ನೂರೆಂಟು ವಿಶ್ವ
ಎಲ್ಲವುಗಳಿಗೆ ಕಾರಣ ಹುಡುಕಬೇಕಾದ ಅಗತ್ಯವಿರುವುದಿಲ್ಲ. ಯಾಕೆಂದರೆ ಕೆಲವು ಸಂಗತಿಗಳಿಗೆ ಕಾರಣವೇ ಇರುವುದಿಲ್ಲ. ಹುಡುಕಿದರೂ ಸಿಗುವುದಿಲ್ಲ. ತಾನು ಹೊಸ ವನ್ಯಜೀವಿಧಾಮ ಘೋಷಿಸಿದ್ದರಿಂದ ಅಲ್ಲಿನ ವನ್ಯಜೀವಿಗಳು ಸುರಕ್ಷಿತವಾಗಿ ಇರುವಂತಾಗಿದೆ ಎಂದು ನಾಯಕ ನಾದವನು ಯೋಚಿಸುತ್ತಿರುತ್ತಾನೆ. ಆದರೆ ಕಾಡಿನಲ್ಲಿರುವ ವನ್ಯಜೀವಿಗಳಿಗೆ ಸರಕಾರ ಎಂಬ ವ್ಯವಸ್ಥೆ ಇದೆ ಎಂಬುದೂ ಗೊತ್ತಿರುವುದಿಲ್ಲ.
ಮ್ಯಾನೇಜ್ಮೆಂಟ್ ಗುರು ಪ್ರಕಾಶ ಅಯ್ಯರ್ ಶಿಫಾರಸಿನ ಮೇರೆಗೆ, ನಾನು ಕಳೆದ ವರ್ಷ ಒಂದು ಪುಸ್ತಕವನ್ನು ಓದಿದ್ದೆ. ತಮ್ಮ ಕೃತಿಯೊಂದರಲ್ಲಿ ಅಯ್ಯರ್ ಆ ಪುಸ್ತಕವನ್ನು ಆಧರಿಸಿ ಒಂದು ಅಧ್ಯಾಯವನ್ನು ಸಹ ಬರೆದಿದ್ದಾರೆ. ಅಂದ ಹಾಗೆ ಆ ಪುಸ್ತಕದ ಹೆಸರು The Art of Thinking Clearly. ಈ ಕೃತಿ ಯನ್ನು ಬರೆದವನು ರಾಲ್ ಡೊಬೆಲ್ಲಿ. ಈತ ಮೂಲತಃ ಸ್ವಿಜರ್‌ಲ್ಯಾಂಡಿನವನು. ಈತ ಈ ಪುಸ್ತಕವನ್ನು ಬರೆದು ಹನ್ನೊಂದು ವರ್ಷಗಳಾದವು. ಈಗಲೂ ಈ ಪುಸ್ತಕ ಬೆಸ್ಟ್ ಸೆಲ್ಲರ್. ನನಗೆ ಆ ಲೇಖಕ ಪರಿಚಯವಾಗಿದ್ದು ನಾಲ್ಕು ವರ್ಷಗಳ ಹಿಂದೆ ಆತ ಬರೆದ Stop Reading the News: How to cope with the information overload and think more clearly ಕೃತಿಯ ಮೂಲಕ. Stop Reading the Newsಪುಸ್ತಕ ಓದಿದ ಬಳಿಕ ಆತ ಬರೆದ ಇನ್ನೆರಡು ಪುಸ್ತಕ ಗಳನ್ನು ಓದಿದೆ. ಅಂದ ಹಾಗೆ ಆತನ ಇನ್ನೊಂದು ಪುಸ್ತಕ The Art of the Good Life ಕೂಡ ಸಾಕಷ್ಟು ಸುದ್ದಿ ಮಾಡಿತ್ತು.
ಚೈನಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಡೊಬೆಲ್ಲಿ, ‘ಹತ್ತು ವರ್ಷಗಳ ಹಿಂದೆ, ನಾನು ಪತ್ರಿಕೆಯನ್ನು ಓದಬಾರದು, ಟಿವಿಯಲ್ಲಾಗಲಿ, ಆನ್‌ಲೈನ್ ಮಾಧ್ಯಮದ ಮೂಲಕವಾಗಲಿ ಸುದ್ದಿಯನ್ನು ಓದಲೇಬಾರದು ಎಂದು ನಿರ್ಧರಿಸಿದೆ. ಇದರಿಂದ ನಾನು ಸಾಕಷ್ಟು ಸಮಯವನ್ನು ಉಳಿತಾಯ ಮಾಡಿದೆ.
