Saturday, 14th December 2024

ಚುನಾವಣಾ ಬಾಂಡ್ ರದ್ದು ರಾಜಕೀಯ

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾರ್‌

೨೦೧೮ರಲ್ಲಿ ಜೇಟ್ಲಿ ಅವರು ಚುನಾವಣಾ ಬಾಂಡ್ ಯೋಜನೆಯನ್ನು ದೃಢವಾಗಿ ಸಮರ್ಥಿಸಿಕೊಂಡಿದ್ದರು. ದಾನಿಗಳು ತಮ್ಮ ಹೆಸರನ್ನು ಬಹಿರಂಗ ಪಡಿಸಲು ಒತ್ತಾಯಿಸಿದರೆ, ನಗದು ಮತ್ತು ಕಪ್ಪುಹಣದ ಮೂಲಕ ರಾಜಕೀಯವು ಹಣವನ್ನು ಪಡೆಯುವ ವ್ಯವಸ್ಥೆಯು ಮರಳುತ್ತದೆ ಎಂಬುದು ಅವರ ವಾದವಾಗಿತ್ತು.

ಫೆಬ್ರವರಿ ೧೫ರಂದು ಸುಪ್ರೀಂಕೋರ್ಟಿನ ಐದು ಸದಸ್ಯರ ಪೀಠವು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿತು. ಈ ಬಾಂಡ್‌ಗಳು ಅಸಾಂವಿಧಾನಿಕವಾಗಿದ್ದು, ಸಂವಿಧಾನದ ಆರ್ಟಿಕಲ್ ೧೪ ಮತ್ತು ೧೯(೧)ನ್ನು ಉಲ್ಲಂಸುತ್ತವೆ; ರಾಜಕೀಯ ಪಕ್ಷಗಳಿಗೆ ಅನಿಯಮಿತ ಕೊಡುಗೆ ನೀಡುವುದು ಅನೈತಿಕ, ಇದು ನಿಷ್ಪಕ್ಷಪಾತ ಚುನಾವಣೆಗೆ ವಿರುದ್ದವಾಗಿದ್ದು, ಇದರಲ್ಲಿ ಪಾರದರ್ಶಕತೆಯಿಲ್ಲ ಎಂದು ಕೋರ್ಟ್ ಈ ಯೋಜನೆ ಯನ್ನು ಅಸಿಂಧು ಗೊಳಿಸಿದೆ ಮತ್ತು ಈವರೆಗೆ ಬಾಂಡ್ ಖರೀದಿಸಿದವರ ವಿವರವನ್ನು ಬಹಿರಂಗ ಪಡಿಸಲು ಎಸ್‌ಬಿಐಗೆ ನಿರ್ದೇಶನ ನೀಡಿದೆ.

೨೦೧೮ರಲ್ಲಿ ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿಯವರು ಚುನಾವಣಾ ಬಾಂಡ್ ಯೋಜನೆಯನ್ನು ಗೆಜೆಟ್ ಅಧಿಸೂಚನೆ ಮೂಲಕ ಜಾರಿಗೆ ತಂದರು.
ಈ ಯೋಜನೆಯಡಿಯಲ್ಲಿ ರಾಜಕೀಯ ಪಕ್ಷಗಳಿಗೆ ಹಣ ಕೊಡುವವರು ೧,೦೦೦ದಿಂದ ೧ ಕೋಟಿ ರು. ವರೆಗಿನ ಬಾಂಡ್ ಖರೀದಿಸಿ ನೀಡಬಹುದಿತ್ತು.
ಬಾಂಡ್‌ಗಳು ಕೇವಲ ನಾಗಪುರ, ಚೆನ್ನೈ, ಹೈದರಾಬಾದ್, ಮುಂಬಯಿ ಮತ್ತು ದೆಹಲಿ ಈ ಐದು ನಗರ ಗಳ ಎಸ್‌ಬಿಐ ಕಚೇರಿಗಳಲ್ಲಿ ಮಾತ್ರ ಮಾರಾಟ
ವಾಗುತ್ತಿದ್ದವು. ವರ್ಷದಲ್ಲಿ ಹದಿನೈದು ದಿನಗಳು ಮಾತ್ರ ಇದರ ಮಾರಾಟಕ್ಕೆ ಅವಕಾಶವಿತ್ತು. ಬಾಂಡ್ ಮೂಲಕ ನೀಡುವ ದೇಣಿಗೆಗೆ ಶೇ. ೧೦೦ರಷ್ಟು
ಆದಾಯ ತೆರಿಗೆ ವಿನಾಯತಿ ದೊರೆಯುತ್ತಿತ್ತು. ಖರೀದಿಸಿದ ಹದಿನೈದು ದಿನಗಳಲ್ಲಿ ಇದು ನಗದಿಕರಣವಾಗಬೇಕಿತ್ತು. ತಡವಾದರೆ ಸಂಪೂರ್ಣ
ಹಣವು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಜಮಾ ಆಗುತ್ತಿತ್ತು.

