Saturday, 23rd November 2024

ಶಾಲಾರಂಭ ಮಾರ್ಗಸೂಚಿ ಸಮಂಜಸವೇ?

ಪ್ರಚಲಿತ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಹಕ್ಕಿಗಳಂತೆ ಹಾರಾಡಬೇಕಾದ ಮಕ್ಕಳು ಪಂಜರ ಪಕ್ಷಿಗಳಾಗಿದ್ದಾರೆ.’ ಯಾರು ತಾನೇ ಶಾಲೆಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಯಾರು? ಮಕ್ಕಳು, ರಕ್ಷಕರು, ಶಿಕ್ಷಕರು, ಸಮಾಜ ಮತ್ತು ಸರಕಾರವೆಂಬ ಇಡೀ ವ್ಯವಸ್ಥೆಯೇ ಪರಿಸ್ಥಿತಿಯ ಕೈಗೊಂಬೆಯಾಗಿರುವ ಈ
ಸಂಕಷ್ಟದ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಮಂಜಸವೇ? ಎಂಬುದು ಇಲ್ಲಿ ಉದ್ಭವವಾಗಿರುವ ಯಕ್ಷಪ್ರಶ್ನೆ ಹಾಗೂ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಬಗೆಗಿರುವ ಜಿಜ್ಞಾಸೆ. ಈಗ ಶಾಲೆ ಪ್ರಾರಂಭವಾಗುವುದು ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಎಲ್ಲರಿಗೂ ಕಾಳಜಿ ಇರುವುದು ಮಾತ್ರವಲ್ಲ, ವ್ಯರ್ಥ ವಾದ ಶೈಕ್ಷಣಿಕ ಅವಧಿಯ ಬಗ್ಗೆ ಚಿಂತೆಯೂ ಇದೆ.

ಪ್ರಶ್ನೆ ಶಾಲೆ ಪ್ರಾರಂಭಿಸುವುದು ಎನ್ನುವುದಕ್ಕಿಂತಲೂ ಕರೋನಾ ಸೋಂಕಿನ ಎದುರು ಬೃಹದಾಕಾರವಾಗಿ ನಿಂತಿರುವ ಆರೋಗ್ಯ ಮತ್ತು ಶಿಕ್ಷಣ ಎಂಬ ಎರಡು ಆಯ್ಕೆಗಳು ಎಂದರೆ ತಪ್ಪಿಲ್ಲ. ಪ್ರಸಕ್ತ ಸನ್ನಿವೇಶದ ಸವಾಲುಗಳು ಮತ್ತು ಸಂದಿಗ್ಧ ಪರಿಸ್ಥಿತಿಯನ್ನು
ನಿಭಾಯಿಸುವ ಮಾರ್ಗೋಪಾಯಗಳತ್ತ ದೃಷ್ಟಿಹಾಯಿಸಬೇಕಾಗಿರುವುದು ಸಮಾಜ ಹಾಗೂ ಸರಕಾರದ ಕರ್ತವ್ಯ ಮತ್ತು ಜವಾ ಬ್ದಾರಿ. ಕರೋನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಕೊನೆಯಲ್ಲಿ ಮುಚ್ಚಿದ್ದ ಶಾಲೆಗಳು ಇನ್ನೂ ತೆರೆದಿಲ್ಲ.