ನನ್ನ ಏಕಾಗ್ರತೆಯನ್ನು ಜಾಸ್ತಿ ಮಾಡಿಕೊಂಡೆ. ನನ್ನಲ್ಲಿ ಉದ್ವಿಗ್ನತೆ ಕಡಿಮೆಯಾಯಿತು. ಇದರಿಂದ ಜೀವನದಲ್ಲಿ ನಾನು ಏನನ್ನೋ ಕಳೆದುಕೊಂಡೆ ಎಂಬ ಭಾವ ಸ್ವಲ್ಪವೂ ಕಾಡಲಿಲ್ಲ. ಪತ್ರಿಕೆ ಮತ್ತು ಟಿವಿಯಲ್ಲಿ ಸುದ್ದಿಯನ್ನು ಓದುವುದರಿಂದ, ವೀಕ್ಷಿಸುವುದರಿಂದ ಮೂಲಭೂತವಾಗಿ ಜಗತ್ತನ್ನು ಅರ್ಥೈಸಿ ಕೊಳ್ಳಲು ಸಹಾಯಕವಾಗುವುದಿಲ್ಲ.
ಹೆಚ್ಚು ಹೆಚ್ಚು ಸುದ್ದಿಯ ಹಿಂದೆ ಬಿದ್ದರೆ ನೀವು ಸಿನಿಕರಾಗುತ್ತೀರಿ, ನಿಮ್ಮಲ್ಲಿ ಚಡಪಡಿಕೆ ತೀವ್ರವಾಗುತ್ತದೆ. ಸುದ್ದಿ ಅಂದ್ರೆ ನಿಮ್ಮ ಮಿದುಳಿಗೆ ಹಿಡಿದ ಒಂದು ರೋಗ’ ಎಂದು ಹೇಳಿ ದಂಗುಬಡಿಸಿದ್ದ. ಈ ಚಿಂತನೆಯ ಫಲವೇ ಆತನ Stop Reading the News ಎಂಬ ಪುಸ್ತಕ. ಅದನ್ನು ಓದಿದರೆ ಒಂದು ಕ್ಷಣ ಪತ್ರಿಕೆ ಓದುವುದೇ ಒಂದು ವ್ಯಸನ ಎನಿಸಿಬಿಡಬೇಕು, ಆ ರೀತಿ ಆತ ವಾದ ಮಾಡಿದ್ದಾನೆ.
The Art of Thinking Clearly ಪುಸ್ತಕದಲ್ಲಿ ಡೊಬೆಲ್ಲಿ ಒಂದು ಸ್ವಾರಸ್ಯಕರ ಕತೆಯನ್ನು ಹೇಳಿದ್ದಾನೆ. ಇದು ಮೂಲತಃ ನಾಯಕರಾದವರ ಸ್ವಭಾವ ಮತ್ತು ನಡವಳಿಕೆಗೆ ಸಂಬಂಧಿಸಿದ ಕತೆ. ಇದನ್ನು ನಮ್ಮ ಜೀವನಕ್ಕೂ ಅನ್ವಯಿಸಿಕೊಳ್ಳಬಹುದು. ನಮ್ಮ ಹುಬ್ಬಳ್ಳಿ, ಮಂಗಳೂರಿನಂಥ ಒಂದು ನಗರ ದಲ್ಲಿ ಒಬ್ಬನಿದ್ದ. ಆತ ಹಳದಿ ಶರ್ಟ್ ಮತ್ತು ಕೆಂಪು ಹ್ಯಾಟ್ ಧರಿಸಿ, ಪ್ರತಿದಿನ ಬೆಳಗ್ಗೆ ಒಂಬತ್ತು ಗಂಟೆಗೆ ಅಲ್ಲಿನ ಬಿಜಿ ಟ್ರಾಫಿಕ್ ಜಂಕ್ಷನ್ ಬಳಿ ಬಂದು, ಅಲ್ಲಿ ಸೇರಿದ ಜನರತ್ತ ತನ್ನ ಹ್ಯಾಟ್ ನಿಂದ ಕೈ ಬೀಸುತ್ತಿದ್ದ.
