ಅಭಿಮತ
ಶಂಕರನಾರಾಯಣ ಭಟ್
ನಮ್ಮ ದೇಶವು ನಿಜಾರ್ಥದಲ್ಲಿ ‘ಭಾರತ’ ಎಂದು ಗುರುತಿಸಿಕೊಳ್ಳಬೇಕಾದರೆ, ನಮ್ಮಲ್ಲಿ ಕೆಲ ಕಠಿಣ ಕಾನೂನುಗಳು ಜಾರಿಗೊಳ್ಳಬೇಕಾದ ಅವಶ್ಯಕತೆ ಇದೆ. ಇವು ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಅಸ್ತಿತ್ವಕ್ಕೆ ಬರಲೇಬೇಕು. ಮೊದಲನೆಯದು ಜನಸಂಖ್ಯಾ ನಿಯಂತ್ರಣ, ಎರಡನೆಯದು ನಮ್ಮ ದೇಶದೊಳಕ್ಕೆ ಆಗುತ್ತಿರುವ ಅತಿಕ್ರಮ ನುಸುಳುವಿಕೆ ಮತ್ತು ಮತಾಂತರ ಚಟುವಟಿಕೆಗಳು.
ದೇಶದ ಜನಸಂಖ್ಯಾ ಸ್ಫೋಟಕ್ಕೆ ಕಾರಣ, ನಮ್ಮಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಶಕ್ತ ಕಾನೂನೇ ಇಲ್ಲದಿರುವುದು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರಿಗೆ ಯಾವುದೇ ಸರಕಾರಿ ಸೌಲಭ್ಯ ಸಿಗುವುದಿಲ್ಲ ಎಂಬ ನಿರ್ಬಂಧ ಹೇರುವ ಕಾನೂನು ನಮ್ಮಲ್ಲಿ ಜಾರಿಯಾಗಬೇಕಿದೆ. ಇಂದು ಕೆಲ ಸಮುದಾಯ ದಲ್ಲಿ ಒಂದಕ್ಕಿಂತ ಹೆಚ್ಚು ವಿವಾಹಗಳು ನಡೆಯುತ್ತಿರುವುದು, ಅದರಿಂದಾಗಿ ಡಜನ್‌ಗಟ್ಟಲೆ ಮಕ್ಕಳನ್ನು ಅವರು ಪಡೆಯುತ್ತಿರುವುದನ್ನು ನಾವು ಕಾಣು ತ್ತಿದ್ದೇವೆ.
ಇವರೆಲ್ಲರ ಪೋಷಣೆಯಾಗಬೇಕಿರುವುದು ಪ್ರಾಮಾಣಿಕ ತೆರಿಗೆದಾರನ ಹಣದಿಂದಲೇ. ಇಷ್ಟೊಂದು ಮಕ್ಕಳನ್ನು ಪಡೆಯುವವರು ದೇಶದ ಆರ್ಥಿಕತೆಗೆ
ಹೇಳಿಕೊಳ್ಳುವಂಥ ಕೊಡುಗೆಯನ್ನೇನೂ ನೀಡುವುದಿಲ್ಲ; ಆದರೂ ಎಲ್ಲ ಅನುಕೂಲತೆ, ಭಾರತೀಯ ನಾಗರಿಕ ಎಂದು ಕರೆಸಿಕೊಂಡು ಮೆರೆಯುವ ಸೌಲಭ್ಯ ಅವರಿಗೆ ದೊರೆಯುತ್ತಿದೆ. ನಮ್ಮ ಸುತ್ತಮುತ್ತಲ ಗಡಿಭಾಗಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿ, ಅಲ್ಲೆಲ್ಲ ಭಾರತದ ಕುರುಹು ಕ್ರಮೇಣ ನಶಿಸು ತ್ತಿದೆ.
