ಸಂಕಲ್ಪಸಿದ್ದಿ
ಟಿ.ದೇವಿದಾಸ್
ಭಾರತೀಯರ ಪೂರ್ವಪುಣ್ಯಕೃತ ಸೌಭಾಗ್ಯವೆಂದರೆ ಇದೇ ಇರಬೇಕು! ಸಮಸ್ತರ ಆರಾಧ್ಯಮೂರ್ತಿ ಪ್ರಭು ಶ್ರೀರಾಮನಿಗೆ ಅವನದೇ ಜನ್ಮಭೂಮಿಯ ಲ್ಲೊಂದು ಭವ್ಯ-ದಿವ್ಯ ಮಂದಿರ ಕಟ್ಟಿ ಇಂದು ಅವನನ್ನು ಪ್ರತಿಷ್ಠೆ ಮಾಡುತ್ತಿರುವುದು ಶಾಶ್ವತ ನೆನಪಾಗಿ ಚರಿತ್ರೆಯನ್ನು ಸೇರುತ್ತದೆ. ಈ ಸಂಭ್ರಮ ದೇಶ-ವಿದೇಶದಲ್ಲಿರುವ ಭಾರತೀಯರ ಮೈಮನಗಳಲ್ಲಿ ಪರಮಾನಂದದ ಅನುಭೂತಿ ನೀಡುತ್ತಿದೆ. ೫೦೦ ವರ್ಷಗಳ ಹಿಂದೆ ರಾಮಮಂದಿರವನ್ನು ಕೆಡವಿದರು,
ಆದರೆ ಭಾರತೀಯರ ರಾಮಭಕ್ತಿಯನ್ನು ಕೆಡವಲು ಯಾರಿಗೂ ಸಾಧ್ಯವಾಗಲಿಲ್ಲ.
ರಾಮಮಂದಿರದ ಕನಸು-ಕಲ್ಪನೆ ಗುಪ್ತಗಾಮಿನಿ ಯಾಗೇ ಅಸಂಖ್ಯ ಭಕ್ತರಲ್ಲಿ ಹರಿಯುತ್ತಲೇ ಇತ್ತು. ಅದು ಇಂದು ನನಸಾಗುತ್ತಿದೆ. ದೇಶದ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣಕ್ಕೆ ಅಸ್ತು ಎಂದು ವಿವಾದರಹಿತ ತೀರ್ಪನ್ನು ನೀಡಿದ್ದರಿಂದ ಎಲ್ಲ ಬಗೆಯ ಅಡ್ಡಿ ಆತಂಕಗಳು ಮರೆಯಾಗಿ ಕಾಲಕೂಡಿ ಬಂದಿದೆ. ಕರ್ನಾಟಕದ ಕೃಷ್ಣಶಿಲೆಯಲ್ಲಿ ಕೆತ್ತಿದ ೫೧ ಇಂಚಿನ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಬಾಲವಿಗ್ರಹದ ಪ್ರತಿಷ್ಠಾಪನ ಕಾರ್ಯ ಇಂದು ನೆರವೇರಿ ಭಾರತದ ಇತಿಹಾಸದ ಸುವರ್ಣಾಕ್ಷರದಲ್ಲಿ ಸೇರಿಹೋಗಲಿದೆ.
‘ಆರ್ಯರು ಹೊರಗಿನಿಂದ ಬಂದವರು, ಅನಾಗರಿಕರು, ಆಕ್ರಮಣಶೀಲ ಪ್ರವೃತ್ತಿಯವರು, ಸಂಸ್ಕೃತವನ್ನು ಮಾತಾಡುತ್ತಿದ್ದವರು, ಭಾರತ ನೆಲಕ್ಕೆ ಬಂದು ತಮಿಳು ಮಾತಾಡುತ್ತಿದ್ದ ದ್ರಾವಿಡರನ್ನು ನಿರ್ನಾಮ ಮಾಡಿದ ಚರಿತ್ರೆ ಹರಪ್ಪಾ-ಮೊಹೆಂಜೋದಾರೋ ನಗರಗಳ ನಾಶದಡಿಯಲ್ಲಿವೆ. ಸಿಂಧೂ ಕೊಳ್ಳದಲ್ಲಿ ಕಾಣಿಸುವುದು ಈ ಭಗ್ನಾವಶೇಷ ಸಂಸ್ಕೃತಿಯ ಭಾಷೆ, ಚಿಹ್ನೆ, ಸಾಕ್ಷ್ಯಾಧಾರಗಳು’ ಎಂಬ ದುರುದ್ದೇಶಪೂರಿತ ಚಿಂತನೆಯನ್ನು ಎಡಪಂಥೀಯ ಚಿಂತಕರು ನೂರು ವರ್ಷಗಳ ಹಿಂದೆಯೇ ಬಿತ್ತಿ ದೇಶವಾಸಿಗಳ ತಲೆಯನ್ನು ಕೆಡಿಸಿದರು.
