Friday, 22nd November 2024

ಮೊಯಿಲಿ ಗದ್ಯಮಹಾಕಾವ್ಯ ಮಹಾಕಾವ್ಯ, ಮತ್ತೊಂದು ಬಾಂಬ್ ಸ್ಪೋಟ !

ಇದೇ ಅಂತರಂಗ ಸುದ್ದಿ

vbhat@me.com

ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಹಾಗೂ ಮೂರ್ತಿದೇವಿ, ಸರಸ್ವತಿ ಸಮ್ಮಾನ್ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪುರಸ್ಕೃತ ಮಹಾಕವಿ ವೀರಪ್ಪ ಮೊಯಿಲಿ ಅವರು ‘ಬರೆದಿದ್ದಾರೆಂದು ಭಾವಿಸಲಾಗಿರುವ’, ‘ವಿಶ್ವಸಂಸ್ಕೃತಿಯ ಮಹಾಯಾನ’ (ಸಂಪುಟ-ಒಂದು) ಎಂಬ ಗದ್ಯ ಮಹಾಕಾವ್ಯ ಪುಸ್ತಕ ಶನಿವಾರ (ಮಾರ್ಚ್ ಎರಡು) ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆಯಾಗಿದೆ.

ಈ ಸಂಬಂಧ ಶನಿವಾರದ ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ ಒಂದು ಇಡೀ ಪುಟ ಜಾಹೀರಾತನ್ನು ಮೊಯಿಲಿಯವರ ಒತ್ತಾಯದ (ಕಾಟ?) ಮೇರೆಗೆ ಕಾಂಗ್ರೆಸಿನ ನಾಯಕರಾದ ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ ಮತ್ತು ಕೆ.ಎಂ.ನಾಗರಾಜ್ ಬಿಡುಗಡೆ ಮಾಡಿzರೆ. ಆ ಪತ್ರಿಕೆಯ ಮುಖಪುಟದಲ್ಲಿ ಜಾಕೆಟ್ ಜಾಹೀರಾತು ನೀಡಲು ಕನಿಷ್ಠ ಹದಿನೈದು ಲಕ್ಷ ರುಪಾಯಿಯಾದರೂ ಖರ್ಚಾಗುತ್ತದೆ. ಕನ್ನಡದ ಪುಸ್ತಕವೊಂದು ಇಷ್ಟೊಂದು
ದುಬಾರಿ ಜಾಹೀರಾತು ನೀಡಿ ಬಿಡುಗಡೆಯಾಗಿದ್ದು ಕನ್ನಡ ಸಾಹಿತ್ಯಲೋಕದ ಒಂದು ದಾಖಲೆ ಮತ್ತು ‘ಮೊಯಿಲಿಗಲ್ಲು’ ಆಗಿರಬಹುದು.

ಇನ್ನು ಕಾರ್ಯಕ್ರಮದ ವೆಚ್ಚ ಬೇರೆ. ಕನ್ನಡ ಪುಸ್ತಕವೊಂದು ಇಷ್ಟೊಂದು ಅದ್ದೂರಿ ಲೋಕಾರ್ಪಣೆ ಕಾಣುತ್ತಿರುವುದನ್ನು ಸಂತೋಷದ ವಿಷಯ ಹೌದೋ, ಅಲ್ಲವೋ ಎನ್ನುವುದು ಚರ್ಚಾಸ್ಪದ. ಜಾಹೀರಾತು ನೀಡಿದ ಕಾಂಗ್ರೆಸಿನ ಮೂವರು ನಾಯಕರು ಮೊಯಿಲಿಪ್ರಿಯರಿರಬಹುದು, ಆದರೆ
ಪುಸ್ತಕಪ್ರಿಯರಂತೂ ಅಲ್ಲವೇ ಅಲ್ಲ. ಹೀಗಾಗಿ ಜಾಹೀರಾತು ನೀಡುವಂತೆ ಮೊಯಿಲಿಯವರ ಒತ್ತಾಸೆ (ಕಾಟ?) ಫಲ ನೀಡಿದೆ ಎಂದು ಹೇಳಬಹುದು. ಕನ್ನಡದ ಪುಸ್ತಕಗಳು ಪತ್ರಿಕೆಯಲ್ಲಿ ಲಕ್ಷಾಂತರ ರುಪಾಯಿ ಜಾಹೀರಾತಿನ ಮೂಲಕ ಬಿಡುಗಡೆ ಆಗುತ್ತಿರುವುದು ಗಮನಾರ್ಹ.

ಈ ಜಾಹೀರಾತನ್ನು ನೋಡಿದ ಸ್ನೇಹಿತರಾದ ನವೀನ ಸಾಗರ್ ಶನಿವಾರ ಬೆಳಗ್ಗೆ ನನಗೆ ಒಂದು ವಾಟ್ಸಾಪ್ ಸಂದೇಶ ಕಳಿಸಿದ್ದರು – ‘ಶುಕ್ರವಾರ ಬೆಂಗಳೂರಿ ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸೋಟ. ಇಂದು ಶನಿವಾರ ಸಾಯಂಕಾಲ ನಾಲ್ಕಕ್ಕೆ ಚಿಕ್ಕಬಳ್ಳಾಪುರ ದಲ್ಲಿ ಮತ್ತೊಂದು ಬಾಂಬ್ ಸ್ಪೋಟ’ ಅದಕ್ಕೆ ನಾನು, ‘ನವೀನ್, ಇದು ಮೊದಲ ಸಂಪುಟ, ಇನ್ನೂ ಕೆಲವು ಸಂಪುಟಗಳು ಬರಬಹುದು. ಹೀಗಾಗಿ ಇದು ಎರಡನೆಯ ದಲ್ಲ, ಸರಣಿ ಬಾಂಬ್ ಸ್ಪೋಟ’ ಎಂದು ಕಳಿಸಿದೆ. ಇಬ್ಬರೂ ಬಿದ್ದೂ ಬಿದ್ದು ನಕ್ಕೆವು. ಇದು ಬೇರೆ ಮಾತು.

ಈ ಜಾಹೀರಾತಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರು ಮೊಯಿಲಿಯವರ ಸದರಿ ಗದ್ಯ ಮಹಾ ಕಾವ್ಯದ ಕುರಿತು ಹೀಗೆ ಬರೆದಿದ್ದಾರೆ – ಡಾ.ಎಂ.ವೀರಪ್ಪ ಮೊಯಿಲಿ ಅವರು ‘ಶ್ರೀರಾಮಾಯಣ ಮಹಾನ್ವೇಷಣಂ’, ‘ಸಿರಿಮುಡಿ ಪರಿಕ್ರಮಣ’ ಮತ್ತು ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಮಹಾಕಾವ್ಯಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ತಮ್ಮ ಕಾವ್ಯ ಪ್ರತಿಭೆಯ ಅನನ್ಯ ಮುಖಗಳನ್ನು ಪ್ರಕಟಿಸಿದ್ದಾರೆ. ಈಗ ಅವರು ‘ವಿಶ್ವಸಂಸ್ಕೃತಿಯ ಮಹಾಯಾನ’ ಎನ್ನುವ ಗದ್ಯಕಾವ್ಯ ಸಂಹಿತೆಯ ಮಾದರಿಯ ಗ್ರಂಥವನ್ನು ರಚಿಸಿ ಹೊಸ ಮಾರ್ಗ ವೊಂದನ್ನು ಅನ್ವೇಷಿಸಿದ್ದಾರೆ.

ಬೌದ್ಧಿಕ ಸಂವಾದದ ಸ್ವರೂಪದ ನಿರೂಪಣೆಯಲ್ಲಿ ಇರುವ ಈ ಸಂಕಥನವು ಕಾಲಗರ್ಭದಲ್ಲಿ ಹುದುಗಿಹೋದ ವಿಶ್ವ ಸಂಸ್ಕೃತಿಯ ಅಪೂರ್ವ eನವನ್ನು ಬಹುರೂಪಿ ನೆಲೆಯಲ್ಲಿ ಅನಾವರಣ ಮಾಡುತ್ತದೆ. ಮಾನವತೆಯ ವಿಕಾಸಶೀಲತೆಯ ಇತಿಹಾಸವನ್ನು ಶೋಧಿಸುವ ಈ ಗ್ರಂಥದಲ್ಲಿ ಮಾನವ ಇತಿಹಾಸ ದಲ್ಲಿ ವಿಜ್ಞಾನದ ಪ್ರಭಾವದ ವಿವಿಧ ಮಾದರಿಗಳ ಅವಲೋಕನವಿದೆ. ಭಾರತೀಯ ವೇದಗಳು, ಉಪನಿಷತ್ತು, ಭಗವದ್ಗೀತೆ, ಧರ್ಮಶಾಸ, ನ್ಯಾಯಶಾಸ್ತ್ರ, ದರ್ಶನಗಳು, ಇತಿಹಾಸ, ಮಹಾಕಾವ್ಯ, ನಾಟಕಗಳು, ಜಾನಪದ ಜಗತ್ತು – ಇವುಗಳ ಬಹುಮುಖಿ ಪದರಗಳು ಈ ಕೃತಿಯಲ್ಲಿ ತೆರೆದು ಕೊಳ್ಳುವ ಬೆರಗಿನ ಜಗತ್ತು ಇದೆ. ಈ ಎಲ್ಲ ಕ್ಷೇತ್ರಗಳ ಸಾಧಕರ ಹಾಗೂ ಸಮುದಾಯಗಳ ಜ್ಞಾನಭಂಡಾರದ ಅನ್ವೇಷಣೆಯು ಕನ್ನಡದಲ್ಲಿ ಮೊದಲ ಬಾರಿಗೆ ಬೆಳಕಿಗೆ ಬರುತ್ತಿದೆ.

ಡಾ.ವಿವೇಕ ರೈ ಅವರಿಗೆ ಅದ್ಯಾವ ಅನಿವಾರ್ಯವೋ ಒತ್ತಡವೋ ಗೊತ್ತಿಲ್ಲ. ಅವರು ‘ವಿಶ್ವಸಂಸ್ಕೃತಿ ಮಾಹಾಯಾನ’ ಪುಸ್ತಕವನ್ನು ಓದದೇ ಬರೆದಿದ್ದರೆ ಪರವಾಗಿಲ್ಲ. ಒಂದು ವೇಳೆ ಓದಿದ್ದರೆ ಖಂಡಿತವಾಗಿಯೂ ಹೀಗೆ ಬರೆಯುತ್ತಿರಲಿಲ್ಲ. ಡಾ.ರೈ ಅವರು ತಾವು ಮೊಯಿಲಿ ಅವರಿಂದ ಉಪಕೃತರಾದವರು ಎಂದು ಪದೇ ಪದೆ ಸಾಬೀತುಪಡಿಸಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಈ ಇಳಿವಯಸ್ಸಿನಲ್ಲಿ ಅವರು ಅದ್ಯಾವ ಇಕ್ಕಟ್ಟಿಗೆ ಸಿಲುಕಿದ್ದಾರೋ ಗೊತ್ತಿಲ್ಲ.