ಸುಮಾರು ಹದಿನೈದು-ಇಪ್ಪತ್ತು ನಿಮಿಷಗಳ ಕಾಲ ಹೀಗೆ ಮಾಡಿ, ಫಕ್ಕನೆ ಅದೃಶ್ಯನಾಗಿಬಿಡುತ್ತಿದ್ದ. ಆತ ಬರುವುದನ್ನು, ನಿಶ್ಚಿತ ಜಾಗದಲ್ಲಿ ನಿಂತು ಕೈ ಬೀಸುವುದನ್ನು ಜನ ನೋಡುತ್ತಿದ್ದರು. ಆದರೆ ಯಾವ ಕ್ಷಣದಲ್ಲಿ ನಾಪತ್ತೆಯಾದ ಎಂಬುದು ಮಾತ್ರ ಯಾರಿಗೂ ಗೊತ್ತಾಗುತ್ತಿರಲಿಲ್ಲ. ‘ಈಗ ತಾನೇ ಅವನನ್ನು ನೋಡಿದೆವು. ತನ್ನ ಹ್ಯಾಟಿನಿಂದ ಜನರತ್ತ ಕೈಬೀಸುತ್ತಿದ್ದ. ಈಗೆಲ್ಲಿ ಹೊರಟು ಹೋದನೋ?’ ಎಂದು ಎಲ್ಲರೂ ತಮ್ಮ ತಮ್ಮಲ್ಲಿಯೇ ಗೊಣಗಿ ಕೊಳ್ಳುತ್ತಿದ್ದರು. ಒಂದು ದಿನ ಪೊಲೀಸ್ ಕಾನ್‌ಸ್ಟೇಬಲ್ ಆತನ ಬಳಿ ಹೋದ. ಆತನ ಮರ್ಮವೇನು ಎಂದು ತಿಳಿಯುವ ಕುತೂಹಲ ಅವನಿಗೂ ಇತ್ತು. ‘ಪ್ರತಿದಿನ ನೀನು ಇಲ್ಲಿ ಏನು ಮಾಡುತ್ತೀಯಾ?’ ಎಂದು ಕಾನ್‌ಸ್ಟೇಬಲ್ ಕೇಳಿದ. ಅದಕ್ಕೆ ಆ ಹ್ಯಾಟುಧಾರಿ, ‘ನಾನು ನಿತ್ಯವೂ ಇಲ್ಲಿಗೆ ಬರುವ ಘೇಂಡಾ ಮೃಗಳನ್ನು ಓಡಿಸುತ್ತೇನೆ’ ಎಂದ. ಆತನ ಉತ್ತರ ಕೇಳಿ ಆಶ್ಚರ್ಯಚಕಿತನಾದ ಕಾನ್‌ಸ್ಟೇಬಲ್, ‘ಘೇಂಡಾಮೃಗಗಳಾ? ಏನು ಹೇಳ್ತಾ ಇದ್ದೀಯಾ? ಇಲ್ಲಿ ಘೇಂಡಾಮೃಗಳು ಬರುವುದುಂಟಾ? ನಾನೂ ಇಲ್ಲಿಯೇ ಸನಿಹದಲ್ಲಿ ಡ್ಯೂಟಿ ಮಾಡ್ತೇನೆ.
ಇಲ್ಲಿ ಘೇಂಡಾಮೃಗಗಳು ಬಂದಿದ್ದನ್ನು ನಾನಂತೂ ನೋಡಿಲ್ಲ. ಹೀಗಿರುವಾಗ ನೀನು ಅವುಗಳನ್ನು ಓಡಿಸುವ ಪ್ರಶ್ನೆಯೇ ಇಲ್ಲವಲ್ಲ?’ ಎಂದ. ಅದಕ್ಕೆ ಆ ಹ್ಯಾಟುಧಾರಿ, ‘ನೋಡಿದ್ರಾ? ನಾನು ಘೇಂಡಾಮೃಗಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತಿರುವುದರಿಂದ ನಿಮಗೆ ಅವು ಕಂಡಿಲ್ಲ. ಒಂದು ವೇಳೆ ನಾನು ಇಲ್ಲಿ ಇಲ್ಲದಿದ್ದರೆ ಏನಾಗ್ತಾ ಇತ್ತು ಕತೆ? ಘೇಂಡಾಮೃಗಳನ್ನು ನೋಡಿ ಜನ ದಿಕ್ಕಾಪಾಲಾಗಿ ಓಡುತ್ತಿದ್ದರು. ಆ ಗೊಂದಲದಲ್ಲಿ ಜನ ಕಾಲ್ತುಳಿತ ಕ್ಕೊಳಗಾಗಿ ಸಾಯುತ್ತಿದ್ದರು ಅಥವಾ ಗಾಯಗೊಳ್ಳುತ್ತಿದ್ದರು. ಇದರಿಂದ ಜನರಲ್ಲಿ ಭೀತಿಯ ವಾತಾವರಣ ನೆಲೆಸುವಂತಾಗಿ, ಜನ ಮನೆಗಳಿಂದ ಹೊರಗೆ ಬರುತ್ತಿರಲಿಲ್ಲ. ಅದರಿಂದ ಜನ ಉಪವಾಸ ಬಿದ್ದು ಸಾಯುವಂತಾಗುತ್ತಿತ್ತು. ನಾನು ಅದೆಂಥ ಮಹತ್ಕಾರ್ಯ ಮಾಡ್ತಾ ಇದ್ದೇನೆ ಎಂಬುದು
ಗೊತ್ತಾಯ್ತಾ?’ ಎಂದು ವಿವರಿಸಿದ.