ಈ ಚಿಂತನೆ ಬ್ರಿಟಿಷರು ನಡೆಸಿದ ಕುತಂತ್ರ, ಅಪಪ್ರಚಾರ ಎಂಬುದನ್ನು ೨೦೦೮ರಲ್ಲಿ ಬಿಬಿಸಿಯಲ್ಲಿ ತಪ್ಪೊಪ್ಪಿಗೆ ರೀತಿಯಲ್ಲಿ ಪ್ರಕಟಣೆ ಮಾಡಿದ್ದೂ ನಡೆದುಹೋಯಿತು. ಆದರೆ ಹೀಗೆ ಬಿಂಬಿಸಿದುದರ ಫಲವಾಗಿ ಆದ ದುರಂತಗಳೇನು? ಐರೋಪ್ಯರು ಆರ್ಯಮೂಲದವರೆಂದು ನಂಬಿಸಿ ಹಿಟ್ಲರನ ತಲೆಕೆಡಿಸಿ, ಯಹೂದಿ ಸಂತಾನದ ಮಾರಣಹೋಮಕ್ಕೆ ನಾಂದಿಹಾಡಿಸಿದ್ದು. ಪರಿಣಾಮ, ಲೆಕ್ಕವಿಲ್ಲದಷ್ಟು ಅಮಾಯಕರು ಸತ್ತರು. ನಿಜವಾಗಿ ಇಡೀ ಯುರೋಪು ತತ್ತರಿಸಿಹೋಯಿತು!
ಭಾರತದಲ್ಲಿ ದ್ರಾವಿಡ ಚಳವಳಿಯ ಹಾದಿಯೇ ಹಳ್ಳ ಹಿಡಿಯಿತು. ಅದರ ಮುಂದಾಳಾದ ರಾಮಸ್ವಾಮಿ ನಾಯ್ಕರು ಪ್ರತ್ಯೇಕ ದ್ರಾವಿಡ ಸ್ಥಾನ ಬೇಡಿಕೆ ಯಿಟ್ಟು, ಬ್ರಾಹ್ಮಣರನ್ನು ಸಂಸ್ಕೃತವನ್ನು ಉತ್ತರ ಭಾರತವನ್ನು ಉಪನಿಷತ್ತು, ವೇದ, ರಾಮಾಯಣ, ಮಹಾಭಾರತ, ಗೀತೆ, ದೇವಾಲಯ ಸಂಸ್ಕೃತಿ, ಅಖಂಡ ಭಾರತೀಯ ಸಂಸ್ಕೃತಿಯೇ ದ್ವೇಷಕ್ಕೀಡಾಗುವಂತೆ ಮಾಡಿ, ಸಮಸ್ತ ನಿರ್ಮೂಲನೆಗೆ ಕರೆಯಿತ್ತು, ಗಣೇಶ ವಿಗ್ರಹಗಳನ್ನು ಒಡೆಸಿ, ಆಚಾರ್ಯ ಶಂಕರರ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿ, ರಾಮಾಯಣವನ್ನು ನಿಂದಿಸಿ, ಅನಾಗರಿಕ ರೂಪದ ಚಳವಳಿಗಳನ್ನು ಉದ್ದೀಪಿಸಿ, ತಮಿಳರನ್ನು ತಮ್ಮ
ಮೂಲಸಂಸ್ಕೃತಿಯ ವಿರುದ್ಧ ಎತ್ತಿಕಟ್ಟಿಸಿ ವಿಕೃತವಾಗಿ ಮೆರೆದೋ ಮೆರೆದರು!