ಪ್ರಶಸ್ತಿ, ಕುಲಪತಿ ಸ್ಥಾನ, ಅಕಾಡೆಮಿ ಹುzಗಾಗಿ ರಾಜಕಾರಣಿ ಗಳ ಮನೆ ಎಡತಾಕುವ ಬದಲು, ಅವರಿಗೆ ಘೋಸ್ಟ್ ರೈಟರ್ ಆಗಿ ಬರೆಯುವುದೇ ಮೇಲು ಎಂದು ಕೆಲವರು ಭಾವಿಸಿರಲೂ ಬಹುದು. ಅವರು ಉದ್ಧರಿಸಿರುವ ಮೊಯಿಲಿಯವರ ಆ ಎರಡು ಮಹಾಕಾವ್ಯಗಳನ್ನು ಪೂರ್ತಿಯಾಗಿ ಓದಲು ಮನುಷ್ಯ ರಿಂದ ಸಾಧ್ಯವೇ ಇಲ್ಲ. ನಾಲ್ಕು ಪುಟಗಳನ್ನು ನೆಟ್ಟಗೆ ಓದಲು ಆಗುವುದಿಲ್ಲ. ‘ಮೊಯಿಲಿಯವರ ಮಹಾಕಾವ್ಯಗಳನ್ನು ಇಡಿಯಾಗಿ ಓದಲು ಸಾಧ್ಯವೇ?’ ಎಂದು ಮೊಯಿಲಿಯವರಿಗೆ ಆಪ್ತರಾದ, ಅವರ ಅಂತಃಪುರದ ಹಿರಿಯ ಸಾಹಿತಿಮಿತ್ರರೊಬ್ಬರನ್ನು ಎರಡು ವರ್ಷಗಳ ಹಿಂದೆ ನಾನು ಕೇಳಿದಾಗ, ‘ಯಾವ ಬೋಳಿಮಗನಿಗೆ ಅರ್ಥ ವಾಗುತ್ತೆ?’ ಎಂದು ಹೇಳಿ ನಕ್ಕಿದ್ದರು. ನನ್ನ ದೃಷ್ಟಿಯಲ್ಲಿ ಅದು ಮೊಯಿಲಿ ಮಹಾಕಾವ್ಯಗಳ ಬಗ್ಗೆ ಇಲ್ಲಿ ತನಕ ಮೂಡಿ ಬಂದ ನಿಜವಾದ ವಸ್ತುನಿಷ್ಠ ವಿಮರ್ಶೆ !

ಇನ್ನು ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಮಹಾಕಾವ್ಯದಲ್ಲಿ ಮೊಯಿಲಿಯವರಿಂದ ಆಗಿರುವುದು ಓದುಗರ ಮೇಲೆ ಸತತ ಹಿಂಸೆಯೇ. ಈ ಎಲ್ಲ ಮಹಾಕಾವ್ಯಗಳನ್ನು ಸ್ವತಃ ಮೊಯಿಲಿಯವರೇ ಬರೆದಿರುವ ಬಗ್ಗೆ ಗುಮಾನಿಗಳಿವೆ ಮತ್ತು ಆ ಕುರಿತು ಅನೇಕ ಸ್ವಾರಸ್ಯಕರ ಕತೆಗಳಿವೆ. ಹಾಗೆ ನೋಡಿದರೆ, ಅವು ಅವರ ಮಹಾಕಾವ್ಯಗಳಿಗಿಂತ ಹೆಚ್ಚು ರೋಚಕ ಮತ್ತು ಆಸಕ್ತಿದಾಯಕ. ನನಗೆ ಸಿಕ್ಕಿರುವ ದಾಖಲೆಯಲ್ಲಿ ಈ ಮಹಾಕಾವ್ಯಗಳ ಮೂಲ ಲೇಖಕರ ಹೆಸರನ್ನು ಬಹಿರಂಗಪಡಿಸಿದರೆ, ಮತ್ತೊಂದು ಮಹಾ ಸಂಪುಟವೇ ತೆರೆದುಕೊಳ್ಳುತ್ತದೆ. ಮುಂದೆಂದಾದರೂ ಮೊಯಿಲಿ ಯವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತೆನ್ನಿ, ಆಗ ಈ ವಿಷಯವನ್ನು ಬಹಿರಂಗಪಡಿಸಿದರೆ ಒಳ್ಳೆಯ ಸ್ಕೂಪ್ ಆದೀತು! ಅಲ್ಲಿ ತನಕ ಆ ಸಂಗತಿಯನ್ನು ಶೈತ್ಯಾಗಾರದಲ್ಲಿ  ಇಟ್ಟುಕೊಳ್ಳಲೇ ಬೇಕು.

ಶನಿವಾರ ಬಿಡುಗಡೆಯಾದ ‘ವಿಶ್ವಸಂಸ್ಕೃತಿ ಮಹಾಯಾನ’ ಮೊದಲ ಸಂಪುಟವಂತೆ. ವಾಡಿಕೆಯಲ್ಲಿ, ‘ಬರಲಿರುವ ದಿನಗಳು ಇನ್ನೂ ಭೀಕರ’ ಅಂತಾ ರಲ್ಲ, ಇನ್ನು ಸಂಪುಟ ಎರಡು, ಮೂರು ಸಹ ಬರಲಿದೆ ಎಂಬುದನ್ನು ಕಲ್ಪಿಸಿಕೊಂಡರೆ, ಬರಲಿರುವ ದಿನಗಳು ಭಯಾನಕವೇ. ಮೊಯಿಲಿಯವರು ಈಗಲೇ ಭಯ ಹುಟ್ಟಿಸಿ, ಭವಿಷ್ಯದ ಬಗ್ಗೆ ಮತ್ತಷ್ಟು ಆತಂಕವನ್ನು ಹುಟ್ಟಿಸಿದ್ದಾರೆ. ಕನ್ನಡಿಗರ ಮೇಲೆ ಕಾಂಗ್ರೆಸ್ ಹೈಕಮಾಂಡಿಗೆ ನಿಜವಾದ ಪ್ರೀತಿ,
ಕನಿಕರವಿದ್ದರೆ, ಮೊಯಿಲಿಯವರಿಗೆ ಚಿಕ್ಕಬಳ್ಳಾಪುರದಿಂದ ಟಿಕೆಟ್ ಕೊಟ್ಟು ಆರಿಸಿ ತಂದು, ಅವರನ್ನು ರಾಜಕೀಯದಲ್ಲಿ ಸಕ್ರಿಯರಾಗಿಸಿ, ಅವರ ಮಹಾಕಾವ್ಯಗಳ ಹೊಡೆತ, ಸುನಾಮಿಗಳಿಂದ ಕನ್ನಡಿಗರನ್ನು ಬಚಾವ್ ಮಾಡಬೇಕು. ಇಷ್ಟು ದಿನ ಮಹಾಕಾವ್ಯ ಆಯ್ತು.. ಈಗ ಗದ್ಯಮಹಾಕಾವ್ಯವಂತೆ.. ಮೊದಲಿನದಕ್ಕೂ, ಈಗಿನದಕ್ಕೂ ಏನು ವ್ಯತ್ಯಾಸವೋ? ಡಾ.ರೈ ಅದನ್ನಾದರೂ ವಿವರಿಸಿ ಪುಣ್ಯ ಕಟ್ಟಿಕೊಳ್ಳಬಹುದಿತ್ತು.