೨೦೧೩ರಲ್ಲಿ ಪ್ರಣಬ್ ಮುಖರ್ಜಿಯವರು ಹಣಕಾಸು ಮಂತ್ರಿಯಾಗಿದ್ದಾಗ ಚುನಾವಣೆಗೆ ಉದ್ದಿಮೆದಾರರು ದೇಣಿಗೆಯನ್ನು ಚುನಾವಣಾ ದತ್ತಿಯ ಮೂಲಕ ನೀಡಲು ಕಾನೂನು ತಿದ್ದುಪಡಿ ಮಾಡಿ ಜಾರಿಗೆ ತಂದರು. ಇದರಡಿಯಲ್ಲಿ ದೇಣಿಗೆ ನೀಡುವವರ ವಿವರ ನೀಡಬೇಕಾಗಿತ್ತು. ಆದರೆ ಚುನಾವಣಾ ನಿಧಿಯನ್ನು ನೀಡಿ ರಾಜಕೀಯ ಪಕ್ಷಗಳ ಅವಕೃಪೆಗೆ ಬೀಳುವ ಕಾರಣ ಅನೇಕರಿಗೆ ಅಧಿಕೃತವಾಗಿ ದೇಣಿಗೆ ನೀಡಲು ಹಿಂಜರಿಕೆಯಿದ್ದುದರಿಂದ ಚುನಾವಣಾ ಬಾಂಡ್ ಜಾರಿಗೆ ಬಂದಿತು.

೨೦೧೮ರಲ್ಲಿ ಜೇಟ್ಲಿ ಅವರು ಚುನಾವಣಾ ಬಾಂಡ್ ಯೋಜನೆಯನ್ನು ದೃಢವಾಗಿ ಸಮರ್ಥಿಸಿಕೊಂಡಿದ್ದರು. ದಾನಿಗಳು ತಮ್ಮ ಹೆಸರನ್ನು ಬಹಿರಂಗಪಡಿ
ಸಲು ಒತ್ತಾಯಿಸಿದರೆ, ನಗದು ಮತ್ತು ಕಪ್ಪುಹಣದ ಮೂಲಕ ರಾಜಕೀಯ ಹಣವನ್ನು ಪಡೆಯುವ ವ್ಯವಸ್ಥೆಯು ಮರಳುತ್ತದೆ ಎಂಬುದು ಅವರ ವಾದ ವಾಗಿತ್ತು. ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ಯಾರು ಬೇಕಾದರೂ ಚೆಕ್ ಮೂಲಕ ದೇಣಿಗೆ ನೀಡಬಹುದು. ಈ ದೇಣಿಗೆಯೂ ಆದಾಯ ತೆರಿಗೆ
ಕಾಯಿದೆಯ ಸೆಕ್ಷನ್ ೮೦ಜಿಜಿಸಿ ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ. ಚುನಾವಣೆ ದತ್ತಿ ನಿಽಯಲ್ಲಿ ದೇಣಿಗೆ ನೀಡುವವರ ಹೆಸರು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿತ್ತು. ಆದರೆ ಚುನಾವಣಾ ಬಾಂಡ್‌ನಲ್ಲಿ ದೇಣಿಗೆ ನೀಡುವವರ ಹೆಸರು ಗೌಪ್ಯವಾಗಿರುತ್ತಿತ್ತು.

