Thursday, 12th December 2024

ಒಡಿಶಾ ಪ್ರವೇಶಿಸಿದ ಭಾರತ ಜೋಡೊ ನ್ಯಾಯ ಯಾತ್ರೆ

ರೂರ್ಕೆಲಾ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಮಂಗಳವಾರ ಒಡಿಶಾ ಪ್ರವೇಶಿಸಲಿದೆ.

ಯಾತ್ರೆಯು ಜಾರ್ಖಂಡ್‌ನಿಂದ ರಾಜ್ಯವನ್ನು ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಸುಂದರ್‌ಗಢ್ ಜಿಲ್ಲೆಯ ಸಣ್ಣ ಕೈಗಾರಿಕಾ ಪಟ್ಟಣವಾದ ಬಿರಾಮಿತ್ರಪುರವನ್ನು ಬ್ಯಾನರ್‌ಗಳು ಹಾಗೂ ಕಟೌಟ್‌ಗಳಿಂದ ಅಲಂಕರಿಸಲಾಗಿದೆ.

ಬಿರಾಮಿತ್ರಪುರದಿಂದ ಸುಮಾರು 35 ಕಿಮೀ ದೂರದಲ್ಲಿರುವ ರೂರ್ಕೆಲಾ ಸ್ಟೀಲ್ ಸಿಟಿಯಲ್ಲಿ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಜಮಾಯಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಮೊಮ್ಮಗ ರಾಹುಲ್ ಗಾಂಧಿಯನ್ನು ನೋಡಲು ಜನರು ಉತ್ಸಾಹದಿಂದ ಕಾದಿದ್ದಾರೆ ಎಂದು ಪಕ್ಷದ ಸುಂದರ್‌ ಗಢ ಜಿಲ್ಲಾಧ್ಯಕ್ಷೆ ರಶ್ಮಿ ಪಾಧಿ ಹೇಳಿದ್ದಾರೆ.

ಯಾತ್ರೆ ಮಧ್ಯಾಹ್ನ ಬೀರಾಮಿತ್ರಪುರವನ್ನು ತಲುಪುವ ನಿರೀಕ್ಷೆಯಿದೆ. ಬಿಜಾ ಬಹಲ್ ಪ್ರದೇಶದಲ್ಲಿ ಸುಮಾರು 10 ಕಿ.ಮೀ ಸಾಗಲಿದೆ. ನಾಳೆ ರಾಹುಲ್‌ ಗಾಂಧಿ ಅವರು ತಮ್ಮ ಯಾತ್ರೆಯನ್ನು ಪುನರಾರಂಭಿಸಲಿದ್ದಾರೆ. ಉದಿತ್‌ನಗರದಿಂದ ರೂರ್ಕೆಲಾ ನಗರದ ಪಂಪೋಶ್ ಚಕ್‌ವರೆಗೆ 3.4 ಕಿ.ಮೀ ಪಾದಯಾತ್ರೆಯನ್ನು ಕೈಗೊಳ್ಳಲಿದ್ದಾರೆ.

ಬಳಿಕ ರಾಣಿಬಂದ್‌ನಲ್ಲಿರುವ ಬಿಸ್ರಾ ಮುಂಡಾ ಮೈದಾನದಲ್ಲಿ ರಾಹುಲ್‌ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಫೆ. 8 ರಂದು ಅವರು (ರಾಹುಲ್‌ ಗಾಂಧಿ) ಜಾರ್ಸುಗುಡಾದ ಹಳೆಯ ಬಸ್ ನಿಲ್ದಾಣದಿಂದ ತಮ್ಮ ಯಾತ್ರೆಯನ್ನು ಆರಂಭಿಸಲಿದ್ದಾರೆ. ಮಧ್ಯಾಹ್ನದ ಊಟದ ಬಳಿಕ ಅವರು ಜಾರ್ಸುಗುಡಾದ ಕನಕ್ಟೋರಾದಿಂದ ತಮ್ಮ ಯಾತ್ರೆಯನ್ನು ಆರಂಭಿಸಿ ಬಳಿಕ ಛತ್ತೀಸಗಢವನ್ನು ಪ್ರವೇಶಿಸಲಿದ್ದಾರೆ.

ಯಾತ್ರೆಯು ಒಡಿಶಾದ ಸುಂದರ್‌ಗಢ್ ಮತ್ತು ಜಾರ್ಸುಗುಡದ ಎರಡು ಪಶ್ಚಿಮ ಜಿಲ್ಲೆಗಳಲ್ಲಿ ಸುಮಾರು 200 ಕಿ.ಮೀ ಸಂಚರಿಸಲಿದೆ.

ಜನವರಿ 14ರಂದು ಮಣಿಪುರದಲ್ಲಿ ಆರಂಭವಾದ ನ್ಯಾಯ ಯಾತ್ರೆ ಸುಮಾರು 15 ರಾಜ್ಯಗಳಲ್ಲಿ ಸಾಗಿ ಮಾರ್ಚ್ 20ರಂದು ಮುಂಬೈನಲ್ಲಿ ಮುಕ್ತಾಯ ಗೊಳ್ಳಲಿದೆ.