Sunday, 15th December 2024

ಮಂಗನ ಕಾಯಿಲೆಗೆ ಮುಂಜಾಗ್ರತೆಯೇ ಮದ್ದು

ವೈದ್ಯಲೋಕ

ಡಾ.ಕರವೀರಪ್ರಭು ಕ್ಯಾಲಕೊಂಡ

ಪ್ರಕೃತಿಯ ಮೇಲಿನ ಮಾನವನ ಅತಿಕ್ರಮಣದಿಂದ ಉಂಟಾದ ಪರಿಣಾಮವೇ ಮಂಗನ ಕಾಯಿಲೆ. ‘ಕಾಡು ಕಡಿದು ಕಾಯಿಲೆ ಬಂತು’ ಎಂಬ ಮಾತು ಈ ರೋಗದ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಬಿಸಿಲ ಬೇಗೆ ಹೆಚ್ಚುತ್ತಿರುವಂತೆಯೇ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆಯೂ ಏರುತ್ತಿದೆ.

ಮಲೆನಾಡಿಗೆ ಹೊಸ ವರ್ಷವು ಹರ್ಷವನ್ನು ಹೊತ್ತು ತರಲಿಲ್ಲ. ಹೊಸ ವರ್ಷದ ಸಂಭ್ರಮಾಚರಣೆಗೆ ಹೆಜ್ಜೆಹಾಕುತ್ತ ಬಂದ ಮಂಗನ ಕಾಯಿಲೆಯು ಈಗ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದೆ. ಜನ ಆತಂಕದ ಅಗ್ನಿಕುಂಡದಲ್ಲಿ ಬೇಯುತ್ತಿದ್ದಾರೆ. ಅವರ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಕಂಡಾಗ ಮನಸ್ಸು ಮಮ್ಮಲ
ಮರುಗುತ್ತದೆ. ಸಣ್ಣ ಜ್ವರ, ತಲೆನೋವು, ಮೈ ಕೈ ನೋವು ಕಾಣಿಸಿಕೊಂಡರೂ ‘ಅಂತ್ಯ ಸಮೀಪಿಸಿತು’ ಎನ್ನುವಂತೆ ಜನ ಹೌಹಾರುತ್ತಿದ್ದಾರೆ.

ಪ್ರಸಿದ್ಧ ಪ್ರವಾಸಿ ತಾಣಗಳ ಸುತ್ತಮುತ್ತ ಹರಡುತ್ತಿರುವ ಮಂಗನ ಕಾಯಿಲೆಯಿಂದಾಗಿ ಮಲೆನಾಡಿಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯುವತಿಯೊಬ್ಬಳು ಮಂಗನ ಕಾಯಿಲೆಗೆ ತುತ್ತಾಗುವ ಮೂಲಕ ಈ ವರ್ಷದ ಬಲಿಖಾತೆ ತೆರೆದುಕೊಂಡಿದೆ. ಏಳು ದಶಕಗಳ ಹಿಂದೆಯೇ ಪತ್ತೆ ಹಚ್ಚಲಾದ ರೋಗವೊಂದು ಇಂದೂ ಸಾವು-ನೋವು ತರುತ್ತಿರುವುದು ನಮ್ಮ ಆರೋಗ್ಯ ಇಲಾಖೆಯ, ಆಡಳಿತ ವ್ಯವಸ್ಥೆಯ ಲೋಪದೋಷಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

೧೯೫೫ರ ಡಿಸೆಂಬರ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕೊನ್ನೂರ ಗ್ರಾಮದಿಂದ ಜ್ವರಪೀಡಿತರು ಬಂದಾಗ ವೈದ್ಯರು ಬಾರಿಸಿದ ಎಚ್ಚರಿಕೆಯ ಗಂಟೆ ಯಾರಿಗೂ
ಕೇಳಿಸಲಿಲ್ಲ. ೧೯೫೭ರ ಮಾರ್ಚ್‌ನಲ್ಲಿ ಕ್ಯಾಸನೂರ ಕಾಡಿನಲ್ಲಿ ಮಂಗಗಳ ಸಾಂಕ್ರಾಮಿಕ ಸಾವು ಮತ್ತು ಅದೇ ವೇಳೆಗೆ ಮಂಗಗಳಿಂದ ಮನುಷ್ಯರಿಗೆ ರೋಗ ತಗುಲಿದ ವರದಿಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಅಚ್ಚಾಗಿ ಜನರ ಗಮನ ಸೆಳೆಯುವ ಹೊತ್ತಿಗೆ ಈ ಕಾಯಿಲೆ ಸಾಕಷ್ಟು ವ್ಯಾಪ್ತಿಯವರೆಗೆ ತನ್ನ ಕರಾಳಛಾಯೆ ಯನ್ನು ಚೆಲ್ಲಿತ್ತು. ೧೯೬೪ರಲ್ಲಿ ಮತ್ತಷ್ಟು ಭಾಗವನ್ನು ಆಕ್ರಮಿಸಿ ಜನರನ್ನು ತಲ್ಲಣಗೊಳಿಸಿತ್ತು.

