ಪಾಟ್ನಾ: ಇತ್ತೀಚೆಗೆ ನಿಧನರಾದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ(ಎಲ್‍ಜೆಪಿ) ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ (74) ಅವರ ಅಂತ್ಯಕ್ರಿಯೆ ಶನಿವಾರ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಪಾಟ್ನಾದ ದಿಘಾ ಘಾಟ್‍ನಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಎಲ್‍ಜೆಪಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು, ದಲಿತ ಮುಖಂಡರು ಹಾಗೂ ಆಸಂಖ್ಯಾತ ಅನುಯಾಯಿಗಳ ಆಶ್ರುತರ್ಪಣ ದೊಂದಿಗೆ ಅಗಲಿದ ನಾಯಕನಿಗೆ ವಿದಾಯ ವಂದನೆ ಸಲ್ಲಿಸಿದರು.
ಪಾಸ್ವಾನ್ ಅವರ ಪುತ್ರ ಮತ್ತು ಎಲ್‍ಜೆಪಿ ನಾಯಕ ಚಿರಾಗ್ ಪಾಸ್ವಾನ್ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಿದರು. ಕೇಂದ್ರ ಸರ್ಕಾರದಿಂದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರತಿನಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ದೆಹಲಿಯಿಂದ ಪಾಸ್ವಾನ್ ಅವರ ಪಾರ್ಥವ ಶರೀರವನ್ನು ಹೊತ್ತ ವಿಶೇಷ ವಿಮಾನ ಪಾಟ್ನಾಗೆ ಆಗಮಿಸಿತು. ನಂತರ ಕಳೇಬರ ವನ್ನು ಕೆಲಕಾಲ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ನಂತರ ಅಂತಿಮ ಸಂಸ್ಕಾರಕ್ಕಾಗಿ ದಿಘಾ ಘಾಟ್‍ಗೆ ಕೊಂಡೊಯ್ಯ ಲಾಯಿತು.