ಆತನ ಮಾತುಗಳನ್ನು ಕೇಳಿದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ. ಒಂದೂ ಮಾತಾಡದೇ ಏನೋ ಯೋಚಿಸುತ್ತಾ
ಅಲ್ಲಿಂದ ನಿರ್ಗಮಿಸಿದ. ಆ ಪ್ರಸಂಗ ಇಲ್ಲಿಗೆ ಮುಗಿಯಿತು. ಇದೆಂಥ ಕತೆ ಎಂದು ನಿಮಗೆ ಅನಿಸಬಹುದು. ನನಗೆ ಈ ಕತೆಯನ್ನು ಓದಿದಾಗ ಆಶ್ಚರ್ಯ ಎಂದೆನಿಸಲಿಲ್ಲ. ಕಾರಣ ನಾವು ಇಲ್ಲದ ಸಂಗತಿಯನ್ನು ಇದೆಯೆಂದು ಭಾವಿಸುವ, ಒಂದು ವಿಚಿತ್ರ ಭ್ರಾಮಕ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ.
ಪೊಲೀಸ್ ಕಾನ್‌ಸ್ಟೇಬಲ್, ಆ ಹ್ಯಾಟುಧಾರಿ ವ್ಯಕ್ತಿಯನ್ನು ದಬಾಯಿಸಬಹುದಿತ್ತು. ‘ಸುಳ್ಳು ಹೇಳ್ತಾ ಇದ್ದೀಯಾ? ನನ್ನನ್ನು ಮಂಗ ಮಾಡ್ತಾ ಇದ್ದೀಯಾ?’ ಎಂದು ಗದರಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಘೇಂಡಾಮೃಗದ ಕತೆಯನ್ನು ಕೇಳುತ್ತಿದ್ದಂತೆ ಅಲ್ಲಿಂದ ಜಾಗ ಖಾಲಿಮಾಡಿಬಿಟ್ಟ. ಕಾರಣ
ಇಷ್ಟೇ, ಆತನಿಗೆ ಘೇಂಡಾಮೃಗಗಳು ಅಲ್ಲಿ ಬರಲು ಸಾಧ್ಯವಿಲ್ಲ ಎಂದು ಒಂದು ಕ್ಷಣ ಅನಿಸಿದರೂ, ತನಗೆ ಕಂಡಿದ್ದು ಮಾತ್ರ ಸತ್ಯ ಅಲ್ಲ, ಅದು ನಿತ್ಯವೂ ಬರುತ್ತಿರಬಹುದು, ಆದರೆ ತನ್ನ ಕಣ್ಣಿಗೆ ಮತ್ತು ಇತರರಿಗೆ ಕಾಣದಿರಬಹುದು. ತನ್ನ ಕಣ್ಣಿಗೆ ಕಂಡಿಲ್ಲ ಎಂದಾಕ್ಷಣ ಇಲ್ಲವೇ ಇಲ್ಲ ಎಂದಲ್ಲ ಎಂದು
ಭಾವಿಸಿದ.
ಇದನ್ನು ‘ಆಲೂಗಡ್ಡೆ ವರ್ಸಸ್ ಬಾಂಬ್ ಫೋಬಿಯಾ’ ಅಂತಾರೆ. ಆಲೂಗಡ್ಡೆಯನ್ನು ತೋರಿಸಿ, ‘ಇದು ಬಾಂಬ್’ ಎಂದು ಹೇಳಿದರೆ, ನೂರರಲ್ಲಿ ತೊಂಬತ್ತು ಮಂದಿ ನಂಬುತ್ತಾರಂತೆ. ‘ಅದು ಮೇಲ್ನೋಟಕ್ಕೆ ಆಲೂಗಡ್ಡೆ ಥರಾ ಕಾಣುತ್ತಿದೆ, ಬಾಂಬ್ ಇದ್ದಿರಲೂಬಹುದು. ಯಾರಿಗೆ ಗೊತ್ತು? ನಾನ್ಯಾಕೆ ಆಲೂಗಡ್ಡೆ ಎಂದು ತಿಳಿದುಕೊಳ್ಳಬೇಕು? ಜರ್ಕಡ್ತಾ, ಅದು ಬಾಂಬ್ ಆಗಿದ್ದರೆ? ನಾನ್ಯಾಕೆ ಅದನ್ನು ಮುಟ್ಟಿ ಪರೀಕ್ಷಿಸಬೇಕು? ಆಲೂಗಡ್ಡೆ ಎಂದು ಭಾವಿಸಿ, ಮುಟ್ಟಿದಾಗ ‘ಢಮ್’ ಎಂದು ಸೋಟವಾದರೆ ಏನು ಗತಿ? ಹೀಗಾಗಿ ಅದು ಬಾಂಬ್ ಅಲ್ಲ ಎಂಬುದು ದೃಢಪಡಲಿ. ಪೊಲೀಸರು ಬಂದು
ಪರೀಕ್ಷೆ ಮಾಡಿ ಅದು ಏನು ಎಂಬುದನ್ನು ಹೇಳಲಿ, ಅಲ್ಲಿ ತನಕ ದೂರವೇ ಇರೋಣ.