ಈ ರೋಗವು ೧೯೬೦ರವರೆಗೆ ಕಾಡಿನ ಮಂಗಗ ಳಲ್ಲಿಯೇ ಹೆಚ್ಚಾಗಿ ಕಾಣುತ್ತಿದ್ದರೂ ಮನುಷ್ಯರಲ್ಲೂ ವಿರಳವಾಗಿ ಕಂಡುಬರುತ್ತಿತ್ತು. ಹೀಗಾಗಿ ಅದು ಯಾರ ಗಮನವನ್ನೂ ಸೆಳೆದಿರಲಿಲ್ಲ. ೧೯೬೮-೬೯ ಮತ್ತು ೧೯೭೪-೭೫ರಲ್ಲಿ ಇದು ಪಿಡುಗಿನ ರೂಪಕ್ಕೆ ತಿರುಗಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಹಾಮಂಡಳಿ ಮತ್ತು ರಾಕ್ -ಲ್ಲರ್ ದತ್ತಿ ವತಿಯಿಂದ ಜಂಟಿ ಸಂಶೋಧನೆ ಕೈಗೊಳ್ಳಲಾಯಿತು. ರೋಗಕ್ಕೆ ಬಲಿಯಾದ ಮಂಗವೊಂದನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ, ರೋಗಕ್ಕೆ ಕಾರಣೀಭೂತವಾದ ವೈರಸ್ ಅದರ ಮಿದುಳಿನಲ್ಲಿ ಮೊಟ್ಟಮೊದಲಿಗೆ ಪತ್ತೆಯಾಯಿತು. ರಕ್ತರಸದ ವಿಶ್ಲೇಷಣೆ ಕೈಗೊಂಡಾಗ, ರಷ್ಯಾದ ಸ್ಪ್ರಿಂಗ್ ಎನ್ ಕೆ-ಲೈಟಿಸ್ ಎಂಬ ವೈರಸ್ ಗುಂಪಿಗೆ ಈ ವೈರಸ್ ಸೇರಿರುವುದು ಖಚಿತವಾಯಿತು.

ಪ್ರಕೃತಿಯ ಮೇಲಿನ ಮಾನವನ ಅತಿಕ್ರಮಣ ದಿಂದ ಉಂಟಾದ ಪರಿಣಾಮವೇ ಮಂಗನ ಕಾಯಿಲೆ. ‘ಕಾಡು ಕಡಿದು ಕಾಯಿಲೆ ಬಂತು’ ಎಂಬ ಮಾತು ಈ ರೋಗದ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಬಿಸಿಲ ಬೇಗೆ ಹೆಚ್ಚುತ್ತಿರುವಂತೆಯೇ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆಯೂ ಏರುತ್ತಿದೆ. ಪ್ರತಿವರ್ಷದ ಚಳಿಗಾಲ, ಬೇಸಗೆ ಕಾಲದಲ್ಲಿ ಮಲೆನಾಡಿನ ಒಂದಲ್ಲಾ ಒಂದು ಭಾಗದಲ್ಲಿ ಇದೇ ಗೋಳು. ಪಶ್ಚಿಮ ಘಟ್ಟದ ಸೆರಗಿನ ಕೆಲವೆಡೆ ಧುತ್ತನೆ ಕಾಣಿಸಿಕೊಳ್ಳುತ್ತದೆ ಈ ರೋಗ. ‘ಇದು ಎಲ್ಲಿ, ಯಾಕೆ, ಹೇಗೆ ಬಂತು?’ ಎಂದೆಲ್ಲಾ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಏಕಾಏಕಿ ಗೋಚರಿಸುವುದೇ ಈ ಕಾಯಿಲೆಯ ವಿಶೇಷ. ಈ ವರ್ಷದ ಮಳೆಯ ಕೊರತೆಯ ಪರಿಣಾಮವಾಗಿ ಉಣ್ಣೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಇದರಿಂದ ಮಂಗನ ಕಾಯಿಲೆಯ ಹರಡಿಕೆಯೂ ಗಮನಾರ್ಹ ವಾಗಿ ಹೆಚ್ಚಾಗುವ ಭೀತಿಯಿದೆ.

