ನವದೆಹಲಿ: 85 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಚುನಾವಣೆಯಲ್ಲಿ ಅಂಚೆ ಮತಪತ್ರ ಸೌಲಭ್ಯ ಬಳಸಲು ಅನುವು ಮಾಡಿಕೊಡಲು ಸರ್ಕಾರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಇಲ್ಲಿಯವರೆಗೆ, 80 ವರ್ಷಕ್ಕಿಂತ ಮೇಲ್ಪಟ್ಟವರು ಸೌಲಭ್ಯಕ್ಕೆ ಅರ್ಹರಾಗಿದ್ದರು. ಲೋಕಸಭೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಕೆಲವು ದಿನಗಳ ಮೊದಲು ಈ ತಿದ್ದುಪಡಿಯಾಗಿದೆ.
ಚುನಾವಣಾ ಆಯೋಗ ನೀಡಿರುವ ಇತ್ತೀಚಿನ ಮತದಾರರ ಪಟ್ಟಿಯ ಪ್ರಕಾರ, 1.85 ಕೋಟಿ ಮತದಾರರನ್ನು 80 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಗುರುತಿಸಲಾಗಿದೆ. 100 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರ ಸಂಖ್ಯೆ 2.38 ಲಕ್ಷದಷ್ಟಿದೆ.
ಶುಕ್ರವಾರ ಕಾನೂನು ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಸೌಲಭ್ಯ ವಿಸ್ತರಿಸಲು ಚುನಾವಣಾ ನಿಯಮಗಳು, 1961 ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ.
ಹಿಂದಿನ ತಿದ್ದುಪಡಿಯ ಮೂಲಕ, 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಮೂಲಕ ತಮ್ಮ ಹಕ್ಕು ಚಲಾಯಿಸಲು EC ಅವಕಾಶ ನೀಡಿತ್ತು.