ಅಲ್ಲಿ ತನಕ ಆಲೂಗಡ್ಡೆಯನ್ನು ಬಾಂಬ್ ಎಂದು ತಿಳಿದುಕೊಳ್ಳುವುದರಿಂದ ತಪ್ಪೇನೂ ಇಲ್ಲ. ಬಾಂಬನ್ನು ಆಲೂಗಡ್ಡೆ ಎಂದು ಭಾವಿಸಿ ಅನಾಹುತ ಕ್ಕೊಳಗಾದರೆ?’ ಎಂದು ಅಂದುಕೊಳ್ಳುತ್ತಾರೆ. ಅದೇ ರೀತಿ ಪೊಲೀಸ್ ಕಾನ್ ಸ್ಟೇಬಲ್ ಕೂಡ ಹ್ಯಾಟುಧಾರಿಯನ್ನು ಪ್ರಶ್ನಿಸದೇ ಅವನ ಪಾಡಿಗೆ ಹೋಗಲು ಬಿಟ್ಟ. ಆತನ ಒಳಮನಸ್ಸಿನಲ್ಲಿ ಒಂದೋ ಆತ ಹುಚ್ಚ ಎಂದು ಅನಿಸಿರಬೇಕು ಇಲ್ಲವೇ ಆತ ಹೇಳಿದ್ದರಲ್ಲಿ ಸತ್ಯಾಂಶ ಇದ್ದಿರಬಹುದು ಎಂದು ಅನಿಸಿರ ಬೇಕು. ಜಗತ್ತಿನ ಯಾವುದೇ ದೇಶವಿರಬಹುದು, ಯಾವುದೇ ವ್ಯವಸ್ಥೆ ಇರಬಹುದು, ಅದು ಡಿಟ್ಟh ಆಗುವುದು ಹೀಗೆಯೇ.
ನಾಯಕರಾದವರು, ಹ್ಯಾಟುಧಾರಿ ವ್ಯಕ್ತಿ ಜನರನ್ನು ಮಂಗ ಮಾಡಿದ ಹಾಗೆ, ತನ್ನ ಪ್ರಜೆಗಳಿಗೆ ನಿಮ್ಮನ್ನೆಲ್ಲ ಘೇಂಡಾಮೃಗಗಳಿಂದ ರಕ್ಷಣೆ ಕೊಡಿಸು ತ್ತಿದ್ದೇನೆ ಎಂಬ ಭಾವನೆ ನೆಲೆಯೂರುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ತಮ್ಮ ಪ್ರಯತ್ನದ ಫಲವಾಗಿ ಘೇಂಡಾಮೃಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಎಲ್ಲರಿಗೂ ಅನಿಸುವ ಹಾಗೆ ಮಾಡುತ್ತಿರುತ್ತಾರೆ. ಇಲ್ಲದ ಮೃಗವನ್ನು ಇದೆ ಎಂದು ಭಾವಿಸುವಂತೆ ಮಾಡುವ ಸತತ ಪ್ರಯತ್ನ ದಲ್ಲಿ ತೊಡಗಿರುತ್ತಾರೆ. ಜನರನ್ನು ನಂಬಿಸುವುದು ಮತ್ತು ನಂಬಿಕೆಯನ್ನು ಕಳೆದುಕೊಳ್ಳದಿರುವಂತೆ ನೋಡಿಕೊಳ್ಳುವುದು ನಾಯಕರಾದವರ ತಾಕತ್ತು. ಇಷ್ಟು ವರ್ಷಗಳ ತನಕ ಚೀನಾವನ್ನು ಆಳಿದವರು ಅಲ್ಲಿನ ಜನರ ಸ್ವಾತಂತ್ರ್ಯಗಳನ್ನು ಹರಣ ಮಾಡಿದರೂ ಅಲ್ಲಿನ ಜನ ಚಕಾರ ಎತ್ತುತ್ತಿಲ್ಲ.