ದೇಶದ ನಾಲ್ಕು ರಾಜ್ಯಗಳಲ್ಲಿ ಮತ್ತು ಕರ್ನಾಟಕದ ಸಾಕಷ್ಟು ಜಿಲ್ಲೆಗಳಲ್ಲಿ (ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಗದಗ, ಹಾವೇರಿ, ಬೆಳಗಾವಿ) ಈಗಾಗಲೇ ಈ ಕಾಯಿಲೆ ಪಸರಿಸಿದೆ. ನೆರೆಯ ಗೋವಾದ ಮಾಪುಸಾ, ವಾಲ್ಪೊಯಿ, ಮಹಾರಾಷ್ಟ್ರದ ಸಿಂಧುದುರ್ಗ, ಕೇರಳದ ವಯನಾಡು, ಮಲಪ್ಪುರಂ ಭಾಗಗಳಲ್ಲಿ ಇದರ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾಡು ಪ್ರಾಣಿಗಳು, ಪಕ್ಷಿಗಳು, ಅರಣ್ಯ ಉತ್ಪನ್ನಗಳ ಜತೆ ಉರಗಗಳಿಂದಲೂ ಈ ಕಾಯಿಲೆ ಪ್ರಸಾರವಾಗಿರಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಸಾಮಾನ್ಯವಾಗಿ ಪ್ರತಿವರ್ಷ ಈ ಕಾಯಿಲೆಗೆ ಶೇ.೨ರಷ್ಟು ಮಕ್ಕಳು ತುತ್ತಾಗುತ್ತಿದ್ದರು; ಈ ಬಾರಿ ಈ ಪ್ರಮಾಣ ಶೇ.೮ಕ್ಕೇರಿದೆ. ಇದು ವೈರಸ್ ಕಾಯಿಲೆಯಾದ್ದ ರಿಂದ ನಿರ್ದಿಷ್ಟ ಚಿಕಿತ್ಸೆಯಿಲ್ಲ, ರೋಗ ತಡೆಗಟ್ಟಲು ಲಸಿಕೆಯೂ ಲಭ್ಯವಿಲ್ಲ. ಇಂಥ ಪ್ರತಿಕೂಲ ಅಂಶಗಳು ರೋಗಬಾಧಿತ ಪ್ರದೇಶದ ಜನರ ನಿದ್ರೆಗೆಡಿಸಿ ಆತಂಕಕ್ಕೆ ದೂಡಿವೆ. ಮಂಗನ ಕಾಯಿಲೆಯ ರೋಗಕಾರಕ ವೈರಸ್ ಆರ್ಬೋವೈರಸ್ ‘ಬಿ’ ಗುಂಪಿನ ಜಾತಿಗೆ ಸೇರಿದೆ. ಹಬ್ಬಿರುವ ಮಾಹಿತಿಯಂತೆ, ಈ ವೈರಸ್‌ಗಳಿಗೆ
ಮಂಗಗಳು ಮಾತ್ರವೇ ಪೋಷಕ ಜೀವಿಗಳಾಗಿರದೆ, ಇಲಿ, ಅಳಿಲು, ಹಕ್ಕಿ, ಉರಗ, ದನಕರುಗಳೂ ಆಶ್ರಯ ನೀಡಿರಲು ಸಾಧ್ಯವಿದೆ. ರೋಗ ಪ್ರಸಾರದಲ್ಲಿ ಪಾಲ್ಗೊಳ್ಳುವುದು ಪ್ರಾಣಿಗಳ ಮೈತೊಗಲಿನ ಮೇಲಿರುವ ಉಣ್ಣೆಗಳು ಮಾತ್ರ. ಅವು ಈ ಪ್ರಾಣಿಗಳ ರಕ್ತವನ್ನು ಕುಡಿಯುವ ಮೂಲಕ ರೋಗಾಣುಗಳನ್ನು ಬಳುವಳಿಯಾಗಿ ಪಡೆಯುತ್ತವೆ. ಮುಂದೆ

