Thursday, 12th December 2024

ದಶಕದಲ್ಲಿ ಬದಲಾದ ಭಾರತ

ವೀಕೆಂಡ್ ವಿತ್ ಮೋಹನ್

camohanbn@gmail.com

ಕೇವಲ ೧೦-೧೫ ವರ್ಷಗಳ ಹಿಂದಿನ ಹಳ್ಳಿಯ ಚಿತ್ರಣವನ್ನು ಒಮ್ಮೆ ನೆನಪಿಸಿಕೊಳ್ಳಿ. ಬೆಳಗಾಗುತ್ತಿದ್ದಂತೆ ಊರ ಜನರು ತಂಬಿಗೆ ಹಿಡಿದು ಶೌಚಕ್ಕೆಂದು ಹೊಲಗಳ ಕಡೆಗೆ ತೆರಳುವ ದೃಶ್ಯ ಆಗ ಸಾಮಾನ್ಯವಾಗಿತ್ತು. ಹಾಗೆ ಹೋಗುವಾಗ ಕಾಲಿಗೆ ಮಲ-ಮೂತ್ರ ಅಂಟುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೬ ದಶಕಗಳು ಕಳೆದರೂ ಶೌಚ ವ್ಯವಸ್ಥೆಯ ಸಮಸ್ಯೆ ಬಗೆಹರಿದಿರಲಿಲ್ಲ.

ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಶೌಚಕ್ಕೆಂದು ಹೊರಗೆ ಹೋದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿದ್ದವು. ಕಾಡಂಚಿನ ಗ್ರಾಮದಲ್ಲಿದ್ದವರ ಮೇಲೆ ಕಾಡುಪ್ರಾಣಿಗಳಿಂದ ದಾಳಿಗಳಾಗುತ್ತಿದ್ದವು. ಹಿರಿಯರು ಮತ್ತು ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದರು. ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಈ ಮೂಲಸಮಸ್ಯೆಯನ್ನರಿತು ‘ಸ್ವಚ್ಛ ಭಾರತ್’ ಯೋಜನೆಯಡಿ ದೇಶಾದ್ಯಂತ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾದರು. ಆಗ ವಿಪಕ್ಷಗಳು, ‘ಪ್ರಧಾನಿ ಯಾದವರು ಸಣ್ಣ ಸಮಸ್ಯೆಯೊಂದನ್ನು ಇಷ್ಟು ದೊಡ್ಡದಾಗಿ ಮಾಡುತ್ತಿದ್ದಾರೆ’ ಎಂದು ಅಣಕಿಸಿದ್ದುಂಟು.

ಆದರೆ ಹೀಗೆ ಮೂಲಸಮಸ್ಯೆಯೊಂದನ್ನು ಬಗೆಹರಿಸಲು ಪ್ರಧಾನಿಯೊಬ್ಬರು ಬಡವರ ಜತೆ ನಿಂತದ್ದು ಜಗತ್ತಿನ ಯಾವ ದೇಶದಲ್ಲೂ ನಡೆದಿರಲಿಕ್ಕಿಲ್ಲ. ಮೋದಿಯವರು ದೇಶಾದ್ಯಂತ ಸರಿಸುಮಾರು ೧೦ ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದರಿಂದಾಗಿ, ಹಲವು
ರಾಜ್ಯಗಳಲ್ಲಿ ಬಯಲು ಶೌಚಕ್ಕೆ ತೆರಳುತ್ತಿದ್ದ ಹೆಣ್ಣು ಮಕ್ಕಳ ಮೇಲಾಗುತ್ತಿದ್ದ ಅತ್ಯಾಚಾರ ಪ್ರಕರಣಗಳು ನಿಂತಿವೆ. ಮಾತ್ರವಲ್ಲ, ಮಕ್ಕಳು ಮತ್ತು ಹಿರಿಯರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿವೆ.

