Sunday, 15th December 2024

ಅವರೇಕೆ ಮನೆ ಬಿಟ್ಟು ಹೋಗುತ್ತಿದ್ದಾರೆ ಗೊತ್ತಾ ?

ಸಂಗತ

ಡಾ.ವಿಜಯ್ ದರಡಾ

ರಾಜಕಾರಣಿಗಳು ಪಕ್ಷ ತೊರೆಯುವುದಕ್ಕಿರುವ ಒಂದು ಸಂಭವನೀಯ ಕಾರಣವೆಂದರೆ ಅವರು ಭರವಸೆ ಕಳೆದುಕೊಳ್ಳುವುದು. ‘ರಾಜಕೀಯ ದಲ್ಲಿರುವಾಗ ಇಂತಿಂಥ ಕೆಲಸಗಳನ್ನು ಮಾಡಬೇಕು ಅಂದುಕೊಂಡಿದ್ದೆ, ಆದರೆ ಈ ಪಕ್ಷದಲ್ಲಿದ್ದರೆ ಅದನ್ನು ಮಾಡಲು ಸಾಧ್ಯವಿಲ್ಲ’ ಎಂದು ಅವರಿನ್ನಿಸಿ ಪಕ್ಷ ಬದಲಿಸಲು ಆಲೋಸಚಿಸಬಹುದು. ರಾಜಕೀಯಕ್ಕೆ ಇಳಿಯುವವರೆಲ್ಲ ಹಣ ಮಾಡುವುದಕ್ಕೇ ಬಂದಿರುವುದಿಲ್ಲ.

‘ನೀವು ಪಕ್ಷ ಬಿಟ್ಟು ಹೋಗುವುದು ಯಾವಾಗ?’ ಎಂದು ಜನರು ಆಗಾಗ ನನಗೆ ಕೇಳುತ್ತಾರೆ. ‘ಇನ್ನೂ ನೀವು ಹಡಗಿನಿಂದ ಹಾರಿಲ್ವಾ?’ ಎಂದು ಪ್ರಶ್ನಿಸು ತ್ತಾರೆ. ಅದನ್ನು ಕೇಳಿ ನನಗೆ ಒಂಥರಾ ಮಜಾ ಅನ್ನಿಸುತ್ತದೆ. ಏನಿಲ್ಲವೆಂದರೂ ಕಳೆದ ಏಳೆಂಟು ವರ್ಷದಿಂದ ಇದನ್ನೇ ಮೇಲಿಂದ ಮೇಲೆ ಕೇಳಿಸಿಕೊಳ್ಳು ತ್ತಿದ್ದೇನೆ ಎಂದಷ್ಟೇ ಅವರಿಗೆ ಉತ್ತರಿಸುತ್ತೇನೆ. ‘ನಾನಿನ್ನೂ ಇಲ್ಲೇ ಇದ್ದೇನೆ. ನಾಳೆ ಎಲ್ಲಿರುತ್ತೇನೆ? ದೇವರಿಗೇ ಗೊತ್ತು! ಭವಿಷ್ಯದ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ’ ಹಾಗಂತ ನನಗೆ ಪ್ರಶ್ನೆ ಕೇಳಿದವರಿಗೆಲ್ಲ ಹೇಳುತ್ತೇನೆ.

ಆಗ ಅವರು, ‘ಹಾಗಿದ್ದರೆ ಬೇರೆಯವರೇಕೆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ?’ ಎಂದು ಕೇಳುತ್ತಾರೆ. ಇದು ಗಂಭೀರವಾದ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಳ್ಳ ಬೇಕೆಂದರೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದವರು ನಿಜವಾಗಿಯೂ ಅದನ್ನು ಮಾಡಿಕೊಳ್ಳು ತ್ತಿದ್ದಾರಾ? ಬಹುಶಃ ಇಲ್ಲ! ಏಕೆಂದರೆ ಇವತ್ತಿನ ಪರಿಸ್ಥಿತಿಯೇ ಹಾಗಿದೆ. ಹಿಂದೆ ರಾಜರು ಮತ್ತು ಚಕ್ರವರ್ತಿಗಳು ಏನು ಹೇಳುತ್ತಿದ್ದರೋ ಅದೇ ಕಾನೂ ನಾಗುತ್ತಿತ್ತು. ಇಂದಿನ ಸ್ಥಿತಿಯೂ ಹಾಗೇ ಇದೆ. ಪ್ರಶ್ನೆ ಕೇಳುವವರಿಗಿಲ್ಲಿ ಜಾಗವಿಲ್ಲ!