ಈ ರೋಗಾಣುಗಳು ಆ ಉಣ್ಣೆಗಳಲ್ಲಿ ಬೆಳೆಯುತ್ತವೆ. ರೋಗಪೀಡಿತ ಪ್ರಾಣಿಗಳು ಸತ್ತ ನಂತರ, ಇಲ್ಲವೇ ಅವು ಮೈಕೊಡವಿದಾಗ ಉಣ್ಣೆಗಳು ಅವುಗಳಿಂದ ಬೇರ್ಪಟ್ಟು ಕಾಡಿನಲ್ಲಿ ಹರಿದಾಡುತ್ತವೆ. ಇವು ಕಾಡಿಗೆ ಹೋದ ಮನುಷ್ಯರನ್ನು ಇಲ್ಲವೇ ಮಂಗಗಳನ್ನು ಕಡಿದಾಗ, ರೋಗಾಣುಗಳು ವರ್ಗಾವಣೆಗೊಳ್ಳುತ್ತವೆ. ಹೀಗೆ ಉಣ್ಣೆಯಿಂದ ಮಂಗಗಳಿಗೆ ಅಥವಾ ಮಾನವರಿಗೆ ರೋಗ ಹರಡುತ್ತದೆ. ಮಂಗನ ಕಾಯಿಲೆಯು ಹೆಚ್ಚಾಗಿ ಯುವಕರಲ್ಲಿ ಕಂಡುಬರುತ್ತವೆ; ಏಕೆಂದರೆ ಕಾಡಿನಲ್ಲಿ ಹೆಚ್ಚಾಗಿ ಸಂಚರಿಸುವುದು ಅವರೇ. ಕಾಡಿನ ಪಕ್ಕದಲ್ಲೇ ಸಾಗುವಳಿ ಮಾಡುವವರಿಗೂ ಈ ರೋಗಕ್ಕೂ ನಂಟು ಜಾಸ್ತಿ. ಜನವರಿಯಿಂದ ಜೂನ್‌ವರೆಗಿನ ಅವಽ
ಯಲ್ಲಿ ಕಂಡುಬರುವಂಥದ್ದು ಈ ಕಾಯಿಲೆ; ಮಳೆಗಾಲದ ಪ್ರಾರಂಭದೊಂದಿಗೆ ಇದರ ಸದ್ದಡಗುತ್ತದೆ.

ಆರಂಭಿಕ ರೋಗಲಕ್ಷಣಗಳು ಇನ್ ಫ್ಲುಯೆಂಜಾದ ರೀತಿಯಲ್ಲೇ ಇರುತ್ತವೆ. ಅಂದರೆ, ಒಮ್ಮೆಲೇ ಜ್ವರ ಬರುವುದು, ತಲೆಡಿಸಿತ, ಬೆನ್ನು ಮತ್ತು ಕೈಕಾಲುಗಳಲ್ಲಿ ನೋವು ಹಾಗೂ ಸೆಳೆತ, ಉತ್ಸಾಹಹೀನತೆ ಈ ರೋಗದ ಪ್ರಮುಖ ಲಕ್ಷಣಗಳು. ಜ್ವರವು ಸಾಮಾನ್ಯವಾಗಿ ೫ರಿಂದ ೧೪ ದಿನಗಳವರೆಗೆ ಇರುತ್ತದೆ. ದೇಹ ದಲ್ಲಿ ನೀರಿನ ಅಂಶ ಕಡಿಮೆಯಾಗುವಿಕೆ, ಪ್ರಜ್ಞಾಹೀನಗೊಳ್ಳುವಿಕೆ ಅಪಾಯಕಾರಿ ಸೂಚನೆಗಳಾಗಿರುತ್ತವೆ. ವಿಷಮ ಸ್ಥಿತಿಯಲ್ಲಿರುವ ಕೆಲವು ರೋಗಿಗಳಲ್ಲಿ ಮೂಗು, ವಸಡು, ಜಠರ ಮತ್ತು ಕರುಳುಗಳಲ್ಲಿ ಇಲ್ಲವೇ ಪುಪ್ಪುಸದಲ್ಲಿ ರಕ್ತಸ್ರಾವ ಉಂಟಾಗಬಹುದು.