ಸ್ವಾತಂತ್ರ್ಯಕ್ಕಿಂತ ಮಿಗಿಲಾದ ಸುಖವನ್ನು ನಿಮಗೆ ಕೊಡುತ್ತಿದ್ದೇವೆ, ಸುಖ-ನೆಮ್ಮದಿ ಇಲ್ಲದ ಸ್ವಾತಂತ್ರ್ಯ ಇದ್ದರೆಷ್ಟು, ಬಿಟ್ಟರೆಷ್ಟು ಎಂದು ನಂಬಿಸುತ್ತಾ
ಬಂದಿರುವುದನ್ನು ನೋಡಬಹುದು. ಇಲ್ಲದ್ದನ್ನು ಇದೆ ಎಂದು ನಂಬಿಸುವುದು, ಇರುವುದು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಭಾವಿಸುವಂತೆ ಮಾಡು ವುದು ಅಲ್ಲಿನ ನಾಯಕರ ಸತತ ಪ್ರಯತ್ನ. ಇನ್ನೊಂದು ರೀತಿಯ ನಾಯಕರಿರುತ್ತಾರೆ. ಅವರು ತಾವೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದೇವೆ ಎಂಬ
ಭಾವನೆಯನ್ನೇ ನೀಡುವುದಿಲ್ಲ. ನಿಮ್ಮ ಸುತ್ತಮುತ್ತ ನಡೆಯುವ ಎಲ್ಲವುಗಳಿಗೆ ನೀವೇ ಜವಾಬುದಾರರು ಎಂದು ಭಾವಿಸಿರುತ್ತಾರೆ. ಸರಕಾರ ಮತ್ತು ನಾಯಕರೇ ಎಲ್ಲವನ್ನೂ ಮಾಡಬೇಕು ಎಂದು ನಿರೀಕ್ಷಿಸಬಾರದು, ನಾಯಕರಾದವರಿಗೆ ಎಲ್ಲವನ್ನೂ ನಿಯಂತ್ರಿಸುವುದು ಕಷ್ಟ ಎಂಬುದನ್ನು ಜನ
ತಿಳಿದುಕೊಳ್ಳಬೇಕು ಎಂದು ಅವರು ನಿರೀಕ್ಷಿಸುತ್ತಾರೆ.
ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ, ಪಿಟೀಲು ನುಡಿಸುವ ನೀರೋ ಮನೋಭಾವದ ನಾಯಕರೂ ಇರುತ್ತಾರೆ. ಅವರಿಗೆ ತಾವು ನಾಯಕರಾಗಿರು ವುದು ಮುಖ್ಯ. ಆದರೆ ಅವರು ಯಾವುದಕ್ಕೂ ಬಾಧ್ಯಸ್ಥರಾಗಿರುವುದಿಲ್ಲ. ಅವರದು ಜವಾಬ್ದಾರಿಯಿಲ್ಲದ ನಾಯಕತ್ವ. ಇದು ಒಂಥರಾ ಹ್ಯಾಟುಧಾರಿ ವ್ಯಕ್ತಿಯನ್ನು ಮಾತಾಡಿಸಿದ ಪೊಲೀಸ್ ಮನೋಭಾವ. ತಾನು ತನ್ನ ಕೆಲಸ ಮಾಡಿದ್ದೇನೆ, ಫಲಿತಾಂಶ ಏನೇ ಆಗಲಿ ಎಂಬ ಸಮಾಧಾನ. ಯಾರಾದರೂ ಆ ಕಾನ್‌ಸ್ಟೇಬಲ್‌ನನ್ನು ಪ್ರಶ್ನಿಸಿದರೆ, ‘ಹೌದು ನಾನು ಆ ಹ್ಯಾಟುಧಾರಿ ವ್ಯಕ್ತಿಯನ್ನು ವಿಚಾರಣೆ ಮಾಡಿದ್ದೇನೆ, ಆತ ಘೇಂಡಾಮೃಗಗಳನ್ನು ನಿಯಂತ್ರಿಸುವ ಕೆಲಸದಲ್ಲಿ ನಿರತನಾಗಿದ್ದೇನೆ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕ ಬಿಟ್ಟಿದ್ದೇನೆ’ ಎಂದು ಹೇಳಿ ಬಚಾವ್ ಆಗುತ್ತಾನೆ.