ನಿಮಗೆ ನೆನಪಿರಬಹುದು, ಸಾಕಷ್ಟು ವರ್ಷಗಳ ಹಿಂದೆ ಬೆಂಗಳೂರಿನ ಹಲವು ಬಡಾವಣೆ ಗಳಲ್ಲಿ ರಸ್ತೆಯ ಮೂಲೆಯಲ್ಲಿರುತ್ತಿದ್ದ ನೀರಿನ ಕೊಳಾಯಿ ಅಥವಾ ಬೋರ್ ವೆಲ್‌ಗಳ ಮುಂದೆ ಹೆಣ್ಣು ಮಕ್ಕಳು ಬಿಂದಿಗೆ ಹಿಡಿದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆ ವೇಳೆ ನೀರಿಗಾಗಿ ನಡೆಯುತ್ತಿದ್ದ ಜಗಳಗಳನ್ನು ನೋಡಿ ಬೆಳೆದವರು ನಾವು. ಹಳ್ಳಿಗಳಲ್ಲಂತೂ ಕಿಲೋಮೀಟರ್‌ಗಟ್ಟಲೆ ಸಾಗಿ, ನೀರು ತುಂಬಿಸಿಕೊಂಡ ಬಿಂದಿಗೆಗಳನ್ನು
ಜನರು ತಲೆಮೇಲೆ ಹೊತ್ತು ತರಬೇಕಿತ್ತು.

ದಶಕಗಳು ಕಳೆದರೂ ಮನೆಮನೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗದಿದ್ದುದು ವಿಪರ್ಯಾಸ. ಈ ಮೂಲಸಮಸ್ಯೆಯನ್ನು ಗಂಭೀರವಾಗಿ
ಪರಿಗಣಿಸಿದ ಮೋದಿಯವರು ೨೦೧೯ರ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ, ದೇಶದ ಮನೆಮನೆಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಪಣತೊಟ್ಟರು. ಪರಿಣಾಮ, ಕಳೆದ ೫ ವರ್ಷಗಳಲ್ಲಿ ಸುಮಾರು ೧೨ ಕೋಟಿಗೂ ಅಧಿಕ ಮನೆಗಳಿಗೆ ಕುಡಿಯುವ ನೀರಿನ ಕೊಳಾಯಿಯ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದಲ್ಲಿ ಸುಮಾರು ೫೦ ಲಕ್ಷಕ್ಕೂ ಅಽಕ ಮನೆಗಳು ಈ ಪ್ರಯೋಜನ ಪಡೆದಿವೆ. ಹೀಗಾಗಿ ಹೆಣ್ಣು ಮಕ್ಕಳು ರಸ್ತೆ ಕೊಳಾಯಿ ಬಳಿ ಸರದಿಯಲ್ಲಿ ನಿಲ್ಲುವ ಅಥವಾ ಕಿಲೋಮೀಟರುಗಟ್ಟಲೆ ದೂರದಿಂದ ನೀರಿನ ಬಿಂದಿಗೆ ಹೊತ್ತು ತರುವ ಪರಿಸ್ಥಿತಿ ಬಹುತೇಕ ಕಡೆ ಇಲ್ಲವಾಗಿದೆ. ಒಂದು ಕಾಲವಿತ್ತು. ಸೀಮೆ ಎಣ್ಣೆ ತರಲೆಂದು ಬೆಳಗಿನ ಜಾವ ನಾಲ್ಕು ಗಂಟೆಗೇ ಎದ್ದು, ಹತ್ತಿರದ ಪಡಿತರ ಅಂಗಡಿಯ ಮುಂದೆ ಖಾಲಿ ಕ್ಯಾನ್ ಅನ್ನು ಸರತಿ ಸಾಲಿನಲ್ಲಿ ಇಡಬೇಕಿತ್ತು.