ರೋಗ ಬಂದ ಮೇಲೆ ಕಂಡ ಕಂಡ ಉಪಚಾರಕ್ಕೆ ಅಡ್ಡಾಡುವುದಕ್ಕಿಂತಲೂ,ರೋಗ ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅರಿತು ಆಚರಣೆಗೆ ತರುವುದು ಜಾಣತನ. ರೋಗ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸುವ ಉಣ್ಣೆಗಳ ನಿಯಂತ್ರಣವು ಈ ಕಾಯಿಲೆಯ ಹಬ್ಬುವಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಅತ್ಯವಶ್ಯ.
ಉಣ್ಣೆಗಳ ನಿಯಂತ್ರಣ ವೊಂದರಿಂದಲೇ ಶೇ.೯೦ರಷ್ಟು ರೋಗದ ಹಾವಳಿಯನ್ನು ತಪ್ಪಿಸಲು ಸಾಧ್ಯ. ಬೆಂಜಾಯಿಲ್ ಹೆಕ್ಸಾಕ್ಲೋರೈಡ್‌ನಂಥ ಕ್ರಿಮಿನಾಶಕ ಔಷಽಗಳನ್ನು ಕಾಡಿನ ಪ್ರದೇಶದಲ್ಲಿ ಸಿಂಪಡಿಸಬೇಕು.

ಗುರುತುಪಡಿಸಿದ ಅಪಾಯಕಾರಿ ಪ್ರದೇಶಗಳಲ್ಲಂತೂ ಮೇಲಿಂದ ಮೇಲೆ ಇದರ ಸಿಂಪಡಣೆ ಅಗತ್ಯ. ಅಡವಿಯಲ್ಲಿರುವ ಉಣ್ಣೆಗಳು, ಅಲ್ಲಿಗೆ ಮೇಯಲು ಹೋದ ದನ-ಕರುಗಳ ಮೈಗೆ ಅಂಟಿಕೊಂಡು ಮನೆಯನ್ನು ಸೇರಿ ಮನುಷ್ಯರನ್ನೂ ಕಚ್ಚುತ್ತವೆ. ಆದ್ದರಿಂದ ಜಾನುವಾರುಗಳನ್ನು ಕಾಡಿನಲ್ಲಿ ಬೇಕಾಬಿಟ್ಟಿಯಾಗಿ ತಿರುಗುವು ದಕ್ಕೆ ಬಿಡಬಾರದು. ಜಾನುವಾರುಗಳ ಮೈಗೆ ಉಣ್ಣೆ ಹತ್ತದಂತೆ ತಡೆಯಲು ಲಿಂಡೇನ್ ಕಾರ್ಬಾರಿಲ್, ಮೆಲಾಥಿ ಯಾನ್, ಬೆಂಜಾಯಿಲ್ ಹೆಕ್ಸಾಕ್ಲೋರೈಡ್‌ನಂಥ ಕ್ರಿಮಿನಾಶಕಗಳನ್ನು ಅವುಗಳ ಮೈಗೆ ಹಚ್ಚಬೇಕು. ದನಗಳ ಕೊಟ್ಟಿಗೆಗಳನ್ನು ಮತ್ತು ಜಾನುವಾರುಗಳ ಮೈಯನ್ನು ಸ್ವಚ್ಛವಾಗಿ ಇಡುವುದರ ಜತೆಗೆ ಕೊಟ್ಟಿಗೆ ಯಲ್ಲೂ ಕೀಟನಾಶಕಗಳನ್ನು ಸಿಂಪಡಿಸಬೇಕು.

