ಶಶಾಂಕಣ
shashidhara.halady@gmail.com
ಸ್ಟುಟ್‌ಗಾರ್ಟ್ ಎಂಬುದು ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಒಂದು ಪುಟ್ಟ ನಗರ. ಸುಮಾರು ೬ ಲಕ್ಷ ಜನಸಂಖ್ಯೆ ಇರುವ ಸ್ಟುಟ್‌ಗಾರ್ಟ್‌ಗೂ, ನಮ್ಮ
ದೇಶಕ್ಕೂ ಏನು ಸಂಬಂಧ ಎಂದು ಕೇಳಿದರೆ ಬಹು ಪಾಲು ಜನಸಾಮಾನ್ಯರು ಗೊತ್ತಿಲ್ಲ ಎಂದೇ ಉತ್ತರಿಸಿ ಯಾರು. ಇದೇ ಪ್ರಶ್ನೆಯನ್ನು ಜರ್ಮನಿಯವರಿಗೆ
ಕೇಳಿದರೆ, ಆಟೊಮೊಬೈಲ್ ಕ್ರಾಂತಿ ಆರಂಭ ವಾಗಿದ್ದೇ ಇಲ್ಲಿಂದ ಎಂದು ಹೆಮ್ಮೆಯಿಂದ ಹೇಳಿಕೊಂಡಾರು. ಕಾರ್ಲ್ ಬೆಂಜ್ ಎಂಬಾತನು (ಬೆಂಜ್ ಸಂಸ್ಥೆ ಯನ್ನು ಹುಟ್ಟುಹಾಕಿದಾತ) ೧೮೮೫ ಮತ್ತು ೧೮೮೭ರಲ್ಲಿ ಕ್ರಮವಾಗಿ ಮೊದಲ ಕಾರು ಮತ್ತು ಮೋಟಾರ್‌ಸೈಕಲ್‌ಗಳನ್ನು ಇಲ್ಲೇ ರೂಪಿಸಿದ ಎಂದೂ ಹೇಳುತ್ತಾರೆ.
ಆದರೆ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಸ್ಟುಟ್‌ಗಾರ್ಟ್‌ನಲ್ಲಿ ನಡೆದ ಒಂದು ಪ್ರಮುಖ ವಿದ್ಯಮಾನವು ವಿಶೇಷ ಎನಿಸಿದೆ.
೨೨.೮.೧೯೦೭ರಂದು ಜರ್ಮನಿಯ ಸ್ಟುಟ್‌ಗಾರ್ಟ್ ನಲ್ಲಿ ಸ್ವತಂತ್ರ ಭಾರತದ ಮೊತ್ತಮೊದಲ ಬಾವುಟವನ್ನು ಅನಾವರಣಗೊಳಿಸಲಾಯಿತು ಎಂಬ
ಮಾಹಿತಿಯು ಪ್ರಮುಖ ಎನಿಸಿದ್ದು, ಇಂದು ಆ ಕುರಿತು ಹೆಚ್ಚಿನ ಪ್ರಚಾರವಿಲ್ಲ!
ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಸುಮಾರು ೪೦ ವರ್ಷಗಳ ಹಿಂದೆ, ಸ್ಟುಟ್‌ಗಾರ್ಟ್‌ನ ‘ಸೋಷಿಯಲಿಸ್ಟ್ ಕಾಂಗ್ರೆಸ್’ ಸಮಾವೇಶದಲ್ಲಿ ಸ್ವತಂತ್ರ ಭಾರತದ
ಬಾವುಟವನ್ನು ಅನಾವರಣ ಮಾಡಿದವರು ಮೇಡಂ ಭಿಕಾಜಿ ಕಾಮಾ ಎಂಬ ಮಹಿಳೆ. ಮೇಡಂ ಕಾಮಾ ಎಂಬ ಹೆಸರು ನಮ್ಮ ಪಠ್ಯಪುಸ್ತಕಗಳಲ್ಲಿ ಅಲ್ಲಲ್ಲಿ
ಇರುವುದರಿಂದಾಗಿ, ಅವರು ಸ್ವಾತಂತ್ರ್ಯ ಹೋರಾಟ ಗಾರರಲ್ಲಿ ಒಬ್ಬರು ಎಂಬುದು ಕೆಲವರಿಗಾದರೂ ತಿಳಿದಿದೆ. ಆದರೆ, ಗುಜರಾತಿನ ಈ ಸ್ಥಿತಿವಂತ
ಮಹಿಳೆ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡು, ತನ್ನ ಜೀವನವನ್ನೇ ದೇಶಕ್ಕಾಗಿ ತ್ಯಾಗಮಾಡಿದರು ಎಂಬ ವಿಚಾರ ಬಹುಮಂದಿಗೆ ತಿಳಿದಿಲ್ಲ.
