Wednesday, 30th October 2024

ವಚನದಲ್ಲಿ ನಾಮಾಮೃತ ತುಂಬಿ; ಮನಸಿನ ವಿಷ ತುಂಬಬೇಡಿ !

ತಿಳಿರು ತೋರಣ

srivathsajoshi@yahoo.com

‘ಅವ್ಳನ್ನ ಪಾರ್ಲಿಮೆಂಟ್ ಉದ್ಘಾಟನೆ ಮಾಡೋದಕ್ಕೂ ಕರೀಲಿಲ್ಲ…’ ಎಂದು ಸಿದ್ದರಾಮಯ್ಯ ಏಕವಚನ ಬಳಸಿ ಪ್ರಸ್ತಾವಿಸಿದ್ದು ಯಾರೋ ಹೇಳಹೆಸರಿ ಲ್ಲದ ಹೆಂಗುಸನ್ನಲ್ಲ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು!

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬ ಆದರ್ಶವನ್ನು ಜಗತ್ತಿಗೆ ಸಾರಿದ ಭಾರತ ದೇಶದ ಪ್ರಥಮ ಪ್ರಜೆಯನ್ನು! ಅದರಿಂದ ರಾಷ್ಟ್ರಪತಿಗಳ ಘನತೆ- ಗೌರವಕ್ಕೇನಾದರೂ ಕುಂದು ಬಂತೇ? ಸೂಜಿಮೊನೆಯಷ್ಟೂ ಇಲ್ಲ. ಗಾದೆಮಾತೇ ಇದೆಯಲ್ಲ ನಾ.ಬೊ.ದೇ.ಹಾ ಅಂತ? ಹಾಗಾದರೆ
ಸಿದ್ದರಾಮಯ್ಯರ ಘನತೆ-ಗೌರವಕ್ಕೇನಾದರೂ ಕುಂದು ಬಂತೇ? ಅಂಥದ್ದೇನಾದರೂ ಇದ್ದಿದ್ದರೆ ಕುಂದು ಬರುತ್ತಿತ್ತೇನೋ. ಮತ್ತೇಕೆ ಆ ಏಕವಚನ ಪ್ರಯೋಗ ಸುದ್ದಿಯಾಯ್ತು? ಏಕೆಂದರೆ ಸಿದ್ದರಾಮಯ್ಯ ಹಾಗೆ ಮಾತನಾಡಿದ್ದು ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ. ಆ ಸ್ಥಾನಕ್ಕೆ ತನ್ನದೇ ಆದ ಒಂದು ಘನತೆ ಇದೆ, ಗಾಂಭೀರ್ಯ ಇದೆ.

ಅದನ್ನಲಂಕರಿಸಿದ ವ್ಯಕ್ತಿ ತುಚ್ಛವಾಗಿ ಮಾತನಾಡಿದರೆ ಆ ಸ್ಥಾನದ ಗೌರವಕ್ಕೆ ಕುಂದು. ರಾಜ್ಯದ ಪ್ರಜೆಗಳೆಲ್ಲರ ಸ್ವಾಭಿಮಾನಕ್ಕೆ ಕುಂದು. ಆಮೇಲೆ ಸಿದ್ದರಾ ಮಯ್ಯರಿಂದ ಕಾಟಾಚಾರದ್ದೊಂದು ಕ್ಷಮಾಪಣೆ ಮತ್ತು ಸಮಝಾಯಿಶಿಯ ಹೇಳಿಕೆಯೂ ಬಂತೆನ್ನಿ. ಅದಂತೂ ಹಸಿಸುಳ್ಳುಗಳ ಮತ್ತು ಭಾಷಾ ದೋಷ ಗಳ ಕಂತೆ. ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿರಲಿಲ್ಲ ಎನ್ನುವುದು ಸುಳ್ಳು. ಸಿದ್ದರಾಮ ಯ್ಯರಿಗೆ ಅದರಿಂದ ನೋವು ಆಕ್ರೋಶ ಉಂಟಾಗಿತ್ತು ಅನ್ನೋದು ಇನ್ನೊಂದು ಸುಳ್ಳು. ಮಾತನಾಡುವಾಗ ಭಾವುಕನಾದೆ ಎನ್ನುವುದು ಪ್ರಚಂಡ ಸುಳ್ಳು. ಭಾವುಕರಾದವರು ಹಾಗೆ ವೇದಿಕೆಯ ಮೇಲಿದ್ದ ವಂದಿಮಾಗಧರತ್ತ ನೋಡಿ ಕುಹಕದ ನಗೆಯಾಡುತ್ತ ಮಾತನಾಡುವುದೇ? ಇನ್ನು, ‘ಬಾಯ್ತಪ್ಪಿನಿಂದ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಭೋದಿಸಿದೆ’ ಎಂದು ಬರೆದಿದ್ದರಲ್ಲಿ ಎರಡು ತಪ್ಪುಗಳು.

ಮೊದಲನೆಯದಾಗಿ ಸಿದ್ದರಾಮಯ್ಯ ಮಾಡಿದ್ದು ಸಂಬೋಧನೆ ಅಲ್ಲ, ಪ್ರಸ್ತಾವ. ಎರಡನೆಯದಾಗಿ ‘ಸಂಭೋದಿಸಿದೆ’ ಸರಿಯಲ್ಲ ಅದು ‘ಸಂಬೋಧಿಸಿದೆ’
ಎಂದಾಗಬೇಕಿತ್ತು. ಕನ್ನಡನಾಡಿನ ಮುಖ್ಯಮಂತ್ರಿಯ ಸೋಶಿಯಲ್ ಮೀಡಿಯಾ ಪ್ರೊ-ಲ್ ನೋಡಿಕೊಳ್ಳುವ ಪ್ರಭೃತಿಗೇ ಸರಿಯಾಗಿ ಕನ್ನಡ ಬರುವುದಿಲ್ಲ!
ಹೋಗಲಿಬಿಡಿ. ಈ ರಾಜಕಾರಣಿಗಳ ಏಕವಚನ ಕೂರಂಬುಗಳಿಂದ ನಮಗೇನಾಗಬೇಕಿದೆ? ಅವರೆಲ್ಲ ಬಾಯ್ತೆರೆದರೆ ಉದುರುವುದು ಅಂಥ ಆಣಿಮುತ್ತು ಗಳೇ.

