ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡ ವಿದ್ಯಾರ್ಥಿಗಳಿಗೆ ಅ. 20ರೊಳಗೆ ಆಯಾ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಬೇಕು. ಪಾಸ್ ಆಗದವರಿಗೆ ಉತ್ತೀರ್ಣಕ್ಕೆ ಬೇಕಾದ ಗರಿಷ್ಠ ಅಂಕ ನೀಡಿ ಮುಂದಿನ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ಎಲ್ಲ ಉಪನಿರ್ದೇಶಕರು, ಕಾಲೇಜುಗಳ ಪ್ರಾಂಶುಪಾಲರಿಗೆ ಈ ಸಂಬಂಧ ಸುತ್ತೋಲೆ ನೀಡಿರುವ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, 2020ರ ಫೆಬ್ರವರಿಯಲ್ಲಿ ನಡೆದ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಗೆ ಗೈರು ಹಾಜರಾದ ಹಾಗೂ ಜುಲೈ 13ಕ್ಕೂ ಮುನ್ನ ಸುತ್ತೋಲೆಯಂತೆ ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಿರುವ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಬೇಕು.
ಉತ್ತೀರ್ಣಕ್ಕೆ ಅಗತ್ಯ ಅಂಕ ನೀಡಿ ದ್ವಿತೀಯ ಪಿಯು ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಈ ಫಲಿತಾಂಶಕ್ಕೆ ಜಿಲ್ಲಾ ಉಪನಿರ್ದೇ ಶಕರ ಅನುಮೋದನೆ ಪಡೆಯಬೇಕು ಎಂದು ಸೂಚಿಸಿದ್ದಾರೆ.