Thursday, 12th December 2024

ರಿಂಕು ಸಿಂಗ್’ಗೆ ಬಿಸಿಸಿಐನಿಂದ ವಾರ್ಷಿಕ 1 ಕೋಟಿ ರೂ. ಸಂಭಾವನೆ

ಮುಂಬೈ: ಕೆಕೆಆರ್ ಪರ ಆಡುತ್ತಿರುವ ರಿಂಕು ಸಿಂಗ್​ಗೆ IPL ನಲ್ಲಿ ಸಿಗುವ ಮೊತ್ತಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಬಿಸಿಸಿಐ ಘೋಷಿಸಿದೆ.

ಬಿಸಿಸಿಐ ಇತ್ತೀಚೆಗೆ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿತ್ತು. 30 ಆಟಗಾರರನ್ನು ಒಳಗೊಂಡ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಂಕು ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ.

ಗ್ರೇಡ್-C ಗುತ್ತಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಿಂಕು ಸಿಂಗ್ ಅವರಿಗೆ ಬಿಸಿಸಿಐ ವಾರ್ಷಿಕ 1 ಕೋಟಿ ರೂ. ಸಂಭಾವನೆ ನೀಡಲಿದೆ. ಇದು ರಿಂಕು ಅವರ ಐಪಿಎಲ್​ ವೇತನಕ್ಕಿಂತ ಹೆಚ್ಚು.

ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ರಿಂಕು ಸಿಂಗ್ ಪಡೆಯುತ್ತಿರುವ ಸಂಭಾವನೆ 55 ಲಕ್ಷ ರೂ. ಮಾತ್ರ. 2018 ರಿಂದ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ರಿಂಕು ಕಳೆದ ಸೀಸನ್​ನ ಐಪಿಎಲ್​ನಲ್ಲಿ ಸಂಚಲ ಸೃಷ್ಟಿಸಿದ್ದರು.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲೇ ಉಳಿದಿರುವ ರಿಂಕು ಸಿಂಗ್ 55 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಇತ್ತ ಬಿಸಿಸಿಐ ಕಡೆಯಿಂದ ಯುವ ಎಡಗೈ ದಾಂಡಿಗನಿಗೆ 1 ಕೋಟಿ ರೂ. ಸಿಗಲಿದೆ.

ವಿಶೇಷ ಎಂದರೆ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಐಪಿಎಲ್ ವೇತನ ಹೆಚ್ಚಿದ್ದು, ಬಿಸಿಸಿಐ ಸಂಭಾವನೆ ಕಡಿಮೆ ಇದೆ. ಉದಾಹರಣೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಿಸಿಸಿಐಯಿಂದ ಪಡೆಯುತ್ತಿರುವ ವಾರ್ಷಿಕ ಮೊತ್ತ ತಲಾ 7 ಕೋಟಿ ರೂ.

ಇದೇ ವೇಳೆ ರೋಹಿತ್ ಶರ್ಮಾಗೆ ಐಪಿಎಲ್​ನಿಂದ ಸಿಗುವ ಮೊತ್ತ 16 ಕೋಟಿ ರೂ. ಹಾಗೆಯೇ ವಿರಾಟ್ ಕೊಹ್ಲಿಗೆ ಆರ್​ಸಿಬಿ ನೀಡುತ್ತಿರುವ ಸಂಭಾವನೆ 15 ಕೋಟಿ ರೂ.