ಪ್ರಶ್ನೆ ಕೇಳುವುದಕ್ಕಿಲ್ಲಿ ಅವಕಾಶವಿಲ್ಲ! ಬೆದರಿಕೆ ಹಾಕಿ ಪಕ್ಷ ಬಿಡುವಂತೆ ಮಾಡಲಾಗುತ್ತಿದೆ, ಹೀಗಾಗಿ ಸಾಕಷ್ಟು ಜನರು ಹೆದರಿಕೊಂಡು ಪಕ್ಷ ತೊರೆಯು ತ್ತಿದ್ದಾರೆ ಎಂಬ ಮಾತುಗಳು ಕೂಡ ಇವೆ. ಎಷ್ಟು ಜನರು ಹಾಗೆ ಹೆದರಿಕೊಂಡು ಪಕ್ಷ ಬಿಟ್ಟು ಹೋಗಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಅವರು ಪಕ್ಷ ತೊರೆದು ಹೋಗಿರುವುದಕ್ಕೆ ನನ್ನ ಪ್ರಕಾರ ಎರಡು ಕಾರಣಗಳಿರಬಹುದು. ಮೊದಲನೆಯದಾಗಿ, ಇಲ್ಲಿದ್ದರೆ ತಮಗೆ ಭವಿಷ್ಯವಿಲ್ಲ ಎಂದು ಅವರಿಗೆ ಅನ್ನಿಸಿರಬಹುದು. ತಾವು ರಾಜಕೀಯಕ್ಕೆ ಬಂದ ಕಾರಣ, ತಮ್ಮ ವೈಯಕ್ತಿಕ ಆಶೋತ್ತರಗಳು ಹಾಗೂ ಗುರಿಗಳು ಇಲ್ಲಿ ಈಡೇರುತ್ತಿಲ್ಲ ಎಂಬುದು ಅವರಿಗೆ ಮನವರಿಕೆಯಾದ ಕಾರಣ ಗಂಟುಮೂಟೆ ಕಟ್ಟಿಕೊಂಡು ಪಕ್ಷ ತೊರೆದು ಹೋಗಿರಬಹುದು.

ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್‌ರಂಥ ದೊಡ್ಡ ನಾಯಕ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ)ದಿಂದ ಪ್ರಫುಲ್ ಪಟೇಲ್‌ರಂಥ ಹಿರಿಯ ಕಟ್ಟಾಳುಗಳು ಹೊರಗೆ ಹೋಗಿರುವುದು ಆಯಾ ರಾಜಕೀಯ ಪಕ್ಷಗಳಲ್ಲಿ ಅಪಾಯದ ಗಂಟೆ ಮೊಳಗಿಸ ಬೇಕು! ರಾಜಕಾರಣಿಗಳು ಪಕ್ಷ ತೊರೆಯುವುದಕ್ಕೆ ನನಗೆ ತೋಚುತ್ತಿರುವ ಇನ್ನೊಂದು ಸಂಭವನೀಯ ಕಾರಣವೆಂದರೆ ಭರವಸೆ ಅಥವಾ ಧೈರ್ಯ ಕಳೆದುಕೊಳ್ಳುವುದು. ‘ರಾಜಕೀಯದಲ್ಲಿರುವಾಗ ನಾನು ಇಂತಿಂಥಾ ಕೆಲಸಗಳನ್ನು ಮಾಡಬೇಕು ಅಂದುಕೊಂಡಿದ್ದೆ, ಆದರೆ ಈ ಪಕ್ಷದಲ್ಲಿದ್ದರೆ ಅದನ್ನು ಮಾಡಲು ಸಾಧ್ಯವಿಲ್ಲ’ ಎಂದು ಅವರಿಗೆ ಅನ್ನಿಸಬಹುದು. ಆಗ ಪಕ್ಷ ಬದಲಿಸುವ ಯೋಚನೆ ಮಾಡಬಹುದು. ಜನರು ಯಾವಾಗಲೂ ಅಂದುಕೊಳ್ಳು ವಂತೆ ರಾಜಕೀಯಕ್ಕೆ ಬರುವವರೆಲ್ಲ ಹಣ ಮಾಡುವುದಕ್ಕೇ ಬಂದಿರುವುದಿಲ್ಲ. ಅಥವಾ ಅವರೆಲ್ಲ ಸ್ವಾರ್ಥದ ಉದ್ದೇಶವನ್ನೇ ಇಟ್ಟುಕೊಂಡಿರುವುದಿಲ್ಲ.