ಆದರೂ ಅವರೆಲ್ಲ ಭಾರತೀಯರೆಂದು ಕರೆಸಿಕೊಳ್ಳುತ್ತ ಎಲ್ಲ ಸೌಲಭ್ಯಗಳನ್ನೂ ಅನುಭವಿಸುತ್ತಿದ್ದಾರೆ. ಈ ಪರಿಪಾಠಕ್ಕೆ ಕಡಿವಾಣ ಹಾಕದಿದ್ದಲ್ಲಿ, ಹಿಂದೂ ರಾಷ್ಟ್ರ ಎನಿಸಿಕೊಂಡ ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುವಂಥ ಪರಿಸ್ಥಿತಿ ಎದುರಾಗುತ್ತದೆ. ಇನ್ನು, ಭಾರತ ಎಂದರೆ ಸಂತ್ರಸ್ತರ ಬೀಡು ಎನ್ನುವಂತಾಗಿದೆ. ಜಗತ್ತಿನ ಯಾವುದೇ ದೇಶದವರು ನಮ್ಮ ದೇಶಕ್ಕೆ ಏನೂ ಕಷ್ಟವಿಲ್ಲದೆ ನುಸುಳಬಹುದು ಮತ್ತು ಇಲ್ಲೇ ವಾಸ್ತವ್ಯ ಹೊಂದಿ ಭಾರತೀಯ ಎನಿಸಿಕೊಳ್ಳಬಹುದು ಎಂಬಷ್ಟರ ಮಟ್ಟಿಗೆ ನಮ್ಮ ಕಾನೂನುಗಳು ಸಡಿಲವಾಗಿವೆ.
ಹಾಗೆ ಬಂದವರಲ್ಲಿ ಬಹುತೇಕರು ನಮ್ಮ ದೇಶಕ್ಕೆ ಹೊರೆಯಾಗಿಯೇ ಇರುತ್ತಾರೆ. ಇಂಥವರ ಪ್ರವೇಶವನ್ನು ನಿರ್ಬಂಧಿಸಲು ಕಠಿಣ ಕಾನೂನನ್ನು ರೂಪಿಸಲೇಬೇಕು. ಮತಾಂತರವು ಇಂಥದೇ ಮತ್ತೊಂದು ಸಮಸ್ಯೆ. ಏನೇನೋ ಆಸೆ-ಆಮಿಷಗಳನ್ನು ಒಡ್ಡಿ ನಮ್ಮವರನ್ನು ಮತಾಂತರಗೊಳಿಸುವ ಹುನ್ನಾರವು, ಭಾರತೀಯರಿಗೇ ತಿಳಿಯದಿರುವಷ್ಟು ಗುಪ್ತವಾಗಿ ನಡೆಯುತ್ತಲೇ ಇರುತ್ತದೆ. ಹಾಗಂತ, ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವುದು ನಮ್ಮ ಸರಕಾರಕ್ಕೆ ಕಷ್ಟದ ಕೆಲಸವೇನಲ್ಲ; ಆದರೂ ಅದು ಅಂದುಕೊಂಡಷ್ಟು ವೇಗವಾಗಿ ಆಗುತ್ತಿಲ್ಲ. ಸಡಿಲ ಕಾನೂನೇ ಇದಕ್ಕೆ ಕಾರಣ.
ಕೇವಲ ಮಾನವೀಯತೆಯ ದೃಷ್ಟಿಯಿಟ್ಟುಕೊಂಡು ಕೂತರೆ, ‘ವಸುಧೈವ ಕುಟುಂಬಕಂ’ ಮಂತ್ರಜಪದಲ್ಲೇ ವ್ಯಸ್ತರಾಗಿದ್ದರೆ, ನಮ್ಮನ್ನೇ ಆಳಲು ಹೊಂಚು ಹಾಕುತ್ತಿರುವವರ ಪ್ರಾಬಲ್ಯದಲ್ಲಿ ನಾವು ಕಳೆದುಹೋಗಬಹುದು. ಒಂದಂತೂ ಸ್ಪಷ್ಟ. ನಾವು ಅಷ್ಟೊಂದು ಕಠೋರವಾಗಲು ಭಾರತೀಯ ಸಂಸ್ಕೃತಿಯು ನಮ್ಮನ್ನು ಬಿಡುತ್ತಿಲ್ಲ. ಆದರೆ, ‘ಮೆತ್ತಗಿದ್ದಲ್ಲೇ ಜನ ಅಗೆಯುವುದು’ ಎಂಬುದನ್ನೂ ನಾವು ಅರಿತಿರಲೇಬೇಕು. ನಿಷ್ಠುರ ಕ್ರಮ ಕೈಗೊಳ್ಳುವು ದಕ್ಕೆ ನಾವು ಹಿಂಜರಿಯಬಾರದು. ನಮ್ಮ ಸೌಜನ್ಯವನ್ನೇ ನಮ್ಮ ದೌರ್ಬಲ್ಯ ಅಂತ ಪರಿಗಣಿಸುವವರೂ ಇದ್ದು ಅದನ್ನು ದುರುಪಯೋಗ ಪಡಿಸಿಕೊಳ್ಳು ತ್ತಿದ್ದಾರೆ. ನಾವೇನೋ ಮಾನವೀಯತೆ, ಭ್ರಾತೃತ್ವ, ವಿಶಾಲ ದೃಷ್ಟಿಕೋನ ಇತ್ಯಾದಿ ಮಂತ್ರಗಳನ್ನು ಪಠಿಸುತ್ತೇವೆ; ಆದರೆ ಅವೇ ನಮಗೆ ಮುಳುವಾಗುತ್ತಿರು ವುದನ್ನು ಗಮನಿಸಿಯೂ ಸುಮ್ಮನಿರಲು ಸಾಧ್ಯವೇ? ನಮ್ಮ ಈ ಮೌನವೇ ಮುಂದೊಂದು ದಿನ ನಮಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಗಳೇ ಹೆಚ್ಚಿವೆ.