ಅರ್ಥ ಮಾಡಿಕೊಳ್ಳುವ ಪರಿ!
‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಕಟ್ಟಿ, ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದ ಶಾಮರಾಯರು ನಿಧನರಾದಾಗ, ಅವರೊಂದಿಗೆ ಸುಮಾರು ಪೂರು ದಶಕಗಳ ಕಾಲ ಕೆಲಸ ಮಾಡಿದ ಹಿರಿಯ ಪತ್ರಕರ್ತರೊಬ್ಬರು, ರಾಯರ ಬಗ್ಗೆ ಬರೆದ ಶ್ರದ್ಧಾಂಜಲಿ ಲೇಖನ ಎಂಟು ಪ್ಯಾರಾ ಇತ್ತು. ನಾನು ಎರಡೆರಡು ಬಾರಿ ಓದಿದೆ. ಆ ಪತ್ರಕರ್ತರಿಗೆ ಶಾಮರಾಯರ ದರ್ಶನವೇ ಆಗಿಲ್ಲ ಎಂಬುದು ಅವರ ಬರಹವನ್ನು ನೋಡಿದ ಎಂಥವರಿಗಾದರೂ ಗೊತ್ತಾಗುತ್ತಿತ್ತು.

ಕೆಲವು ಹೆಂಗಸರು ತಮ್ಮ ಪತಿಯೊಂದಿಗೆ ಅರ್ಧ ಶತಮಾನ ಸಂಸಾರ ಮಾಡಿರುತ್ತಾರೆ. ಆದರೆ ಅವರಿಗೆ ತಮ್ಮ ಪತಿಯ ಮಹತ್ವವೇ ಗೊತ್ತಾಗಿರುವುದಿಲ್ಲ. ಅಸಲಿಗೆ ಪತಿಯನ್ನೇಕೆ ಬಾಹ್ಯ ಪ್ರಪಂಚ ಇಷ್ಟಪಡುತ್ತದೆ ಎಂಬುದೇ ತಿಳಿದಿರುವುದಿಲ್ಲ. ಕೆಲವು ಪತ್ರಕರ್ತರ ಪತ್ನಿಯರು ತಮ್ಮ ಪತಿ ಬರೆದಿದ್ದನ್ನೇ ಓದಿರುವುದಿಲ್ಲ. ಹಾಗೆಯೇ ತಾವು ಯಾರ ಜತೆಗೆ ಕೆಲಸ ಮಾಡಿರುತ್ತೇವೋ, ಅವರ ಮಹಾನ್ ಗುಣ ತಿಳಿದಿರುವುದಿಲ್ಲ. ಒಬ್ಬರ ವ್ಯಕ್ತಿಚಿತ್ರವನ್ನು ಕಟ್ಟಿ ಕೊಡಲು ಅವರೊಂದಿಗೆ ಜೀವನವಿಡೀ ಕಳೆಯಬೇಕಿಲ್ಲ. ಒಂದು ಗಂಟೆ ಕಳೆದರೂ ಸಾಕು.

ನಾನು ವಾಜಪೇಯಿ ಅವರ ಕುರಿತು ಪುಸ್ತಕ ಬರೆಯಲು ನಿರ್ಧರಿಸಿ, ವಿಷಯ ಸಂಗ್ರಹಕ್ಕಾಗಿ, ದಿಲ್ಲಿಯಲ್ಲಿ ಬಿಜೆಪಿಯ ಹಲವು ನಾಯಕರನ್ನು ಭೇಟಿಯಾಗಿz. ಆ ಸಂದರ್ಭದಲ್ಲಿ ವಾಜಪೇಯಿ ಜತೆಗೆ ಅರ್ಧ ಶತಮಾನಕ್ಕಿಂತ ಹೆಚ್ಚು ಒಡನಾಡಿದ ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ಕುಶಾಭಾವು ಠಾಕ್ರೆ ಭೇಟಿ
ಮಾಡಿದ್ದೆ. ‘ವಾಜಪೇಯಿ ಜತೆಗಿನ ತಮ್ಮ ಸುದೀರ್ಘ ಒಡನಾಟದಲ್ಲಿ ನೆನಪಿರುವ ಘಟನೆಗಳನ್ನು ಹೇಳಬಹುದಾ?’ ಎಂದು ಕೇಳಿದಾಗ, ಠಾಕ್ರೆಯವರು ಐದು ನಿಮಿಷ ಯೋಚಿಸಿ, ‘ನನಗೆ ಒಂದು ಘಟನೆ ನೆನಪಿಗೆ ಬರುತ್ತಿದೆ. ನಾವಿಬ್ಬರೂ ಶಾಲೆಯಲ್ಲಿ ಓದುತ್ತಿದ್ದಾಗ, ವಾಜಪೇಯಿ ಅವರು ಶಾಲೆಯ ಹಿಂದಿನ ಮೈದಾನದಲ್ಲಿದ್ದ ಕಲ್ಲಿನ ಬಂಡೆಯ ಹಿಂದೆ ಹೋಗಿ ಅಡಗಿಕೊಳ್ಳುತ್ತಿದ್ದರು’ ಎಂದು ಹೇಳಿ ಸುಮ್ಮನಾದರು.

