Saturday, 23rd November 2024

ನನಗೆ ಬಂದ ಸಮನ್ಸ್‌ಗಳ ಸಂಖ್ಯೆಯ ಶಾಲೆಗಳನ್ನು ತೆರೆಯಲಾಗುವುದು: ಕೇಜ್ರಿವಾಲ್

ವದೆಹಲಿ: ಕೇಂದ್ರದ ತನಿಖಾ ಸಂಸ್ಥೆಗಳು ನನಗೆ ರವಾನಿಸಿರುವ ಸಮನ್ಸ್‌ಗಳಷ್ಟು ಸಂಖ್ಯೆಯ ಶಾಲೆಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ತೆರೆಯಲಾಗು ವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಶುಕ್ರವಾರ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಐದು ಬಾರಿ ಸಮನ್ಸ್‌ ಜಾರಿ ಮಾಡಿದರೂ ವಿಚಾರಣೆಗೆ ಕೇಜ್ರಿವಾಲ್ ಹಾಜರಾಗಿರಲಿಲ್ಲ. ಬಳಿಕ ಇ.ಡಿ ನೀಡಿದ ದೂರಿನ ಮೇರೆಗೆ ಕೇಜ್ರಿವಾಲ್, ಫೆ.17ರಂದು ವಿಚಾರಣೆಗೆ ಹಾಜರಾಗು ವಂತೆ ದೆಹಲಿಯ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಮಯೂರ್ ವಿಹಾರ 3ನೇ ಹಂತದಲ್ಲಿ ಸರ್ಕಾರಿ ಶಾಲಾ ಕಟ್ಟಡದ ಶಂಕುಸ್ಥಾಪನೆಯ ಬಳಿಕ ಮಾತನಾಡಿದ ಕೇಜ್ರಿವಾಲ್, ‘ದೇಶದ ಅತಿ ದೊಡ್ಡ ಭಯೋತ್ಪಾದಕ’ನಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಎಲ್ಲ ತನಿಖಾ ಸಂಸ್ಥೆಗಳನ್ನು ತನ್ನ ವಿರುದ್ಧ ಛೂ ಬಿಟ್ಟಿದೆ ಎಂದು ಆರೋಪಿಸಿದರು.

ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮುಂದಿನ ಒಂದು ಪೀಳಿಗೆಯೊಳಗೆ ಬಡತನ ನಿರ್ಮೂಲನೆಯಾಗಲಿದೆ. ಈ ಗುರಿಯನ್ನು ಸಾಧಿಸಲು ದೆಹಲಿಯಲ್ಲಿ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.

ಹಿಂದೆ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿತ್ತು. ಶಿಕ್ಷಣವು ಕಳಪೆ ಮಟ್ಟದಲ್ಲಿತ್ತು. ಆದರೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ರಚನೆಯಾದ ಬಳಿಕ ಅನೇಕ ಶಾಲೆಗಳನ್ನು ತೆರೆಯಲಾಗಿದೆ. ದೆಹಲಿಯಲ್ಲಿ ಎಲ್ಲರಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ದೊರಯಲಿದೆ.