Sunday, 15th December 2024

ಆರೋಗ್ಯಯುತ ಸಮಾಜಕ್ಕೆ ನೈರ್ಮಲ್ಯವು ಅತ್ಯವಶ್ಯಕ: ಕುಲಪತಿ ಡಾ.ಬಿ.ಕೆ.ರವಿ

ತುಮಕೂರು: ಆರೋಗ್ಯಯುತ ಸಮಾಜಕ್ಕೆ ನೈರ್ಮಲ್ಯವು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ, ಜಿಲ್ಲಾ ಪಂಚಾಯತ್ ಕಚೇರಿಯ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಲ್ಲಿ ಐ.ಇ.ಸಿ.ಜಿಲ್ಲಾ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ  ರವಿಕುಮಾರ್ ಸಂಪಾದಿತ ನೈರ್ಮಲ್ಯ ಚೊಚ್ಚಲ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿದರು.
ಸಾರ್ವಜನಿಕರು ತಮ್ಮ ದಿನನಿತ್ಯದ ಅಭ್ಯಾಸದಲ್ಲಿ ತ್ಯಾಜ್ಯ ವಿಲೇವಾರಿ, ನಿರ್ವಹಣೆಯ ಅಭ್ಯಾಸವನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪುಸ್ತದಲ್ಲಿನ ಅಂಶಗಳು ಅತ್ಯಂತ ಉಪಯುಕ್ತವಾಗಿರುತ್ತದೆ. ಈ ಪುಸ್ತಕದಲ್ಲಿ ನೈರ್ಮಲ್ಯ ವಿಷಯ ಒಂದೇ ಅಲ್ಲದೇ ಆರೋಗ್ಯ ಹಾಗೂ ಸಂವಹನಕ್ಕೆ ಸಂಬಂಧಪಟ್ಟ ವಿಷಯಗಳು ಅಡಕವಾಗಿದೆಯೆಂದು ತಿಳಿಸಿದರು.
ಕೃತಿ ಬಿಡುಗಡೆ ಮಾಡಿದ ಪ್ರಜಾಪ್ರಗತಿ  ಸಂಪಾದಕ ಎಸ್.ನಾಗಣ್ಣ  ಮಾತನಾಡಿ, ನೈರ್ಮಲ್ಯ ವಿಷಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂತಹ ಪುಸ್ತಕಗಳು ಅಗತ್ಯತೆ ಇದ್ದು, ವಿಶೇಷವಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಸಂಪೂರ್ಣ ಪರಿಕಲ್ಪನೆಯನ್ನು ಪ್ರತಿನಿಧಿಸುವ ರೀತಿ ಈ ಪುಸ್ತಕವು ಹೊರಹೊಮ್ಮಿರುವುದು ಲೇಖಕರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಜಿಪಂ ಗ್ರಾಮೀಣ ಕುಡಿಯುವ  ನೀರು ಮತ್ತು ನೈರ್ಮಲ್ಯ ಇಲಾಖೆಯ ಸರ್ಕಾರದ ಅಭಿವೃದ್ಧಿ ಉಪಕಾರ್ಯದರ್ಶಿ ಎಸ್.ಸಿ.ಮಹೇಶ್  ಮಾತನಾಡಿ, ನೈರ್ಮಲ್ಯ ವಿಶೇಷವಾಗಿ ಸ್ವಚ್ಛಭಾರತ್ ಮಿಷನ್ (ಗ್ರಾ) ಯೋಜನೆಯ ಐ.ಇ.ಸಿ. ಸಮಾಲೋಚಕರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಜಾಗೃತಿ ಮೂಡಿಸು ವುದು ಇವರ ಕರ್ತವ್ಯವಾಗಿದ್ದು, ಯೋಜನೆ ಕುರಿತಾದ ಸಂಪೂರ್ಣ ಜ್ಞಾನವನ್ನು ಹೊಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಈ ಪುಸ್ತಕವು ದೃಢೀಕರಿಸಿದೆ ಎಂದರು.
ಶಾಸಕ ಜ್ಯೋತಿಗಣೇಶ್  ಮಾತನಾಡಿ, ಒಬ್ಬ ನೌಕರರಾಗಿದ್ದುಕೊಂಡು, ಅನುಭವವನ್ನು ಸದ್ಬಳಕೆ ಮಾಡಿಕೊಂಡು ಪುಸ್ತಕವನ್ನು ಹೊರತಂದಿರುವುದು ಸಂತೋಷದ ವಿಷಯದ ಜತೆಗೆ ಸಾರ್ವಜನಿಕರಿಗೆ ಅತ್ಯುಪಯುಕ್ತ ಪುಸ್ತಕವಾಗಿದೆ ಎಂದು ತಿಳಿಸಿ ಲೇಖಕರಿಗೆ ಶುಭ ಹಾರೈಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ ,  ವಿದ್ಯೋದಯ ಶಿಕ್ಷಣ ಸಂಸ್ಥೆಯ ಸಿಇಒ  ಪ್ರೊ.ಕೆ ಚಂದ್ರಣ್ಣ ಮಾತನಾಡಿದರು.
ಕಾರ್ಯಕ್ರಮವನ್ನು ಡಾ.ಸುಲೋಚನಾ ನಿರೂಪಿಸಿ, ಡಾ.ಚಿತ್ರಲಿಂಗಯ್ಯ ಸ್ವಾಗತಿಸಿದರು. ಲೇಖಕರಾದ ರವಿಕುಮಾರ್  ವಂದಿಸಿದರು.