ಕೆಂಗೇರಿ ಮೋರಿಯ ಕೊಚ್ಚೆಗಿಂತ್ಲೂ ಕೊಳಕು. ಆ ಬಾಯಿಗಳಿಂದ ಇನ್ನೇನನ್ನು ನಿರೀಕ್ಷಿಸ ಬಹುದು? ಅನಂತಕುಮಾರ್ ಹೆಗಡೆಯವರು ಸಿದ್ದರಾಮಯ್ಯಗೆ ಏಕವಚನ ಬಳಸಿದ್ರಂತೆ. ಕೆ.ಎಸ್.ಈಶ್ವರಪ್ಪ ಜಮೀರ್ ಅಹ್ಮದ್‌ಗೆ ಏಕವಚನ ಬಳಸಿದ್ರಂತೆ. ಆರ್.ಬಿ.ತಿಮ್ಮಾಪುರ ಈಶ್ವರಪ್ಪಗೆ ಏಕವಚನದಲ್ಲಿ ತಿವಿದ ರಂತೆ. ಎಲ್ಲರೂ ವಚನಭ್ರಷ್ಟರೇ. ಅದಕ್ಕೆ ತಕ್ಕಂತೆ ಮಾಧ್ಯಮಗಳು. ವಚನವ್ಯಾಧಿಯನ್ನೇ ಬ್ರೆಕಿಂಗ್ ನ್ಯೂಸ್ ಎಂದು ಗುಲ್ಲೆಬ್ಬಿಸುತ್ತವೆ. ಟಾಂಗ್, ಗುಟುರು, ಗರಂ ಅಂತ ಬೊಬ್ಬಿರಿಯುತ್ತವೆ.

ರಾಜಕಾರಣಿಗಳನ್ನು ಕೆಣಕಿ ಅವರ ಬಾಯಿಂದ ಏಕವಚನ ಬೈಗುಳದ ಹೊಲಸು ಹರಿಯುವಂತೆ ಮಾಡುವುದೂ ಈ ಮಾಧ್ಯಮಗಳೇ. ಒಂದೆರಡು ದಿನ ಸೋಶಿಯಲ್ ಮೀಡಿಯಾದಲ್ಲೂ ಅದೇ ಟ್ರೆಂಡ್. ಆಮೇಲೆ ಯಥಾಸ್ಥಿತಿ. ಸಂಸ್ಕಾರಹೀನ ರಾಜಕಾರಣಿಗಳಷ್ಟೇ ಪರಸ್ಪರ ಕಿತ್ತಾಡುವಾಗ, ದರ್ಪದಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವಾಗೆಲ್ಲ ಏಕವಚನ ಬಳಕೆ ಮಾಡೋದಲ್ಲ. ಇಲ್ಲಿ ಬೇರೆಯೇ ಒಂದು ನಿದರ್ಶನ ಇದೆ ನೋಡಿ. ಇದು ಸಜ್ಜನಿಕೆ ಮೂರ್ತಿವೆತ್ತಂತಿರುವ ಪ್ರಖ್ಯಾತ ಕನ್ನಡಿಗರೊಬ್ಬರನ್ನು ಇನ್ನೊಬ್ಬ ಕನ್ನಡಿಗ ಇಮೇಲ್‌ನಲ್ಲಿ ಹಳಿದದ್ದು. ಪ್ರಸಂಗ ಹೀಗಿದೆ: ದೂರದರ್ಶನ ಚಂದನ ವಾಹಿನಿಯ ಬಹುಜನಪ್ರಿಯ ‘ಥಟ್ ಅಂತ ಹೇಳಿ!’ ಕಾರ್ಯಕ್ರಮದಲ್ಲೊಮ್ಮೆ ಕರ್ನಾಟಕದ ಜಿಯೊಗ್ರಫಿಕಲ್ ಇಂಡಿಕೇಟರ್ ಸ್ಥಾನ ಪಡೆದ ವಸ್ತುಗಳನ್ನು ಪರಿಚಯ ಮಾಡುವ ಸರಣಿಯಲ್ಲಿ ಹಡಗಲಿ ಮಲ್ಲಿಗೆಯ ಬಗ್ಗೆ ಬಂದಿತ್ತು.