ಕರೋನಾ ನಿಯಂತ್ರಣಕ್ಕೆ ಬರಬಹುದೆಂಬ ನಿರೀಕ್ಷೆ ಮರೀಚಿಕೆಯಾದುದು ಮಾತ್ರವಲ್ಲ ಪರಿಸ್ಥಿತಿ ಉಲ್ಬಣಗೊಳ್ಳುತ್ತಲೇ ಇದೆ. ಶಾಲೆಗಳ ಪ್ರಾರಂಭಕ್ಕೆ ಹಾತೊರೆಯುತ್ತಿದ್ದವರೆಲ್ಲರಿಗೂ ನಿರಾಶೆಯಾಗಿದೆ. ವಿದ್ಯಾರ್ಥಿಗಳು ಸ್ವಾಭಾವಿಕವಾಗಿ ತಮ್ಮ ಭವಿಷ್ಯದ ಬಗ್ಗೆ ಚಿಂತಿತ ರಾಗಿದ್ದಾರೆ. ಕರೋನಾ ಸೋಂಕಿನಿಂದ ವಿಶ್ವದಾದ್ಯಂತ 103 ಕೋಟಿಗೂ ಅಧಿಕ ಮಕ್ಕಳು ಮತ್ತು ನಮ್ಮ ದೇಶದಲ್ಲಿ 12.4 ಕೋಟಿ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದರಲ್ಲಿ ಅರ್ಧಾಂಶಕ್ಕಿಂತಲೂ ಹೆಚ್ಚಿನ ಮಕ್ಕಳಿಗೆ ಯಾವುದೇ
ಪರ್ಯಾಯ ಶಿಕ್ಷಣ ಸಿಗಲಿಲ್ಲ. ‘ಇದಕ್ಕೆ ಕಾರಣ ನಿಯಂತ್ರಣಕ್ಕೆ ಬಾರದ ಕರೋನಾ ಮತ್ತು ಲಸಿಕೆ ಲಭ್ಯವಾಗದಿರುವುದು’ ಎಂಬುದು ತಿಳಿಯದ ವಿಚಾರವಲ್ಲ. ಮುನ್ನೆಚ್ಚರಿಕೆಯೇ ನಮ್ಮನ್ನು ಕಾಪಾಡುವ ಮದ್ದಾಗಿದೆ.

ಇದೀಗ ಕೇಂದ್ರ ಸರಕಾರ ಅನ್‌ಲಾಕ್ 5.0ರ ಮಾರ್ಗಸೂಚಿಯಡಿ ಮಕ್ಕಳ ಸುರಕ್ಷತೆಗೆ ಒತ್ತು ನೀಡಿರುವುದು ಸ್ವಾಗತಾರ್ಹ. ಅಲ್ಲದೆ ರಾಜ್ಯಗಳು ಬೇಕಿದ್ದಲ್ಲಿ ಶಾಲೆಗಳನ್ನು ಆರಂಭಿಸಬಹುದು ಎಂಬ ಸೂಚನೆಯನ್ನು ನೀಡಿದೆ. ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯು ತ್ತಿದೆ. ಆದರೆ ಯಾರೂ ಇದನ್ನು ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳಬಾರದು. ಈ ಮಾರ್ಗ ಸೂಚಿಗಳನ್ನು ಎಷ್ಟು ಶಾಲೆಗಳಲ್ಲಿ ಅನುಸರಿಸಲು ಸಾಧ್ಯ ಎನ್ನುವುದನ್ನು ರಾಜ್ಯ ಸರಕಾರ ಖಾತರಿಪಡಿಸಿಕೊಳ್ಳ ಬೇಕಾಗಿದೆ. ಕೇಂದ್ರ ಸರಕಾರವೇನೋ ಶಾಲಾ ಕಾಲೇಜುಗಳ ಆರಂಭದ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವುದನ್ನು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಆದರೆ ಸ್ವಾಭಾ ವಿಕವಾಗಿ ರಾಜ್ಯ ಸರಕಾರಗಳು ಹೆಚ್ಚುತ್ತಿರುವ ಕರೋನಾ ಪರಿಸ್ಥಿತಿಯ ನಡುವೆ ಶಾಲೆಗಳನ್ನು ಪ್ರಾರಂಭಿಸುವುದು ಹೇಗೆ ಎಂಬ ಜಿಜ್ಞಾಸೆಗೆ ಬಿದ್ದಿದೆ. ಕೇಂದ್ರ ಸರಕಾರದ ಮಾರ್ಗಸೂಚಿ ಗಳು ಒಳ್ಳೆಯ ಮೂಲ ಸೌಕರ್ಯಗಳನ್ನು ಹೊಂದಿರುವ ಸರಕಾರಿ ಹಾಗೂ ಖಾಸಗೀ ಶಾಲೆಗಳು ತಕ್ಕಮಟ್ಟಿಗೆ ಅನುಸರಿಸಬಹುದಾದರೂ ಸೌಲಭ್ಯ ಗಳಿಲ್ಲದ ಶಾಲೆಗಳ ಪಾಲಿಗೆ ಮಾರ್ಗಸೂಚಿಯ ಪಾಲನೆ ಎಷ್ಟರಮಟ್ಟಿಗೆ ಪ್ರಾಯೋಗಿಕ ಎನ್ನುವುದನ್ನು ಶಿಕ್ಷಣ ಇಲಾಖೆಯೇ ಹೇಳಬೇಕು.

ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ, ಶೌಚಾಲಯ, ನೀರಿನ ವ್ಯವಸ್ಥೆ, ವಾಹನಗಳ ವ್ಯವಸ್ಥೆ, ದಿನಕ್ಕೆರಡು ಬಾರಿ ಸ್ಯಾನಿಟೈಸರ್ ಮಾಡುವ ಅಗತ್ಯತೆ, ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದನ್ನು ಮಕ್ಕಳು ಎಷ್ಟರ ಮಟ್ಟಿಗೆ ಪಾಲಿಸಬಹು ದೆಂಬುದು ಬಹುದೊಡ್ಡ ಆತಂಕದ ಪ್ರಶ್ನೆ. ಪಟ್ಟಣ ಮತ್ತು ನಗರ ಪ್ರದೇಶದ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದು ಅಸಾಧ್ಯದ ಮಾತೇ ಸರಿ. ಇಲ್ಲಿ ನಾವು ಮೊದಲು ನಮ್ಮ ವಿದ್ಯಾ ಸಂಸ್ಥೆಗಳಲ್ಲಿರುವ ಶಕ್ತಿ ಸಾಮರ್ಥ್ಯ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು.

ಕರ್ನಾಟಕದಲ್ಲಿ ದಿನನಿತ್ಯ ಅಸುಪಾಸು 10 ಸಾವಿರಕ್ಕೂ ಹೆಚ್ಚು ಜನರಿಗೆ ಹೊಸದಾಗಿ ಸೋಂಕು ತಗುಲಿರುವ ವರದಿಗಳು ಬರುತ್ತಿದ್ದು ಸರಾಸರಿ ದಿನವೊಂದಕ್ಕೆ 100 ಜನ ಸಾವನ್ನಪ್ಪುತ್ತಿದ್ದಾರೆ. ಇಂತಹ ಕರಾಳ ಸ್ಥಿತಿಯ ನಡುವೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದರೆ ಪೋಷಕರು ಒಪ್ಪಬಹುದೇ? ಇದೀಗ ಶಿಕ್ಷಣ ಇಲಾಖೆ ತನ್ನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯ ಇಲಾಖೆಯ ಮೊರೆ ಹೋಗಿದೆ. ಆರೋಗ್ಯ ಇಲಾಖೆ ತಜ್ಞರ ಸಲಹೆ ಕೋರಿದೆ. ಕರೋನಾ ಭೀತಿಯಿಂದ ಸಂಸತ್, ವಿಧಾನ ಮಂಡಲ ಗಳ ಅಧಿವೇಶನಗಳನ್ನೇ ಮೊಟಕುಗೊಳಿಸಿರು ವಾಗ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಹೇಳುವುದು ಅಪಾಯಕಾರಿ ನಿರ್ಣಯ ವಲ್ಲವೇ? ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ತಮ್ಮನ್ನು ತಾವು ಸಂಬಾಳಿಸಿಕೊಳ್ಳುವುದು ಕಷ್ಟವಾಗಿರುವ ಮಕ್ಕಳನ್ನು ಶಾಲೆಗೆ ಕರೆ ತರುವಂತಹದ್ದು ಸಂಬಂಽಕರಿಗೆ ಅಪಾಯವೇ ಸರಿ.

ಇದೀಗ ಶಿಕ್ಷಣ ಇಲಾಖೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಶಾಲೆ ಆರಂಭಿಸಲು ಸೂಚಿಸಿರುವುದು, ಪಾಲಿಸ ಬೇಕಾದ ನಿಯಮಗಳು, ಮಕ್ಕಳಿಗೆ ಒದಗಿಸಬೇಕಾದ ಸೌಲಭ್ಯಗಳು, ಪೂರ್ವಸಿದ್ಧತಾ ಕ್ರಮಗಳ ಬಗ್ಗೆ ತಿಳಿಸಿರುವ ನೀತಿ ನಿಯಮಗಳೆಲ್ಲವನ್ನೂ ಯಾರೂ ಅಲ್ಲಗಳೆಯಲಾರದು. ಆದರೆ ಮುಂದಿರುವ ಪ್ರಶ್ನೆ ಇದನ್ನು ಪಾಲಿಸುವುದು ಸಾಧ್ಯವೇ? ಇದು ಬಿಲ್‌ಕುಲ್ ಕಷ್ಟ ಸಾಧ್ಯ. ಜವಾಬ್ದಾರಿಯುತ ಸ್ಥಾನದಲ್ಲಿರು ವವರು ಮತ್ತು ಶಿಫಾರಸ್ಸು ಮಾಡುವವರೇ ಅಸಡ್ಡೆ ಯಿಂದ ವರ್ತಿಸುತ್ತಿದ್ದಾರೆ. ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ.