ಚುನಾವಣೆಯಲ್ಲಿ ಕಪ್ಪುಹಣದ ಪ್ರಾಬಲ್ಯವನ್ನು ತಗ್ಗಿಸಲು ಮತ್ತು ದೇಣಿಗೆ ನೀಡುವವರು ಅಧಿಕೃತವಾಗಿ ಬಾಂಡ್ ಖರೀದಿಸಿ ತೆರಿಗೆ ವಿನಾಯತಿ ಪಡೆಯುವ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಬಾಂಡ್ ಯೋಜನೆ ಜಾರಿಗೆ ತರಲಾಗಿತ್ತು. ಮಾರ್ಚ್ ೨೦೧೮ರಿಂದ ಜನವರಿ ೨೪ರ ತನಕ ೧೬,೫೧೮ ಕೋಟಿ ರು. ಮೌಲ್ಯದ ೨೮,೦೩೦ ಬಾಂಡ್‌ಗಳು ಮಾರಾಟವಾಗಿದ್ದವು. ಅದರಲ್ಲಿ ೨೭,೮೧೧ ಕೋಟಿ ರು. ಬಾಂಡ್‌ಗಳ ನಗದೀಕರಣವಾಗಿದೆ.

ದೇಶದಲ್ಲಿ ೨೦೧೮ರ ಏಪ್ರಿಲ್‌ನಿಂದ ೨೦೨೩ರ ತನಕ ೪೦ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಿದೆ. ೪೦೦ಕ್ಕೂ ಹೆಚ್ಚು ಲೋಕಸಭೆ ಮತ್ತು ವಿಧಾನ ಸಭೆಗೆ ಉಪಚುನಾವಣೆಗಳು ನಡೆದಿವೆ. ೨೦೧೯ರಲ್ಲಿ ಲೋಕ ಸಭೆಗೆ ಸಾರ್ವತ್ರಿಕ ಚುನಾವಣೆಯು ನಡೆಯಿತು ಮತ್ತು ೨೦೨೪ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ಚುನಾವಣಾ ಬಾಂಡ್‌ಗಳು ರದ್ದಾಗಿವೆ. ಚುನಾವಣಾ ವಿಶ್ಲೇಷಕರ ಪ್ರಕಾರ ೨೦೧೯ರ ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ಮಾಡಿರುವ ವೆಚ್ಚವು ೫೫,೦೦೦ ಕೋಟಿ ರು. ತದನಂತರ ನಡೆದಿರುವ ೪೦ಕ್ಕೂ ಹೆಚ್ಚು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಒಂದು ಲಕ್ಷ ಕೋಟಿಗೂ ಮೀರಿ ವೆಚ್ಚವಾಗಿದೆ ಎಂದು ಅಂದಾಜು ಮಾಡಿದ್ದಾರೆ. ಇದಕ್ಕೆ ಹೋಲಿಸಿದರೆ ಬಾಂಡ್ ಮೂಲಕ ಸಂಗ್ರಹವಾಗಿರುವ ?೧೬,೦೦೦ ಕೋಟಿ ರು. ಅತ್ಯಲ್ಪ ಮೊತ್ತ. ಆದರೆ ಸದ್ದು ಮಾತ್ರ ವಿಪರೀತ ವಾಗಿದೆ.

ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ರದ್ದು ಮಾಡಿದ ಕೂಡಲೇ ಕಾಂಗ್ರೆಸ್ ಪಾರ್ಟಿಯು ಚುನಾವಣಾ ಬಾಂಡ್ ಯೋಜನೆಯನ್ನು ಪಿಎಂ ನರೇಂದ್ರ ಮೋದಿಯವರ ವೈಯಕ್ತಿಕ ಭ್ರಷ್ಟಾಚಾರದ ನಿದರ್ಶನ ಎಂದು ಬಣ್ಣಿಸಿತು. ಬಿಜೆಪಿ ಸರಕಾರವು ಬಾಂಡ್‌ಗಳನ್ನು ಲಂಚ ಮತ್ತು ಕಮಿಷನ್ ಆಗಿ ಪರಿವರ್ತಿಸಿದೆ ಎಂಬುದನ್ನು ಸುಪ್ರೀಂಕೋರ್ಟ್ ತೀರ್ಪು ದೃಢಪಡಿಸಿದೆ ಎಂದು ಅಬ್ಬರಿಸಿತು. ಆದರೆ ಅದೇ ಬಾಂಡ್ ಮೂಲಕ ಕಾಂಗ್ರೆಸ್ ಪಾರ್ಟಿಯ
೧,೧೨೩ ಕೋಟಿ ರು. ದೇಣಿಗೆ ಪಡೆದಿದೆ. ಬಿಜೆಪಿ ಬಾಂಡ್ ಮೂಲಕ ದೇಣಿಗೆ ಪಡೆದಿದ್ದು ವೈಯಕ್ತಿಕ ಭ್ರಷ್ಟಾಚಾರ ಎಂದು ಆರೋಪಿಸಿದರೆ ಅದೇ ಬಾಂಡ್
ಮೂಲಕ ಕಾಂಗ್ರೆಸ್ ಕೂಡ ದೇಣಿಗೆ ಪಡೆದಿರುವುದೂ ಭ್ರಷ್ಟಾಚಾರವೇ ಆಗುತ್ತದೆ ಎಂಬ ಕನಿಷ್ಠ ಪರಿಜ್ಞಾನವು ಇವರಿಗೆ ಇರಬೇಕಲ್ಲವಾ? ಚುನಾವಣಾ ಆಯೋಗವು ಲೋಕಸಭಾ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ವೆಚ್ಚ ಮಾಡುವ ಮಿತಿಯನ್ನು ೯೫ ಲಕ್ಷ ರು. ಮತ್ತು ವಿಧಾನಸಭಾ ಚುನಾವಣೆಗೆ ೪೦ ಲಕ್ಷ ರು. ಎಂದು ನಿಗದಿಪಡಿಸಿದೆ. ಇದಲ್ಲದೆ ರಾಜಕೀಯ ಪಕ್ಷಗಳು ಮಾಡುವ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಈ ಮಿತಿಯು ಕೇವಲ ಕಾಗದಕ್ಕೆ ಸೀಮಿತವಾಗಿ ಬಹುತೇಕ ಅಭ್ಯರ್ಥಿಗಳು ಈ ಮಿತಿಯನ್ನು ಮೀರಿ ಹಲವು ಪಟ್ಟು ಹೆಚ್ಚು ವೆಚ್ಚ ಮಾಡುವುದು ಸಾಮಾನ್ಯವಾಗಿದೆ.

‘ಚುನಾವಣಾ ಬಾಂಡ್‌ಗಳು ಬೃಹತ್ ಉದ್ಯಮಿ ಗಳಿಂದ ಬಿಜೆಪಿಯ ಜೋಳಿಗೆ ತುಂಬಿಸುವ ದಾರಿ ಯಾಗಿದೆ, ಉದ್ದಿಮೆದಾರರು ತಮ್ಮ ಸ್ವಹಿತಾಸಕ್ತಿ ಕಾಪಾಡಿಕೊಳ್ಳಲು ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡುತ್ತಿದ್ದಾರೆ. ಇದೊಂದು ಭ್ರಷ್ಟ ವ್ಯವಸ್ಥೆ, ಪಾರದರ್ಶಕತೆಯು ಇಲ್ಲಿಲ್ಲ’ ಎಂದು ವಿರೋಧ
ಪಕ್ಷದವರು ಮತ್ತು ಬಿಜೆಪಿ ವಿರೋಧಿಗಳು ಹುಯಿಲೆಬ್ಬಿಸುತ್ತಿದ್ದರು. ನಿಜ, ಬಾಂಡ್ ಮೂಲಕ ಧನ ಸಂಗ್ರಹದಲ್ಲಿ ಬಿಜೆಪಿಗೆ ಮೊದಲ ಸ್ಥಾನವಿದೆ. ಒಟ್ಟು
ಮಾರಾಟವಾಗಿರುವ ಬಾಂಡ್ ಮೊತ್ತದಲ್ಲಿ ಶೇ.೫೫ ರಷ್ಟು ಅಂದರೆ ೬,೫೬೬ ಕೋಟಿ ರು. ಹಣ ಬಿಜೆಪಿಗೆ ಸಂದಾಯವಾಗಿದೆ.