ಪುಣೆಯಲ್ಲಿರುವ ರಾಷ್ಟ್ರೀಯ ವಿಷಾಣುಶಾಸ್ತ್ರ ಸಂಸ್ಥೆಯು ಕ್ಯಾಸನೂರು ಕಾಡಿನ ಕಾಯಿಲೆಗೆ ರೋಗ ನಿರೋಧಕ ಚುಚ್ಚುಮದ್ದನ್ನು ತಯಾರಿಸಿದ್ದು, ಇದನ್ನು ಅಪಾಯಕಾರಿ ಪ್ರದೇಶಗಳ ಜನರು ಪ್ರತಿವರ್ಷ ನವೆಂಬರ್‌ನಲ್ಲಿ, ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಹಾಕಿಸಿಕೊಂಡರೆ, ರೋಗದಿಂದ ರಕ್ಷಣೆ ಸಿಗುತ್ತದೆ.
ಆದರೆ ಮಂಗನ ಕಾಯಿಲೆಗಾಗಿನ ಲಸಿಕೆ ಉತ್ಪಾದನೆಯು ಕಳೆದ ವರ್ಷದಿಂದ ಸ್ಥಗಿತಗೊಂಡಿದೆ. ರಾಷ್ಟ್ರೀಯ ವೈರಸ್ ಸಂಸ್ಥೆಯು ೮೦ರ ದಶಕದಲ್ಲಿ ಕಂಡುಹಿಡಿದ ಲಸಿಕೆಯೇ ಇಲ್ಲಿಯವರೆಗೂ ಬಳಕೆಯಲ್ಲಿತ್ತು.

ಕಾಲಕಾಲಕ್ಕೆ ಮಾರ್ಪಾಡುಗಳಿಗೆ ಒಳಗಾಗುವುದು ವೈರಸ್‌ನ ಸಹಜ ಪ್ರಕ್ರಿಯೆ. ಈ ಮ್ಯುಟೇಷನ್ ಕಾರಣದಿಂದ ಅವುಗಳ ಸ್ವರೂಪದಲ್ಲಿ ಅತಿಸೂಕ್ಷ್ಮ ಬದಲಾ ವಣ ಗಳಾಗುತ್ತವೆ. ಹೀಗಾಗಿ ಮೂಲಲಸಿಕೆ ಹೆಚ್ಚು ಪರಿಣಾಮಕಾರಿಯಾಗದು. ರೂಪಾಂತರಿ ಅಂಶವನ್ನು ಸೇರಿಸಿ ಚುಚ್ಚುಮದ್ದನ್ನು ಮೇಲ್ದರ್ಜೆಗೆ ಏರಿಸಬೇಕಾದ್ದು ಅನಿವಾರ್ಯ. ಮಂಗನ ಕಾಯಿಲೆಯಲ್ಲಿ ಲಸಿಕೆಯನ್ನು ನವೀಕರಿಸುವ ಪ್ರಯತ್ನ ನಡೆಯಲಿಲ್ಲ, ಸಂಶೋಧನೆಗಳೂ ಆಗಲಿಲ್ಲ. ಪರಿಣಾಮ ಮತ್ತು ಸುರಕ್ಷತೆಯಲ್ಲಿ ಅಧಿಕೃತ ಮಾನದಂಡಗಳನ್ನು ಪೂರೈಸದ ಕಾರಣ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚು ಪರಿಣಾಮಕಾರಿ ಲಸಿಕೆಯ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣ ಬೇಕು.

ಮಂಗನ ಕಾಯಿಲೆಯು ಸೀಮಿತ ಪ್ರದೇಶದಲ್ಲಿ, ವರ್ಷದ ನಿರ್ದಿಷ್ಟ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ ದೊಡ್ಡ ಪ್ರಮಾಣದಲ್ಲಿ  ಲಸಿಕೆ ಬೇಕಿಲ್ಲ. ವ್ಯಾವಹಾರಿಕವಾಗಿ ಲಾಭ ತರದ ಈ ಕಾರ್ಯಕ್ಕೆ ಬಂಡವಾಳ ಹಾಕಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿಯೇ ಪರಿಣಾಮಕಾರಿ ಲಸಿಕೆ ಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿದೆ; ಈ ದಿಸೆಯಲ್ಲಿನ ಸಂಶೋಧನೆ, ಅಭಿವೃದ್ಧಿಗಾಗಿ ಅನುದಾನ ಒದಗಿಸಿ, ತನ್ನ ಅಧೀನ ಸಂಸ್ಥೆಗಳಿಂದ ಲಸಿಕೆ ಉತ್ಪಾದಿಸಿ ಅಮಾಯಕರ ಜೀವ ಕಾಪಾಡುವ ಹೊಣೆ ಸರಕಾರದ್ದೇ ಆಗಿರುತ್ತದೆ.