ಒಬ್ಬ ಹೋರಾಟಗಾರ್ತಿಯಾಗಿ ವಿದೇಶದಲ್ಲೇ ಇದ್ದುಕೊಂಡು, ಭಾರತದ ಪರವಾಗಿ ಇವರು ನಡೆಸಿದ ಹೋರಾಟ ಮತ್ತು ಅದಕ್ಕಾಗಿ ಮಾಡಿದ ತ್ಯಾಗ
ಮಹತ್ತಾದುದು. ಇವರು ನೆಮ್ಮದಿಯಾಗಿ ಭಾರತ ದಲ್ಲೇ ಇದ್ದುಕೊಂಡು, ಸಮಾಜಸೇವೆ ಮಾಡುತ್ತಾ ಕಾಲಕಳೆಯಬಹುದಿತ್ತು; ಆದರೆ, ಬ್ರಿಟಿಷರ
ವಿರುದ್ಧದ ಹೋರಾಟವನ್ನು ಲಂಡನ್‌ನಲ್ಲಿ ಆರಂಭಿಸಿ, ಆ ನಂತರ ಬಹುಪಾಲು ವರ್ಷಗಳನ್ನು ಯುರೋಪಿನಲ್ಲಿ ಪರದೇಶಿಯಾಗಿಯೇ ಕಾಲ ಕಳೆ
ದರು, ಹಲವು ಹೋರಾಟಗಾರರನ್ನು ರೂಪಿಸಿದರು. ೧೯೦೭ರಲ್ಲಿ ಇವರು ಅನಾವರಣ ಮಾಡಿದ ಸ್ವತಂತ್ರ ಭಾರತದ ಬಾವುಟವು ತ್ರಿವರ್ಣ ಧ್ವಜವಾ
ಗಿದ್ದು, ಇಂದು ನಾವು ಅಭಿಮಾನದಿಂದ ಹಾರಿಸುತ್ತಿರುವ ತ್ರಿವರ್ಣ ಧ್ವಜದ ವಿನ್ಯಾಸಕ್ಕೆ ಅನನ್ಯ ಕೊಡುಗೆ ನೀಡಿದೆ.
ಹಸಿರು, ಹಳದಿ ಮತ್ತು ಕೇಸರಿ ಬಣ್ಣವನ್ನು ಹೊಂದಿದ್ದ ಈ ಬಾವುಟವು, ಇಂದಿನ ಹಸಿರು, ಬಿಳಿ ಮತ್ತು ಕೇಸರಿ ಬಣ್ಣದ ಬಾವುಟವನ್ನು ಬಹುವಾಗಿ
ಹೋಲುತ್ತದೆ. ಅವರು ವಿನ್ಯಾಸಗೊಳಿಸಿದ ಬಾವುಟದಲ್ಲಿ ಸೂರ್ಯ, ಚಂದ್ರ ಮತ್ತು ಕಮಲದ ಹೂವುಗಳಿಗೂ ಸ್ಥಾನವಿತ್ತು. ವಿದೇಶಿ ನೆಲದಲ್ಲಿ, ಸ್ವತಂತ್ರ
ಭಾರತದ ಬಾವುಟವನ್ನು ಹಾರಿಸಿದ ಮೇಡಂ ಭಿಕಾಜಿ ಕಾಮಾ ಅವರು, ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯುತ್ತದೆ ಎಂದು ಕನಸು ಕಂಡಿದ್ದರು, ಆ ಕುರಿತು ಸಾಕಷ್ಟು ಕೆಲಸವನ್ನೂ ಮಾಡಿದ್ದರು, ತಮ್ಮ ಸಂಪತ್ತನ್ನು ಅದಕ್ಕಾಗಿ ವಿನಿಯೋಗಿಸಿದರು. ಆದರೆ, ಅವರು ಇಹಲೋಕ ತ್ಯಜಿಸುವ ತನಕ (೧೯೩೬) ದೇಶ ಸ್ವಾತಂತ್ರ್ಯವನ್ನು ಗಳಿಸಲೇ ಇಲ್ಲ!