ಹೀಗಾಗಿ ನಿಷ್ಠುರ ಕಾನೂನುಗಳನ್ನು ಜಾರಿಗೆ ತರುವ ವಿಷಯದಲ್ಲಿ ಈಗಿಂದಲೇ ಗಂಭೀರ ಚಿಂತನೆ ಮಾಡುವ ಅವಶ್ಯಕತೆಯಿದೆ. ಈಗಾಗಲೇ ಭಾರತದ ನಕ್ಷೆಯನ್ನೇ ಬದಲಿಸುವ ಮಾತುಗಳೂ ಕೆಲ ಸಮುದಾಯದವರಿಂದ ಕೇಳಿಬರುತ್ತಿವೆ. ನಮ್ಮೊಳಗಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೇವಲ ಅಧಿಕಾರ ಮತ್ತು ರಾಜಕೀಯ ಲಾಭಕ್ಕಾಗಿ ಭಾರತದ ಅಸ್ಮಿತೆಗೇ ಸಂಚಕಾರ ತರುತ್ತಿರುವುದು ಇದಕ್ಕೆ ಕಾರಣ. ನಿರ್ದಿಷ್ಟ ಸಮುದಾಯದವರಿಂದ ಮತಗಳನ್ನು ಗಿಟ್ಟಿಸಿಕೊಳ್ಳಬೇಕು ಎಂಬ ಒಂದೇ ಕಾರಣಕ್ಕಾಗಿ ಇಂಥವರು ಓಲೈಕೆ ರಾಜಕೀಯ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ.
ತಮ್ಮ ಈ ತಪ್ಪಿಗೆ ಮುಂದೊಂದು ದಿನ ಶಿಕ್ಷೆ ಅನುಭವಿಸಬೇಕಾದ ಸಮಯವೂ ಬಂದೇ ಬರುತ್ತದೆ ಎಂಬುದನ್ನು ಇವರು ಅರ್ಥಮಾಡಿಕೊಳ್ಳದೆ, ರಾಜಕೀಯ ತೆವಲು, ದ್ವೇಷಸಾಧನೆ ಮತ್ತು ವೈಯಕ್ತಿಕ ಹಿತಾಸಕ್ತಿಗಳ ನೆರವೇರಿಕೆಯ ಕಡೆಗೇ ಹೆಚ್ಚು ಗಮನ ಕೊಡುತ್ತಿರುವಂತೆ ತೋರುತ್ತಿದೆ. ಅದೇನೇ ಇರಲಿ, ಸದ್ಯದ ಪರಿಸ್ಥಿತಿಯಿಂದ ಪಾರಾಗಿ ನಾವು ನಾವಾಗಿ ಉಳಿದು ಬಾಳಬೇಕೆಂದರೆ, ಕಠಿಣ ಕಾನೂನುಗಳು ಜಾರಿಯಾಗಬೇಕು. ನಮ್ಮೀ ಭಾರತವನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಯವರಿಗೂ ಒಂದು ಸುಭಿಕ್ಷ ದೇಶವನ್ನು ಉಳಿಸಿ ಹೋಗುವಂತಾಗಲು ಈ ನಿಷ್ಠುರ ಕ್ರಮ ಅತ್ಯಗತ್ಯ.
(ಲೇಖಕರು ಹವ್ಯಾಸಿ ಬರಹಗಾರರು)