ನಿಜ, ಎಲ್ಲೋ ಕೆಲವರು ಇಂಥ ಉದ್ದೇಶಕ್ಕಾಗಿಯೇ ರಾಜಕೀಯಕ್ಕೆ ಬರಬಹುದು. ಆದರೆ ಹೆಚ್ಚಿನವರು ತಮ್ಮ ಪ್ರದೇಶದ, ತಮ್ಮ ರಾಜ್ಯದ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವುದಕ್ಕಾಗಿ ರಾಜಕೀಯಕ್ಕೆ ಬಂದಿರುತ್ತಾರೆ. ಅವರಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶವನ್ನಾಗಿ
ಮಾಡುವ ಕನಸಿರುತ್ತದೆ. ಜಗತ್ತಿನ ಶ್ರೀಮಂತ ದೇಶಗಳಲ್ಲಿ ಜನರು ಬದುಕುತ್ತಿರುವ ರೀತಿಯಲ್ಲೇ ಭಾರತೀಯರೂ ಸುಖವಾಗಿ ಬದುಕುವಂತಾಗಬೇಕು ಎಂಬ ಕನಸು ಅವರಿಗಿರುತ್ತದೆ. ಅವರು ರಾಜಕೀಯಕ್ಕೆ ಬಂದು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟಪಟ್ಟು
ಪ್ರಯತ್ನಿಸುತ್ತಾರೆ.

ಆದರೆ ಒಮ್ಮೊಮ್ಮೆ ಅವರ ಪ್ರಯತ್ನಗಳಿಗೆ ಫಲವೇ ಸಿಗುವುದಿಲ್ಲ. ಆಗ ಕೆಲಸ ಮಾಡುವುದಾದರೂ ಹೇಗೆ? ಪಕ್ಷದಲ್ಲಿ ಅವರ ಮಾತನ್ನು ಕೇಳಿಸಿಕೊಂಡು ಕ್ರಮ ಕೈಗೊಳ್ಳುವುದಕ್ಕೆ ಯಾರಾದರೂ ಇರಬೇಕಲ್ಲವೇ? ಇಲ್ಲದಿದ್ದರೆ ಬದಲಾವಣೆ ಅಥವಾ ಅಭಿವೃದ್ಧಿ ಹೇಗೆ ಸಾಧ್ಯ? ಎಲ್ಲದಕ್ಕೂ ನಿರಾಕರಿಸುವ ನಾಯಕತ್ವ ಯಾವುದಕ್ಕೂ ಉತ್ತರವಾಗಲು ಸಾಧ್ಯವಿಲ್ಲ! ಗುಲಾಂ ನಬಿ ಆಜಾದ್ ಅವರನ್ನೇ ನೋಡಿ. ಅವರು ಪಕ್ಷ ಬಿಟ್ಟು ಹೋಗುತ್ತೇನೆಂದಾಗ, ‘ಬೇಡ’ ಅಂತಲೂ ಯಾರೂ ಹೇಳಲಿಲ್ಲ! ಈಶಾನ್ಯ ಭಾರತದಲ್ಲಿ ಪ್ರಮುಖ ರಾಜಕಾರಣಿಯಾಗಿರುವ ಕಾಂಗ್ರೆಸ್ ಪಕ್ಷದ ಹಿಮಂತ ಬಿಸ್ವಾ ಶರ್ಮಾ ಅವರ ನಿರ್ಗ ಮನಕ್ಕೆ ಕಾರಣವೇನು? ಆರ್‌ಪಿಎನ್ ಸಿಂಗ್ ಮತ್ತು ಕೃಪಾಶಂಕರ ಸಿಂಗ್ ಪಕ್ಷ ತೊರೆದು ಹೋಗಿದ್ದೇಕೆ? ಆನಂದ ಶರ್ಮಾ, ಮಣಿಶಂಕರ್ ಅಯ್ಯರ್ ಹಾಗೂ ಸಚಿನ್ ಪೈಲಟ್ ರಂಥ ಪ್ರಮುಖ ನಾಯಕರನ್ನು ಮೂಲೆಗುಂಪು ಮಾಡಿದ್ದಕ್ಕೆ ಕಾರಣವೇನು? ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಪ್ರಮುಖ ನಾಯಕ ಕಮಲನಾಥ್ ಅವರು ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಿದ್ದರಿಂದ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿದರು. ಜತೆಗೆ, ಅವರಿಗೆ ಬಿಜೆಪಿಯಲ್ಲೂ ವಿರೋಧವಿತ್ತು.