ಎರಡು ತಾಸಿನ ನಂತರ ಮತ್ತೆ ಅಂಗಡಿ ಬಳಿ ಬಂದು ಸೀಮೆಎಣ್ಣೆ ಗಾಡಿಗಾಗಿ ಕಾಯಬೇಕಿತ್ತು. ಒಬ್ಬರಿಗೆ ಮೂರರಿಂದ ಆರು ಲೀಟರ್ ಸೀಮೆಎಣ್ಣೆ ನೀಡಿ ಪಡಿತರ ಪುಸ್ತಕದಲ್ಲಿ ಅದನ್ನು ನಮೂದಿಸಲಾಗುತ್ತಿತ್ತು. ಸರದಿಯಲ್ಲಿ ಕಾಯುತ್ತಿದ್ದವರ ಸಂಖ್ಯೆ ಹೆಚ್ಚಿತ್ತೆಂದರೆ ಆ ದಿನ ಸೀಮೆಎಣ್ಣೆ ಖಾಲಿಯಾಗಿ
ಹಲವರಿಗೆ ಸಿಗುತ್ತಿರಲಿಲ್ಲ, ಅಂಥವರು ಮತ್ತೊಂದು ವಾರ ಕಾಯಬೇಕಿತ್ತು. ನಂತರ ಅಡುಗೆ ಅನಿಲದ ಪೂರೈಕೆ ಶುರುವಾದರೂ, ಒಂದು ಕುಟುಂಬಕ್ಕೆ ವರ್ಷಕ್ಕೆ ೬ ಸಿಲಿಂಡರ್ ಮಾತ್ರ ಸಿಗುತ್ತಿತ್ತು. ಆ ಕಾಲದಲ್ಲಿ ಶ್ರೀಮಂತರ ಮನೆಯಲ್ಲಷ್ಟೇ ಬಳಕೆಯಾಗುತ್ತಿದ್ದ ಸಿಲಿಂಡರ್, ಬಡವರು ಮತ್ತು ಮಧ್ಯಮ ವರ್ಗದವರ ಮನೆಗಿನ್ನೂ ತಲುಪಿರಲಿಲ್ಲ. ಹೀಗಾಗಿ ಕಟ್ಟಿಗೆ ಬಳಸಿ ಅಡುಗೆ ಮಾಡುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು.

ಇದರಿಂದಾಗಿ ಅನೇಕ ಮಹಿಳೆಯರು ಶ್ವಾಸಕೋಶ ಮತ್ತು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಮೋದಿಯವರು ಅಧಿಕಾರಕ್ಕೆ ಬಂದ ನಂತರ, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಹಳ್ಳಿ ಹಳ್ಳಿಗೂ ಅಡುಗೆ ಅನಿಲ ತಲುಪಿಸುವ ‘ಉಜ್ವಲಾ’ ಯೋಜನೆಗೆ ಚಾಲನೆ ನೀಡಿ, ಉಚಿತವಾಗಿ
ಸಿಲಿಂಡರ್ ಮತ್ತು ಗ್ಯಾಸ್ ಒಲೆಗಳನ್ನು ಒದಗಿಸಿದರು. ಅಡುಗೆ ಅನಿಲಕ್ಕೆ ನೀಡುತ್ತಿದ್ದಂಥ ಸಹಾಯಧನವು ಕುಟುಂಬಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುವಂತೆ ಮಾಡಿದರು. ಇದರಿಂದಾಗಿ ಮತ್ತೊಂದು ಮೂಲಸಮಸ್ಯೆಯ ನಿರ್ಮೂಲನೆಯಾಯಿತು, ಮಹಿಳೆಯರು ಅನುಭವಿಸುತ್ತಿದ್ದ
ಆರೋಗ್ಯ ಸಮಸ್ಯೆಯಲ್ಲಿ ಹಾಗೂ ಅದಕ್ಕಾಗುತ್ತಿದ್ದ ಚಿಕಿತ್ಸಾ ವೆಚ್ಚದಲ್ಲಿ ಗಣನೀಯ ಇಳಿಕೆಯಾಯಿತು.