ವೆಂಟಿಲೇಟರ್‌ಗಳಿಲ್ಲದೆ ಜನ ಸಾಯುತ್ತಿದ್ದಾರೆ, ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ಔಷಧಿಗಳಿಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ವೈದ್ಯ ಲೋಕ ಭ್ರಮನಿರಸನಗೊಂಡಿದೆ. ಈ ಸಂದರ್ಭ ದಲ್ಲಿ ಶಾಲೆಗಳನ್ನು ಪ್ರಾರಂಭಿಸಿದರೆ ಮಕ್ಕಳ ಬದುಕಿಗೆ ಕಂಟಕ ತಂದಂತಾ ಗುವುದಿಲ್ಲವೇ? ‘ಯಾರೂ ಯಾರನ್ನೂ ದೂರುವುದರಲ್ಲಿ ಅರ್ಥವಿಲ್ಲ’.  ಪರಿಸ್ಥಿತಿ ಒಡ್ಡುವ ಸವಾಲುಗಳಿಗೆ ಎಲ್ಲರೂ ಬಾಧ್ಯರು ಎಂಬ ಅರಿವಿನಲ್ಲಿ ಕೈಜೋಡಿಸಿ ಮುಂದೆ ಸಾಗಬೇಕಾಗಿದೆ.

ಆರೋಗ್ಯದ ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯವೂ ಪ್ರಾಮುಖ್ಯ. ಕಳೆದ ಆರು ತಿಂಗಳುಗಳ ಪರಿಸ್ಥಿತಿಯನ್ನು ಅವಲೋ ಕಿಸುವಾಗ ಕರೋನಾ ನಿಯಂತ್ರಣ ಸಾಧ್ಯವೇ ಎಂಬ ಕಳವಳ ವ್ಯಕ್ತವಾಗುತ್ತಿದೆ. ಇದು ಜಾಗತಿಕ ದುರಂತ ಮತ್ತು ಖೇಧಕರ ವಿಚಾರ. ವೈರಸ್ ತಾಂಡವ ತಾರಕಕ್ಕೇರಿದೆ. ‘ವೈರಸ್ ನಾಮಾವಶೇಷ ಎಂದಿಗೆ ಎಂದು ಯಾರೂ ಹೇಳಲಾರರು.’ ತಜ್ಞ ವೈದ್ಯರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯೂ ಕೂಡಾ ಪ್ರತಿಕ್ರಿಯೆ ನೀಡುತ್ತಿಲ್ಲ.

ಆದರೆ ನಮ್ಮ ಮುಂದಿರುವ ‘ಆಶಾಕಿರಣವೆಂದರೆ ಕರೋನಾ ಸೋಂಕಿಗೆ ಲಸಿಕೆ ಲಭ್ಯವಾಗುವ ದಿನಗಳು ಸನ್ನಿಹಿತವಾಗ ಬಹು ದೆಂಬ ಅಪೇಕ್ಷೆ, ನಿರೀಕ್ಷೆ ಹಾಗೂ ಭರವಸೆಗಳು’. ಅದೂ ಕೂಡಾ ಸರಿಯಾದ, ಉತ್ತಮವಾದ, ಸುರಕ್ಷಿತ ಲಸಿಕೆ ಬರಬೇಕಾದರೆ ಒಂದೆರಡು ವರ್ಷಗಳೇ ಬೇಕಾಗ ಬಹುದೆಂಬ ವರದಿ ಮತ್ತು ಮಾಹಿತಿಗಳು ಪ್ರಕಟವಾಗುತ್ತಿರವ ಪ್ರಸಕ್ತ ಸನ್ನಿವೇಶದಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಅಂದರೆ ‘ಪರಿಣಾಮಕಾರಿ ಆನ್‌ಲೈನ್ ಶಿಕ್ಷಣಕ್ಕೆ ಚುರುಕಿನ ಪರಿಪೂರ್ಣ ಕ್ರಮ ಇಂದಿನ ಆದ್ಯತೆಯಾಗ ಬೇಕು.’