ಜ್ಯೋತಿರಾದಿತ್ಯ ಸಿಂಧ್ಯಾ, ಜಿತಿನ್ ಪ್ರಸಾದ್ ಹಾಗೂ ಮಿಲಿಂದ್ ದೇವೊರಾ ಅವರು ಪಕ್ಷ ಬಿಟ್ಟು ಹೋಗಿದ್ದಕ್ಕೆ ಕಾರಣ ಹುಡುಕಲು ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಏನಾದರೂ ಪ್ರಯತ್ನಗಳು ಈವರೆಗೆ ನಡೆದಿವೆಯೇ? ಅವರೆಲ್ಲರೂ ರಾಹುಲ್ ಗಾಂಧಿಯವರ ಸಮೀಪವರ್ತಿಗಳಾಗಿದ್ದರು. ಎಲ್ಲರೂ ಒಂದೇ ತಲೆಮಾರಿನ ಯುವ ನಾಯಕರಾಗಿದ್ದರು. ಮುಂದಿನ ಹತ್ತು ವರ್ಷ ಇಲ್ಲೇ ಇದ್ದರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಈ ಪ್ರತಿಭಾವಂತರಿಗೆ ಅನ್ನಿಸಿರಬಹುದಲ್ಲವೇ? ಎಲ್ಲರಿಗೂ ಆಗುವಂತೆ ಇವರಿಗೂ ವರ್ಷ ಕಳೆದಂತೆ ವಯಸ್ಸಾಗುತ್ತದೆ! ನಿನ್ನೆ ಇರುವಷ್ಟೇ ಇವತ್ತೂ ಯುವಕರಾಗಿರಲು ಎಲ್ಲರಿಗೂ ಸಾಧ್ಯವಿಲ್ಲ. ಇವತ್ತು ಇರುವಷ್ಟೇ ಉತ್ಸಾಹಿ ಅಥವಾ ಶಕ್ತಿಶಾಲಿಯಾಗಿ ನಾಳೆಯೂ ಇರಲು ಎಲ್ಲರಿಗೂ ಸಾಧ್ಯವಿಲ್ಲ!

ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಕೈಲಿದ್ದ ಎಲ್ಲಾ ಜವಾಬ್ದಾರಿಗಳನ್ನೂ ಸೋನಿಯಾ ಗಾಂಧಿಯವರು ರಾಹುಲ್ ಗಾಂಧಿಗೆ ವರ್ಗಾಯಿಸಿದ್ದಾರೆ. ಅವರು ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಪಕ್ಷದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಎರಡನೇ ಹಂತದ ನಾಯಕರು ಕೂಡ ಜವಾಬ್ದಾರಿ ತೆಗೆದು ಕೊಳ್ಳುವಂತೆ ರಾಹುಲ್ ನೋಡಿಕೊಳ್ಳುತ್ತಿದ್ದಾರೆ. ಆದರೆ ಈ ಎರಡನೇ ಹಂತದ ನಾಯಕರು ನಿಜಕ್ಕೂ ಏನು ಮಾಡುತ್ತಿದ್ದಾರೆ? ರಾಹುಲ್ ಗಾಂಧಿ ನಡೆಸುತ್ತಿರುವ ಯಾತ್ರೆಗಳು ದೇಶದ ಮೇಲೆ ಏನಾದರೂ ಪ್ರಭಾವ ಬೀರುತ್ತಿವೆಯೇ? ಅದಕ್ಕೆ ಜನಮನ್ನಣೆ ಲಭಿಸಿದೆಯೇ? ಅದರಿಂದ ಕಾಂಗ್ರೆಸ್ ಪಕ್ಷಕ್ಕೆ
ಏನಾದರೂ ಲಾಭವಾಗಿದೆಯೇ? ಹೌದು ಅಂತಾದರೆ ಅದಕ್ಕೆ ಸ್ಥಳೀಯ ನಾಯಕರ ಪರಿಶ್ರಮ ಕೂಡ ಕಾರಣ.

ಉದಾಹರಣೆಗೆ, ತೆಲಂಗಾಣದಲ್ಲಿ ಅನುಮೂಲ ರೇವಂತ ರೆಡ್ಡಿಯವರು ಶ್ರೀಮಂತ ಹಾಗೂ ಅತ್ಯಂತ ಪ್ರಭಾವಿ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ಚಂದ್ರ ಶೇಖರ ರಾವ್ ಅವರನ್ನು ತಮ್ಮ ಸ್ವಂತ ಶಕ್ತಿಯಿಂದ ಮಣಿಸಿದರು. ಇಲ್ಲದಿದ್ದರೆ ಕಾಂಗ್ರೆಸ್‌ನ ದಿಲ್ಲಿ ನಾಯಕರು ತಮ್ಮ ಒಳಜಗಳ, ಪ್ರತಿಷ್ಠೆ ಹಾಗೂ -ಲ್‌ಗಳ ಓಡಾಟದಲ್ಲೇ ವ್ಯಸ್ತರಾಗಿರುತ್ತಿದ್ದರು. ಚುನಾವಣೆಯಲ್ಲಿ ಗೆದ್ದ ನಂತರವೂ ಅವರು ಮಧ್ಯಪ್ರದೇಶ ಮತ್ತು ಗೋವಾ ರಾಜ್ಯಗಳನ್ನು ಕಳೆದುಕೊಳ್ಳಲಿಲ್ಲವೇ? ಸಾಕಷ್ಟು ವಿಳಂಬ ಮಾಡಿದ ನಂತರ ಕೊನೆಗೂ ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು. ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ಹಾಗೂ ಗೌರವಾನ್ವಿತ ವ್ಯಕ್ತಿ. ಆದರೆ ಅವರಿಗೆ ವಯಸ್ಸಾಗಿದೆ.

ಖಂಡಿತ ಅವರ ಚಟುವಟಿಕೆಗಳಿಗೆ ಆ ವಯಸ್ಸೇ ಒಂದು ಮಿತಿಯನ್ನು ಹಾಕಿಬಿಡುತ್ತದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ಹಾಗೂ ಜನಮನ್ನಣೆ ಸಿಗಬೇಕು ಅಂದರೆ ಪಕ್ಷದೊಳಗೆ ಒಂದಷ್ಟು ಹೊಸತನ ಬರಬೇಕು. ಯುವಕರಿಗೆ ನಾಯಕತ್ವದ ದಂಡವನ್ನು ಹಸ್ತಾಂತರ ಮಾಡಬೇಕು. ಯಾವುದೇ ಕ್ಷೇತ್ರದಲ್ಲಾದರೂ ಸರಿ, ದೊಡ್ಡ ಬದಲಾವಣೆ ತರಬೇಕು ಅಂದರೆ ಇದನ್ನೇ ಮಾಡಬೇಕೇ ಹೊರತು ಬೇರೆ ದಾರಿಯಿಲ್ಲ!

