Thursday, 12th December 2024

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಸ್ವಾಮೀಜಿ ಬಂಧನ

ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಿಲ್ಲೆಯ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಹಂಗರನಹಳ್ಳಿ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿಯನ್ನು ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ತಮಗೆ ಚರ್ಮರೋಗಕ್ಕೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ತಮ್ಮ ಖಾಸಗಿ ಭಾಗದ ವಿಡಿಯೋ ರೆಕಾರ್ಡ್ ಮಾಡಿಕೊಂಡು ತಮ್ಮ ಸೇವಕ ಅಭಿಷೇಕ್ ಸೇರಿ 6 ಮಂದಿ ತಮಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ವಾಮೀಜಿಯು ದೇವಸ್ಥಾನದ ಟ್ರಸ್ಟಿ ಅಭಿಲಾಷ್ ಮೂಲಕ ಮಾರ್ಚ್ 6ರಂದು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ತಮ್ಮ ಸೇವಕ ಅಭಿಷೇಕ್ ಸೇರಿದಂತೆ 6 ಮಂದಿ ವಿರುದ್ಧ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆಗಾಗಿ ಪೊಲೀಸರು ಅಭಿಷೇಕ್‌ನನ್ನು ಪೊಲೀಸ್‌ ಠಾಣೆಗೆ ಕರೆಸಿದ್ದರು.

ವಿಚಾರಣೆ ವೇಳೆ ಅಭಿಷೇಕ್, ಸ್ವಾಮೀಜಿಯು ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಮಾಹಿತಿ ನೀಡಿದ್ದನು. ಈ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿವರೆಗೂ ಮಠದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಸೂಕ್ತ ಸಾಕ್ಷ್ಯಾಧಾರ ದೊರೆಯುತ್ತಿದ್ದಂತೆ ಸ್ವಾಮೀಜಿಯನ್ನು ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಏನಿದು ಪ್ರಕರಣ????

ಬಾಲ ಮಂಜುನಾಥ ಸ್ವಾಮೀಜಿಗೆ ದೇಹದ ಖಾಸಗಿ ಜಾಗದಲ್ಲಿ ಚರ್ಮದ ಸೋಂಕು ಉಂಟಾಗಿತ್ತು. ಈ ವಿಚಾರವನ್ನು ಆಪ್ತ ಸೇವಕ ಅಭಿಷೇಕ್ ಬಳಿ ಸ್ವಾಮೀಜಿ ಹೇಳಿಕೊಂಡಿದ್ದರು.

ಅಭಿಷೇಕ್ ಸಲಹೆಯಂತೆ ಚರ್ಮರೋಗ ವೈದ್ಯರಲ್ಲಿ ಚಿಕಿತ್ಸೆ ಪಡೆಯಲು ಸ್ವಾಮೀಜಿ ನಿರ್ಧರಿಸಿದ್ದರು. ಆದರೆ ಅಭಿಷೇಕ್ ಸೂಚಿಸಿದ ಮಹಿಳಾ ವೈದ್ಯರ ಬಳಿ ಸ್ವಾಮೀಜಿ ತಮ್ಮ ಖಾಸಗಿ ಭಾಗವನ್ನು ನೇರವಾಗಿ ತೋರಿಸಲು ಮುಜುಗರ ಪಟ್ಟುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅಭಿಷೇಕ್ ವೈದ್ಯರೊಂದಿಗೆ ವಿಡಿಯೋ ಕಾಲ್ ಮೂಲಕ ಸ್ವಾಮೀಜಿಯ ಖಾಸಗಿ ಜಾಗವನ್ನು ತೋರಿಸಿದ್ದನು. ಬಳಿಕ ಈ ವಿಡಿಯೋ ಕಾಲ್‌ ರೆಕಾರ್ಡ್ ಮಾಡಿಕೊಂಡು ಸ್ವಾಮೀಜಿಯನ್ನು ಬ್ಲಾಕ್ ಮೇಲ್ ಮಾಡಲಾರಂಭಿಸಿದ್ದನು. ಈ ಬಗ್ಗೆ ಬಾಲ ಮಂಜುನಾಥ ಸ್ವಾಮೀಜಿ, ತಮ್ಮ ದೇವಸ್ಥಾನದ ಟ್ರಸ್ಟಿ ಅಭಿಲಾಷ್ ಮೂಲಕ ಪೊಲೀಸ್ ದೂರು ದಾಖಲಿಸಿದ್ದರು.

ಸ್ವಾಮೀಜಿ ನೀಡಿದ ದೂರು ಆಧರಿಸಿ ಪೊಲೀಸರು ಅಭಿಷೇಕ್ ನನ್ನು ವಿಚಾರಣೆಗಾಗಿ ಗುರುವಾರ ಠಾಣೆಗೆ ಕರೆಸಿದ್ದರು. ಸ್ವಾಮೀಜಿಯು ಕೆಲವು ದಿನಗಳ ಹಿಂದೆ ಮಠಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಮಾಹಿತಿ ನೀಡಿದ್ದನು. ಈ ಮಾಹಿತಿ ಮೇರೆಗೆ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ನೇತೃತ್ವದಲ್ಲಿ ಮಾರ್ಚ್ 7ರಂದು ಮಠದಲ್ಲಿ ಪರಿಶೀಲನೆ ನಡೆಸಿ, ಹಂಗರನಹಳ್ಳಿ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿ, ಆಪ್ತ ಸೇವಕ ಅಭಿಷೇಕ್ ಇಬ್ಬರನ್ನು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.