Thursday, 12th December 2024

ಅರ್ಹ ಫಲಾನುಭವಿಗಳಾರು?

ಅಭಿಮತ

ಸಂದೀಪ್ ಶರ್ಮಾ ಮೂಟೇರಿ

ಬೆಂಗಳೂರಿನ ಪೂರ್ವ ಹೊರವರ್ತುಲ ರಸ್ತೆಗೆ ಸನಿಹದ ಮೆಟ್ರೋ ನಿಲ್ದಾಣ ಬೆನ್ನಿಗಾನಹಳ್ಳಿ. ಅಲ್ಲಿ ರೈಲಿಗೆ ಕಾಯುತ್ತಿದ್ದ ಸಮಯದಲ್ಲಿ ಆಗಮಿಸಿದ್ದು ದೇವಸ್ಥಾನದ ಓರ್ವ ಅರ್ಚಕರು. ಅವರಿಗೆ ಇಬ್ಬರು ಮಕ್ಕಳು; ಮಗಳಿಗೆ ದೃಷ್ಟಿಹೀನತೆ, ಮಗನಿಗೆ ಬುದ್ಧಿಮಾಂದ್ಯ. ಅವರ ಜೀವನ ಪೋಷಣೆಗಾಗಿ
ಅರ್ಚಕರು ಸರಕಾರದಿಂದ ಯಾವ ಸಹಾಯವನ್ನೂ ಪಡೆಯುತ್ತಿಲ್ಲ. ಈ ಕುರಿತು ಒತ್ತಾಯಿಸಿದರೂ ಅವರು ಅರ್ಜಿ ಸಲ್ಲಿಸಲೇ ಇಲ್ಲ.

‘ರಾಜ್ಯ ಸರಕಾರವು ಈಗ ಕೊಡುತ್ತಿರುವ ಸವಲತ್ತುಗಳನ್ನು ನೀವೇಕೆ ಪಡೆಯುತ್ತಿಲ್ಲ?’ ಎಂದು ಪ್ರಶ್ನಿಸಿದಾಗ ಅವರಿಂದ ಹೊಮ್ಮಿದ ಸ್ವಾಭಿಮಾನದ ಉತ್ತರ ಎಲ್ಲರ ಕಣ್ಣು ತೆರೆಸುವಂತಿತ್ತು. ‘ನನಗೆ ಇದ್ದುದರಲ್ಲೇ ತೃಪ್ತಿ; ಭಗವಂತ ನನಗೆ ಎಷ್ಟು ದಯಪಾಲಿಸಿದ್ದಾನೋ ಅಷ್ಟರಲ್ಲಿಯೇ ಜೀವನ ಸಾಗಿಸುತ್ತೇನೆ. ಏನೇನೂ ಬೇಸರವಿಲ್ಲ. ಸರಕಾರವು ಕೊಡುತ್ತಿರುವ ದುಡ್ಡಿನಾಸೆಗೆ ಬಿದ್ದರೆ ಜೀವನದ ಅರ್ಥವೇನು? ತೃಣದಾಸೆಯ ಭೋಗಕ್ಕೆ ಆತ್ಮತೃಪ್ತಿಯನ್ನು ಕಳೆದುಕೊಳ್ಳುವುದೇ?’ ಎಂದು ಅರ್ಚಕರು ಹೇಳಿದಾಗ ಅವರ ಮೇಲಿನ ಗೌರವ ದುಪ್ಪಟ್ಟಾಯಿತು. ಸರಕಾರದ ಸವಲತ್ತು-ಸೌಲಭ್ಯಗಳನ್ನು ಗಿಟ್ಟಿಸಿ ಕೊಂಡು, ತದನಂತರ ದೋಚಿ ಕಣ್ಮರೆಯಾಗುವ ಈಗಿನ ಕಾಲದ ಕೆಲವರ ಮಧ್ಯೆ ಈ ಅರ್ಚಕರಂಥವರು ಒಂದು ಬೆಳ್ಳಿರೇಖೆಯ ಹಾಗೆ ಕಾಣುತ್ತಾರೆ.

ಸರಕಾರ ಪ್ರಸ್ತುತ ನೀಡುತ್ತಿರುವ ಐದು ‘ಗ್ಯಾರಂಟಿಗಳು’ ಸೇರಿದಂತೆ, ವೃದ್ಧಾಪ್ಯ ವೇತನ, ಪರಿಶಿಷ್ಟ ಜಾತಿ-ಪಂಗಡದವರಿಗೆ ನೀಡುವ ಸೌಲಭ್ಯ,
ಬಡ ಮಹಿಳೆಯರಿಗೆ ನೀಡುವ ವಿಶೇಷ ನೆರವು, ಅಂಗವಿಕಲರಿಗೆ ಕೊಡುವ ಸಹಾಯಧನದಂಥ ಸೌಲಭ್ಯಗಳನ್ನು ನಕಲಿ ದಾಖಲೆ ಸೃಷ್ಟಿಸಿ ಪಡೆದುಕೊಳ್ಳು ವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇಂಥ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುವ ಏಜೆಂಟರು ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಂಡಿದ್ದಾರೆ. ನಕಲಿ ಫಲಾನುಭವಿಗಳ ಹಾವಳಿಯಿಂದ ಸರಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ ಮಾತ್ರವಲ್ಲ, ಬಡವರಿಗೆ ನೆರವಾಗಬೇಕೆನ್ನುವ ಸರಕಾರದ ಘನವಾದ ಉದ್ದೇಶಕ್ಕೆ ಹಿನ್ನಡೆಯಾಗುತ್ತದೆ.