ಈ ದ್ವೇಷ, ಉರಿಯ ಶಿಶುವೇ ಕರುಣಾನಿಧಿ. ಇವರು ಒಮ್ಮೆ ಶ್ರೀರಾಮನನ್ನು ಅವಹೇಳನ ಮಾಡುತ್ತಾ, ‘ರಾಮ ಯಾವುದೋ ಕಾಲ್ಪನಿಕ ವ್ಯಕ್ತಿ, ದ್ರಾವಿಡರನ್ನು ಹಾಳುಮಾಡಿದವನು. ಅವನು ಈ ಲಂಕೆಗೆ ಸೇತುವೆ ಕಟ್ಟಲು ಯಾವ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಡಿಗ್ರಿ ಪಡೆದಿದ್ದ?’ ಎಂದಿದ್ದರು. ನಾವಿರುವುದೇ ಒಡೆದು ಸಾಯಲಿಕ್ಕೆ ಎಂಬ ವಿತಂಡ, ಕುತರ್ಕ, ಮತಿಗೆಟ್ಟ, ಕುಹಕ, ವಿಕ್ಷಿಪ್ತ ಮನಸ್ಥಿತಿಯಿಂದ ಹೊರಬಂದು ಒಂದುಗೂಡುವುದು ಇಂಥವರ ದೆಸೆಯಿಂದ ಸಾಧ್ಯವೇ ಇಲ್ಲವೇನೋ! ಆದರೆ ಇಂಥ ಯಾವುದೇ ಅಡ್ದಿ ಆತಂಕಗಳಿದ್ದರೂ ಎಲ್ಲೋ ಒಂದೆಡೆ ದೇಶಕಟ್ಟುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಭಾರತ ಪ್ರೇಮ ಸಾಯದೆ, ತಾಯಿ ಭಾರತಿಯ ಮೇಲಿನ ಅದಮ್ಯ ಅಮರಪ್ರೇಮದ ಒರತೆ ಬತ್ತಿಹೋಗದೆ ಜೀವಂತವಾಗೇ ಉಳಿದುಕೊಂಡು ಬಂದಿದೆ. ಇದೇ ಈ ನೆಲದ ನಿಜಶಕ್ತಿ. ಭಾರತದ ವೈಶಿಷ್ಟ್ಯ, ಹುದುಗಿರುವ ಅಂತಸ್ಸತ್ವ!
ಒಂದೊಂದು ಕಾಲಕ್ಕೆ ಒಬ್ಬೊಬ್ಬ ಮಹಾಪುರುಷ ಹುಟ್ಟಿಬಂದು ದೇಶವನ್ನು ಸಂಪದಗೊಳಿಸಿದ ಸಾಲಿನಲ್ಲಿ ಈಗ ಮೋದಿಯದ್ದೂ ಒಂದು ಸರದಿ ಯೇನೋ! ಪ್ರಭು ಶ್ರೀರಾಮನೇ ಬಲ್ಲ. ಮರ್ಯಾದಾ ಪುರುಷೋತ್ತಮ ರಾಮನಿಗೆ ಅವನ ಜನ್ಮಭೂಮಿಯಲ್ಲೇ ಒಂದು ಅಪ್ರತಿಮ ಬೃಹತ್ ಮಂದಿರವನ್ನು ಕಟ್ಟುವ ಸತ್ಸಂಕಲ್ಪ ಶತಮಾನಗಳಷ್ಟು ಹಿಂದಿನ ಅಖಂಡ ಭಾರತೀಯರ ವಾಂಛೆಯಾಗಿತ್ತು. ರಾಮರಥಾ ಯಾತ್ರೆ ಪ್ರತಿಯೊಬ್ಬ ಭಾರತೀಯನ ನಾಲಗೆ
ಯಲ್ಲೂ ರಾಮನಾಮ ತಾರಕವನ್ನು ಉಲಿಯುವಂತೆ ಮಾಡಿತ್ತು. ಭಾರತದ ಯಾವುದೇ ಭಾಗದಲ್ಲಿಯೂ ರಾಮ ಎಂಬ ಹೆಸರನ್ನು ಇಟ್ಟುಕೊಂಡವರು ಇಲ್ಲ ಅಂತಿರಲು ಸಾಧ್ಯವೇ ಇಲ್ಲ. ರಾಮನಾಮದ ಮಹಿಮೆಯಂತೂ ಅಪಾರ. ಯಾವ ನೆಲದಲ್ಲಿ ಪ್ರಭು ಶ್ರೀರಾಮನ ಮಂದಿರವನ್ನು ದುಷ್ಟರು ಕೆಡವಿದರೋ ಅದೇ ನೆಲದ ಗರ್ಭಗೃಹದಲ್ಲಿ ರಾಮಮಂದಿರದ ಕನಸು, ರಾಮಲಲ್ಲನ ವಿಗ್ರಹ ಪ್ರತಿಷ್ಠಾಪನೆಯು ಯೋಗಿ ಸಮಾನರಾದ ದೇಶದ ಪ್ರಧಾನಿಯ ಅಮೃತ ಹಸ್ತದಿಂದಲೇ ನೆರವೇರುತ್ತಿದೆ. ಭಕ್ತಿ-ಭಾವ ತನ್ಮಯತೆಯ ಅಸಂಖ್ಯ ಭಾರತೀಯರ ಹೃದಯ ಸಾಮ್ರಾಜ್ಯದ ಸಾಮ್ರಾಟನಿಗೊಂದು ವಿಶ್ವಶ್ರೇಷ್ಠ ಭವ್ಯಮಂದಿರ ಕೇವಲ ಮೂರು ವರ್ಷದೊಳಗೆ ತಲೆಯೆತ್ತಿ ಪ್ರಭುವಿನ ಪ್ರಾಣಪ್ರತಿಷ್ಠೆಯಾದದ್ದು ಭಾರತಕ್ಕಷ್ಟೆ ಅಲ್ಲದೆ ವಿಶ್ವಕ್ಕೇ ಅತ್ಯಂತ
ರೋಚಕವಾದುದು!