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಗತಿ ಏನಾಗಿದೆ ಮತ್ತು ಅಲ್ಲಿ ಸುಧಾರಣೆ ಮಾಡುವುದಕ್ಕೆ ಏನು ಮಾಡಬೇಕಿದೆ ಎಂಬುದರ ಬಗ್ಗೆ ಪಕ್ಷದೊಳಗೆ ಏನಾದರೂ ಚರ್ಚೆಗಳು ನಡೆದಿವೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸಿ ಗರು ಹೇಗೆ ನೋಡಿಕೊಳ್ಳುತ್ತಿದ್ದಾರೆ? ಹರ್ಯಾಣದಲ್ಲಿ ಹೂಡಾರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ? ತಮಿಳುನಾಡಿನಲ್ಲಂತೂ ಕಾಂಗ್ರೆಸ್ ಕೈಯಿಂದ ಪಕ್ಷ ಜಾರಿಹೋಗುವುದರಲ್ಲಿದೆ.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿ ಸಾಕಷ್ಟು ಒಳಗೆ ನುಗ್ಗಿ ತನ್ನ ಸ್ಥಳಗಳನ್ನು ಭದ್ರಪಡಿಸಿಕೊಳ್ಳುತ್ತಿದೆ. ಮಹಾತ್ಮ ಗಾಂಧಿ ಹಾಗೂ ಸರ್ದಾರ್ ಪಟೇಲ್ ಅವರ ಜನ್ಮಸ್ಥಳವಾದ ಗುಜರಾತ್‌ನಿಂದ ಕಾಂಗ್ರೆಸ್ ಯಾವಾಗಲೋ ಮೂಲೋತ್ಪಾಟನೆಯಾಗಿದೆ. ಒಡಿಶಾದಲ್ಲೂ ಕಾಂಗ್ರೆಸ್ ಜೀವ ಕಳೆದುಕೊಂಡಿದೆ. ಇಲ್ಲೆಲ್ಲ ಜನರಿಗೆ ಬಿಜೆಪಿಯ ಮೇಲೆ ತುಂಬಾ ಪ್ರೀತಿ ಬಂದುಬಿಟ್ಟಿದೆ ಎಂದೇನೂ ಇಲ್ಲ. ಆದರೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಅಭಿವೃದ್ಧಿಯ ಅಜೆಂಡಾವನ್ನು ಮುಂದಿಟ್ಟುಕೊಂಡು ಮಾಡುತ್ತಿರುವ ಕೆಲಸವು ಜನರನ್ನು ಬಿಜೆಪಿಯತ್ತ ಸೆಳೆಯುತ್ತಿದೆ ಎಂಬುದು ನಿಸ್ಸಂಶಯ. ಆದರೆ ವಾಸ್ತವ ಏನೆಂದರೆ, ಈ ನಿಜವನ್ನು ಕೂಡ ಒಪ್ಪಿಕೊಳ್ಳಲು ಕಾಂಗ್ರೆಸ್ ಪಕ್ಷ ಸಿದ್ಧವಿಲ್ಲ!

