರೀರಾಮನಿಗೆ ಮನೆ ಕಟ್ಟಿಸಿ ಉಪಕಾರವನ್ನಂತೂ ಮಾಡುತ್ತಿಲ್ಲ. ಭಾರತದ ಗುರುತಾದ ಶ್ರೀರಾಮನಿಗೆ ಅವನೂರಿನಲ್ಲಿ ಒಂದು ಆಲಯವನ್ನು ನಿರ್ಮಿಸಿ, ಅದರಲ್ಲಿ ಧರ್ಮದ ಮೂರ್ತಿ ಯಾಗಿದ್ದ ಅವನ ಬಿಂಬವನ್ನಿಟ್ಟು ಪೂಜಿಸಿ ಸ್ವಲ್ಪ ಹಗುರ ವಾಗುತ್ತಿದ್ದೇವೆಯಷ್ಟೆ (ಅವನೂರು- ಯದೃಪಿ ಸಮಸ್ತ ಭೂಮಂಡಲಾಧಿಪತಿರಪಿ ಅಯೋಧ್ಯಾಪತಿ ಇತಿವ್ಯವಹೀಯತೆ -ಅವತಾರ ಪುರುಷ ಶ್ರೀರಾಮ ಸಕಲ ಭೂಮಂಡಲಕ್ಕೂ ಅಧಿಪತಿಯಾಗಿದ್ದನಾದರೂ ಅಯೋದ್ಯೆಯಲ್ಲಿ ಜನಿಸಿದ್ದರಿಂದ ಮತ್ತು ಅಯೋಧ್ಯೆಯನ್ನು ರಾಜಧಾನಿಯಾಗಿಸಿಕೊಂಡು ವ್ಯವಹರಿಸಿದ್ದಕ್ಕಾಗಿ ಅಯೋಧ್ಯಾ ಪತಿಯೆಂದು ಹ್ರಸ್ವವಾಗಿ ಹೇಳುವುದು)
ಸೌರಂಭಿಸಬೇಕಾದ ಈ ಕಾಲಘಟ್ಟದಲ್ಲೂ ವಿರೋಧಿಸುವ ಮನಃಸ್ಥಿತಿಯ ಹಾಗೂ ಮೊಸರಲ್ಲಿ ಕಲ್ಲು ಹುಡುಕುವ ಮನಃ ಸ್ಥಿತಿಯ ಜನರನ್ನು (ಜನರಲ್ಲ-ಜಂತುಗಳು ಎನ್ನುವುದು ಸರಿ) ನೋಡಿದಾಗ, ಅವರ ಅತ್ಯಂತ ಕ್ಷುಲ್ಲಕ ಮಾತುಗಳನ್ನು ಕೇಳುವಾಗ, ಇಂಥವರಿಗಾಗಿ ಹಾಲಿನ ಸಮುದ್ರದಲ್ಲಿ ಅತ್ಯಂತ ಆರಾಮವಾಗಿದ್ದ ಭಗವಂತ ಭಾರತದಲ್ಲಿ ಅವತಾರ ವೆತ್ತಿ ಇಡೀ ಯುಗವನ್ನುಕಳೆದು ಕಷ್ಟಪಡಬೇಕಾಗಿತ್ತೇ ಎಂದು ಅನ್ನಿಸುವುದು ತಪ್ಪಲ್ಲ ಅಲ್ಲವೇ? ಇಂಥ ಜನರನ್ನು ನೋಡಿಯೇ ಪರಾಶರ ಭಟ್ಟರ ಭಗವದ್ಯೋಪ, ಭಾಗವತ ಕಾರರ ವಿಷಾದ ಪ್ರಕಟವಾಗಿದ್ದಿರಬೇಕು.

ರೋಚಕತೆಯನ್ನು ವಿಸ್ತಾರವನ್ನು ವಿಚಿತ್ರ ತಿರುವುಗಳನ್ನು ತತ್ವಪರತೆಯನ್ನು, ನ್ಯಾಯದ ದಾರಿಯನ್ನು ಮತ್ತು ಭಾರತೀ ಯರ ಅಮೋಘ ಕಾಲಮಿತಿ ಮೀರಿದ ಸಹನೆಯನ್ನು ಗಮನಿಸಿದಾಗ, ರಾಮ ಮಂದಿರ ನಿರ್ಮಾಣದ ಕಥೆಯೂ ಕೂಡ  ಮಾಯಣದ ಕಥೆಗೆ ಕಮ್ಮಿಯೆನಾಗಿರಲಿಲ್ಲ ಅನ್ನಿಸು ವಿದು ಸತ್ಯ.
ಅಂತೂ ನಮ್ಮದೇ ಆಗಿದ್ದ ನಮ್ಮ ಗುರುತನ್ನು – ಅಸ್ಮಿತೆಯನ್ನು ನಾವು ವಾಪಸು ಪಡೆಯುವ ಸಲುವಾಗಿನ ಸಾವಿರಾರು ವರ್ಷಗಳ ಈ ಕಾಯುವಿಕೆ, ತ್ಯಾಗ, ಬಲಿದಾನ, ಪ್ರಾರ್ಥನೆಗಳಿಗೆ ಒಂದು ಶಾಶ್ವತವಾದ ಮತ್ತು ಸುಂದರವಾದ ಮುಕ್ತಾಯ ದೊರಕಿದಂತಾಯಿತು ಎನ್ನುವುದು ಎಲ್ಲ ಭಾರತೀಯನ ಸಮಾಧಾನ ಭಾವ.

ಈ ಸಾರ್ಥಕ ಕ್ಷಣವನ್ನು ಭಾರತದ ಜನಪದಕ್ಕೆ ತಡವಾಗಿ ನ್ಯಾಯದ ದಾರಿಯ ಪಡೆಯುವಂತಾಗಲು ಪ್ರಯತ್ನಿಸಿದ ಎಲ್ಲ ಮನಸ್ಸುಗಳೂ ವಂದ ನಾರ್ಹವೇ ಅಲ್ಲವೇ?