ಬಳ್ಳಾರಿಯಲ್ಲಿರುವ ‘ಹೂವಿನ ಹಡಗಲಿ’ಗೆ ಆ ಹೆಸರು ಬರಲು ಕಾರಣ, ಅಲ್ಲಿಯ ಮಲ್ಲಿಗೆಯನ್ನು ಹಡಗಿನಲ್ಲಿ ತುಂಬಿ ವಿರೂಪಾಕ್ಷನ ಪೂಜೆಗೆ  ಕಳುಹಿಸು ತ್ತಿದ್ದರೆಂಬ ಐತಿಹ್ಯವಿದೆ ಎಂದು ಡಾ.ನಾ.ಸೋಮೇಶ್ವರ ಕಾರ್ಯಕ್ರಮದಲ್ಲಿ ಹೇಳಿದ್ದರು. ಅದನ್ನು ವೀಕ್ಷಿಸಿದ ಅರುಣ ಉಡುಪ ಎಂಬ ವ್ಯಕ್ತಿ
ನಾ.ಸೋಮೇಶ್ವರರಿಗೆ ಒಂದು ಇಮೇಲ್ ಬರೆದರು: ‘ಅಲ್ಲಪ್ಪಾ ನಾ ಸೋಮೇಶ್ವರಾ, ಹಡಗಿನಲ್ಲಿ ಹೂವು ತರುವ ಯೋಗವೇ ಹಂಪಿ ವಿರೂಪಾಕ್ಷ ದೇವರಿಗೆ? ನಿನಗೇನು ಕನಸಲ್ಲಿ ಬಂದಿತ್ತಾ? ದೇವರು ನಾಲಿಗೆ ಕೊಟ್ಟಿದ್ದಾನಂತ, ಬಾಯಿಗೆ ಬಂದಹಾಗೆ ಮಾತಾಡಿದ್ರೆ ಜನ ಕೇಳ್ತಾರೆ ಅಂತ ತಿಳೀಬೇಡ. ಹಡಗು ಸಮುದ್ರದಲ್ಲಿ ಹೋಗೋದು.’ ನಾ.ಸೋಮೇಶ್ವರರಾದರೋ ಮೃದುಮನಸ್ಸಿನ ಸಜ್ಜನ. ವ್ಯಗ್ರಗೊಳ್ಳದೆ ಉತ್ತರಿಸಿದರು.

‘ಘನತೆವೆತ್ತ ಶ್ರೀ ಅರುಣ ಉಡುಪ ಅವರಿಗೆ, ತಮ್ಮ ಮಿಂಚಂಚೆ ತಲುಪಿದೆ. ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ತಾವು ನೋಡುತ್ತಿರುವುದು ನಮಗೆ
ಸಂತೋಷವಾಗುತ್ತಿದೆ. ಒಂದು ಪ್ರಶ್ನೆಗೆ ತಾವು ಸಂದೇಹವನ್ನು ವ್ಯಕ್ತಪಡಿಸಿರುವುದು ಶ್ಲಾಘನೀಯ ವಿಚಾರ. ಕ್ವಿಜ್ ಸ್ಪರ್ಧೆಯಲ್ಲಿ ಪ್ರಶ್ನೆಗಳನ್ನು ಕೇಳಬೇ ಕಾದರೆ, ಅದಕ್ಕೆ ಸೂಕ್ತ ಆಧಾರವಿಟ್ಟುಕೊಂಡೇ ಕೇಳುತ್ತೇವೆ. ತಮಗೆ ವಿಜಯನಗರದ ಬಗ್ಗೆ, ಹಂಪಿಯ ಬಗ್ಗೆ, ಸುತ್ತಮುತ್ತಲಿನ ಊರಿನ ಬಗ್ಗೆ ಅಪಾರವಾದ eನ ಇರುವಂತಿದೆ. ತಾವು ಕೇಳಿದ ಪ್ರಶ್ನೆಗೆ ಮಾಹಿತಿ ಮೂಲವನ್ನು ಕೆಳಗೆ ಲಗತ್ತಿಸಿದ್ದೇನೆ. ಪತ್ರ ಬರೆದುದಕ್ಕೆ ಧನ್ಯವಾದ. ತಮಗೆ ಶುಭವಾಗಲಿ. ನಾ. ಸೋಮೇಶ್ವರ.’

ಅವರು ಒದಗಿಸಿದ ಆಕರದಲ್ಲಿ ಹೂವಿನ ಹಡಗಲಿ ಸ್ಥಳನಾಮದ ವಿವರಗಳು, ಇತಿಹಾಸ ಸಂಶೋಧಕರ ಆಧಾರದಿಂದ ಬಂದಂಥವು ಇದ್ದವು. ಅಷ್ಟಾಗಿ, ನಾ.ಸೋಮೇಶ್ವರರನ್ನು ಏಕವಚನದಲ್ಲಿ ಸಂಬೋಧಿಸಿ ಕೀಳು ಒಕ್ಕಣೆಯ ಪತ್ರ ಬರೆದ ವ್ಯಕ್ತಿ ಬಳ್ಳಾರಿಯ ತೋರಣಗಲ್ಲಿನಲ್ಲಿ ಜೆಎಸ್‌ಡಬ್ಲ್ಯು ಎಂಬ ಕಂಪನಿಯಲ್ಲಿ ಜನರಲ್ ಮ್ಯಾನೇಜರ್. ಉಡುಪಿಯ ಪೂರ್ಣಪ್ರಜ್ಞ ಕಾಲೇಜಲ್ಲಿ ಪಿಯುಸಿ, ಬೆಳಗಾವಿಯ ಗೋಗಟೆ ಇನ್ಸ್‌ಟಿಟ್ಯೂಟ್ ನಲ್ಲಿ ಎಂಜಿನಿಯ ರಿಂಗ್ ಪದವಿ, ಸುರತ್ಕಲ್‌ನ ಕೆಆರ್‌ಇಸಿಯಲ್ಲಿ ಸ್ನಾತಕೋತ್ತರ ಪದವಿ ಎಂದು ಶಿಕ್ಷಣವಿವರಗಳು ಅವರ ಫೇಸ್ ಬುಕ್ ಪ್ರೊಫೈಲ್‌ನಲ್ಲಿ ಕಂಡುಬರುತ್ತವೆ.

