Saturday, 23rd November 2024

ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ವಿಜಯನಗರ: ಹಂಪಿ ವಿರೂಪಾಕ್ಷ ದೇವಾಲಯದಲ್ಲಿಯೂ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ವಿರೂಪಾಕ್ಷ ದರ್ಶನಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆ ಮಾತ್ರ ಧರಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.

ಹಂಪಿ ವಿರೂಪಾಕ್ಷ ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ವಿದೇಶಿ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ವಿದೇಶಿ ಪ್ರವಾಸಿಗರು, ಟೂರಿಸ್ಟ್ ಗಳು ಹೆಚ್ಚಾಗಿ ಜೀನ್ಸ್, ಟೀಶರ್ಟ್, ತುಂಡುಡುಗೆಯಲ್ಲಿ ಬರುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ಹಿಂದೂ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಬರ್ಮುಡ, ಜೀನ್ಸ್, ಚಡ್ಡಿ ಧರಿಸಿ ಬರುವಂತಿಲ್ಲ. ಪಂಚೆ, ದೋತಿ, ಸೀರೆ, ಚೂಡಿದಾರ್ ನಂತಹ ಸಾಂಪ್ರದಾಯಿಕ ಬಟ್ಟೆ ಧರಿಸಿ ಬರಬೇಕು. ದೇವಾಲಯದಲ್ಲಿಯೇ ವಸ್ತ್ರ ನೀಡುವ ವ್ಯವಸ್ಥೆಯನ್ನೂ ಜಾರಿ ಮಾಡಲಾಗಿದೆ. ದೇವಸ್ಥಾನದಲ್ಲಿಯೇ ಸಾಂಪ್ರದಾಯಿಕ ವಸ್ತ್ರ ಹಾಗೂ ಶಲ್ಯ ನೀಡಲಾಗುತ್ತಿದ್ದು, ದೇವರ ದರ್ಶನದ ಬಳಿಕ ವಾಪಾಸ್ ಕೊಡಬೇಕು.

ದೇವಸ್ಥಾನಕ್ಕೆ ಭೇಟಿ ನೀಡುವಾಗ ಭಕ್ತಿ ಭಾವನೆಯಿಂದ ದೇವರ ದರ್ಶನ ಮಾಡಬೇಕು. ಬೇರೆ ರೀತಿಯ ಉಡುಪುಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆ ಯುಂಟಾಗಬಾರದು ಎಂಬ ಕಾರಣಕ್ಕೆ ಸದುದ್ದೇಶದಿಂದ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.