ಇಂದಿನ ಗುಜರಾತಿನ, ಅಂದಿನ ಮುಂಬಯಿ ಪ್ರೆಸಿಡೆನ್ಸಿಯ ನವಸಾರಿ ಎಂಬ ಪಟ್ಟಣದಲ್ಲಿ ೨೪.೯.೧೮೬೧ರಂದು ಜನಿಸಿದ ಭಿಕಾಜಿ ಕಾಮಾ,
ಮುಂಬಯಿಯಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದರು. ಅವರ ತಂದೆ ಸೊರಾಬ್ಜಿ ಪಟೇಲ್, ಮುಂಬಯಿಯ ಖ್ಯಾತ ವ್ಯಾಪಾರಿ ಮತ್ತು ವಕೀಲರು. ಅಂದಿನ
ಹೆಚ್ಚಿನ ಪಾರ್ಸಿ ಮಕ್ಕಳ ರೀತಿ ಯಲ್ಲೇ, ಅಲೆಕ್ಸಾಂಡ್ರಾ ಗರ್ಲ್ಸ್ ಇಂಗ್ಲಿಷ್ ಶಾಲೆ ಯಲ್ಲಿ ವಿದ್ಯಾಭ್ಯಾಸ ಪಡೆದ ಭಿಕಾಜಿಯವರು, ೧೮೮೫ರಲ್ಲಿ ರುಸ್ತುಂ ಕಾಮಾ ಎಂಬ ಶ್ರೀಮಂತ ವಕೀಲರನ್ನು ವಿವಾಹವಾದರು. ಆದರೆ, ರುಸ್ತುಂ ಕಾಮಾ, ಬ್ರಿಟಿಷ್ ಆಡಳಿತದ ಪರವಾಗಿದ್ದ ವಕೀಲರು; ಅಂದಿನ ಬಿಗಿ ವಸಾಹತುಶಾಹಿ ಆಳ್ವಿಕೆ ಯನ್ನು ಎದುರುಹಾಕಿಕೊಳ್ಳಲು ಅವರು ಸಿದ್ಧವಿರಲಿಲ್ಲ.
ಭಿಕಾಜಿ ಕಾಮಾ ಸಮಾಜ ಸೇವೆಯಲ್ಲಿ ನೆಮ್ಮದಿ ಕಾಣತೊಡಗಿದರು. ೧೮೯೬ರಲ್ಲಿ ಮುಂಬಯಿ ಪ್ರೆಸಿಡೆನ್ಸಿಯ ಕೃಷಿಕರು ಬರಗಾಲವನ್ನು ಎದುರಿಸ ಬೇಕಾಯಿತು; ಅದೇ ಸಮಯದಲ್ಲಿ ಪ್ಲೇಗ್ ರೋಗವು ಆ ಪ್ರದೇಶ ದಲ್ಲಿ ವ್ಯಾಪಕವಾಗಿ ಹರಡಿ, ಜನರು ಸಂಕಷ್ಟಕ್ಕೆ ಒಳಗಾದರು. ಭಿಕಾಜಿ ಕಾಮಾ,
ಪ್ಲೇಗ್ ಪೀಡಿತರ ಸೇವೆಯಲ್ಲಿ ತೊಡಗಿಕೊಂಡರು; ಪ್ಲೇಗ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ಜನರ ಮನವೊಲಿಸುವ ತಂಡದ ಸದಸ್ಯರಾದರು. ಆದರೆ,
ಅವರಿಗೇ ಪ್ಲೇಗ್ ತಗುಲಿದಾಗ, ಬಳಲಿದರು; ಪ್ಲೇಗ್ ನಿಂದ ಗುಣಮುಖರಾದರೂ, ಬಹುವಾಗಿ ದುರ್ಬಲರಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ
ಲಂಡನ್‌ಗೆ ಕಳುಹಿಸಲಾಯಿತು (೧೯೦೨).