ಪ್ರಸಕ್ತ ಸನ್ನಿವೇಶದಲ್ಲಿ ‘ಆನ್‌ಲೈನ್ ಶಿಕ್ಷಣಕ್ಕೆ ಇಂಬುಕೊಡುವುದು ಅನಿವಾರ್ಯವಾಗಿದೆ’. ಪರಿವರ್ತನೆ ಜಗದ ನಿಯಮ, ಅನಿವಾರ್ಯ ಮತ್ತು ಅಭಿವೃದ್ಧಿಗೆ ಪೂರಕ ಆದರೆ ಪರಿವರ್ತನೆ ರಚನಾತ್ಮಕ ವಾಗಿರಬೇಕು. ಮೊನ್ನೆ ಮೊನ್ನೆಯವರೆಗೆ ಒಂದು ದೇಶದ ಪ್ರಗತಿ ಒಂದು ವರ್ಗದ ಕೋಣೆಯಲ್ಲಿ ನಿರ್ಮಾಣವಾಗುತ್ತದೆ. ಸಾಮಾಜಿಕ ಜಾಲತಾಣಗಳು ಮೊಬೈಲುಗಳು ನಮ್ಮ ಸೇವಕ ನಾಗಿರಬೇಕೇ ಹೊರತು ಮಾಲೀಕನಾಗಿರಬಾರದು ಎಂಬ ಸರ್ವಕಾಲಿಕ ಸತ್ಯವನ್ನು ಬೋಧಿಸುತ್ತಿರುವಾಗಲೇ ಬೆಂಬಿಡದ ಬೇತಾಳ ತನ್ನ ಆರ್ಭಟದಿಂದ ಜನಜೀವನದ ಪ್ರತಿಯೊಂದೂ ಕ್ಷೇತ್ರದ ವ್ಯವಸ್ಥೆಯನ್ನು ತಲೆಕೆಳಗೆ ಮಾಡಿದೆ. ಶೈಕ್ಷಣಿಕ ಕ್ಷೇತ್ರ ದಲ್ಲಂತೂ ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಾರದೆ ಗಲಿಬಿಲಿ ಯಾಗುವಂತೆ ಮಾಡಿದೆ. ನಾವು ಯು ಟರ್ನ್ ಹೊಡೆಯಬೇಕಾ ಗಿದೆ. ಈ ಕರೋನಾ ನಿರ್ದಿಷ್ಟ ಹಾದಿಯಲ್ಲಿ ಚಲಿಸದಿರುವುದು ಮತ್ತು ಉಲ್ಬಣ ಗೊಳ್ಳುತ್ತಿರುವುದು ಇನ್ನೊಂದು ಆತಂಕಕಾರಿ ಬೆಳವಣಿಗೆಯಾಗಿದೆ.

ದೀರ್ಘಕಾಲ ಶಾಲೆಗಳನ್ನು ಮುಚ್ಚಿಡುವುದರಿಂದ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪಿಡುಗು ಹೆಚ್ಚಬಹುದು. ಆದರೆ ಸನ್ನಿವೇಶಕ್ಕನುಗುಣವಾಗಿ ಆನ್‌ಲೈನ್ ಶಿಕ್ಷಣಕ್ಕೆ ಹೊಂದಿಕೊಂಡು ಸೂಕ್ತ ಮಾರ್ಪಾಟುಗಳನ್ನು ಮಾಡಿಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ. ಇಂದಿನ ಮಕ್ಕಳು ಡಿಜಿಟಲ್ ಮಾಧ್ಯಮಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಗ್ರಾಮೀಣ ಭಾಗದ ಮತ್ತು ಬಡತನದಲ್ಲಿರುವ ಮಕ್ಕಳಿಗೆ ಸುಲಭವಾಗಿ ಗ್ಯಾಜೆಟ್ ಸಾಧನಗಳು ಮತ್ತು ಸೌಕರ್ಯಗಳನ್ನು ಒದಗಿಸಿ ಅಂತರ್ಜಾಲ ವ್ಯವಸ್ಥೆ ಯನ್ನು ಸುವ್ಯವಸ್ಥಿತಗೊಳಿಸಿದರೆ ತರಗತಿ ಶಿಕ್ಷಣದಷ್ಟೇ ಪರಿಣಾಮಕಾರಿಯಾಗಿ ಫಲಪ್ರದವಾಗಬಹುದು.