ಆದರೆ ಸಂಸ್ಕಾರವೆಂಬು ದೊಂದಿಲ್ಲದಿದ್ದರೆ, ಉನ್ನತ ಶಿಕ್ಷಣ ಉನ್ನತ ಹುದ್ದೆಗಳೆಲ್ಲ ಇದ್ದು ಏನು ಪ್ರಯೋಜನ? ‘ವಾಣ್ಯೇಕಾ ಸಮಲಂಕರೋತಿ ಪುರುಷಂ
ಯಾ ಸಂಸ್ಕೃತಾ ಧಾರ್ಯತೇ’ ಎಂದು ಸುಭಾಷಿತವಿರುವುದು ಅದಕ್ಕೇನೇ. ಸಂಸ್ಕಾರಯುತ ಮಾತು ಮಾತ್ರ ಮನುಷ್ಯನಿಗೆ ಆಭರಣದಂತೆ ಸೌಂದರ್ಯ ನೀಡುವುದು. ಹಂಪೆಯ ವಿರೂಪಾಕ್ಷನಿಗೆ ಹಡಗಿನಲ್ಲಿ ಹೂವು ಸರಬರಾಜು ಆಗುತ್ತಿತ್ತು ಎಂದೊಡನೆ ಬಹುಶಃ ಆ ವ್ಯಕ್ತಿಗೆ ಟೈಟಾನಿಕ್‌ನಂಥ ಬೃಹತ್ ಹಡಗೊಂದೇ ಕಣ್ಮುಂದೆ ಬಂದದ್ದು. ಅವರು ಸಾವಧಾನದಿಂದ ಕಿಟ್ಟೆಲ್ ಕೋಶವನ್ನು ತೆರೆದುನೋಡಿದ್ದರೆ ಹಡಗು, ಪಡಗು, ಪಡಂಗು, ಹಡಗ ಇತ್ಯಾದಿ ಶಬ್ದಗಳಿಗೆ ದೋಣಿ ಎಂಬ ಅರ್ಥವೂ ಇದೆ, ಪೆರ್ವಡಗು ಅಂದರೆ ಪಿರಿದು ಹಡಗು, ದೊಡ್ಡ ದೋಣಿ ಎಂದಾಗುತ್ತದೆ ಅಂತೆಲ್ಲ ತಿಳಿದು ಕೊಳ್ಳುತ್ತಿದ್ದರು. ಅಷ್ಟು ವ್ಯವಧಾನವಿದ್ದರೆ ತಾನೆ? ಏಕವಚನ, ಅದೂ ನಾ.ಸೋಮೇಶ್ವರರಂಥ ವ್ಯಕ್ತಿಗೆ, ಬಳಸಿದ್ದರಿಂದ ಅರುಣ ಉಡುಪ ಚೀಪ್ ಆದರು. ಹೂವಿನ ಹಡಗಲಿ ಸ್ಥಳ ನಾಮದ ಬಗ್ಗೆ ಅವರಿಗೆ ಜಿeಸೆ ಬಂದದ್ದೇನೂ ತಪ್ಪಲ್ಲ.

ಅದರ ಬಗ್ಗೆ ನಾ.ಸೋಮೇಶ್ವರರನ್ನೇ ಕೇಳಲಿಕ್ಕೆ ಹೊರಟದ್ದೂ ತಪ್ಪಲ್ಲ. ತುಸು ಆಕ್ರೋಶವೂ ಇತ್ತೆಂದುಕೊಂಡರೆ ಅದೂ ತಪ್ಪೇನಲ್ಲ. ಆದರೆ ಗೌರವ ಯುತವಾಗಿ ಬರೆಯಬಹುದಿತ್ತು. ಪೋಲಂಡ್ ದೇಶದಲ್ಲಾದರೆ ಹಾಗೆಯೇ ಅಂತೆ. ಅಲ್ಲಿನ ಪೊಲಿಷ್ ಭಾಷೆಯಲ್ಲಿ ಒಬ್ಬನನ್ನು ಬಯ್ಯಬೇಕಿದ್ದರೂ ಗೌರವಸೂಚಕ ಬಹುವಚನವನ್ನೇ ಬಳಸಬೇಕಂತೆ. ‘ಗೌರವಾನ್ವಿತರೇ, ನೀವೊಬ್ಬ ಕಾಸುಪ್ರಯೋಜನವಿಲ್ಲದ ಮೂರ್ಖ!’ ಎಂಬ ಅರ್ಥ ಬರುವಂತೆ ಹೇಳಬೇಕಂತೆ. ಪೋಲಂಡ್‌ನ ಸಮಾಜದಲ್ಲಿ ಹದಿಹರೆಯ ದಾಟಿದ ಎಲ್ಲರನ್ನೂ- ಆತ/ಆಕೆ ಸಮಾಜದ ಯಾವುದೇ ಸ್ತರದಲ್ಲಿರಲಿ- ಬಹುವಚನದಲ್ಲೇ ಸಂಬೋಧಿಸಬೇಕಂತೆ. ಪೊಲಿಷ್‌ನಲ್ಲಿ ಸರ್/ ಲೇಡಿ ಅರ್ಥದ ಪಾನ್/ಪಾನಿ ಪದಗಳನ್ನು ಬಳಸದೆ ಸಂಭಾಷಿಸಿದರೆ ಆ ವ್ಯಕ್ತಿಯ ಅಸ್ತಿತ್ವವನ್ನೇ ಪ್ರಶ್ನಿಸಿ ಅವಹೇಳನ ಮಾಡಿದಂತಾಗುತ್ತದಂತೆ!