ಇದು ಅವರ ಬದುಕಿನ ಬಹುಮುಖ್ಯ ತಿರುವು. ಲಂಡನ್‌ನಲ್ಲಿ ಶ್ಯಾಮ್‌ಜಿ ಕೃಷ್ಣ ವರ್ಮ ಎಂಬ ಹೋರಾಟಗಾರರ ಪರಿಚಯವಾಯಿತು (೧೯೦೪).
ಕೃಷ್ಣ ವರ್ಮ, ಗುಜರಾತಿನಿಂದ ಲಂಡನ್‌ಗೆ ಬಂದು, ಇಂಡಿಯಾ ಹೌಸ್ ಸ್ಥಾಪಿಸಿ, ಬ್ರಿಟಿಷರ ವಿರುದ್ಧ ಹೋರಾಡಲೆಂದು ಭಾರತೀಯ ಯುವಕರನ್ನು
ಪ್ರೋತ್ಸಾಹಿಸುತ್ತಿದ್ದರು; ಒಂದು ಬಾರಿಗೆ ೨೫ ಜನ ಭಾರತೀಯ ವಿದ್ಯಾರ್ಥಿಗಳನ್ನು ಇಂಡಿಯಾ ಹೌಸ್ ನಲ್ಲಿ ತಂಗಲು ಅವಕಾಶ ನೀಡಿದ್ದರು ಮಾತ್ರ ವಲ್ಲ,
ಅವರಿಗೆ ವಿದ್ಯಾರ್ಥಿವೇತನ ಒದಗಿಸಿದ್ದರು; ರಾಷ್ಟ್ರೀಯತೆಯ ಕುರಿತು ಪ್ರಖರವಾದ ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಕಾಂಗ್ರೆಸ್‌ನ ಆಗಿನ ಅಧ್ಯಕ್ಷ ದಾದಾಬಾಯಿ ನವರೋಜಿಯವರು ಭಿಕಾಜಿ ಕಾಮಾ ಅವರಿಗೆ ಪರಿಚಿತರಾದರು; ಭಿಕಾಜಿ ಕಾಮಾ ದಾದಾಬಾಯಿ ನವರೋಜಿಯವರ ಕಾರ್ಯದರ್ಶಿ ಯಂತೆ ಕೆಲಸ ಮಾಡ ತೊಡಗಿದರು.
೧೯೦೫ರಲ್ಲಿ ಕೃಷ್ಣ ವರ್ಮ ಅವರು, ತಮ್ಮ ಉಳಿತಾಯದ ಹಣದಿಂದ ಲಂಡನ್‌ನಲ್ಲಿ ದೊಡ್ಡ ಬಂಗಲೆಯೊಂದನ್ನು ಖರೀದಿಸಿ, ಅದನ್ನು ‘ಇಂಡಿಯಾ ಹೌಸ್’ ಎಂದು ಹೆಸರಿಸಿ, ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ವೇದಿಕೆಯನ್ನು ಸಿದ್ಧಪಡಿಸಿದರು; ಈ ಸಾಹಸದಲ್ಲೂ ಭಿಕಾಜಿ ಕಾಮಾ ಅವರ ಕೊಡುಗೆ ಇದೆ. ಇಂಡಿಯಾ ಹೌಸ್‌ನಲ್ಲಿ ಕ್ರಾಂತಿಕಾರಿಗಳು ಸೇರಿ, ಹೋರಾಟದ ದಾರಿಯನ್ನು ಚರ್ಚಿಸುತ್ತಿದ್ದರು. ಅವರ ಜತೆ, ಭಿಕಾಜಿ ಗುರುತಿಸಿಕೊಂಡರು. ತಮ್ಮದೇ ನೆಲದಲ್ಲಿ, ತಮ್ಮ ವಿರುದ್ಧ ನಡೆಯುತ್ತಿದ್ದ ಇಂಥ ಚಟುವಟಿಕೆಗಳನ್ನು ನೋಡುತ್ತಾ ಬ್ರಿಟಿಷ್ ಪೊಲೀಸರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ೧೯೦೬ರ
ಸಮಯದಲ್ಲಿ ಮುಂಬಯಿಗೆ ವಾಪಸಾಗಬೇಕು ಎಂದು ಭಿಕಾಜಿ ಕಾಮಾ ಸಿದ್ಧತೆ ನಡೆಸ ತೊಡಗಿದಾಗ, ಬ್ರಿಟಿಷ್ ಸರಕಾರ ಮಧ್ಯ ಪ್ರವೇಶಿಸಿತು.
ಅವರು ಭಾರತಕ್ಕೆ ವಾಪಸಾಗಬೇಕಾದರೆ, ‘ಅಲ್ಲಿ ರಾಷ್ಟ್ರೀಯತೆಯ ಕುರಿತಾದ ಯಾವುದೇ ಚಟುವಟಿಕೆ ಗಳಲ್ಲಿ ಭಾಗವಹಿಸುವುದಿಲ್ಲ’ ಎಂಬ ಮುಚ್ಚಳಿಕೆ ಬರೆದು ಕೊಡಬೇಕು ಎಂದು ಪೊಲೀಸರು ತಾಕೀತು ಮಾಡಿದರು. ಭಿಕಾಜಿ ಕಾಮಾ ಅದಕ್ಕೆ ಒಪ್ಪಲಿಲ್ಲ. ಬಹುಶಃ, ಮುಚ್ಚಳಿಕೆ ಬರೆದುಕೊಟ್ಟು, ಭಾರತಕ್ಕೆ ವಾಪಸಾಗಿದ್ದರೆ, ಅವರು ಮುಂಬಯಿಯಲ್ಲಿ ನೆಮ್ಮದಿಯ ಜೀವನ ನಡೆಸ ಬಹುದಿತ್ತೇನೋ. ಆ ಕ್ಷಣದಲ್ಲಿ ಅವರು ಕೈಗೊಂಡ ಆ ಒಂದು ನಿರ್ಣಯ, ಅವರ
ಇಡೀ ಬದುಕನ್ನು ಪರದೇಶಿಯಾಗುವಂತೆ ಮಾಡಿತು! ಇಂಡಿಯಾ ಹೌಸ್‌ನಲ್ಲಿ ರಾಷ್ಟ್ರೀಯವಾದಿಗಳ ಮತ್ತು ಕ್ರಾಂತಿಕಾರಿಗಳ ಚಟುವಟಿಕೆ ತೀವ್ರವಾ
ಯಿತು; ಇಂಡಿಯಾ ಹೌಸ್‌ಗೆ ಸಂಬಂಧಪಟ್ಟವ ರೆಲ್ಲರ ಮೇಲೂ ಬ್ರಿಟಿಷರು ಈಗ ನಿಗಾ ವಹಿಸಿದರು.
ಅಲ್ಲೇ ಇದ್ದರೆ ಬಂಧನ ವಾಗುತ್ತದೆ ಎಂದು ಊಹಿಸಿ, ಭಿಕಾಜಿ ಕಾಮ, ಕೃಷ್ಣ ಶರ್ಮ ಮೊದಲಾದವರು ಪ್ಯಾರಿಸ್‌ಗೆ ಹೋದರು. ಎಸ್.ಆರ್.ರಾಣಾ,
ಎಂ.ಬಿ. ಗೋದ್ರೆಜ್ ಮೊದಲಾದವರ ಜತೆ ಪ್ಯಾರಿಸ್ ನಲ್ಲಿ ನೆಲೆಸಿದ ಕಾಮಾ, ‘ಪ್ಯಾರಿಸ್ ಇಂಡಿಯನ್ ಸೊಸೈಟಿ’ಯನ್ನು ಸ್ಥಾಪಿಸಿದರು. ಇಂದು ಲಂಡನ್‌ನ
‘ಇಂಡಿಯಾ ಹೌಸ್’ಗೆ ಪರ್ಯಾಯ ಎನಿಸಿದ್ದು, ಭಾರತದ ಪರವಾಗಿ ಅಂತಾರಾಷ್ಟ್ರೀಯ ಸಹಾನುಭೂತಿಯನ್ನು ಗಳಿಸುವಲ್ಲಿ ಕೆಲಸಮಾಡತೊಡಗಿತು.