ಇನ್ನು ಮುಂದೆ ಶಾಲೆಯೆಂದರೆ ನಾಲ್ಕು ಗೋಡೆಗಳ ಮಧ್ಯೆ ಒಂದು ಕೋಣೆಯಲ್ಲ ಎಂಬ ಕಲ್ಪನೆ ಮೂಡಲಿದೆ. ಅದೇ ರೀತಿ ‘ಗುರು ಗಳು ಕಲಿಸುವುದಕ್ಕೆ ತರಗತಿಗಳೇ ಬೇಕು ಎಂಬ ಅನಿಸಿಕೆ ಕೂಡಾ ದೂರವಾಗುವ ಕಾಲ ಸಮೀಪಿಸುತ್ತಿದೆ’. ಬದಲಾಗುತ್ತಿರುವ ಕಾಲಧರ್ಮದಲ್ಲಿ ನಮ್ಮ ಯುವಪೀಳಿಗೆಯನ್ನು ಮಾನಸಿಕವಾಗಿ ಸಿದ್ಧಪಡಿಸುವ ಕೆಲಸ ನಮ್ಮದು. ಪ್ರಶ್ನೆ ಏನೆಂದರೆ ತರಗತಿಗಳಲ್ಲಿ
ಅರ್ಥವಾಗದ ಪಾಠಗಳು ಆನ್‌ಲೈನ್‌ನಲ್ಲಿ ಅರ್ಥವಾದೀತೇ? ಪರದೆಯ ಮುಖಾಂತರ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಪಾಠ ಗಳು ಮಕ್ಕಳಿಗೆ ಅರ್ಥವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇದು ನಿಜ ಸಂಗತಿ. ಅದಲ್ಲದೆ ಕೆಲವು ಆನ್ ಲೈನ್ ‌ಗಳಲ್ಲಿ ಪಾಠ ಮಾಡುತ್ತಿರುವ ಅಧ್ಯಾಪಕರೂ ಕೂಡಾ ನಿರ್ದಿಷ್ಟ ಸಮಯದೊಳಗೆ ನಿಗದಿ ಪಡಿಸಿದ ಅಧ್ಯಾಯಗಳನ್ನು ಮುಗಿಸುವ ಕಾತರ ದಲ್ಲಿ ಹೆಚ್ಚೇನೂ ವಿವರಣೆ ಕೊಡದೇ ಪೇಚಿಗೆ ಸಿಲುಕಿರುವಂತೆ ಗೋಚರವಾಗುತ್ತಿದೆ.

ಕೆಲವೊಂದು ಪಾಠಗಳು ಕೇವಲ ಪವರ್‌ಪಾಯಿಂಟ್‌ಗಳನ್ನು ಪರದೆಯ ಮೂಲಕ ಓದುವಿಕೆಗೆ ಸೀಮಿತ ಗೊಳಿಸಿದಂತೆ ಕಾಣುತ್ತದೆ. ಆನ್‌ಲೈನ್ ಶಿಕ್ಷಣ ಮತ್ತು ರಾಜ್ಯ ಸರಕಾರದ ವಿದ್ಯಾಗಮ ಯೋಜನೆ ಮುಖಾಂತರ ಕಲಿಕಾ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ತರಗತಿ ಗಳಲ್ಲಿ ನಡೆಯುವ ಶಿಕ್ಷಣಕ್ಕೆ ಪರ್ಯಾಯವಲ್ಲ ಮತ್ತು ಯಾವತ್ತೂ ಆನ್‌ಲೈನ್ ಮತ್ತು ತರಗತಿಗಳ ಶಿಕ್ಷಣಕ್ಕೆ ತಯಾರಾಗಿರುವುದು ಸೂಕ್ತ.

ಸದ್ಯದ ಪರಿಸ್ಥಿತಿಯಲ್ಲಿ ವಿದೇಶಗಳು ಅನುಸರಿಸುತ್ತಿರುವ ಕೆಲವು ವಿಧಾನಗಳನ್ನು ಅನುಸರಿಸಬಹುದು. ಆದರೆ ಪೂರಕ ವ್ಯವಸ್ಥೆ ಗಳು ಅನಿವಾರ್ಯ. ವಿದೇಶಗಳಲ್ಲಿಯೂ ಭೌತಿಕವಾಗಿ ಶಾಲೆಗಳ ಆರಂಭಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು ಆನ್‌ಲೈನ್ ‌ನಲ್ಲಿ ಶೇ. 90 ರಷ್ಟು ತರಗತಿಗಳು ನಡೆಯುತ್ತವೆ. ಪ್ರಮುಖ ಮುಂದುವರಿದ ದೇಶಗಳಲ್ಲಿ ಪೋಷಕರಿಗೆ ಸರಕಾರಗಳು ಮಕ್ಕಳನ್ನು ಶಾಲೆಗೆ ಕಳುಹಿಸುವ ಅಥವಾ ಕಳುಹಿಸದಿರುವ ಆಯ್ಕೆ ನೀಡಲಾಗಿದೆ.