ಠಾಕ್ರೆ ಆ ಪ್ರಸಂಗವನ್ನು ಮುಂದುವರಿಸಬಹುದು ಎಂದು ನಾನು ನಿರೀಕ್ಷಿಸುತ್ತಲೇ ಇದ್ದೆ. ಆದರೆ ಠಾಕ್ರೆಯವರು ಸುಮ್ಮನಾಗಿ ಬಿಟ್ಟರು. ಅಷ್ಟಕ್ಕೇ ಬಿಡದ ನಾನು, ‘ಬಹಳ ಸ್ವಾರಸ್ಯವಾಗಿದೆ, ಮುಂದೇನಾಯಿತು? ಎಂದು ಕೇಳಿದೆ. ಅದಕ್ಕೆ ಠಾಕ್ರೆ, ‘ಅಷ್ಟೇ.. ಅಷ್ಟೇ.. ಮುಂದೇನೂ ಆಗಿಲ್ಲ. ಅಲ್ಲಿಗೆ ಮುಗಿಯಿತು’ ಎಂದು ಬಿಟ್ಟರು. ಅದಾದ ಬಳಿಕ ಅವರ ಮುಂದೆ ಮುಖ ಮುಖ ನೋಡುತ್ತಾ ಹತ್ತು ನಿಮಿಷಗಳ ಕಾಲ ಸುಮ್ಮನೆ ಕುಳಿತಿದ್ದೆ. ಠಾಕ್ರೆಯವರಿಗೆ ವಾಜಪೇಯಿ ಬಗ್ಗೆ ಹೇಳುವುದೇನೂ ಇಲ್ಲ ಎಂಬುದು ಸ್ಪಷ್ಟ ವಾಯಿತು. ಅಸಲಿಗೆ ಅವರಿಗೆ ವಾಜಪೇಯಿ ಜತೆಗೆ ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಕಳೆದಿದ್ದರೂ, ಮೇರು ವ್ಯಕ್ತಿತ್ವ ಮತ್ತು ವಾಸ್ತವರೂಪ ದಕ್ಕಿರಲೇ ಇಲ್ಲ. ದುರ್ದೈವವೆಂದರೆ, ವಾಜಪೇಯಿ ಅವರ ವಿರಾಟ ದರ್ಶನ ಅವರಿಗೆ ಆಗಿರಲಿಲ್ಲ.

ಕನ್ನಡದ ಹಿರಿಯ ಪತ್ರಕರ್ತ ದಿವಂಗತ ಗರುಡನಗಿರಿ ನಾಗರಾಜ್ ನನಗೆ ಒಂದು ಪ್ರಸಂಗವನ್ನು ಹೇಳಿದ್ದರು. ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರೊಬ್ಬರ ಸಂದರ್ಶನಕ್ಕೆಂದು ಅವರು ಸಾಹಿತಿಯ ಮನೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಸಾಹಿತಿಗಳು ಕಾರ್ಯಕ್ರಮಕ್ಕೆಂದು ಹೊರಗೆ ಹೋಗಿದ್ದರು. ಬರುವುದು ಅರ್ಧ ಗಂಟೆ ತಡವಾಗಬಹುದೆಂದು ಅವರ ಮನೆಯವರು ಹೇಳಿದರು. ಅಲ್ಲಿ ತನಕ ಕಾಯುವುದು ಗರುಡನಗಿರಿಯವರಿಗೆ ಅನಿವಾರ್ಯ
ವಾಯಿತು. ಸುಮ್ಮನೆ ಕುಳಿತುಕೊಳ್ಳುವ ಸ್ವಭಾವ ಅವರದ್ದಲ್ಲ. ಸಾಹಿತಿಯ ಪತ್ನಿಯನ್ನು ಮಾತಿಗೆಳೆದರು.

‘ನಿಮ್ಮ ಪತಿಯ ಸಾಹಿತ್ಯ ಸೇವೆಗೆ ನೀವು ಹೇಗೆ ಸಹಕರಿಸುತ್ತೀರಿ?’ ಎಂದು ಗರುಡನಗಿರಿಯವರು ಕೇಳಿದರು. ‘ಅವರಾ? ಬೆಳಗಿನಿಂದ ಅದೇನೋ ಓದುತ್ತಾ ಇರುತ್ತಾರೆ. ನಂತರ ತಮ್ಮ ಪಾಡಿಗೆ ಬರೆಯುತ್ತಾ ಕುಳಿತಿರುತ್ತಾರೆ. ನಾನೇನಾದರೂ ಅವರ ಬಳಿಗೆ ಹೋದರೆ, ನನಗೆ ಕಿರಿಕಿರಿಯಾಗುತ್ತದೆ ಅಂತಾರೆ. ದೂರ ದಿಂದ ಸುಮ್ಮನೆ ಕುಳಿತು ಅವರ ಸಾಹಿತ್ಯಸೇವೆಗೆ ಸಹಕಾರ ನೀಡುವುದಷ್ಟೇ ನನ್ನ ಕೆಲಸ’ ಎಂದು ಬಿಟ್ಟರು.

ಅಷ್ಟಕ್ಕೇ ಸುಮ್ಮನಾಗದ ಗರುಡನಗಿರಿಯವರು, ‘ನಿಮ್ಮ ಪತಿ ಬರೆದ ಪುಸ್ತಕಗಳನ್ನು ನೀವು ಓದುತ್ತೀರಾ? ಆ ಪೈಕಿ ನಿಮಗೆ ಇಷ್ಟವಾದ ಕೃತಿ ಯಾವುದು?’ ಎಂದು ಕೇಳಿದರು. ‘ನಿಜ ಹೇಳಬೇಕೆಂದರೆ, ನಾನು ನಮ್ಮ ಯಜಮಾನರು ಬರೆದ ಯಾವ ಪುಸ್ತಕವನ್ನೂ ಪೂರ್ತಿಯಾಗಿ ಓದಿಲ್ಲ’ ಎಂದು ಪ್ರಾಮಾಣಿಕ ವಾಗಿ ನೇರವಾಗಿ ಹೇಳಿದರು. ಆ ಸಾಹಿತಿಯ ಕೃತಿಗಳ ಕುರಿತು ಅವರ ಪತ್ನಿಗೇ ಆಸಕ್ತಿಯಿರಲಿಲ್ಲ. ಅವರು ಯಾರು, ಅವರ ಕೃತಿಗಳ ಮಹತ್ವವೇನು, ಅವರಿಂದ ಪ್ರಭಾವಿತರಾದವರು ಯಾರು, ಅವರ ಕೊಡುಗೆಯೇನು ಎಂಬುದು ಪತ್ನಿಗೇ ಗೊತ್ತಿರಲಿಲ್ಲ.