ನಿವೃತ್ತ ಮುಖ್ಯೋಪಾಧ್ಯಾಯರೊಬ್ಬರು ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರು. ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಮಗೆ ೩ ಲಕ್ಷ ರು. ಕೊಡಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಅವರು ಮನವಿ ಸಲ್ಲಿಸಿದಾಗ, ‘ನೀವು ತುಂಬಾ ಸ್ಥಿತಿವಂತರು, ಊರ ತುಂಬಾ ಬಡ್ಡಿಗೆ ಹಣ ನೀಡಿದ್ದೀರಿ. ಪಿಂಚಣಿಯೂ ಬರುತ್ತಿದೆ. ಹೀಗಾಗಿ ಪರಿಹಾರ ನಿಧಿಯಿಂದ ಹಣ ಪಡೆಯುವುದು ಬೇಡ’ ಎಂದು ಶಾಸಕರು ಸ್ವಲ್ಪ ಖಾರವಾಗೇ ಹೇಳಿ ಕಳಿಸಿದ್ದರು.

ಆದರೆ ಪಟ್ಟುಬಿಡದ ಅವರು ತಮಗೆ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯರೊಬ್ಬರನ್ನು ಹಿಡಿದು ಪರಿಹಾರ ನಿಧಿಯನ್ನು ಪಡೆದೇಬಿಟ್ಟರು. ಇದನ್ನೊಂದು ಸಾಧನೆ ಎಂಬಂತೆ ಅವರು ಬಿಂಬಿಸಿಕೊಂಡಾಗ ನಿಜಕ್ಕೂ ಅಸಹ್ಯವೆನಿಸಿತು. ವಿವಿಧ ಯೋಜನೆಗಳ ನಕಲಿ ಫಲಾನುಭವಿಗಳು ಗಣನೀಯ
ಪ್ರಮಾಣದಲ್ಲಿರುವುದು ನಿಜಕ್ಕೂ ಗಂಭೀರವಾದ ಸಮಸ್ಯೆ. ಯೋಜನೆಗಳ ಜಾರಿಯಲ್ಲಿ ಪ್ರಮುಖ ಕೊಂಡಿಯೆನಿಸುವ ಸರಕಾರಿ ಸಿಬ್ಬಂದಿಯಲ್ಲಿ ಕೆಲವರು
ಇದರಲ್ಲಿ ಶಾಮೀಲಾಗಿರುವುದು ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಮಾತನ್ನು ನೆನಪಿಸುವಂತಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯು ನೀಡುವ ಕಾರ್ಮಿಕರ ಕಾರ್ಡುಗಳನ್ನು, ನಕಲಿ ದಾಖಲೆ ಸೃಷ್ಟಿಸಿ ಅತಿಹೆಚ್ಚು ಜನ ಪಡೆದಿದ್ದಾರೆ
ಎಂಬುದೊಂದು ಮಾಹಿತಿಯಿದೆ.

ಉಳ್ಳವರೇ ಎಲ್ಲ ಸವಲತ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ, ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ಬಡವರು ಅಸಮರ್ಥರಾಗಿದ್ದಾರೆ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿಯ ದತ್ತಾಂಶ. ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ಹಣ ಮತ್ತು ಮಾಹಿತಿಯ ಕೊರತೆ, ಕೀಳರಿಮೆಯಿಂದಾಗಿ ಬಡವರು ಪೂರ್ಣಪ್ರಮಾಣದಲ್ಲಿ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ ಎಂದು ಈ ವರದಿ ವಿಶ್ಲೇಷಿಸಿದೆ. ವಿಜ್ಞಾನ-ತಂತ್ರಜ್ಞಾನ ಈಗ ಸಾಕಷ್ಟು ಬೆಳೆದಿವೆ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತಿತರ ದಾಖಲೆಗಳ ಮೂಲಕ ನಕಲಿ ಅರ್ಜಿಗಳನ್ನು/ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಿ ತಿರಸ್ಕರಿಸಬಹುದು.

ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತಿತರ ಸಿಬ್ಬಂದಿ ಈ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರವೇ ನಕಲಿಗಳ ಹಾವಳಿಯನ್ನು ತಡೆಯ ಬಹುದು. ಇಲ್ಲವಾದಲ್ಲಿ ಹಗರಣಗಳ ಪಟ್ಟಿಯಲ್ಲಿ ಈ ಯೋಜನೆಗಳ ಬೇನಾಮಿ ಆಟಗಳೂ ಸೇರಿಕೊಳ್ಳುವುದರಲ್ಲಿ ಸಂಶಯವಿಲ್ಲ.

(ಲೇಖಕರು ಹವ್ಯಾಸಿ ಬರಹಗಾರರು)