ಬಹುಶಃ ಅಷ್ಟು ಪೊಲಿಷ್ ಆಗಿರುವ ಪೊಲಿಷ್ ಭಾಷೆಯನ್ನು ಬಿಟ್ಟರೆ ಬೇರೆಲ್ಲೂ ಬೈಗುಳಕ್ಕೆ ಬಹುವಚನದ ಬಳಕೆಯಿರಲಿಕ್ಕಿಲ್ಲ. ನಮ್ಮ ದೇಶೀಯ ಭಾಷೆಗಳಲ್ಲಾದರೆ, ಸಿಟ್ಟು- ಸಿಡುಕಿನ ಬಿರುಗಾಳಿ (‘ಚಂಡಿ’ ಮಾರುತ) ಬೀಸಿದಾಗ ಮೊದಲಿಗೆ ಮುರಿದುಬೀಳುವ ಮರವೆಂದರೆ ‘ವಚನ’ಪ್ರಜ್ಞೆಯೇ. ಶಿಷ್ಟಾಚಾರಕ್ಕೋ ದಾಕ್ಷಿಣ್ಯಕ್ಕೋ ಬಹುವಚನದಲ್ಲಿ ಗಂಡನನ್ನು ಸಂಬೋಧಿಸುವ ಹೆಂಡತಿ ಮುನಿದು ಮಾರಿಯಾದಾಗ ಅವಳ ನಾಲಗೆ ಮೇಲೆ ನಲಿದಾಡುವುದು ಏಕವಚನವೇ. ಮೇರೆ ಮೀರಿದರೆ ಇಲ್ಲಿ ಅಚ್ಚುಮಾಡಲಾಗದ ಸಹಸ್ರನಾಮಾವಳಿ! ಆದರೆ ಅದೇ ಏಕವಚನದ್ದೊಂದು ವಿಲಕ್ಷಣ ವೈಶಿಷ್ಟ್ಯವೂ ಇದೆ. ಏನೆಂದರೆ ಏಕವಚನ ಪ್ರಯೋಗ ಸಂಸ್ಕಾರಹೀನತೆಯಿಂದ, ಸಿಡುಕು ಸ್ವಭಾವದಿಂದ ಮಾತ್ರ ಆಗುವುದೆಂದೇನಿಲ್ಲ. ಅತಿಯಾದ
ಒಲವಿನಿಂದಲೂ ಸಲಿಗೆಯಿಂದಲೂ ಏಕವಚನದಲ್ಲಿ ಸಂಬೋಧನೆ ನಡೆಯಬಹುದು. ದೇವರ ಮೇಲಿನ ಭಕ್ತಿ ಉಕ್ಕಿಹರಿಯುವಂತೆ ಭಾವೋದ್ವೇಗ ದಿಂದಲೂ ಆಗಬಹುದು.

ಅದು ಆತ್ಮೀಯತೆಯ ಏಕವಚನ. ಅನಾವಶ್ಯಕ ಆಡಂಬರಗಳಿಲ್ಲದ ಅನೌಪಚಾರಿಕ ಸಂವಹನ. ಮಾತಾಡುವವರಿಗೂ ಸಂಬೋಧಿತ ವ್ಯಕ್ತಿಗೂ ಅಕ್ಕರೆಯ
ಅಮೃತಪಾನ. ಆದರೆ ಆಲಿಸುತ್ತಿರುವ ಮೂರನೆಯ ವ್ಯಕ್ತಿಗೆ ಒಂದೊಮ್ಮೆ ತುಸು ಮುಜುಗರ ಅನಿಸುವುದೂ ಅಷ್ಟೇ ಸತ್ಯ. ಹತ್ತಿಪ್ಪತ್ತು ವರ್ಷಗಳ ಹಿಂದೆ ಬ್ಲಾಗ್ ಬರವಣಿಗೆ ಉತ್ತುಂಗದಲ್ಲಿದ್ದ ಕಾಲದಲ್ಲಿ ಪ್ರೊ|ಎಂ.ಎಸ್.ಶ್ರೀರಾಮ್ ಬರೆಯುತ್ತಿದ್ದ ‘ಕನ್ನಡವೇ ನಿತ್ಯ’ ಬ್ಲಾಗ್ ಓದುವಾಗ ನನಗೆ ಕೆಲವೊಮ್ಮೆ ಹಾಗೆ ಅನಿಸುತ್ತಿತ್ತು. ವ್ಯಕ್ತಿಪರಿಚಯದ ಲಹರಿಗಳನ್ನು ಹರಿಸುವಾಗ ಶ್ರೀರಾಮ್ ಏಕವಚನ ಪ್ರಯೋಗ ಮಾಡುವರು. ತುಂಟಕವಿ ಬಿ.ಆರ್. ಲಕ್ಷ್ಮಣರಾವ್ ಬಗ್ಗೆ ಬರೆಯುತ್ತ ‘ಲಕ್ಷ್ಮಣ… ಅವನು… ಅವನನ್ನು…’ ಎಂದು ಏಕವಚನದಲ್ಲೇ ಬರೆಯುವರು.

ಪೌರಾಣಿಕ ಲಕ್ಷ್ಮಣ ಹೇಗೂ ಶ್ರೀರಾಮನ ತಮ್ಮನಾದ್ದರಿಂದ ಏಕವಚನ ಓಕೆ ಅಂದುಕೊಂಡರೆ ಆಮೇಲೆ ಖ್ಯಾತ ಹನಿಕವಿ ಡುಂಡಿರಾಜ್ ಬಗೆಗಿನ ಲೇಖನದಲ್ಲೂ ‘ಡುಂಡಿರಾಜನದ್ದು ನಿಜಕ್ಕೂ ರೌಂಡೆಡ್ ಗ್ರೌಂಡೆಡ್ ವ್ಯಕ್ತಿತ್ವ… ಅವನು ಪದಗಳೊಂದಿಗೆ ಆಟವಾಡಿ ಅದ್ಭುತವಾಗಿ ಬರೆಯುತ್ತಾನೆ…’ ಅಂತೆಲ್ಲ ಏಕವಚನ ಪ್ರಯೋಗ! ಯು.ಆರ್.ಅನಂತಮೂರ್ತಿಯವರು ಕೆ.ವಿ.ಸುಬ್ಬಣ್ಣ ಬಗ್ಗೆ ಬರೆಯುವಾಗಲೂ ಇದೇರೀತಿ ಏಕವಚನಪ್ರಯೋಗ ಮಾಡುತ್ತಿದ್ದರು. ಓರಗೆಯವರು, ಸಲಿಗೆಯುಳ್ಳವರು ಪರಸ್ಪರರಲ್ಲಿ ಚಾಲ್ತಿಯಿರುವ ಮೌಖಿಕ ಶಿಷ್ಟಾಚಾರವನ್ನೇ ಲಿಖಿತವಾಗಿಸುವುದಕ್ಕೆ ಇವೆಲ್ಲ ನಿದರ್ಶನಗಳು. ಓದುಗರಾಗಿ ನಮಗೆ ಇದು ಸ್ವಲ್ಪ ಇರುಸುಮುರುಸೆನಿಸುತ್ತದೆ, ಆ ವ್ಯಕ್ತಿಗಳಿಗೆಲ್ಲ ನಮ್ಮ ಮನಸ್ಸಲ್ಲಿ ಒಂದು ಗೌರವದ ಚೌಕಟ್ಟು ಇರುವುದರಿಂದ; ನಾವೇ ಆಗಿದ್ದರೆ ಅವರಿಗೆ ಬಹುವಚನ ಬಳಸುವುದರಿಂದ.

ಆದರೆ ಲೇಖಕ ಮತ್ತು ಉಲ್ಲೇಖಿತ ವ್ಯಕ್ತಿಯ ನಡುವಿನ ಆತ್ಮೀಯತೆಯನ್ನು ಅರ್ಥಮಾಡಿಕೊಂಡರೆ ಅದೇ ಒಂದು ಒಳ್ಳೆಯ ಅನುಭವವೆನಿಸುತ್ತದೆ. ಒಮ್ಮೆ
ನಾನೇ ಆ ರೀತಿ ಏಕವಚನ ಪ್ರಯೋಗ ಮಾಡಿದ್ದೂ ಇದೆ. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಭಾಜಪ ಅಭ್ಯರ್ಥಿಯಾಗಿ ನನ್ನ ಎಂಜಿನಿಯರಿಂಗ್ ಕಾಲೇಜ್‌ಮೇಟ್ ಆಪ್ತ ಸ್ನೇಹಿತ ಜನಾರ್ದನ ಸ್ವಾಮಿ ಸ್ಪರ್ಧಿಸಿದ್ದರು. ಮತದಾನಕ್ಕೆ ಎರಡು ವಾರಗಳಿರುವಾಗ ನಾನು ವಿಜಯ ಕರ್ನಾಟಕ ಪತ್ರಿಕೆಯ ಪರಾಗಸ್ಪರ್ಶ ಅಂಕಣದಲ್ಲಿ ‘ಜನಸೇವೆಗೆ ಹೊರಟಿರುವ ಜನಾರ್ದನ ಸ್ವಾಮಿಗೆ ಜೈ ಹೋ!’ ಶೀರ್ಷಿಕೆಯೊಂದಿಗೆ ಬರೆದಿದ್ದೆ.

ಲೇಖನ ದುದ್ದಕ್ಕೂ ಜನಾರ್ದನ ಸ್ವಾಮಿಯನ್ನು ಏಕವಚನದಲ್ಲಿ ಸಂಬೋಧಿಸಿದ್ದೆ! ಭಾಜಪ ಕಾರ್ಯಕರ್ತರು ಆ ಲೇಖನದ ಕ್ಸೆರಾಕ್ಸ್ ಪ್ರತಿಗಳನ್ನು ಕರಪತ್ರದಂತೆ ಚಿತ್ರದುರ್ಗದಲ್ಲಿ ಮನೆಮನೆಗೆ ಹಂಚಿದ್ದರಂತೆ. ಆಸಲ ಜನಾರ್ದನ ಸ್ವಾಮಿ ಗೆದ್ದುಬಂದರು. ನನ್ನ ಲೇಖನದಿಂದ ಎನ್ನುತ್ತಿಲ್ಲ, ಆದರೆ ಅದರಲ್ಲಿದ್ದ ಏಕವಚನ ಸಂಬೋಧನೆ ಒಂದಷ್ಟು ಹೃದಯಗಳನ್ನು ತಟ್ಟಿದ್ದು ಹೌದು. ಏಕವಚನ ಪ್ರಯೋಗದ ಇನ್ನೂ ಕೆಲವು ಸೂಕ್ಷ್ಮಗಳಿವೆ. ನೀವು
ಗಮನಿಸಿದ್ದೀರೋ ಇಲ್ಲವೋ- ವಿದೇಶೀ ವಿeನಿಗಳು, ಸಾಹಿತಿ ಗಳು, ಕ್ರೀಡಾಳುಗಳಿಗೆಲ್ಲ ನಾವು ಏಕವಚನವನ್ನೇ ಬಳಸುತ್ತೇವೆ. ‘ಸ್ನಾನಗೃಹದಿಂದ ಆರ್ಕಿಮಿಡಿಸ್ ಬತ್ತಲೆಯಾಗಿಯೇ ಓಡಿ ದನು…’ ಎಂದು, ‘ಎಲೆಕ್ಟ್ರಿಕ್ ಬಲ್ಬನ್ನು ಕಂಡುಹಿಡಿದಾದ ಮೇಲೆ ಎಡಿಸನ್ ಈಗಿನ ಜಿ.ಇ ಕಂಪೆನಿಯನ್ನು ಸ್ಥಾಪಿಸಿದನು…’ ಎಂದು ಬರೆಯುತ್ತೇವೆ. ಆದರೆ ಸಿ.ವಿ.ರಾಮನ್ ವಿಷಯವಾದರೆ ‘ಅವರು ವಿಜ್ಞಾನದಷ್ಟೇ ಸಂಗೀತಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದರು…’
ಎನ್ನುತ್ತೇವೆ! ‘ಜಗದೀಶಚಂದ್ರ ಬೋಸ್ ಸಸ್ಯಗಳೊಂದಿಗೆ ಮಾತನಾಡುತ್ತಿದ್ದರು’ ಎಂದು ಬಹುವಚನದಿಂದ ಗೌರವಿಸುತ್ತೇವೆ.