ಭಾರತದ ಪರ ಹೋರಾಟದ ಮಾಹಿತಿಯನ್ನು ಎಲ್ಲರಿಗೆ ತಲುಪಿಸುವ ಪ್ರಯತ್ನದಲ್ಲಿ, ‘ಬಂದೇ ಮಾತರಂ’ ಎಂಬ ಪತ್ರಿಕೆಯನ್ನು ಭಿಕಾಜಿ ಕಾಮಾ
ಆರಂಭಿಸಿದರು. ೧೯೦೯ರಲ್ಲಿ ಮದನ್‌ಲಾಲ್ ಧಿಂಗ್ರಾನು ಲಂಡನ್‌ನಲ್ಲಿ ಕರ್ಜನ್ ವೈಲಿ ಎಂಬ ಬ್ರಿಟಿಷ್ ಆಡಳಿತಗಾರರನ್ನು ಗುಂಡಿಟ್ಟು ಕೊಂದ,
ಬ್ರಿಟಿಷ್ ಪೊಲೀಸರ ಕೈಗೆ ಸಿಕ್ಕು ಹುತಾತ್ಮನಾದ. ಅವರ ನೆನಪಿನಲ್ಲಿ, ‘ಮದನ್ಸ್ ತಲ್ವಾರ್’ ಎಂಬ ಪತ್ರಿಕೆಯನ್ನು ಸಹ ಮೇಡಂ ಭಿಕಾಜಿ ಕಾಮಾ ಆರಂಭಿಸಿ ದರು.
ಈ ಪತ್ರಿಕೆಗಳನ್ನು ನಮ್ಮ ದೇಶಕ್ಕೆ ಕಳ್ಳ ಸಾಗಾಣಿಕೆ ಮಾಡಿ, ಹಂಚುತ್ತಿದ್ದರು. ಅತ್ತ, ಲಂಡನ್ ಗೂ ಈ ಪತ್ರಿಕೆಯ ಪ್ರತಿಗಳನ್ನು ಕಳುಹಿಸಲಾಗುತ್ತಿತ್ತು.
ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ೧೯೦೭ರಲ್ಲಿ ಎರಡನೆಯ ‘ಸೋಷಿಯಲಿಸ್ಟ್ ಕಾಂಗ್ರೆಸ್ ಸಮ್ಮೇಳನ’ ನಡೆಯಿತು. ಅದರಲ್ಲಿ ಭಾಗವಹಿಸಿದ ಭಿಕಾಜಿ
ಕಾಮಾ ಅವರು, ೨೨.೮.೧೯೦೭ರಂದು ಸ್ವತಂತ್ರ ಭಾರತದ ತ್ರಿವರ್ಣ ಧ್ವಜವನ್ನು ಅನಾವರಣ ಗೊಳಿಸಿ ದರು. ಸ್ವತಂತ್ರ ಭಾರತದ ಮೊದಲ ಧ್ವಜ ವಾಗಿ ಅದು ಹೆಸರಾಗಿದೆ.