ವರ್ಷಕ್ಕೆ ಕುಟುಂಬವೊಂದು ಬಳಸುವ ಗ್ಯಾಸ್ ಸಿಲಿಂಡರುಗಳ ಮೇಲಿನ ಮಿತಿಯನ್ನು ತೆಗೆದುಹಾಕಲಾಯಿತು. ಆದರೆ, ಕೋವಿಡ್ ನಂತರ ಅಡುಗೆ ಅನಿಲದ ಬೆಲೆಯಲ್ಲಾದ ಏರಿಕೆಯ ಬಗ್ಗೆ ಮಾತನಾಡುವವರು, ಅದು ಲಭ್ಯವೇ ಇಲ್ಲದಂಥ ಕಾಲದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ.
ಸುಮಾರು ೧೫ ವರ್ಷಗಳಷ್ಟು ಹಿಂದಕ್ಕೆ ಹೋದರೆ, ರೈತರ ಬೆಳೆಗಳಿಗೆ ಮುಖ್ಯವಾಗಿ ಬೇಕಿದ್ದ ರಸಗೊಬ್ಬರದ ಕೊರತೆ ಎಲ್ಲೆಲ್ಲೂ ತಲೆದೋರಿತ್ತು.
ಕರ್ನಾಟಕದಲ್ಲಿ ರಸಗೊಬ್ಬರದ ವಿಚಾರದಲ್ಲಿ ನಡೆದ ಹೋರಾಟದ ಸಮಯದಲ್ಲಿ ಗೋಲಿಬಾರ್ ಆಗಿತ್ತು. ಸರಕಾರ ನೀಡುತ್ತಿದ್ದ ಪ್ರೋತ್ಸಾಹಧನ ರೈತರನ್ನು ತಲುಪುತ್ತಲೇ ಇರಲಿಲ್ಲ. ಯೂರಿಯಾವನ್ನು ಕಾಳಸಂತೆಯಲ್ಲಿ ಖರೀದಿಸಿ ಹಾಲಿನೊಂದಿಗೆ ಕಲಬೆರಕೆ ಮಾಡಲಾಗುತ್ತಿತ್ತು. ಆದರೆ, ಕಳೆದ
೧೦ ವರ್ಷಗಳಲ್ಲಿ ರಸಗೊಬ್ಬರದ ವಿಷಯದಲ್ಲಿ ರೈತರು ಹೋರಾಟ ಮಾಡಿದ ಉದಾಹರಣೆಯಿಲ್ಲ. ಪ್ರಧಾನಿ ಮೋದಿ ಹಾಗೂ ಅಂದಿನ ರಸಗೊಬ್ಬರ ಖಾತೆ ಸಚಿವ ದಿವಂಗತ ಅನಂತ್‌ಕುಮಾರ್ ಮಾಡಿದ ಉಪಾಯದಿಂದಾಗಿ ‘ಬೇವು ಲೇಪಿತ’ ಯೂರಿಯ ಮುನ್ನೆಲೆಗೆ ಬಂದು ಕಾಳಸಂತೆಯ ಮಾರಾಟಕ್ಕೆ ಕಡಿವಾಣ ಬಿತ್ತು. ಬೇವು ಲೇಪಿತ ಯೂರಿಯಾವನ್ಜು ಬೆರೆಸಿದರೆ ಹಾಲು ಹಾಳಾಗುತ್ತದೆ.

ಬೇವುಲೇಪಿತ ಯೂರಿಯಾದ ಪರಿಣಾಮ, ಭೂಮಿಯಿಂದ ಆವಿಯಾಗುತ್ತಿದ್ದ ರಸಗೊಬ್ಬರದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ; ರೈತರು ಬಳಸುತ್ತಿದ್ದ ರಸಗೊಬ್ಬರದ ಪ್ರಮಾಣವೂ ತಗ್ಗಿದೆ. ಕೋವಿಡ್ ಸಮಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆ ಹೆಚ್ಚಾದರೂ, ಕೇಂದ್ರ ಸರಕಾರವು ರೈತರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವ ಮೂಲಕ ಅವರ ಮೇಲಿನ ಹೊರೆಯನ್ನು ತಗ್ಗಿಸಿತ್ತು. ಸ್ಥಗಿತಗೊಂಡಿದ್ದ ಹಲವು ರಸಗೊಬ್ಬರ ಕಾರ್ಖಾನೆಗಳು ಪುನರಾರಂಭಗೊಂಡವು. ೨೦೧೭ರಲ್ಲಿ ಸ್ವತಃ ಸ್ವಾಮಿನಾಥನ್ ಅವರು, ತಾವು ರೈತರಿಗಾಗಿ ನೀಡಿರುವ ಹಲವು
ಸಲಹೆ ಗಳನ್ನು ಮೋದಿಯವರು ಅನುಷ್ಠಾನಗೊಳಿಸಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ, ಅವರ ರೈತಪರ ಕಾಳಜಿಯನ್ನು ಶ್ಲಾಘಿಸಿದ್ದರು.