ರಾಮನಿಲ್ಲದೆ ಭಾರತದ ಕಥೆಯಿಲ್ಲ. ರಾಮಕಥೆ ಭಾರತದಲ್ಲಷ್ಟೇ ಇಲ್ಲ. ಆದರೆ ಭಾರತ ಬಿಟ್ಟು ರಾಮ ಎಲ್ಲೂ ಇಲ್ಲ. ರಾಮನಿಲ್ಲದ ಭಾರತವೂ ಇಲ್ಲ! ಯಾಕೆಂದರೆ ‘ಜನನೀ ಜನ್ಮಭೂಮಿಶ್ಚಸ್ವರ್ಗಾದಪೀ ಗರಿಯಸೀ’ ಎಂದವನಿಗೆ ಭಾರತವನ್ನು ಬಿಟ್ಟಿರಲು ಹೇಗೆ ಸಾಧ್ಯವಾದೀತು ಎಂಬುದು ಕೊನೆಗೂ ಸಾಬೀತಾಗಿಯೇಬಿಟ್ಟಿತು. ಅಯೋಧ್ಯೆಯಲ್ಲಿನ ರಾಮಮಂದಿರವು ಯಾರೊಬ್ಬನ ಹೊಟ್ಟೆ, ಸಂಪತ್ತು ತುಂಬಿಸಲು, ಆತನ ವಾಂಛೆಗಳಿಗೆ ಇಂಬಾಗುವಂತೆ, ಹಲವರ ಹಾರಾಟಕ್ಕೆ ಈಡಾಗುವಂತೆ, ಅಸಂಖ್ಯ ದುರ್ಬಲರನ್ನು ನಿರ್ಲಕ್ಷಿಸಿ, ಅವನು ಹುಟ್ಟಿ ಆಡಿಬೆಳೆದ ಜನ್ಮಸ್ಥಾನದಲ್ಲಿ ಅವನಿಗೊಂದು ಮಂದಿರ ವನ್ನು ಯಾವ ಪೂರ್ವಗ್ರಹವೂ ಇಲ್ಲದೆ, ಯಾರನ್ನೂ ಸೆರೆಯಲ್ಲಿ ಇಡದೆ, ಯಾವ ದುರಾಕ್ರಮಣದ ಸಂಘರ್ಷವೂ ಇಲ್ಲದೆ, ಯಾರ ರಕ್ತದ ಹನಿಯೂ ಇಲ್ಲದೆ, ಯಾವ ಭಯೋತ್ಪಾದನೆಯ ಭಯವೂ ಇಲ್ಲದೆ, ಯಾವ ಹುನ್ನಾರವೂ ಇಲ್ಲದೆ, ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆದೇಶದ ಅನ್ವಯ ನಿರ್ಮಾಣಗೊಂಡಿದೆ ಎಂಬುದು ಅತ್ಯಂತ ಗಮನಾರ್ಹವಾದ ವಿಚಾರ.
ಆದ್ದರಿಂದ ಇದಕ್ಕೆ ಯಾರ ಯಾವ ಹಂಗೂ ಯಾವ ಕಾಲದಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಈಗ ಎಲ್ಲೆಲ್ಲೂ ‘ರಾಮ ರಾಮ’ ಎಂಬ ತಾರಕ ಮಂತ್ರದ ಜಪ.
ಉದ್ಘೋಷವೋ ಉದ್ಘೋಷ! ಈ ದೇಶದಲ್ಲಿ ಎಲ್ಲೆಲ್ಲೂ ರಾಮ ಆದರ್ಶನಾಗಲಿ, ಆಕರ್ಷಣೆಯಾಗಲಿ, ಮಾದರಿಯಾಗಲಿ. ಶ್ರೀರಾಮಚಂದ್ರ ಈಗಲೂ ಭಾರತೀಯರಿಗೆ ದಶರಥನ ಮಗನಾಗಿಯಷ್ಟೇ ಅಲ್ಲದೆ ದೇವನಾಗಿ ಭಾರತವನ್ನು ಕಾಪಿಡು ಎಂದು ಅವನ ನೆಲದಲ್ಲೇ ನಿಂತು ಸಮಸ್ತ ಭಾರತೀಯರು ಒಂದಾಗಿ ಒಕ್ಕೊರಲಿನಲ್ಲಿ ಪ್ರಾರ್ಥಿಸೋಣ.
(ಲೇಖಕರು ಹವ್ಯಾಸಿ ಬರಹಗಾರರು)