ಅನೇಕ ಜನ ಸಾಹಿತಿಗಳು ತಮ್ಮ ಸಾಹಿತ್ಯ ಸೇವೆಗೆ ಪತ್ನಿಯ ಸಹಕಾರ ಬಹಳ ದೊಡ್ಡದು ಅಂತಾರೆ. ಪತ್ನಿ ಅವರ ಹತ್ತಿರ ಸುಳಿಯದೇ ಸಹಕಾರ ನೀಡಿದ್ದಿರ ಬಹುದು ಎಂದು ಗರುಡನಗಿರಿಯವರು ತಮಾಷೆ ಮಾಡುತ್ತಿದ್ದುದು ನೆನಪಾಗುತ್ತಿದೆ. ಈ ಮಾತು ಹೆಂಡತಿಯರಿಗೆ ಮಾತ್ರ ಅಲ್ಲ. ಅವರ ಮಕ್ಕಳಿಗೆ ಮತ್ತು ಮನೆ-ಮಂದಿಗೂ ಗೊತ್ತಿರುವುದಿಲ್ಲ. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ, ‘ನಾನು ಯಾರು ಎಂಬುದು ನನ್ನ ಪತ್ನಿ ಮತ್ತು ಮಕ್ಕಳಿಗೆ ಗೊತ್ತಿಲ್ಲ. ಇಡೀ ದೇಶ ನನಗಾಗಿ ಕಾತರಿಸುತ್ತದೆ. ನನ್ನ ಜತೆ ಸೆಲ್ಫಿಗಾಗಿ ಕೋಟ್ಯಂತರ ಜನ ಹಂಬಲಿಸು ತ್ತಾರೆ. ಆದರೆ ನಾನು ಮನೆಗೆ ಬಂದರೆ ಯಾರೂ ಕ್ಯಾರೇ ಎನ್ನುವುದಿಲ್ಲ. ಅವರಾರಿಗೂ ನನ್ನ ಮಹತ್ವವೇ ಗೊತ್ತಿಲ್ಲ’ ಎಂದು ಹೇಳಿದ್ದನ್ನು ಕೇಳಿರಬಹುದು.

ಒಬ್ಬ ಗಣ್ಯ ವ್ಯಕ್ತಿಯ ಜತೆ ಸಂಸಾರ ಸಾಗಿಸಿದವರಿಗೆ ಮತ್ತು ಅವರೊಂದಿಗೆ ಅನೇಕ ವರ್ಷಗಳ ಕಾಲ ಒಡನಾಡಿದವರಿಗೆ, ಆ ವ್ಯಕ್ತಿಯ ಮಹತ್ವ ಮತ್ತು ಮಹೋನ್ನತ ಕಾಣ್ಕೆ ಅರ್ಥವಾಗಿದೆ ಎಂದು ಹೇಳಲಾಗುವುದಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಸಹ ಒಂದು ಕಲೆಯೇ.
ಕೆಲವು ತಿಂಗಳುಗಳ ಹಿಂದೆ, ಅಂಕೋಲಾದ ಜಿ.ವಿ.ನಾಯಕ ಎಂಬುವವರು ನನ್ನನ್ನು ಭೇಟಿಯಾಗಿ, ‘ನಿಮಗೆ ಉತ್ತರ ಕನ್ನಡದ ಲೋಕಸಭಾ ಸದಸ್ಯ ರಾಗಿದ್ದ ದಿವಂಗತ ಬಿ.ವಿ.ನಾಯಕ (ಬಾಲಕೃಷ್ಣ ವೆಂಕಣ್ಣ ನಾಯಕ. ಇವರು ಬಾಳಾಸಾಹೇಬ್ ಎಂದೇ ಪ್ರಸಿದ್ಧರಾಗಿ ದ್ದರು) ಅವರ ಒಡನಾಟವಿತ್ತು ಅಂತ ಗೊತ್ತಾಯಿತು. ಅವರ ಕುರಿತು ಒಂದು ದಿನದ ಸ್ಮರಣೆ ಕಾರ್ಯಕ್ರಮ ಏರ್ಪಡಿಸುವವರಿದ್ದೇವೆ. ನೀವು ಬರಬೇಕು ಮತ್ತು ಆ ಸಂದರ್ಭದಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿರುವ ಅಭಿನಂದನಾ ಗ್ರಂಥಕ್ಕೆ ಒಂದು ಲೇಖನವನ್ನು ಬರೆದುಕೊಡಬೇಕು’ ಎಂದು ಹೇಳಿದರು.

‘ನಾಯಕರೇ, ಬಿ.ವಿ.ನಾಯಕರು ತೀರಿ ಹೋಗಿ ಹದಿನಾರು ವರ್ಷಗಳಾದವು. ಈಗ ಯಾಕೆ ಈ ಕಾರ್ಯಕ್ರಮ ಮತ್ತು ಪುಸ್ತಕ?’ ಎಂದು ಕೇಳಿದೆ. ಅದಕ್ಕೆ ಅವರು, ‘ಅವರು ಬದುಕಿದ್ದಾಗ ಅವರ ಮಹತ್ವ ಯಾರಿಗೂ ಗೊತ್ತಾಗಲಿಲ್ಲ. ಅವರ ವಿಚಾರಗಳು ಎಷ್ಟು ಉನ್ನತ ವಾಗಿದ್ದವು ಎಂಬುದು ಸಹ ನಮ್ಮ ಜನರಿಗೆ ಗೊತ್ತಾಗಲಿಲ್ಲ. ಅವರನ್ನು ನೋಡಿ ಜನ ಗೇಲಿ ಮಾಡಿದರು. ಅವರು ಸೈಕಲ್ಲಿನಲ್ಲಿ ಹೋದರೆ, ನಮ್ಮ ಜನ ಅವರನ್ನು ನೋಡಿ, ನಮ್ಮ ಜಿ ಎಂಪಿ
ಪರಿಸ್ಥಿತಿ ನೋಡಿ ಎಂದು ಅಪಹಾಸ್ಯ ಮಾಡುತ್ತಿದ್ದರು. ನಮಗೆ ಈಗ ಅವರ ಮಹತ್ವ ಗೊತ್ತಾಗುತ್ತಿದೆ’ ಎಂದು ಹೇಳಿದರು.

