Friday, 22nd November 2024

ಮಾ.5ರಂದು ನಗರದಲ್ಲಿ ಬೃಹತ್ ಟ್ರ್ಯಾಕ್ಟರ್‌ ರ್‍ಯಾಲಿ

ಹಾವೇರಿ: ‘ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ನೂರಾರು ರೈತ ಸಂಘಟನೆಗಳು ದೆಹಲಿಯಲ್ಲಿ ನಡೆಸು ತ್ತಿರುವ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾ.5ರಂದು ನಗರದಲ್ಲಿ ಬೃಹತ್ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ದಿಳ್ಳೆಪ್ಪ ಮಣ್ಣೂರ ತಿಳಿಸಿದರು.

‘ಇನ್ಶುರೆನ್ಸ್ ಕಂಪನಿಯವರು ಮುಂಗಾರು ಮತ್ತು ಹಿಂಗಾರು ಬೆಳೆಗಳ ಸಮೀಕ್ಷೆ ಮಾಡುವಾಗ ರೈತರಿಗೆ ತಿಳಿಸದೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಬೇಕು. ಹಾವೇರಿ ತಾಲ್ಲೂಕಿನ ಹಾಲು ಉತ್ಪಾದಕ ರೈತರಿಗೆ ಸರ್ಕಾರದ ₹5 ಪ್ರೋತ್ಸಾಹಧನವನ್ನು 10 ತಿಂಗಳಿನಿಂದ ಬಿಡುಗಡೆ ಮಾಡಿಲ್ಲ. ಕೂಡಲೇ ಪ್ರೋತ್ಸಾಹಧನ ನೀಡಬೇಕು’ ಎಂದು ಒತ್ತಾಯಿಸಿದರು.

‘ಹಾವೇರಿ ಜಿಲ್ಲಾ ಮೆಗಾ ಡೇರಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ತ್ವರಿತವಾಗಿ ಕಾಮಗಾರಿ ಮುಗಿಸಬೇಕು. ಅರ್ಹರಿಗೆ ಕೆಲಸ ನೀಡಬೇಕು. ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಬರಗಾಲದಿಂದ ಆರ್ಥಿಕ ಸಮಸ್ಯೆ ಉಂಟಾಗಿದ್ದು, ರೈತರ ಕೃಷಿ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಮಂಜುನಾಥ ಕದಂ, ಸುರೇಶ್ ಚಲವಾದಿ, ಎಂ.ಎಚ್.ಮುಲ್ಲಾ, ಚನ್ನಪ್ಪ ಲಮಾಣಿ, ಹೇಮಣ್ಣ ಕರೆಮ್ಮನವರ ಇದ್ದರು.

ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಮತ್ತು ಇತರೆ ಯೋಜನೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರ ಹೆಸರಿನಲ್ಲಿ ಬಿಲ್ ತೆಗೆಯಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

2023-24ರ ಮಧ್ಯಂತರ ಬೆಳೆ ವಿಮೆ ಶೇ 25ರಷ್ಟು ಮಂಜೂರು ಮಾಡಿ, ಉಳಿದ ಹಣ ನೀಡಲು ವಿಳಂ ಮಾಡುತ್ತಿದ್ದಾರೆ. ರೈತರಿಗೆ ಉಳಿದ ಬೆಳೆ ವಿಮೆ ಮಂಜೂರು ಮಾಡಬೇಕು. ಹೆಸ್ಕಾಂ ಕಂಪನಿಯವರು ರೈತರಿಂದ ಅಕ್ರಮ-ಸಕ್ರಮ ಯೋಜನೆಯಡಿ ಹಣ ತುಂಬಿಸಿಕೊಂಡಿದ್ದು, ವಿದ್ಯುತ್ ಕಂಬ, ಪರಿವರ್ತಕ ಒದಗಿಸಬೇಕು. ಅಕ್ರಮ- ಸಕ್ರಮ ಯೋಜನೆ ಮರು ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.