Sunday, 24th November 2024

ಅಡುಗೆ ಕೋಣೆಯಲ್ಲಿಟ್ಟಿದ್ದ ಕಲ್ಲಂಗಡಿ ಹಣ್ಣು ಸ್ಫೋಟ…!

ತಿರುವನಂತಪುರಂ: ಅಂಗಡಿಯಿಂದ ಖರೀದಿಸಿ ಪೊನ್ನನಿಯ ನಸ್ರುದ್ದೀನ್ ಎಂಬುವರ​ ಮನೆಯ ಅಡುಗೆ ಕೋಣೆಯಲ್ಲಿ ಮನೆಗೆ ತಂದ ಕಲ್ಲಂಗಡಿ ಹಣ್ಣು ಸ್ಫೋಟಿಸಿದೆ.

ಹತ್ತಿರದ ಎಂಇಎಸ್​ ಕಾಲೇಜಿನಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ತರಲಾಗಿತ್ತು. ಅಡುಗೆ ಮನೆಯಲ್ಲಿ ಸ್ಫೋಟಗೊಂಡ ಶಬ್ಧ ಕೇಳಿ ಬೆಚ್ಚಿಬಿದ್ದ ಅಕ್ಕಪಕ್ಕದ ಮನೆಯವರು ಓಡಿ ಬಂದು ನೋಡಲು, ಕಲ್ಲಂಗಡಿ ಹಣ್ಣು ಛಿದ್ರಗೊಂಡಿತ್ತು.

ಮಾಹಿತಿ ತಿಳಿದು ಆರೋಗ್ಯ ಇಲಾಖೆ ಮತ್ತು ಮುನ್ಸಿಪಾಲಿಟಿಯ ಆಹಾರ ಸುರಕ್ಷತಾ ಅಧಿಕಾರಿಗಳು ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಚಾರಣೆ ನಡೆಸಿದ ಬಳಿಕ ಹಣ್ಣನ್ನು ಖರೀದಿ ಮಾಡಿದ ಅಂಗಡಿಗೆ ತೆರಳಿ ಹಣ್ಣಿನ ಸ್ಯಾಂಪಲ್​ ಪಡೆದು ಪರೀಕ್ಷೆಗೆಂದು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

ಅಮೆರಿಕದಲ್ಲಿ ಪ್ರತಿ ವರ್ಷವೂ ಕಲ್ಲಂಗಡಿ ಸ್ಫೋಟದಂತಹ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಗಳನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಸಾಕಷ್ಟು ಉದಾಹರಣೆಗಳು ಇವೆ.

ಕಲ್ಲಂಗಡಿ ಹಣ್ಣು ಯಾಕೆ ಸ್ಫೋಟಿಸುತ್ತದೆ ಎಂಬ ಪ್ರಶ್ನೆಗೆ ನ್ಯೂಯಾರ್ಕ್​ನ ನ್ಯೂಟ್ರಿಷನ್ ಗ್ರೂಪ್​ನ ಸಿಇಒ ಲಿಸಾ ಮಾಸ್ಕೋಯಿಟ್ಜ್ ಇನ್​ಸೈಡ್​ ಎಡಿಸನ್​ ಎಂಬ ಮಾಧ್ಯಮಕ್ಕೆ ವಿವರಿಸಿದ್ದಾರೆ. ತೀವ್ರವಾದ ಶಾಖವು ಕಲ್ಲಂಗಡಿ ಹಣ್ಣುಗಳ ಒಳಗೆ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಬ್ಯಾಕ್ಟೀರಿಯಾವು ಕಲ್ಲಂಗಡಿಯಲ್ಲಿರುವ ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುತ್ತದೆ. ಇದು ಕಾರ್ಬನ್ ಡೈಆಕ್ಸೈಡ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಗಾಳಿಯ ಒತ್ತಡ ನಿರ್ಮಾಣವಾಗಿ, ಕಲ್ಲಂಗಡಿ ಸ್ಫೋಟಿಸುತ್ತದೆ ಎಂದು ಲಿಸಾ ಮಾಸ್ಕೋಯಿಟ್ಜ್ ತಿಳಿಸಿದ್ದಾರೆ.