ಒಬ್ಬರ ಜತೆ ಬಹಳ ವರ್ಷಗಳ ಕಾಲ ಒಡನಾಟವಿದೆ ಎಂಬ ಮಾತ್ರಕ್ಕೆ ಆ ವ್ಯಕ್ತಿ ಅರ್ಥವಾಗಿzರೆ, ಅವರು ಗ್ರಹಿಕೆಗೆ ಸಿಕ್ಕಿದ್ದಾರೆ ಅಥವಾ ಅವರನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರ್ಥವಲ್ಲ. ಶಾಮರಾಯರ ಜತೆ ಮೂರು ದಶಕಗಳ ಕಾಲ ಕೆಲಸ ಮಾಡಿದವರು ಅವರ ಕುರಿತು ಎಂಟು ಪ್ಯಾರಾ ಬರೆದಂತೆ, ಜ್ಞಾನಪೀಠ ಸಾಹಿತಿಯ ಪತ್ನಿಯಂತೆ, ವಾಜಪೇಯಿಯವರನ್ನು ಅರ್ಥ ಮಾಡಿಕೊಂಡ ಕುಶಭಾವು ಠಾಕ್ರೆಯವರಂತೆ ಇರಲೂಬಹುದು.

ಐದಾರು ಪ್ಯಾರಗಳಲ್ಲಿ ಡಾ.ಕಲಾಂ

ಕೆಲವರನ್ನು ಅರ್ಥ ಮಾಡಿಕೊಳ್ಳಲು ಅವರ ಜತೆ ಇಪ್ಪತ್ತು- ಮೂವತ್ತು ವರ್ಷ ಒಡನಾಡಬೇಕಿಲ್ಲ. ಮುಖತಃ ಭೇಟಿ ಮಾಡಿ ಅರ್ಧ ಗಂಟೆ ಮಾತಾಡಿದರೂ ಸಾಕು. ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರು ನಿವೃತ್ತರಾಗುವುದಕ್ಕಿಂತ (೨೦೦೭ ರಲ್ಲಿ ) ಕೆಲ ದಿನಗಳ ಮೊದಲು, ಪತ್ರಕರ್ತ ಮತ್ತು ಸಾಹಿತಿ ಖುಷವಂತ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿಯ ಬಗ್ಗೆ ಖುಷವಂತ್ ಸಿಂಗ್ ತಮ್ಮ ಅಂಕಣದಲ್ಲಿ ಬರೆದಿದ್ದರು. ಇತ್ತೀಚೆಗೆ ನನ್ನ ಹಳೆಯ ಕಡತದಲ್ಲಿ ಸಿಂಗ್ ಬರೆದ ಆ ಬರಹ ಸಿಕ್ಕಿತು. ಅವರು ಡಾ.ಕಲಾಂ ಕುರಿತು ಹೀಗೆ ಬರೆದಿದ್ದರು.

ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಹನ್ನೊಂದನೇ ರಾಷ್ಟ್ರ ಪತಿಯಾಗಿ ಐದು ವರ್ಷ ಪೂರ್ಣ ಅವಧಿ ಅಧಿಕಾರ ಪೂರೈಸಲಿರುವ ಡಾ.ಅಬ್ದುಲ್ ಕಲಾಂ ನಿವೃತ್ತರಾಗಲಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿದ ಮುಸ್ಲಿಮರ ಪೈಕಿ ಡಾ.ಕಲಾಂ ಮೂರನೆಯವರಾಗಿದ್ದಾರೆ. ಸೆಕ್ಯುಲರ್ ಡೆಮಾಕ್ರಸಿ ಎಂದು ಭಾರತ ಕರೆಯಿಸಿಕೊಂಡಿದ್ದು ಸಾರ್ಥಕವಾಯಿತು. ಅಲ್ಲದೇ ಇದರಿಂದ ನಮ್ಮ ನೆರೆಹೊರೆಯವರಿಗೆ ಒಂದು ಉತ್ತಮ ಸಂದೇಶವೂ ಹೋದಂತೆ ಆಗಿದೆ. ನಿವೃತ್ತರಾದ ಬಳಿಕ ಡಾ.ಕಲಾಂ ತಮ್ಮ ವೈಜ್ಞಾನಿಕ ಸಂಶೋಧನೆಯನ್ನು ಮುಂದುವರಿಸುತ್ತಾರಾ, ವಿಶ್ವವಿದ್ಯಾಲಯದಲ್ಲಿ ಉಪ ನ್ಯಾಸಕ ಸೇವೆ ಕೈಗೆತ್ತಿ ಕೊಳ್ಳುತ್ತಾರಾ ಅಥವಾ ಸನ್ಯಾಸತ್ವ ಹೊಂದುತ್ತಾರಾ ಎಂಬ ಬಗ್ಗೆ ನನಗೇನೂ ಗೊತ್ತಿಲ್ಲ. ನನಗೆ ಅವರ ಜತೆ ಅರ್ಧ ಗಂಟೆ ಕಳೆಯುವ ಸದವಕಾಶ ಸಿಕ್ಕಿತ್ತು. ಅವರು ನಾನು ವಾಸಿಸುವ ಅಪಾರ್ಟ್‌ಮೆಂಟಿಗೆ ಬಂದಿದ್ದು ನನಗೆ ನೀಡಿದ ಗೌರವ ಎಂದು ಭಾವಿಸುವೆ.

