Friday, 22nd November 2024

ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದ ಟೀಮ್ ಇಂಡಿಯಾ

ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ನಾಲ್ಕು ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ.
ಈ ಮೂಲಕ 112 ವರ್ಷಗಳ ಹಳೆಯ ದಾಖಲೆಯನ್ನು ಭಾರತ ತಂಡ ಸರಿಗಟ್ಟಿದೆ.

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಐತಿಹಾಸಿಕ ದಾಖಲೆ ನಿರ್ಮಿಸಿರುವುದು ವಿಶೇಷ.

ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಪಂದ್ಯ ಸೋತು, ಆ ಬಳಿಕ 4-1 ಅಂತರದಿಂದ ಸರಣಿ ಗೆದ್ದ ವಿಶೇಷ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಇಂತಹ ಫಲಿತಾಂಶದ ದಾಖಲೆ ನಿರ್ಮಾಣವಾಗಿದ್ದು ಕೇವಲ 3 ಬಾರಿ ಮಾತ್ರ.

1897-98 ಮತ್ತು 1901-02 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತು ಆಸ್ಟ್ರೇಲಿಯಾ ಆ ಬಳಿಕ 4-1 ಅಂತರದಿಂದ 2 ಬಾರಿ ಸರಣಿ ಗೆದ್ದಿತ್ತು. 1912 ರಲ್ಲಿ ಇಂಗ್ಲೆಂಡ್ ತಂಡ ಇಂತಹದೊಂದು ಸಾಧನೆ ಮಾಡಿತ್ತು.

ಬರೋಬ್ಬರಿ 112 ವರ್ಷಗಳ ಬಳಿಕ ಟೀಮ್ ಇಂಡಿಯಾ 4-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಐತಿಹಾಸಿಕ ಗೆಲುವು ದಾಖಲಿಸಿದೆ.

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ದಾಖಲೆ ಬರೆದಿದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಕೆಎಲ್ ರಾಹುಲ್ (ಮೊದಲ ಪಂದ್ಯ ಆಡಿದ್ದರು), ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಅವರಂತಹ ಸ್ಟಾರ್ ಆಟಗಾರರಿಲ್ಲದೆ, ಭಾರತ ತಂಡವು ಬಲಿಷ್ಠ ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಮಣಿಸಿದೆ.