Sunday, 15th December 2024

ಸಂಕಷ್ಟದಲ್ಲಿ ಸಿಲುಕಿವೆ ಅಮೆರಿಕೆಯ ಪತ್ರಿಕೆಗಳು

ವಿಚಾರ ವೇದಿಕೆ

ಎ.ಎಸ್.ಬಾಲಸುಬ್ರಹ್ಮಣ್ಯ

ಮಾಧ್ಯಮ ಕ್ಷೇತ್ರದಲ್ಲಿ ಬಹು ಪ್ರಭಾವ ಹೊಂದಿರುವ ದೇಶ ಅಮೆರಿಕ. ಒಂದು ಕಾಲಕ್ಕೆ ಇದು ಸ್ವತಂತ್ರ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾಗಿತ್ತು. ಅಲ್ಲಿನ
ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಜಗತ್ತಿಗೆ ಮಾದರಿಯಾಗಿದ್ದವು. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ೨೪೮ ವರ್ಷಗಳ ಹಿಂದೆಯೇ ಸ್ವಾತಂತ್ರ್ಯ ಪಡೆದ ದೇಶ ಅಮೆರಿಕ. ಅಲ್ಲಿನ ಪತ್ರಿಕೋದ್ಯಮ ಸಹ ಉಜ್ವಲ ಇತಿಹಾಸ ಹೊಂದಿದೆ.

೧೭೦೪ರಲ್ಲಿ ಅಮೆರಿಕೆಯ ಮೊದಲ ಪತ್ರಿಕೆ ‘ದಿ ಬಾಸ್ಟನ್ ನ್ಯೂಸ್ ಲೆಟರ್’ ಪ್ರಕಟವಾಯಿತು. ಅಂದರೆ ಅಮೆರಿಕೆಯ ಪತ್ರಿಕೋದ್ಯಮಕ್ಕೆ ೩೨೦ ವರ್ಷಗಳ
ಭವ್ಯ ಪರಂಪರೆ ಇದೆ. ಪ್ರಜಾಸತ್ತೆಯ ಮೌಲ್ಯಗಳ ರಕ್ಷಣೆಗೆ ಅಲ್ಲಿನ ಪತ್ರಿಕೆಗಳು ಸದಾ ಜಾಗೃತವಾಗಿ ಕಾರ್ಯನಿರ್ವಹಿಸಿವೆ. ಜನಸಾಮಾನ್ಯರು ಕೊಳ್ಳುವು ದಕ್ಕೆ ನೆರವಾಗಲು, ಅಮೆರಿಕೆಯ ಪ್ರಕಾಶಕರು ದುಬಾರಿಯಾಗಿದ್ದ ಪತ್ರಿಕೆಗಳ ಬೆಲೆಯನ್ನು ಇಳಿಸಿ, ಪತ್ರಿಕೆ ಓದುವ ಹವ್ಯಾಸವನ್ನು ಜನಸಾಮಾನ್ಯರಲ್ಲಿ ಬೆಳೆಸಿದ್ದುಂಟು. ಇದನ್ನು ಪೆನ್ನಿ ಪತ್ರಿಕೆಗಳ ದಶಕ (೧೮೩೦) ಎಂದು ವರ್ಣಿಸಲಾಗುತ್ತದೆ.

ಪತ್ರಿಕೆ ಮುದ್ರಿಸಲು ಉಗಿಯಂತ್ರವನ್ನು ಬಳಸಿ, ಅತಿ ಕಡಿಮೆ ಅವಧಿಯಲ್ಲಿ ಸಾವಿರಾರು ಪ್ರತಿಗಳನ್ನು ಮುದ್ರಿಸಿ ಓದುಗರಿಗೆ ತಲುಪಿಸಿದ ದೇಶ ಅಮೆರಿಕ. ಈ ಪತ್ರಿಕಾ ಓದು ಕ್ರಾಂತಿಯ ೨ನೇ ಹಂತ ಪೀತ ಪತ್ರಿಕೋದ್ಯಮ (೧೮೯೦ರ ದಶಕ). ಅರೆಬರೆ ಸತ್ಯಾಂಶಗಳೊಡನೆ ಚೆಲ್ಲಾಟವಾಡಿ ಪತ್ರಿಕೆಗಳ ಪ್ರಸಾರ ಹೆಚ್ಚಿಸಲು ಪುಲಿಟ್ಜರ್ ಮತ್ತು ಹರ್ಸ್ಟ್ ಎಂಬ ಪತ್ರಿಕಾ ದಿಗ್ಗಜರು ನಡೆಸಿದ ಪ್ರಯತ್ನಗಳವು. ಭವ್ಯ ಪರಂಪರೆಯ ಅಮೆರಿಕೆಯ ಪತ್ರಿಕೋದ್ಯಮ ಇತ್ತೀಚಿನ ದಿನಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಆಶ್ಚರ್ಯಕರ. ಮಾಹಿತಿ ತಂತ್ರಜ್ಞಾನದಲ್ಲಿನ ಅಭೂತ ಪೂರ್ವ ಬೆಳವಣಿಗೆಗಳು ಪತ್ರಿಕೆಗಳಿಗೆ ಶಾಪವಾಗಿ ಪರಿಣಮಿಸಿವೆ ಎಂದರೆ ನಂಬುವಿರಾ? ಕಳೆದ ೨ ದಶಕಗಳಲ್ಲಿ ಮಾಹಿತಿ ತಂತ್ರಜ್ಞಾನ, ವಿಶೇಷವಾಗಿ ಅಂತರ್ಜಾಲ ತಂತ್ರಜ್ಞಾನವು ಸುದ್ದಿ ಮತ್ತು ಮನರಂಜನೆ ಮಾಧ್ಯಮಗಳ ಮೂಲ ಸ್ವರೂಪಗಳನ್ನೇ ಬದಲಿಸಿವೆ.

ಹಿರಿಯ ತಲೆಮಾರಿನವರಿಂದ ನಡೆಸಲ್ಪಡುತ್ತಿದ್ದ ಅನೇಕ ಸಮುದಾಯ ಪತ್ರಿಕೆಗಳು ನಿಲುಗಡೆಯಾಗುತ್ತಿವೆ. ದಿನಪತ್ರಿಕೆಗಳು ವಾರಪತ್ರಿಕೆಗಳಾಗಿ ಇಲ್ಲವೇ ಆನ್‌ಲೈನ್ ಪ್ರಕಟಣೆಗಳಾಗಿ ಮಾರ್ಪಾಟಾಗುತ್ತಿವೆ. ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿ ಹಲವಾರು ದೈನಿಕಗಳು ಪ್ರಕಟಗೊಂಡು ಸ್ಪರ್ಧೆಗೆ ನಿಲ್ಲುತ್ತಿದ್ದವು. ಈಗ ಪರಿಸ್ಥಿತಿ ಹಾಗಿಲ್ಲ. ಬಹಳ ಕಡೆ ಒಂದೇ ಪತ್ರಿಕೆ ಪ್ರಕಟವಾಗುತ್ತಿದೆ. ಬಹಳಷ್ಟು ಕಡೆ ವಾರದ ಮೂರು ಇಲ್ಲವೇ ಐದು ದಿನಗಳು ಮಾತ್ರ ದೈನಿಕ ಗಳು ಪ್ರಕಟವಾಗುತ್ತವೆ. ಉಳಿದ ದಿನಗಳಲ್ಲಿ ಓದುಗರು ಪತ್ರಿಕೆಯ ಜಾಲತಾಣಕ್ಕೆ ಭೇಟಿ ನೀಡಿ ಸುದ್ದಿ ಓದಬೇಕಾಗುತ್ತದೆ. ೨೦೦೫ರಿಂದ
೨೦೨೧ರವರೆಗೆ, ಸುಮಾರು ೨,೨೦೦ ಸ್ಥಳೀಯ ಪತ್ರಿಕೆಗಳು ಬಾಗಿಲು ಮುಚ್ಚಿವೆ. ೨೦೦೪ ಮತ್ತು ೨೦೨೩ರ ಅವಧಿಯಲ್ಲಿ ೨,೬೨೭ ನಿಯತಕಾಲಿಕೆಗಳು ಮುಚ್ಚಿವೆ ಇಲ್ಲವೇ ಇತರ ಪತ್ರಿಕೆಗಳೊಂದಿಗೆ ವಿಲೀನಗೊಂಡಿವೆ.

ಅಮೆರಿಕೆಯಲ್ಲಿ ಪ್ರಸ್ತುತ ಕೇವಲ ೬,೦೦೦ ಪತ್ರಿಕೆಗಳಿವೆ. ಇವುಗಳಲ್ಲಿ ೧,೨೦೦ ದಿನಪತ್ರಿಕೆಗಳು ಮತ್ತು ೪,೭೯೦ ವಾರಪತ್ರಿಕೆಗಳು ಸೇರಿವೆ! ಸಣ್ಣ ಊರುಗಳಿಂದ ಹೊರಬರುತ್ತಿದ್ದ ಬಹುತೇಕ ಪತ್ರಿಕೆಗಳು ನಿಂತುಹೋಗಿವೆ. ಮುದ್ರಿತ ಪತ್ರಿಕೆಗಳಿಲ್ಲದೆ ಸುದ್ದಿ ಮರುಭೂಮಿ ಸೃಷ್ಟಿಯಾಗಿದೆ. ಅಮೆರಿಕೆ ಯಲ್ಲಿರುವ ೩,೧೪೩ ಸ್ಥಳೀಯ ಆಡಳಿತ ಘಟಕಗಳ (ಕೌಂಟಿ) ಪೈಕಿ ಸುಮಾರು ೨೦೪ರಲ್ಲಿ ಸ್ಥಳೀಯ ಪ್ರಕಟಣೆಗಳೇ ಇಲ್ಲವಾಗಿವೆ. ಸುಮಾರು ೧,೫೬೨
ಕೌಂಟಿಗಳಲ್ಲಿ ಕೇವಲ ಒಂದೇ ವಾರಪತ್ರಿಕೆ ಪ್ರಕಟಗೊಳ್ಳುತ್ತಿದೆ. ಸ್ಥಳೀಯ ಸುದ್ದಿಗೆ ಓದುಗರು ಆನ್ ಲೈನ್ ಪತ್ರಿಕೆಗಳ ಮೊರೆಹೋಗಬೇಕಾಗಿದೆ.

ರಾಜ್ಯ ಇಲ್ಲವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಾಗ ಅಭ್ಯರ್ಥಿಗಳ ಪೂರ್ವಾಪರ ವಿವರಗಳೇ ಮತದಾರರಿಗೆ ಲಭ್ಯವಾಗುತ್ತಿಲ್ಲ. ಮುಕ್ತ ಚರ್ಚೆಗಳು
ಇಳಿಮುಖವಾಗುತ್ತಿವೆ. ಪತ್ರಿಕೆಗಳಿಗೆ ಪ್ರಮುಖ ಆದಾಯದ ಮೂಲ ಜಾಹೀರಾತು. ಡಿಜಿಟಲ್ ಮಾಧ್ಯಮಗಳ ಆಗಮನದ ನಂತರ ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತು ಡಿಜಿಟಲ್ ಮಾಧ್ಯಮಗಳತ್ತ ಹರಿಯುತ್ತಿದೆ. ವಾಹನ, ಭೂಮಿ ಮಾರಾಟ, ಬಾಡಿಗೆ ಮನೆ ಲಭ್ಯತೆ, ವೈವಾಹಿಕ ಮಾಹಿತಿ, ಪ್ರವಾಸ- ಹೀಗೆ ಬೇರೆಬೇರೆ ಕ್ಷೇತ್ರಗಳ ಜಾಹೀರಾತುಗಳಿಗೆ ಪ್ರತ್ಯೇಕ ಜಾಲತಾಣಗಳೇ ಸೃಷ್ಟಿಯಾಗಿವೆ.

ಪತ್ರಿಕೆಗಳಿಗೆ ಬರುತ್ತಿದ್ದ ಆದಾಯವೆಲ್ಲ ಅತ್ತ ಹರಿದಿದೆ.  ೪೭ ಸುದ್ದಿ ನೀಡುವ ಆನ್‌ಲೈನ್ ಮಾಧ್ಯಮಗಳಿಂದಾಗಿ, ಪತ್ರಿಕೆಗಳ ಪ್ರಾಮುಖ್ಯ ಕುಗ್ಗಿದೆ. ಪತ್ರಿಕೆಗಳ
ಸುಮಾರು ಶೇ.೭೦ರಷ್ಟು ಆದಾಯ ಬರುವುದು ಜಾಹೀರಾತಿನ ಮೂಲಕವೇ. ೨೦೦೫ರಲ್ಲಿ ಅಮೆರಿಕದ ಪತ್ರಿಕೆಗಳು ಜಾಹೀರಾತಿನ ಮೂಲಕ ೪೯ ಬಿಲಿಯನ್ ಡಾಲರ್ ಆದಾಯ ಗಳಿಸಿದ್ದರೆ, ೨೦೨೨ರಲ್ಲಿ ಅದು ಕೇವಲ ಹತ್ತು ಬಿಲಿಯನ್‌ಗೆ ಕುಸಿದಿದೆ. ವಿಶೇಷವಾಗಿ ಯುವಜನತೆ ಸಾಮಾಜಿಕ ಮಾಧ್ಯಮ ಗಳತ್ತ ಹೊರಳಿದ್ದಾರೆ. ಇದರಿಂದಾಗಿ ಪತ್ರಿಕೆಗಳ ಪ್ರಸಾರ ಕುಸಿಯುತ್ತಿದೆ, ಪತ್ರಕರ್ತರ ಸಂಖ್ಯೆ ಇಳಿಮುಖವಾಗತೊಡಗಿದೆ.

ಅಪಾರ ಹಣ ಗಳಿಸುತ್ತಿರುವ ಆನ್‌ಲೈನ್ ವ್ಯವಹಾರ ಕಂಪನಿಗಳು ಪತ್ರಿಕಾ ಕ್ಷೇತ್ರದತ್ತ ಧಾವಿಸಿದವು. ‘ವಾಟರ್ ಗೇಟ್’ ಹಗರಣವನ್ನು ಬಯಲುಮಾಡಿ ಅಧ್ಯಕ್ಸ ನಿಕ್ಸನ್ ಅವರ ರಾಜೀನಾಮೆಗೆ ಕಾರಣವಾದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯನ್ನು ೨೦೧೩ರಲ್ಲಿ ಅಮೆಜಾನ್ ಕಂಪನಿಯ ಮಾಲೀಕ ಜೆಫ್ ಬೆಝೋಸ್ ೨೫೦ ಮಿಲಿಯನ್  ಡಾಲರ್‌ಗೆ ಖರೀದಿಸಿದರು. ಇಂದು ಆ ಪತ್ರಿಕೆ ನಡೆಸಲು ಅವರು ಹರಸಾಹಸ ಪಡುತ್ತಿದ್ದಾರೆ. ೨೦೨೩ರ ಕೊನೆಯಲ್ಲಿ ಪತ್ರಿಕೆ ೧೦೦ ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿತು. ೨೫೦೦ ನೌಕರರನ್ನು ಹೊಂದಿರುವ ಕಂಪನಿ ೨೪೦ ಜನರನ್ನು ವಜಾಗೊಳಿಸಿತು.

ಇದರಲ್ಲಿ ಅನೇಕ ಹೆಸರಾಂತ ಪತ್ರಕರ್ತರು ಸಹ ಸೇರಿದ್ದರು. ಜೈವಿಕ ತಂತ್ರಜ್ಞಾನ ಆಧರಿತ ನವೋದ್ಯಮದ ಕೋಟ್ಯಧಿಪತಿ ಪ್ಯಾಟ್ರಿಕ್ ಸೂನ್ ಶಿಯೊಂಗ್ ೨೦೧೮ರಲ್ಲಿ ‘ಲಾಸ್ ಏಂಜಲೀಸ್ ಟೈಮ್ಸ್’ ಪತ್ರಿಕೆಯನ್ನು ೫೦೦ ಮಿಲಿಯನ್ ಡಾಲರ್‌ಗೆ ಖರೀದಿಸಿದರು. ಕೆಲವೇ ವರ್ಷಗಳಲ್ಲಿ ಅವರಿಗೆ ತಿಳಿಯಿತು ಈ ಉದ್ಯಮದ ಸ್ವರೂಪವೇ ಬೇರೆ ಎಂದು. ಇನ್ನೋರ್ವ ಸಾ-ವೇರ್ ಶ್ರೀಮಂತ ಮಾರ್ಕ್ ಬೆನಿಯೋಫ್ ‘ಟೈಮ್’ ನಿಯತಕಾಲಿಕೆಯನ್ನು ೧೯೦ ಮಿಲಿ
ಯನ್ ಡಾಲರ್‌ಗೆ ೨೦೧೮ರಲ್ಲಿ ವಶಪಡಿಸಿಕೊಂಡರು.

ಈ ಶ್ರೀಮಂತ ಉದ್ಯಮಿಗಳು ಪತ್ರಿಕೆಗಳಲ್ಲಿ ಬಂಡವಾಳ ಹಾಕಿದಾಗ ಪತ್ರಕರ್ತರು ಆಶಾಭಾವನೆಗಳನ್ನು ಹೊಂದಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅವು
ಹುಸಿಯಾಗತೊಡಗಿದವು. ಈ ಎಲ್ಲ ಪತ್ರಿಕಾ ಮಾಲೀಕರು ಅಪಾರ ಪ್ರಮಾಣದಲ್ಲಿ ನಷ್ಟಕ್ಕೆ ಸಿಲುಕಿದ್ದಾರೆ. ಲಾಸ್ ಏಂಜಲೀಸ್ ಟೈಮ್ಸ್ ಪತ್ರಿಕೆಯಲ್ಲಿ, ಮಾಲೀಕರು ಮತ್ತು ಸಂಪಾದಕರ ನಡುವೆ ಭಿನ್ನಮತ ಉಂಟಾಗಿ, ಸಂಪಾದಕರು ಹೊರನಡೆದರು. ಪತ್ರಿಕೆಯು ಕಳೆದ ವರ್ಷ ಅಂದಾಜು ೩೦ರಿಂದ ೪೦ ಮಿಲಿಯನ್ ಡಾಲರ್ ನಷ್ಟ ಅನುಭವಿಸಿತು. ಕಳೆದ ವರ್ಷ ೮೦ ಪತ್ರಕರ್ತರನ್ನು ಮನೆಗೆ ಕಳುಹಿಸಿದ್ದ ಪತ್ರಿಕೆ, ಇತ್ತೀಚೆಗಷ್ಟೇ ಸುದ್ದಿ ವಿಭಾಗದ ೧೧೫
ಪತ್ರಕರ್ತರನ್ನು ವಜಾಗೊಳಿಸಿ ಶಾಕ್ ನೀಡಿದೆ. ಪತ್ರಕರ್ತರ ಸಂಘಟನೆಯವರು ಒಂದು ದಿನದ ಮುಷ್ಕರ ನಡೆಸಿ ಪ್ರತಿಭಟಿಸಿದರು, ಹಿರಿಯ ಪತ್ರಕರ್ತ ರನ್ನು ಹೊರಕಳುಹಿಸುವ ಪ್ರಯತ್ನವನ್ನು ಖಂಡಿಸಿದರು. ಇದರಿಂದ ಯಾವ ಪ್ರಯೋಜನವೂ ಆಗಿಲ್ಲ. ಪತ್ರಕರ್ತರೊಡನೆ ಚರ್ಚಿಸದೆ ಏಕಾಏಕಿ ವಜಾಗೊಳಿಸಿರುವುದು ಅಮಾನವೀಯ ಎಂದು ಪತ್ರಕರ್ತರು ದೂರಿದ್ದಾರೆ.

ವಜಾಗೊಂಡ ಪತ್ರಕರ್ತರ ಟ್ವೀಟ್‌ಗಳು ಎಂಥವರ ಮನವನ್ನೂ ಮನಕಲಕುವಂತಿವೆ. ಪತ್ರಿಕೆಯೊಡನೆಯ ಭಾವನಾತ್ಮಕ ಸಂಬಂಧವನ್ನು ಅವು ಪ್ರತಿಬಿಂಬಿಸುತ್ತಿದ್ದವು. ಇದೇ ಅವಽಯಲ್ಲಿ ೨೦೨೩ರಲ್ಲಿ ೨೦ ಮಿಲಿಯನ್ ಡಾಲರ್ ನಷ್ಟ ಅನುಭವಿಸಿದ ‘ಟೈಮ್’ ನಿಯತಕಾಲಿಕೆಯು ೧೩ ಪತ್ರಕರ್ತ ರನ್ನು ವಜಾಗೊಳಿಸಿತು. ಇತರೆ ಪ್ರಮುಖ ಪ್ರಕಟಣೆಗಳಾದ ‘ಪಿಚ್ -ರ್ಕ್’ ಮತ್ತು ‘ಸ್ಪೋರ್ಟ್ಸ್ ಇಲಸ್ಟ್ರೇಟೆಡ್’ ಸಹ ಸಿಬ್ಬಂದಿ ಕಡಿತ ಮಾಡಿವೆ. ೭೦ ವರ್ಷಗಳ
ಇತಿಹಾಸವಿರುವ ಸ್ಪೋರ್ಟ್ಸ್ ಇಲಸ್ಟ್ರೇಟೆಡ್‌ನ ಮಾಲೀಕತ್ವ ಹಲವಾರು ಸಲ ಬದಲಾಗಿದೆ. ಈಗಿನ ಮಾಲೀಕರು ೨೦೧೯ರಲ್ಲಿ ಪತ್ರಿಕೆಯನ್ನು ಕೊಂಡಾಗ ಶೇ.೩೦ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ್ದರು.

ಈ ನಿಯತಕಾಲಿಕೆಯು ತನ್ನ ಉದ್ಯೋಗಿಗಳ ಮೂರನೇ ಒಂದು ಭಾಗದಷ್ಟು (ಸುಮಾರು ೧೦೦) ನೌಕರರನ್ನು ಪುನಃ ವಜಾಗೊಳಿಸಿತು. ವೋಗ್, ವ್ಯಾನಿಟಿ ಫಾರ್ ಮುಂತಾದ ಹೆಸ ರಾಂತ ನಿಯತಕಾಲಿಕೆಗಳನ್ನು ಪ್ರಕಟಿಸುವ ಸಂಸ್ಥೆ ಸುಮಾರು ೨೭೦ ನೌಕರರನ್ನು ವಜಾಮಾಡಲು ತೀರ್ಮಾನಿಸಿದ್ದು ಕಾರ್ಮಿಕರ ಸಂಘದೊಡನೆ ಮಾತುಕತೆ ನಡೆಸಿದೆ. ವಿಶ್ವವಿಖ್ಯಾತ ‘ನ್ಯಾಷನಲ್ ಜಿಯೋಗ್ರಾಫಿಕ್’ ನಿಯತಕಾಲಿಕೆ ೨೦೨೩ರ ಅಂತ್ಯದಲ್ಲಿ ತನ್ನ ಮುದ್ರಿತ ಪ್ರಕಟಣೆಯನ್ನು ನಿಲ್ಲಿಸಿ, ಆನ್‌ಲೈನ್ ಪ್ರಕಟಣೆಯಾಗಿ ಅದನ್ನು ಪರಿವರ್ತಿಸಿದೆ.

೨೦೦೫ರಿಂದ ಸುಮಾರು ಮೂರನೇ ಒಂದು ಭಾಗದಷ್ಟು ಪತ್ರಿಕೆಗಳನ್ನು ಮತ್ತು ಮೂರನೇ ಎರಡರಷ್ಟು ಪತ್ರಕರ್ತರನ್ನು ಅಮೆರಿಕ ಕಳೆದುಕೊಂಡಿದೆ. ಸುಮಾರು ೪೩,೦೦೦ ಪತ್ರಕರ್ತರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ದೊಡ್ಡ ಮೆಟ್ರೋ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಲ್ಲಿ ಉದ್ಯೋಗಿಗಳಾಗಿದ್ದರು. ಪತ್ರಕರ್ತರ ಉದ್ಯೋಗ ಕಡಿತಕ್ಕೆ ಹಲವಾರು ಕಾರಣ ಗಳನ್ನು ನೀಡಲಾಗುತ್ತಿದೆ; ಆರ್ಥಿಕ ಹಿಂಜರಿತ, ಹಣ
ದುಬ್ಬರ, ಕುಸಿಯುತ್ತಿರುವ ಜಾಹೀರಾತು ಆದಾಯ, ಸುದ್ದಿ ಗ್ರಾಹಕರ ನಡವಳಿಕೆಯಲ್ಲಿನ ಬದಲಾವಣೆಗಳು, ಕುಂಠಿತಗೊಳ್ಳುತ್ತಿರುವ ಚಂದಾದಾರರ ಸಂಖ್ಯೆ, ಕಾರ್ಪೊರೇಟ್ ಕಾರ್ಯತಂತ್ರದಲ್ಲಿನ ಬದಲಾವಣೆಗಳು, ಕೋವಿಡ್ ನಂತರದ ಬೆಳವಣಿಗೆಗಳು, ಕೃತಕ ಬುದ್ಧಿಮತ್ತೆಯ ಆಗಮನ ಮತ್ತು ಹೂಡಿಕೆದಾರರನ್ನು ಸಮಾಧಾನಪಡಿಸುವ ತಂತ್ರಗಳು ಇವುಗಳಲ್ಲಿ ಸೇರಿವೆ.

ಬಹುತೇಕ ಪ್ರಕಟಣೆಗಳು ಬಾಗಿಲು ಮುಚ್ಚುತ್ತಿದ್ದರೆ, ಕೆಲವೇ ಪ್ರಕಟಣೆಗಳು ಡಿಜಿಟಲ್ ಚಂದಾದಾರರನ್ನು ಗಳಿಸಿ ಮುನ್ನುಗ್ಗುತ್ತಿವೆ. ಅವುಗಳಲ್ಲಿ ನ್ಯೂಯಾರ್ಕ್ ಟೈಮ್ಸ್, ದಿ ಬಾಸ್ಟನ್ ಗ್ಲೋಬ್, ದಿ ಅಟ್ಲಾಂಟಿಕ್ ಪತ್ರಿಕೆಗಳನ್ನು ಹೆಸರಿಸಬಹುದು. ೨೦೨೨ರಲ್ಲಿ ೨.೩೧ ಬಿಲಿಯನ್ ಆದಾಯ (೧೭,೩೨೫ ಕೋಟಿ ರು.) ಹೊಂದಿದ್ದ ನ್ಯೂಯಾರ್ಕ್ ಟೈಮ್ಸ್, ೨೦೨೩ರ ಹೊತ್ತಿಗೆ ಒಂದು ಕೋಟಿ ಚಂದಾದಾರರನ್ನು ಹೊಂದಿದ ವಿಶ್ವದ ಮೊದಲ ದೈನಿಕವಾಗಿದೆ. ಇವರಲ್ಲಿ ೯೪ ಲಕ್ಷ ಮಂದಿ ಡಿಜಿಟಲ್ ಚಂದಾದಾರರಾದರೆ, ಉಳಿದವರು ಮುದ್ರಿತ ಪತ್ರಿಕೆ ಯನ್ನು ಕೊಳ್ಳುವವರು. ಅಮೆರಿಕೆಯ ಹೊರಗಡೆ, ಅಂದರೆ ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಸುಮಾರು ಹತ್ತು ಲಕ್ಷ ಡಿಜಿಟಲ್ ಚಂದಾದಾರರನ್ನು ಪತ್ರಿಕೆ ಹೊಂದಿದೆ.

(ಲೇಖಕರು ವಿಶ್ರಾಂತ ಪತ್ರಿಕೋದ್ಯಮ
ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)