ನನ್ನಂಥ ಪೆನ್ನು-ಪುಸ್ತಕ ನೆಚ್ಚಿಕೊಂಡುರುವವನ ಮನೆಗೆ ಈ ದೇಶದ ಅತ್ಯುನ್ನತ ಹುzಯಲ್ಲಿರುವ ರಾಷ್ಟ್ರದ ಮುಖ್ಯಸ್ಥರೊಬ್ಬರು ಬರುವುದು ಅವರ ನಮ್ರತೆಯನ್ನು ತೋರಿಸುತ್ತದೆ. ನಮ್ಮಿಬ್ಬರ ನಡುವೆ ಸಾಮಾನ್ಯ ಎನಿಸುವ ಸಂಗತಿಗಳು ಕೆಲವೇ ಕೆಲವಿರಬಹುದು. ಅವರು ತಮಿಳಿಗ. ನನಗೆ ವಣಕ್ಕಮ್ ಮತ್ತು ಅಯ್ಯಯ್ಯೋ ಎಂಬ ಎರಡು ತಮಿಳು ಪದಗಳು ಮಾತ್ರ ಗೊತ್ತು. ವಿಜ್ಞಾನಿಯಾದರೂ ಅವರು ಅಪ್ಪಟ ಧಾರ್ಮಿಕ ವ್ಯಕ್ತಿ. ನಾನು ನಾಸ್ತಿಕ. ವಿಜ್ಞಾನ ಮತ್ತು ಧರ್ಮ ಒಟ್ಟಿಗೆ ಹೋಗಲಾರವು ಎಂದು ನಂಬಿದವನು ನಾನು. ಒಂದು ಕಾರಣ (ಛಿZoಟ್ಞ) ಆಧರಿತ, ಮತ್ತೊಂದು ನಂಬಿಕೆ (ಊZಜಿಠಿe) ಆಧರಿತ. ಅವರ ಬರಹಗಳನ್ನು ಓದಿದ ಮತ್ತು ಅವರೊಂದಿಗೆ ಮಾತಾಡಿದ ನಂತರ ನನಗೆ ಮಹಾತ್ಮ ಗಾಂಧಿಯವರ ಧಾರ್ಮಿಕ ನಂಬಿಕೆಗಳಂತೆ ಡಾ.ಕಲಾಂ ಅವರದ್ದೂ ಅದೇ ರೀತಿಯದ್ದು ಎಂದೆನಿಸಿತು.

ಬಾಪು ಅವರ ಎಲ್ಲ ವಿಚಾರಗಳನ್ನು ಸ್ವೀಕರಿಸಲು ಅಸಮರ್ಥನಾದರೂ, ನಾನು ನನ್ನನ್ನು ಗಾಂಧಿವಾದಿ ಎಂದು ಕರೆದುಕೊಳ್ಳುತ್ತೇನೆ. ಡಾ.ಕಲಾಂ ಅವರು
ವಿeನ ಮತ್ತು ಧರ್ಮದ ಮಧ್ಯೆ ಯಾವ ವೈರುಧ್ಯ ಅಥವಾ ಸಂಘರ್ಷಗಳನ್ನು ಕಾಣುವುದಿಲ್ಲ. ಅವರೊಂದಿಗೆ ಮಾತಾಡುವಾಗ, ‘ಸ್ವರ್ಗ ಮತ್ತು ನರಕ ಎಂಬುದಿಲ್ಲ. ಅವೇನಾದರೂ ಇದ್ದರೆ ನಮ್ಮ ಮನಸ್ಸಿನಲ್ಲಿ ಮಾತ್ರ’ ಎಂದು ಹೇಳಿದರು.

ಹಾಗಾದರೆ ಡಾ.ಕಲಾಂ ಅವರ ಪ್ರಕಾರ ದೇವರು ಅಂದರೆ ಯಾರು? ಈ ಪ್ರಶ್ನೆಗೆ ಅವರಲ್ಲಿ ಸ್ಪಷ್ಟತೆ ಇದೆ. ಈಶ್ವರ-ಅಹ್, ಖುದಾ-ಭಗವಾನ್ ಮತ್ತು ಮಸೀದಿ-ದೇವಾಲಯ ಎಂಬ ದ್ವಂದ್ವ ಇಲ್ಲ. ಪ್ರೀತಿಯೊಂದೇ ಅವರ ಉದ್ದೇಶ. ಆದರೆ ನಾವು ದ್ವೇಷಕ್ಕೆ ನಮ್ಮ ಶಕ್ತಿಯನ್ನು ವ್ಯಯಿಸುತ್ತಿದ್ದೇವೆ. ನಮ್ಮ ನಮ್ಮ ಸಂತಸವನ್ನು ಕೊಂದು ಜೀವನವನ್ನು ಹೈರಾಣ ಮಾಡಿಕೊಳ್ಳುತ್ತಿದ್ದೇವೆ. ಖುದಾ ಮತ್ತು ರಾಮ ಇಬ್ಬರೂ ಒಂದೇ. ಪ್ರೀತಿಯಲ್ಲಿ ಮಾತ್ರ ಇವರಿ ಬ್ಬರೂ ಒಂದೇ ಆಗುತ್ತಾರೆ.

ಇದನ್ನು ಡಾ.ಕಲಾಂ ಒಂದು ಕವಿತೆ ಮೂಲಕ ವಿವರಿಸಿದರು. ಡಾ.ಕಲಾಂ ಅವರ ದೈವತ್ವ ಕಲ್ಪನೆಗೆ ಯಾವ ರಾಷ್ಟ್ರೀಯವಾದಿಯೂ ತಕರಾರು ತೆಗೆಯ ಲಾರ. ಕೆಲವರು ದೇವರು ಅಂದ್ರೆ ಸತ್ಯ ಎಂದು ಪ್ರತಿಪಾದಿಸುತ್ತಾರೆ. ಉಳಿದವರು ಪ್ರೀತಿ ಅಂತಾರೆ. ಆದರೆ ಡಾ.ಕಲಾಂ ಪ್ರಕಾರ ದೇವರೆಂದರೆ ಕಾರುಣ್ಯ. ಡಾ.ಕಲಾಂ ವ್ಯಕ್ತಿತ್ವವನ್ನು ಖುಷವಂತ್ ಸಿಂಗ ಕೇವಲ ಐದಾರು ಪ್ಯಾರಗಳಲ್ಲಿ ಕಟ್ಟಿಕೊಟ್ಟಿದ್ದರು.