ದೇಶದ ಭದ್ರತೆಯ ವಿಷಯಕ್ಕೆ ಬರುವುದಾದರೆ, ೨೦೦೪ ರಿಂದ ೨೦೧೪ರ ನಡುವೆ ದೇಶದ ಯಾವುದಾದರೊಂದು ನಗರದಲ್ಲಿ ಬಾಂಬ್ ಸ್ಫೋಟ ವಾಗುವುದು ಸಾಮಾನ್ಯವಾಗಿತ್ತು. ದೆಹಲಿಯಲ್ಲಿ ೨ ಬಾರಿ, ಮುಂಬೈನಲ್ಲಿ ೩ ಬಾರಿ ಬಾಂಬ್ ಸ್ಫೋಟವಾಗಿದ್ದು ಸೇರಿದಂತೆ ಜೈಪುರ, ಅಹಮದಾಬಾದ್,
ವಾರಾಣಸಿ, ಬೆಂಗಳೂರು, ಹೈದರಾಬಾದ್, ಪುಣೆ, ಕೋಲ್ಕತ್ತಾ, ಭೂಪಾಲ್ ಹೀಗೆ ಅನೇಕ ನಗರಗಳಲ್ಲಿ ಭಯೋತ್ಪಾದಕ ಕೃತ್ಯಗಳು ನಡೆದಿದ್ದವು. ೨೦೦೮ರಲ್ಲಿ ಮುಂಬೈನಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಪಾಕ್-ಮೂಲದ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಗೆ ವಿಶ್ವವೇ ಬೆಚ್ಚಿ
ಬಿದ್ದಿತ್ತು. ಪಾಕಿಸ್ತಾನಕ್ಕೆ ಅಂದೇ ತಕ್ಕ ಪಾಠ ಕಲಿಸುವ ಅವಕಾಶವಿದ್ದರೂ ಕಾಂಗ್ರೆಸ್ ಸರಕಾರ ಮೃದುಧೋರಣೆ ತಳೆದಿತ್ತು.

ಆದರೆ, ಮೋದಿಯವರು ಅಽಕಾರಕ್ಕೆ ಬಂದ ನಂತರ, ಕಳೆದ ೧೦ ವರ್ಷಗಳಲ್ಲಿ ಗಡಿಗಳಲ್ಲಿನ ಭದ್ರತೆಯನ್ನು ಹೆಚ್ಚಿಸಿದ ಪರಿಣಾಮ ಉಗ್ರರ ಒಳನುಸುಳುವಿಕೆ ಕಡಿಮೆಯಾಗಿದೆ. ಬೇಹುಗಾರಿಕಾ ಸಂಸ್ಥೆಗಳ ನಿಗಾ ಹೆಚ್ಚಾದ ಕಾರಣ, ಸ್ಲೀಪರ್ ಸೆಲ್ ಮೂಲಕ ದಾಳಿ ನಡೆಸಲು ಯತ್ನಿಸುತ್ತಿದ್ದವರನ್ನು ಬಂಧಿಸಲಾಗುತ್ತಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ನಡೆದ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ನಾಶಪಡಿಸಲಾಯಿತು.

ಬದಲಾದ ಭಾರತದಲ್ಲಿ ನಾಗರಿಕರು ಸುರಕ್ಷಿತವಾಗಿದ್ದಾರೆ. ಅವರನ್ನು ಗುರಿಯಾಗಿಸಿ ನಡೆಯುತ್ತಿದ್ದ ಭಯೋತ್ಪಾದಕ ಕೃತ್ಯಗಳು ಬಹುತೇಕ ಕಮ್ಮಿಯಾಗಿವೆ. ಉಗ್ರರಿಗೆ ಸಿಗುತ್ತಿದ್ದ ಹಣಕಾಸಿನ ನೆರವಿನ ಮೂಲವನ್ನೇ ಕತ್ತರಿಸಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ ೩೭೦ನ್ನು ರದ್ದುಮಾಡಿದ ಪರಿಣಾಮ, ಬಂದೂಕು ಹಿಡಿಯು ತ್ತಿದ್ದ ಯುವಕರಿಗೆ ಉದ್ಯೋಗಾವಕಾಶಗಳು ದೊರಕಿವೆ. ಸೇನಾವಾಹನಗಳ ಮೇಲೆ ಕಲ್ಲು ತೂರುತ್ತಿದ್ದವರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಶಾಲೆಗಳಿಗೆ ಹೋಗುತ್ತಿದ್ದಾರೆ. ಪಾಕ್ -ಪ್ರೇರಿತ ಉಗ್ರರೊಂದಿಗೆ ಕಾಶ್ಮೀರದ ಯುವಕರು ಕೈಜೋಡಿಸುವ ಪ್ರಕರಣಗಳು ತಗ್ಗಿವೆ.