೧೯೦೯ರಲ್ಲಿ ಲಂಡನ್‌ನಲ್ಲಿ ಮದನ್‌ಲಾಲ್ ಧಿಂಗ್ರಾನು ಕರ್ಜನ್ ವೈಲಿಯನ್ನು ಎಲ್ಲರ ಎದುರಿನಲ್ಲೇ ಗುಂಡಿಟ್ಟು ಹತ್ಯೆ ಮಾಡಿದ ನಂತರ, ಇಂಡಿಯಾ ಹೌಸ್‌ಗೆ ಸಂಬಂಧಪಟ್ಟವರೆಲ್ಲರನ್ನೂ ಬ್ರಿಟಿಷರು ತಪಾಸಣೆಗೊಳಪಡಿಸಿದರು; ಹಲವು ಪ್ರಮುಖ ಹೋರಾಟಗಾರರನ್ನು ಬಂಧಿಸಿದರು. ಪ್ಯಾರಿಸ್‌ನಲ್ಲಿದ್ದ ಭಿಕಾಜಿ ಕಾಮಾ ಅವರನ್ನು ತನ್ನ ವಶಕ್ಕೆ ಕೊಡಬೇಕು ಎಂದು ಬ್ರಿಟನ್ ದೇಶವು ಫ್ರೆಂಚರನ್ನು ಕೇಳಿಕೊಂಡಿತು. ಆದರೆ, ಫ್ರೆಂಚರು ಆಗ ಒಪ್ಪಲಿಲ್ಲ.
ಭಿಕಾಜಿ ಕಾಮಾ ಸ್ತ್ರೀ ಸಮಾನತೆಯನ್ನೂ ಪ್ರತಿಪಾದಿಸಿದ್ದು ದಾಖಲಾಗಿದೆ. ೧೯೧೦ರಲ್ಲಿ ಈಜಿಪ್ಟ್‌ನಲ್ಲಿ ಭಾಷಣ ಮಾಡುತ್ತಾ, ‘ಪುರುಷರು ಮಾತ್ರ ಇಲ್ಲಿ
ದ್ದೀರಿ. ನಿಮ್ಮ ತಾಯಂದಿರು, ಸಹೋದರಿಯರು, ಮಕ್ಕಳು ಏಕೆ ಈ ಭಾಷಣಕ್ಕೆ ಬಂದಿಲ್ಲ?’ ಎಂದು ಪ್ರಶ್ನಿಸಿ, ಸಮಾನತೆಯನ್ನು ಪ್ರತಿಪಾದಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ, ಮಹಿಳೆಯರಿಗೂ ಮತದಾನದ ಹಕ್ಕು ದೊರಕುತ್ತದೆ ಎಂದು ಹೇಳುತ್ತಿದ್ದರು. ಈ ನಡುವೆ ೧೯೧೪ರಲ್ಲಿ ಮೊದಲ ಮಹಾಯುದ್ಧ ಆರಂಭವಾಯಿತು; ಆಗ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಒಂದಾದವು. ಪ್ಯಾರಿಸ್‌ನಲ್ಲಿದ್ದ ‘ಇಂಡಿಯಾ ಸೊಸೈಟಿ’ಯ ಚಟುವಟಿಕೆಗಳನ್ನು ಬರಖಾಸ್ತುಗೊಳಿಸುವಂತೆ ಬ್ರಿಟಿಷರು ಫ್ರಾನ್ಸ್ ಮೇಲೆ ಒತ್ತಡ ತಂದರು.
೧೯೧೪ರ ಅಕ್ಟೋಬರ್‌ನಲ್ಲಿ ಭಿಕಾಜಿ ಕಾಮಾರನ್ನು ಬಂಧಿಸಲಾಯಿತು! ಈ ಬಂಧನದ ಅವಧಿ ಕಿರಿದಾಗಿದ್ದರೂ, ನಂತರ, ಅವರು ಸ್ವಾತಂತ್ರ್ಯಪರವಾದ ಹೋರಾಟದಲ್ಲಿ ಭಾಗವಹಿಸದಂತೆ ಒತ್ತಡವಿತ್ತು. ಪ್ಯಾರಿಸ್ ತೊರೆದು ವಿಚಿ ಎಂಬ ಪಟ್ಟಣಕ್ಕೆ ಕಾಮಾ ಸ್ಥಳಾಂತರಗೊಂಡರು. ಇವರ ಹೋರಾಟಗಳಲ್ಲಿ ಜತೆಗಾರರಾಗಿದ್ದ ಎಸ್.ಆರ್.ರಾಣಾ ಎಂಬುವವರನ್ನು ವೆಸ್ಟ್ ಇಂಡೀಸ್‌ನ ದ್ವೀಪವೊಂದಕ್ಕೆ ಸರಕಾರವೇ ರವಾನಿಸಿತು! ಬ್ರಿಟಿಷರು ಮತ್ತು ಫ್ರೆಂಚರು ಪರಸ್ಪರ ಗೆಳೆಯರಾದ ನಂತರ, ಕಾಮಾ ಮತ್ತು ಅವರ ಜತೆಗಾರರ ಹೋರಾಟದ ಕಾವು ತೀವ್ರವಾಗಿ ಕುಂದಿತು.