ಬರಹಗಾರರ ವಿಷಯಕ್ಕೆ ಬಂದರೆ ನಮ್ಮವರೇ ಆದ ಕಾಳಿದಾಸ, ಭಾಸ, ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶ, ಮುದ್ದಣ ನವರೆಗೂ- ಶೇಕ್ಸ್‌ಪಿಯರ್ ವರ್ಡ್ಸ್‌ವರ್ತ್ ಮಿಲ್ಟನ್‌ನಂತೆಯೇ- ಹೋಲ್‌ಸೇಲಾಗಿ ಏಕವಚನವೇ ಗತಿ. ೧೯ನೆಯ ಶತಮಾನಕ್ಕಿಂತ ಈಚಿನವರಾದರೆ ಮಾತ್ರ ಬಹುವಚನ: ಅಡಿಗರು, ಕಾರಂತರು, ಗೋಕಾಕರು, ಗೋವಿಂದ ಪೈಗಳು, ಚನ್ನವೀರ ಕಣವಿಗಳು, ವೆಂಕಟೇಶ ಮೂರ್ತಿಗಳು ಎಂದು ಸಂಖ್ಯಾವಾಚಕ ಬಹುವಚನದಂತೆ ಭಾಸವಾಗುವುದೂ ಇದೆ. ಅಣ್ಣಾವ್ರನ್ನು ಹೊರತುಪಡಿಸಿ ಫಿಲಂಸ್ಟಾರ್‌ಗಳು, ಕ್ರಿಕೆಟಿಗರು ಏಕವಚನದ ಆಪ್ತರು. ಕೆಲವು ಪ್ರಾದೇಶಿಕ ವ್ಯತ್ಯಾಸಗಳೂ ಇವೆ.

ನಾವು ದಕ್ಷಿಣಕನ್ನಡದವರು ಬಸ್ ಡ್ರೈವರ್ ಕಂಡಕ್ಟರ್‌ರಿಗೂ ಬಹುವಚನ ಬಳಸುತ್ತೇವೆ: ‘ಮಂಗಳೂರು-ಮೈಸೂರು ಬಸ್ಸಲ್ಲಿ ಹೋದರೆ ಸುಳ್ಯದಲ್ಲಿ
ಅರ್ಧಗಂಟೆ ಊಟಕ್ಕೆ ನಿಲ್ಲಿಸ್ತಾರೆ’ ಎನ್ನುತ್ತೇವೆ. ಕರ್ನಾಟಕದ ಬೇರೆ ಭಾಗಗಳವರಾದರೆ ‘ಊಟಕ್ಕೆ ನಿಲ್ಲಿಸ್ತಾನೆ’ ಎನ್ನುತ್ತಾರೆ. ಚಿತ್ರನಟ-ನಟಿಯರಿಗೂ ಅಷ್ಟೇ. ‘ರಮೇಶ್ ಅರವಿಂದ್ ತುಂಬ ಚೆನ್ನಾಗಿ ಆಕ್ಟ್ ಮಾಡಿದ್ದಾರಲ್ವಾ’ ಎಂದು ನಾನೊಮ್ಮೆ ಹೇಳಿದ್ದಾಗ ‘ಫಿಲಂ ಸ್ಟಾರ್‌ಗಳಿಗೂ ನೀವು ಪ್ಲೂರಲ್ ಬಳಸ್ತೀರಾ!?’ ಎಂದು ಸ್ನೇಹಿತರೊಬ್ಬರು ಆಶ್ಚರ್ಯಪಟ್ಟಿದ್ದರು.

ಮನೆಯಲ್ಲಿ ಅಪ್ಪ-ಅಮ್ಮ ಅಜ್ಜ-ಅಜ್ಜಿ ಇತ್ಯಾದಿ ಹಿರಿಯರೊಂದಿಗೆ ಸಂಭಾಷಣೆಯಲ್ಲಿ ಏಕವಚನ/ಬಹುವಚನ ಪ್ರಯೋಗಗಳು ಜಾತಿ-ಮತ-ಭಾಷೆಗಳಲ್ಲಿ ವೈವಿಧ್ಯಮಯ ಕೆಲವೊಮ್ಮೆ ವಿಚಿತ್ರ ಆಗಿರುವುದೂ ಅಧ್ಯಯನಯೋಗ್ಯ ವಿಚಾರವೇ. ನನ್ನ ಮಾತೃಭಾಷೆ ಚಿತ್ಪಾವನಿ ಮರಾಠಿಯಲ್ಲಿ ಅಪ್ಪ-ಅಮ್ಮ, ಅಜ್ಜಿ- ತಾತ, ದೊಡ್ಡಪ್ಪ-ದೊಡ್ಡಮ್ಮ, ಸೋದರಮಾವ-ಅತ್ತೆ ಮುಂತಾಗಿ ಎಲ್ಲರಿಗೂ ಏಕವಚನ. ಆದರೆ ಸೊಸೆಯಾಗಿ ಬಂದವಳಿಗೆ ಬೇರೆ ನಿಯಮ. ಗಂಡ, ಅತ್ತೆ-ಮಾವರಿಗಂತೂ ಹೌದೇಹೌದು, ವಯಸ್ಸಿನಲ್ಲಿ ಚಿಕ್ಕವರಿದ್ದರೂ ನಾದಿನಿ, ಮೈದುನನಿಗೂ ಬಹುವಚನ ಅಪೇಕ್ಷಿತ. ಅದರಲ್ಲೂ ಮಜಾ ಅಂದ್ರೆ ನಾದಿನಿಗೆ ಬಹುವಚನ, ಆಕೆಯ ಗಂಡನಿಗೆ ಏಕವಚನ! ಆಫ್‌ಕೋರ್ಸ್ ಇದೆಲ್ಲ ಸ್ವಲ್ಪ ಹಳೆಯಕಾಲದ ವಿಚಾರ.