ಜಗತ್ತಿನ ಇತರೆ ದೇಶಗಳಲ್ಲಿ ಸಮಸ್ಯೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸುವಲ್ಲಿ ಭಾರತದ ವಿದೇಶಾಂಗ ಇಲಾಖೆ ಸದಾ ಸನ್ನದ್ಧವಾಗಿದೆ; ಯುದ್ಧಪೀಡಿತ
ರಷ್ಯಾ, ಉಕ್ರೇನ್ ದೇಶಗಳಿಂದ ಭಾರತೀಯರನ್ನು ಅದು ಸುರಕ್ಷಿತವಾಗಿ ಕರೆತಂದಿರುವುದು ಈ ಮಾತಿಗೆ ಸಾಕ್ಷಿ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವಿಚಾರದಲ್ಲಿ ಭಾರತವು ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಎರಡು ಪ್ರಮುಖ ನಗರಗಳ ನಡುವೆ ಉತ್ತಮ ರಸ್ತೆ ನಿರ್ಮಾಣವಾದರೆ, ಮಾರ್ಗಮಧ್ಯದ ಅನೇಕ ಸಣ್ಣ ಪಟ್ಟಣಗಳು ಅಭಿವೃದ್ಧಿಯಾಗುತ್ತವೆ. ಬೆಂಗಳೂರಿನಿಂದ ಬೆಳಗಾವಿವರೆಗಿನ ಸುವರ್ಣ ಚತುಷ್ಪಥ ರಸ್ತೆಯನ್ನೇ ಉದಾಹರಣೆಯಾಗಿ ನೀಡುವುದಾದರೆ, ಮಾರ್ಗಮಧ್ಯದ ನೆಲಮಂಗಲ, ತುಮಕೂರು, ಸಿರಾ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ನಗರಗಳ ಸ್ಥಿತಿಗತಿಗಳು ಈ ರಸ್ತೆಯ ನಿರ್ಮಾಣದ ನಂತರ ದೊಡ್ಡಮಟ್ಟದಲ್ಲಿ ಬದಲಾಗಿವೆ.

ಸಣ್ಣ ಸಣ್ಣ ಊರುಗಳನ್ನು ಸಂಪರ್ಕಿಸುವ ೧೪೦ ವಿಮಾನ ನಿಲ್ದಾಣಗಳು ಭಾರತದಲ್ಲಿವೆ. ಬೆಂಗಳೂರಿನಿಂದ ಕಲ್ಬುರ್ಗಿಗೆ ರಸ್ತೆಮಾರ್ಗದಲ್ಲಿ ಪ್ರಯಾಣಿಸು ವುದು ಹರಸಾಹಸವಾಗಿತ್ತು; ಆದರೆ ಸುಮಾರು ೭ ದಶಕಗಳ ನಂತರ, ಕಲ್ಬುರ್ಗಿಯನ್ನು ಸಂಪರ್ಕಿಸುವ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗಿದೆ. ಒಂದು ಕಾಲದಲ್ಲಿ, ವರ್ಷಕ್ಕೆ ಕಡಿಮೆಯೆಂದರೂ ೮-೧೦ ರೈಲು ಅಪಘಾತಗಳಾಗುತ್ತಿದ್ದವು. ಆದರೆ,  ಕಳೆದ ೧೦ ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರಿಂದ, ಅಪಘಾತಗಳು ಗಣನೀಯವಾಗಿ ತಗ್ಗಿವೆ.

ಮೋದಿಯವರು ಹೇಳಿದಂತೆ ‘ಬಡವ, ರೈತ, ಮಹಿಳೆ ಮತ್ತು ಯುವಕರು’ ಈ ದೇಶದ ನಾಲ್ಕು ಜಾತಿಗಳು; ಅವರ ಅಭಿವೃದ್ಧಿಯಾದರೆ ಭಾರತದ ಅಭಿವೃದ್ಧಿ ಯಾದಂತೆ. ೧೦-೧೫ ವರ್ಷಗಳ ಹಿಂದಿನ ಭಾರತವನ್ನೊಮ್ಮೆ ಅವಲೋಕಿಸಿ ಈಗಿನ ಭಾರತದೊಂದಿಗೆ ತಾಳೆ ಮಾಡಿದರೆ, ಕಳೆದ ದಶಕದಲ್ಲಿ ಬದಲಾದ ಭಾರತದಲ್ಲಿನ ಏರುಗತಿ ಕಂಡ ಅಭಿವೃದ್ಧಿ ಕಾರ್ಯಗಳು ಕಣ್ಣಮುಂದೆ ಬರುತ್ತವೆ.