ದುರಂತವೆಂದರೆ, ಆ ನಂತರ, ಪ್ಯಾರಿಸ್ ಇಂಡಿಯಾ ಸೊಸೈಟಿ ಗರಿಗೆದರಲು ಅವಕಾಶ ವಾಗಲಿಲ್ಲ; ಮೇಡಂ ಕಾಮಾ ೧೯೩೫ರ ತನಕ ಪರದೇಶಿಯಾಗಿ
ಯುರೋಪಿನ ವಿವಿಧ ಪ್ರದೇಶಗಳಲ್ಲಿ ವಾಸಿಸ ಬೇಕಾಯಿತು! ಆ ಸಮಯಕ್ಕಾಗಲೇ ಅವರನ್ನು ಪಾರ್ಶ್ವವಾಯು ಕಾಡಿತು. ೨೪.೬.೧೯೩೫ ರಂದು
ಪ್ಯಾರಿಸ್‌ನಿಂದಲೇ ಒಂದು ಪತ್ರ ಬರೆದು, ತಾನು ಇನ್ನು ಮುಂದೆ ದೇಶವಿರೋಽ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ, ಒಮ್ಮೆ ತನ್ನ ತಾಯ್ನಾಡಿಗೆ
ವಾಪಸು ಬರಲು ಅನುಮತಿ ನೀಡಿ ಎಂದು ಬ್ರಿಟಿಷರನ್ನು ಕೇಳಿಕೊಂಡರು. ನವೆಂಬರ್ ೧೯೩೫ರಲ್ಲಿ ಮುಂಬಯಿಗೆ ವಾಪಸಾದಾಗ ಅವರಿಗೆ, ೭೪ ವರ್ಷ.
ಅದಾಗಿ ಕೆಲವೇ ತಿಂಗಳುಗಳಲ್ಲಿ ಇಹಲೋಕ ತ್ಯಜಿಸಿದರು. ತಾಯ್ನಾಡು ವಿದೇಶಿಯರ ಹಿಡಿತದಿಂದ ಬಿಡುಗಡೆಯಾಗುವುದನ್ನು ನೋಡುವ ಅದೃಷ್ಟ
ಅವರಿಗೆ ಇರಲಿಲ್ಲ.
೧೯೯೭ರಲ್ಲಿ ನಮ್ಮ ದೇಶದ ಕರಾವಳಿ ಪಡೆಯ ಗಸ್ತು ವಾಹನಕ್ಕೆ ‘ಭಿಕಾಜಿ ಕಾಮಾ’ ಅವರ ಹೆಸರನ್ನಿಡಲಾಗಿದೆ. ಅವರ ಗೌರವಾರ್ಥ ಅಂಚೆ ಚೀಟಿ
ಯನ್ನೂ ಹೊರತರಲಾಗಿದೆ. ಆದರೂ, ಪಾರ್ಸಿ ಮಹಿಳೆ ಮೇಡಂ ಭಿಕಾಜಿ ಕಾಮಾ ಅವರ ಹೋರಾಟ ಮತ್ತು ತ್ಯಾಗದ ವಿವರಗಳನ್ನು ಈಗಿನ ತಲೆಮಾರು
ಬಹುಪಾಲು ಮರೆತೇಬಿಟ್ಟಿದೆ ಎಂಬುದು ಒಂದು ಕಟುಸತ್ಯ.