ಈಗೀಗ ಪ್ರೇಮವಿವಾಹಗಳಲ್ಲಿ, ಸಹಪಾಠಿಗಳು/ಸಹೋದ್ಯೋಗಿಗಳು ಮದುವೆಯಾದಲ್ಲಿ, ಸಂಬಂಧಗಳೊಳಗಿನ ಮದುವೆಗಳಲ್ಲಿ ಹೆಂಡತಿ ಗಂಡನನ್ನು
ಹೆಸರುಹಿಡಿದು ಹೋಗೋ ಬಾರೋ ಎನ್ನುವುದೇ ಕ್ರಮ. ಬಹುಶಃ ಅದೇ ಚಂದ. ಅಂದಹಾಗೆ ಹಿಂದೀಯಲ್ಲಿ ನಾನು ಗಮನಿಸಿದ, ತುಂಬ ಇಷ್ಟವಾದ ಒಂದು ಸಂಗತಿಯೆಂದರೆ ಪುಟ್ಟ ಮಕ್ಕಳನ್ನು ‘ಆಪ್’ ಎಂದು ಗೌರವಪೂರ್ವಕ ಸಂಬೋಧಿಸುವುದು.

ಮಕ್ಕಳ ಸ್ವಾಭಿಮಾನ/ಆತ್ಮವಿಶ್ವಾಸ ಹೆಚ್ಚಲಿ, ಮುಂದೆ ದೊಡ್ಡವರಾದಾಗ ಬೇರೆಯವರೊಂದಿಗೆ ಸಂಭಾಷಿಸುವಾಗ ಬಹುವಚನವನ್ನೇ ಬಳಸಲಿ ಎಂಬ ಕಾರಣಕ್ಕೂ ಇರಬಹುದು, ಒಟ್ಟಿನಲ್ಲಿ ಕೇಳಲು ಖುಶಿಯಾಗುವುದಂತೂ ಹೌದು. ಹಾಗೆಯೇ ತೆಲುಗಿನಲ್ಲಿ ವಚನ ವಾಡಿಕೆಯ ಕೆಲ ವಿಚಿತ್ರ ರೀತಿಗಳು ನನಗೆ ಹೈದರಾಬಾದ್ ವಾಸ್ತವ್ಯದಲ್ಲಿ ಪರಿಚಯವಾಗಿದ್ದುವು. ತೆಲುಗರು ಕುಡಿಯುವ ನೀರಿಗೂ ‘ಮಂಚಿನೀಳ್ಳು…’ ಎಂದು ಬಹುವಚನ ಬಳಸುವ ಧಾರಾಳಿಗಳು ಎಂದು ಅಂದುಕೊಂಡಿದ್ದೆ; ಆದರೆ ‘ಮೇಡಂ ವಚ್ಚಿಂದಿ… ಪಿ.ಸುಶೀಲಾ ಪಾಡಿಂದಿ… ಎಂ.ಎಸ್ ಸುಬ್ಬಲಕ್ಷ್ಮಿ ಪಾಡಿಂದಿ…’ ಇತ್ಯಾದಿಯಲ್ಲಿ ಹೆಂಗಸರಿಗಾದರೆ ಬಹುವಚನ ಬಿಡಿ, ಸ್ತ್ರೀಲಿಂಗರೂಪವೂ ಇಲ್ಲದೆ ನಪುಂಸಕಲಿಂಗ ರೂಪದ ಪದಪ್ರಯೋಗ ಕೇಳಿ ನನಗೆ ಸಖೇದಾಶ್ಚರ್ಯವಾಗಿತ್ತು. ಬರೆಯುತ್ತ ಹೋದರೆ ವಚನಸಾಹಿತ್ಯ ತುಂಬ ಇದೆ.

ಆದರೆ ಅಂಕಣಕ್ಕೆ ಪದಮಿತಿ ಇದೆಯಲ್ಲ? ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಏಕವಚನ ಬಳಸಿದರು ಎಂದು ಆರಂಭವಾದ ಈ ಹರಟೆಯ ಸಮಾರೋಪಕ್ಕೆ ತಕ್ಕುದಾದದ್ದು ಒಂದು ನೆನಪಾಗಿದೆ. ಕೆಲ ವರ್ಷಗಳ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ದಂತಚೋರ ವೀರಪ್ಪನ್‌ಗೆ ‘ಶ್ರೀಯುತ ವೀರಪ್ಪನ್ ಅವರು…’ ಎಂದು ಬಹುವಚನ ಉಪಯೋಗಿಸಿದ್ದರು. ಅದು ಇನ್ನೊಂದು ಎಕ್ಸ್‌ಟ್ರೀಮ್! ಅಲ್ಲ, ಇನ್ನೂ ಎಕ್ಸ್‌ಟ್ರೀಮಿಸ್ಟ್ ಬೇಕೇ? ಇದೇ ಸಿದ್ದರಾಮಯ್ಯ ಹಿಂದೊಮ್ಮೆ ಯಾಸಿನ್ ಭಟ್ಕಳ್ ಎಂಬ ಭಯೋತ್ಪಾದಕನಿಗೆ ಬಹುವಚನ ಬಳಸಿದ್ದರು. ಸಾಕಲ್ವಾ?