ಹ್ಯಾಟುಧಾರಿ ವ್ಯಕ್ತಿ ಅವೆಷ್ಟೋ ವರ್ಷಗಳಿಂದ ಘೇಂಡಾಮೃಗಗಳನ್ನು ನಿಯಂತ್ರಿಸುವ ಕೆಲಸದಲ್ಲಿ ನಿರತನಾಗಿದ್ದಾನೆ ಎಂದೇ ಇಟ್ಟುಕೊಳ್ಳೋಣ. ಆದರೆ ಆತ ಇಲ್ಲಿ ತನಕ ಅಜ್ಞಾತ ನಾಗಿಯೇ ಇದ್ದಾನೆ. ಆತ ತನ್ನಿಂದಾಗಿಯೇ ಘೇಂಡಾಮೃಗಗಳು ನಿಯಂತ್ರಣದಲ್ಲಿವೆ ಎಂದು ಎಲ್ಲೂ ಬೊಂಬಡಾ ಬಜಾಯಿಸಿ ಕೊಂಡಿಲ್ಲ. ನಾಯಕರಾದವರು ಎಲ್ಲ ಕೆಲಸಗಳಿಗೂ ಕ್ರೆಡಿಟ್ ತೆಗೆದುಕೊಳ್ಳಲು ಹೋಗಬಾರದು. ಬೇರೆಯವರಿಗೂ ಕ್ರೆಡಿಟ್ ತೆಗೆದುಕೊಳ್ಳಲು ಬಿಡಬೇಕು. ಪತ್ರಿಕೆಯ ಮುಖಪುಟ ದಲ್ಲೋ, ರಸ್ತೆ ಬದಿಯ ಫಲಕದಲ್ಲೋ, ತನ್ನ ಪರವಾದ ಜಾಹೀರಾತು ಆಕರ್ಷಕ ಮತ್ತು ಸೃಜನಾತ್ಮಕವಾಗಿದ್ದರೆ, ಅದು
ಪ್ರಶಂಸೆ ಗೊಳಗಾದರೆ, ಅದನ್ನು ವಿನ್ಯಾಸ ಮಾಡಿದವನು ನಾನೇ ಎಂದು ಹೇಳಬಾರದು. ಆ ಕ್ರೆಡಿಟ್ ಅನ್ನು ಅದನ್ನು ಡಿಸೈನ್ ಮಾಡಿದ ಜಾಹೀರಾತು ಏಜೆನ್ಸಿಗೆ ಬಿಟ್ಟುಕೊಡದಷ್ಟು ಅಲ್ಪರಾಗಬಾರದು.
ಒಂದು ಕಾಲಕ್ಕೆ ನನ್ನ ಜತೆ ಇದ್ದವ, ಈಗ ಬೇರೆ ಕಡೆ ಹೋಗಿ ಉತ್ತಮ ಸಾಧನೆ ಮಾಡಿದರೆ, ಅದಕ್ಕೂ ನಾನೇ ಕಾರಣ ಎಂದು ಹೇಳಬಾರದು. ನಾಯಕ ನಾದವನಿಗೆ ಗಣಪತಿಯ ಮಹತ್ವ ಮತ್ತು ಇಲಿಯ ಮಹತ್ವಗಳೆರಡೂ ಗೊತ್ತಿರಬೇಕು. ಗಣಪತಿಯ ಪಕ್ಕದಲ್ಲಿರುವಷ್ಟು ಹೊತ್ತು ತಾನು ಸುರಕ್ಷಿತ ಎಂದು ಇಲಿ ಅಂದುಕೊಂಡಿರುತ್ತದೆ. ತನ್ನ ಭಾರವನ್ನು ಹೊರುವಷ್ಟು ಇಲಿ ಗಟ್ಟಿಯಾಗಿದೆ ಎಂದು ಗಣಪತಿ ಅಂದುಕೊಂಡಿರುತ್ತಾನೆ. ತನ್ನ ಸುತ್ತಮುತ್ತ ಇರುವವರು ಯಾರು, ಹೇಗೆ, ಎಂತು ಎಂಬುದನ್ನು ನಾಯಕ ತಿಳಿದಿರಬೇಕು. ಎಲ್ಲವುಗಳಿಗೆ ಕಾರಣ ಹುಡುಕಬೇಕಾದ ಅಗತ್ಯವಿರುವುದಿಲ್ಲ.