ಅವೇನೆಂದರೆ ಸಂಪೂರ್ಣ ಆನ್‌ಲೈನ್ ಶಿಕ್ಷಣ ಆಯ್ಕೆ, ಮೊದಲಿನಂತೆ ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಕಳುಹಿಸುವುದು, ಹೈಬ್ರಿಡ್ ಅಥವಾ ಬ್ಲೆಂಡೆಡ್ ಮಾದರಿ. (ಈ ಮಾದರಿಯಲ್ಲಿ ಕೆಲವೊಂದು ಕಷ್ಟದ ವಿಷಯಗಳನ್ನು ತರಗತಿಯಲ್ಲಿ ವಾರಕ್ಕೆ ಒಮ್ಮೆ ಯಾ ಎರಡು ಬಾರಿ ಕ್ಲಾಸ್ ನಡೆಸಿ ಕಲಿಸಲಾಗುತ್ತದೆ. ಉಳಿದ ವಿಷಯ ಆನ್‌ಲೈನ್ ನಲ್ಲಿಯೇ ನಡೆಯುತ್ತದೆ). ಯಾವ್ಯಾವ ದೇಶಗಳು ಆನ್‌ಲೈನ್ ಆಯ್ಕೆಯನ್ನು ನೀಡಿವೆಯೋ ಅಲ್ಲೆಲ್ಲಾ ಪೋಷಕರು ಮತ್ತು ಮಕ್ಕಳು ಹೆಚ್ಚಾಗಿ ಆನ್‌ಲೈನ್ ತರಗತಿಗಳನ್ನೇ ಆಯ್ಕೆ
ಮಾಡಿಕೊಂಡಿದ್ದಾರೆ. ಫ್ರಾನ್ಸ್, ಆಸ್ಟ್ರೇಲಿಯಾದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಮತ್ತು ಕರೋನಾ ಶಿಷ್ಟಾಚಾರ ಮತ್ತು ನಡಾವಳಿ ಗಳ ಅನುಷ್ಠಾನದಂತೆ ಶಾಲೆ ಕಾಲೇಜುಗಳನ್ನು ತೆರೆದು ಶಿಕ್ಷಣ ನಡೆಸುತ್ತಿವೆ.

ಅಲ್ಲಿ ಜನಸಂಖ್ಯೆ ಕಡಿಮೆ ಮತ್ತು ಶಾಲೆಗಳು ವಿಶಾಲವಾಗಿವೆ. ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುಲಭ. ಉದಾಹರಣೆ ಆಸ್ಟ್ರೇಲಿಯಾದಲ್ಲಿ ಒಂದು ಚ.ಕಿಮೀ. ಪ್ರದೇಶದಲ್ಲಿ ಸರಾಸರಿ 3.21 ಜನರು. ಅದೇ ಭಾರತದಲ್ಲಿ ಒಂದು ಚ.ಕಿಮೀಗೆ
3.82 ಜನ ವಾಸಿಸುತ್ತಿದ್ದಾರೆ. ನಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ನಮ್ಮಲ್ಲಿನ ನಗರ ಪ್ರದೇಶದ ಶಾಲೆಗಳು ಸಣ್ಣಪುಟ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಸಂದಿಗ್ಧ ಸನ್ನಿವೇಶದಲ್ಲಿ ಮಕ್ಕಳ ವಿಚಾರದಲ್ಲಿ ಆತುರದ ನಿರ್ಧಾರ ಸಲ್ಲದು ಹಾಗೂ ಎಲ್ಲಾ ಮಕ್ಕಳಿಗೂ ಸೌಲಭ್ಯಯುತವಾದ ಪರಿಣಾಮಕಾರಿಯಾದ ಆನ್‌ಲೈನ್ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು. ಅಂತರ್ಜಾಲ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಬೇಕು. ಶಾಲಾ ಪ್ರಾರಂಭಕ್ಕೆ ಆತುರದ ನಿರ್ಧಾರ ಸಲ್ಲದು.