ಇನ್ನು ವೈಯಕ್ತಿಕ ಸಂರಕ್ಷಣೆಯ ಕುರಿತು ಮಾತಾಡುವುದಾದರೆ, ಅರಣ್ಯ ಪ್ರದೇಶಕ್ಕೆ ಹೋಗಬೇಕಾಗಿ ಬಂದಾಗ ಮೈತುಂಬಾ ಬಟ್ಟೆ ಧರಿಸಿರಬೇಕು. ಉಣ್ಣೆಗಳನ್ನು ನಿರೋಧಿಸುವ ಮುಲಾಮು ಇಲ್ಲವೇ ದ್ರಾವಣವನ್ನು ಮೈಗೆ ಲೇಪಿಸಿಕೊಳ್ಳಬೇಕು. ಇಂಥವುಗಳ ಪೈಕಿ ಮೈಲಾಲ ಎಂಬ ದ್ರಾವಣವು ಉಳಿದೆಲ್ಲವುಗಳಿಗಿಂತ ಉತ್ತಮವಾಗಿರುವ ಉಣ್ಣೆ ನಿರೋಧಕ ಎಂದು ಖಾತ್ರಿಯಾಗಿದೆ. ಇದನ್ನು ಮೈಗೆ ಲೇಪಿಸಿಕೊಳ್ಳುವುದರಿಂದ ಉಣ್ಣೆಗಳ ಕಡಿತ ದಿಂದ ತಪ್ಪಿಸಿಕೊಳ್ಳಬಹುದು. ಕಾಡಿನಲ್ಲಿ ಎಂದೂ ಮಲಗಬಾರದು; ಕಾಡಿನಿಂದ ಮನೆಗೆ ಬಂದೊಡನೆ ಸಾಬೂನು ಬಳಸಿ ಬಿಸಿನೀರಿನಿಂದ ಸ್ನಾನ ಮಾಡಬೇಕು. ಮೈಮೇಲಿನ ಬಟ್ಟೆ-ಬರೆಗಳನ್ನೆಲ್ಲ
ಬಿಸಿನೀರಿನಲ್ಲಿ ಕುದಿಸಿ ತೆಗೆಯಬೇಕು.

ಮಂಗನ ಕಾಯಿಲೆಯಿಂದಾದ ಸಾವಿನ ಖಾತೆ ಈ ವರ್ಷದ ಜನವರಿಯಲ್ಲೇ ತೆರೆದುಕೊಂಡಿದ್ದು, ಬೇಸಿಗೆ ಹೊತ್ತಿಗೆ ಅದು ಮತ್ತಷ್ಟು ಉಲ್ಬಣಿಸಬಹುದು ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಆದ್ದರಿಂದ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜಾಯಮಾನವನ್ನು ಆಳುಗರು ಕೈಬಿಟ್ಟು, ಹತೋಟಿ ಮತ್ತು ಮುನ್ನೆಚ್ಚರಿಕೆಯ ವಿಷಯದಲ್ಲಿ ಕ್ಷಿಪ್ರವಾಗಿ ಕ್ರಿಯಾಶೀಲರಾಗಬೇಕು. ಆಗ ಮಾತ್ರ ಮಂಗನ ಕಾಯಿಲೆಯ ‘ಮರಣ ಮೃದಂಗ’ದ ದನಿ ನಿಂತೀತು. ಈ ಕಾಯಿಲೆಯ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ಒದಗಿಸಿ, ಅವರು ಕ್ಷೋಭೆಗೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆಯು ಆರೋಗ್ಯ ಮತ್ತು ಅರಣ್ಯ ಇಲಾಖೆಗಳ ಮೇಲಿದೆ.
ಸೂಕ್ತ ಅಧ್ಯಯನ, ಸಂಶೋಧನೆಗಳ ಮೂಲಕ ಈ ಕಾಯಿಲೆಯ ಶಾಶ್ವತ ನಿವಾರಣೆಗೆ ಸರಕಾರ ಮನಸ್ಸು ಮಾಡಬೇಕು. ಇದಕ್ಕೆ ಪ್ರಬಲ ಇಚ್ಛಾಶಕ್ತಿ ಬೇಕು.
‘ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇರುತ್ತದೆ’ ಎಂಬ ಮಾತಂತೂ ಸತ್ಯ.

(ಲೇಖಕರು ವಿಶ್ರಾಂತ ಜಿಲ್ಲಾ ಶಸ್ತ್ರಚಿಕಿತ್ಸಕರು)