ಯಾಕೆಂದರೆ ಕೆಲವು ಸಂಗತಿಗಳಿಗೆ ಕಾರಣವೇ ಇರುವುದಿಲ್ಲ. ಹುಡುಕಿದರೂ ಸಿಗುವುದಿಲ್ಲ. ಇಂದು ಮಳೆ ಯಾಕಾಯ್ತು ಅಥವಾ ಯಾಕೆ ಆಗಲಿಲ್ಲ ಎಂದು ಕಾರಣ ಹುಡುಕಲು ಹೋಗಬಾರದು. ತಾನು ತೆಗೆದುಕೊಂಡ ನಿರ್ಧಾರದಿಂದಲೇ ಹೀಗಾಗಿರಬಹುದಾ ಎಂದು ಕೆಲವು ನಾಯಕರು ಯೋಚಿಸುತ್ತಿರುತ್ತಾರೆ. ತಾನು ಹೊಸ ವನ್ಯಜೀವಿಧಾಮ ಘೋಷಿಸಿದ್ದರಿಂದ ಅಲ್ಲಿನ ವನ್ಯಜೀವಿಗಳು ಸುರಕ್ಷಿತವಾಗಿ ಇರುವಂತಾಗಿದೆ ಎಂದು ನಾಯಕನಾದವನು ಯೋಚಿಸುತಿ
ರುತ್ತಾನೆ. ಆದರೆ ಕಾಡಿನಲ್ಲಿರುವ ವನ್ಯಜೀವಿಗಳಿಗೆ ಸರಕಾರ ಎಂಬ ವ್ಯವಸ್ಥೆ ಇದೆ ಎಂಬುದೂ ಗೊತ್ತಿರುವುದಿಲ್ಲ, ಆ ಘೋಷಣೆ ಆಗಿರುವುದೂ ಗೊತ್ತಿರುವು ದಿಲ್ಲ.
ಅವು ಮೊನ್ನೆಯೂ ಸುರಕ್ಷಿತವಾಗಿದ್ದವು, ನಾಳೆಯೂ ಇರುತ್ತವೆ. ಆದರೆ ನಾಯಕನಾದವ ಮಾತ್ರ ಕಾಡಿನ ವನ್ಯಜೀವಿಗಳು ತನ್ನಿಂದಾಗಿಯೇ ಆರಾಮಾಗಿ ಬದುಕುತ್ತಿವೆ ಎಂದು ಅಂದುಕೊಂಡಿರುತ್ತಾನೆ. ‘ತಾನೇ ಎಲ್ಲ, ತನ್ನಿಂದಾಗಿಯೇ ಎಲ್ಲ, ನಾನಿಲ್ಲದಿದ್ದರೆ ಯಾವುದೂ ಇಲ್ಲ’ ಎಂಬ ಧೋರಣೆಯೇ
ನಾಯಕನ ಸುತ್ತ ಹುತ್ತ ಕಟ್ಟುತ್ತಿರುತ್ತದೆ. Man is a make-believe animal. He is never so truly himself as when he is acting a part ಎಂಬ ಮಾತಿದೆ. ನಾಯಕನಾದವನು ಎಲ್ಲಿ ತನಕ ನಂಬಿಸುತ್ತಾನೋ ಅಲ್ಲಿ ತನಕ ನಂಬಿಕೆಗೆ ಅರ್ಹ ಎಂದೇ ಕರೆಯಿಸಿಕೊಳ್ಳುತ್ತಾನೆ. ನಂಬಿಸುವವರೆಲ್ಲ ವಿಶ್ವಾಸಾರ್ಹರು ಎಂದಲ್ಲ. ನಂಬಿಸುವ ಸಾಮರ್ಥ್ಯ ದುರ್ಬಲವಾದಂತೆ, ಹೊಪ್ಪಳಿಕೆಯೆದ್ದ ಗೋಡೆಗಳಂತೆ ಕಾಣಿಸಲಾ ರಂಭಿಸುತ್ತಾರೆ. ಆಗ ನಾಯಕನ ಸುತ್ತವೇ ಘೇಂಡಾಮೃಗಗಳು ಆವರಿಸಿಕೊಳ್ಳಲಾರಂಭಿಸುತ್ತವೆ. ಎಂದೂ ಕಾಣಿಸದ ಘೇಂಡಾಮೃಗಗಳು ಗೋಚರಿಸಲಾ ರಂಭಿಸುತ್ತವೆ. ಹ್ಯಾಟು ಧಾರಿ ಕೈಬೀಸಿದರೂ ಅವು ಸುಮ್ಮನಾಗುವುದಿಲ್ಲ.
ಅಸಲಿಗೆ, ಅಷ್ಟೊತ್ತಿಗೆ ಆತ ಅಲ್ಲಿ ಇರುವುದೂ ಇಲ್ಲ. ಯಾವುದು ನಿಜ, ಯಾವುದು ಭ್ರಮೆ ಎಂದು ನಿರ್ಣಯಿಸಲಾಗದ ಪೊಲೀಸ್ ಕಾನ್‌ಸ್ಟೇಬಲ್‌ನ ಪಾಡು ನಮ್ಮದಾಗಿರುತ್ತದೆ. ಆಲೂಗಡ್ಡೆಯಂತೆ ಕಾಣಿಸಿದ್ದು ನಿಜಕ್ಕೂ ಆಲೂಗಡ್ಡೆಯಾ ಅಥವಾ ಬಾಂಬಾ? ಎಲ್ಲವೂ ಗೋಜಲು!