Saturday, 14th December 2024

ಇಂಗ್ಲೆಂಡ್ ಕಡಿಮೆ ಮೊತ್ತಕ್ಕೆ ಆಲೌಟ್ : ಜೈಸ್ವಾಲ್ ಅರ್ಧಶತಕ

ಹೈದರಾಬಾದ್‌: ಹೈದರಾಬಾದ್‌ನಲ್ಲಿ ಗುರುವಾರ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಆತಿಥೇಯ ಭಾರತ ತಂಡ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದೆ.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ನಿರ್ಧಾರವನ್ನು ಭಾರತೀಯ ಬೌಲರ್‌ಗಳು ತಲೆಕೆಳಗಾಗುವಂತೆ ಮಾಡಿದರು. 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿತು.

ಪ್ರತ್ಯುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 23 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಕಲೆಹಾಕಿದ್ದು, ಮುನ್ನಡೆ ಸಾಧಿಸಲು ಇನ್ನು 127 ರನ್ ಗಳಿಸಬೇಕಿದೆ.

ಇಂಗ್ಲೆಂಡ್‌ನ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ (35) ಮತ್ತು ಜಾಕ್ ಕ್ರಾಲಿ (20) ಉತ್ತಮ ಆರಂಭ ನೀಡಿದರು. ಜಾಕ್ ಕ್ರಾಲಿ ಔಟಾದ ನಂತರ ಬಂದ ಒಲ್ಲಿ ಪೋಪ್ ಕೇವಲ ಒಂದು ರನ್ ಗಳಿಸಿದರು. ನಂತರ ಬೆನ್ ಡಕೆಟ್ ಕೂಡ ವಿಕೆಟ್ ಒಪ್ಪಿಸಿದರು.

ಜೋ ರೂಟ್ 60 ಎಸೆತಗಳಲ್ಲಿ ತಾಳ್ಮೆಯ 29 ರನ್ ಗಳಿಸಿದರು. ಜಾನಿ ಬೈರ್‌ಸ್ಟೋವ್ 58 ಎಸೆತಗಳಲ್ಲಿ 37 ರನ್ ಕಲೆ ಹಾಕಿದರು. ನಾಯಕ ಬೆನ್ ಸ್ಟೋಕ್ಸ್ 88 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 70 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿದರು.

ಉಳಿದಂತೆ ಬೆನ್ ಫೋಕ್ಸ್ 4 ರನ್, ರೆಹಾನ್ ಅಹ್ಮದ್ 13 ರನ್, ಟಾಮ್ ಹಾರ್ಟ್ಲಿ 23 ರನ್ ಮತ್ತು ಮಾರ್ಕ್ ವುಡ್ 11 ರನ್ ಗಳಿಸಿದರು.

ಭಾರತ ತಂಡದ ಮೊದಲ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ ನೀಡಿತು.

ರೋಹಿತ್ ಶರ್ಮಾ 27 ಎಸೆತಗಳಲ್ಲಿ 3 ಬೌಂಡರಿ ಸಮೇತ 24 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 70 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶುಭ್ಮನ್ 14 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.