ಇಲ್ಲಿ ತತ್ವ ಸಿದ್ಧಾಂತಗಳನ್ನೆಲ್ಲ ಕೊಂಚ ಪಕ್ಕಕ್ಕಿಟ್ಟು ಯೋಚಿಸೋಣ. ಏಕೆಂದರೆ ತತ್ವ ಸಿದ್ಧಾಂತಗಳು ಇಂದು ಹಾಸ್ಯಾಸ್ಪದವಾಗಿ ಪರಿಣಮಿಸಿವೆ! ಹೀಗಾಗಿ ಅವುಗಳ ಗೊಡವೆ ಹಾಗಿರಲಿ. ಕಾಂಗ್ರೆಸ್ ಪಕ್ಷದ ವಕ್ತಾರರಾದ ಪವನ್ ಖೇರಾ ಹಾಗೂ ಸುಪ್ರಿಯಾ ಶ್ರೀನೇಟ್‌ರಂಥವರು ಉತ್ಸಾಹದಿಂದ ಮಾತನಾಡುವು ದನ್ನು ನೋಡಿದರೆ ಈ ಪಕ್ಷಕ್ಕೆ ಏನೋ ಭವಿಷ್ಯವಿದೆ ಎಂದು ಅನ್ನಿಸುತ್ತದೆ. ಆದರೆ ಅವರಿಗೂ ಸಂಸತ್ತಿನವರೆಗೆ ಹೋಗುವುದಕ್ಕೆ ಅವಕಾಶ ನೀಡಬೇಕ ಲ್ಲವೇ? ಪಕ್ಷದಲ್ಲಿ ಆಂತರಿಕ ಕಿತ್ತಾಟ ಹಾಗೂ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವ ಅಸಹ್ಯಕರ ಆಟ ಏರುಗತಿಯಲ್ಲಿದೆ. ಹೀಗಾಗಿ ಅಷ್ಟು ಸುಲಭಕ್ಕೆ ಬದಲಾವಣೆಯಾಗುವುದಿಲ್ಲ. ಸಂಸತ್ತಿನಿಂದ ಹಿಡಿದು ಕೋರ್ಟ್‌ನವರೆಗೆ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಪಕ್ಷವನ್ನೂ ಅದರ ಸಿದ್ಧಾಂತವನ್ನೂ
ಬಲವಾಗಿ ಸಮರ್ಥಿಸಿಕೊಳ್ಳುವ ಅಭಿಷೇಕ್ ಮನು ಸಿಂಯಂಥ ಹಿರಿಯ ನಾಯಕರೇ ರಾಜ್ಯಸಭೆ ಚುನಾವಣೆಯಲ್ಲಿ ಸೋಲುತ್ತಾರೆಂದರೆ ಅದಕ್ಕಿಂತ ಆಘಾತಕಾರಿ ಸಂಗತಿ ಏನಿದೆ!

ಅವರನ್ನೂ ಗೆಲ್ಲಿಸಿಕೊಳ್ಳಲು ಆಗದ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಅದಿನ್ನೆಂಥ ತಂತ್ರಗಾರಿಕೆ ಮಾಡಿರಬಹುದು? ಇಂದು ನಿತೀಶ್ ಕುಮಾರ್ ಮತ್ತೆ ಬಿಜೆಪಿಯ ಜತೆ ಕೈಜೋಡಿಸಲು ನಿರ್ಧರಿಸಿದ್ದಾರೆಂದರೆ ಅದರಲ್ಲಿ ಕಾಂಗ್ರೆಸ್‌ನ ತಪ್ಪು ಏನೂ ಇಲ್ಲವೇ? ಬಿಜೆಪಿ ಹಾಗೂ ಮೋದಿಯನ್ನು ಸೋಲಿಸಿಯೇ ತೀರುತ್ತೇವೆಂದು
ಹುಟ್ಟಿಕೊಂಡ ‘ಇಂಡಿಯ’ ಮೈತ್ರಿಕೂಟದ ಕತೆ ಏನಾಯಿತು? ಈಗಾಗಲೇ ಅದು ಸೋಲು ಒಪ್ಪಿಕೊಂಡಿದೆ. ಕ್ರೀಡೆಯ ಭಾಷೆಯಲ್ಲಿ ಹೇಳುವುದಾದರೆ ‘ಇಂಡಿಯ’ ಮೈತ್ರಿಕೂಟವು ಬಿಜೆಪಿಗೆ ಈಗಾಗಲೇ ವಾಕ್‌ಓವರ್ ಕೊಟ್ಟುಬಿಟ್ಟಿದೆ.

ನೀವು ‘ಐ ಲವ್ ಇಂಡಿಯಾ’ ಎಂದು ಹೇಳುತ್ತಾ ಹಾಯಾಗಿರಿ. ಅವರು ನಿಮ್ಮನ್ನು ನೆಲಕ್ಕೆ ತಳ್ಳಿ ಹೊಸಕಿ ಹಾಕುತ್ತಿರುತ್ತಾರೆ! ಇದು ಇವತ್ತಿನ ವಾಸ್ತವ! ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತಾದರೆ ದೇವರೇ ನಿಮ್ಮನ್ನು ಕಾಪಾಡಲಿ.

(ಲೇಖಕರು ಹಿರಿಯ ಪತ್ರಕರ್ತರು)