ಉಳಿದ ಶೇ.೪೫ರಷ್ಟು ಹಣವು ವಿರೋಧ ಪಕ್ಷಗಳಿಗೆ ಸಂದಾಯವಾಗಿದೆ. ಕೇವಲ ಒಂದು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಟಿಎಂಸಿ, ಡಿಎಂಕೆ ಮತ್ತು ಬಿಜೆಡಿ ಪಕ್ಷಗಳು ಕ್ರಮವಾಗಿ ೧೦೯೩ ಕೋಟಿ, ೬೧೬ ಕೋಟಿ ಮತ್ತು ೭೭೪ ಕೋಟಿ ರು. ಹಣ ವನ್ನು ಬಾಂಡ್ ಮೂಲಕ ಸಂಗ್ರಹಿಸಿವೆ! ಬಿಜೆಪಿಗೆ ದೇಶವ್ಯಾಪಿ ಪ್ರಭಾವ, ಸಂಘಟನೆ ಮತ್ತು ೧೫ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸರಕಾರವಿದ್ದ ಕಾರಣ ಸಹಜವಾಗಿ ದೇಣಿಗೆಯೂ ಹೆಚ್ಚು ಬರುವುದರಲ್ಲಿ ಆಶ್ಚರ್ಯವಿಲ್ಲ. ವಿಪಕ್ಷಗಳು ಬಾಂಡ್ ಮೂಲಕ ಶೇ.೪೫ರಷ್ಟು ಹಣ ಸಂಗ್ರಹಿಸಿರುವುದನ್ನು ಮರೆ ಮಾಚಿ ಬಿಜೆಪಿಗೆ ಬಂದಿರುವ ಶೇ.೫೫ರಷ್ಟು ಹಣದ ಬಗ್ಗೆ ಟೀಕಿಸುತ್ತಿರು ವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ.

‘ಇದು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ ಯನ್ನು ಮರುಸ್ಥಾಪಿಸುತ್ತದೆ. ಕಳೆದ ೬-೭ ವರ್ಷ ಗಳಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಂದ ಅತ್ಯಂತ ಐತಿಹಾಸಿಕ ತೀರ್ಪು ಇದಾಗಿದೆ’ ಎಂದು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಮಹಮ್ಮದ್ ಖುರೈಶಿ ತಮ್ಮ ‘ಎಕ್ಸ್’ ಖಾತೆಯ ಮೂಲಕ ಪ್ರತಿಕ್ರಿಯಿಸುತ್ತಾರೆ.
ಸುಪ್ರೀಂಕೋರ್ಟಿನ ತೀರ್ಪನ್ನು ಕಾನೂನಾತ್ಮಕ ವಾಗಿ ವಿಶ್ಲೇಷಿಸಿದಾಗ ದೇಣಿಗೆಯ ಮೂಲವನ್ನು ಬಹಿರಂಗ ಪಡಿಸದಿರುವುದು ಮತದಾರರ ಹಕ್ಕಿಗೆ
ಚ್ಯುತಿಯಾಗುವುದು ಎಂಬ ಅಭಿಮತ ಸರಿಯಾದ ತೀರ್ಮಾನ. ಆದರೆ ವಾಸ್ತವಿಕ ನೆಲಗಟ್ಟಿನಿಂದ ನೋಡಿದರೆ ಈ ತೀರ್ಪಿನಿಂದ ಬಾಂಡ್ ರದ್ದಾಗಿರು
ವುದೇ ವಿನಾ ಮತ್ಯಾವ ಬದಲಾವಣೆಯು ಸಂಭವಿಸುವ ಸಾಧ್ಯತೆಗಳು ಇಲ್ಲ.

ಬದಲಿಗೆ ಅರುಣ್ ಜೇಟ್ಲಿಯವರು ಹೇಳಿದ ಹಾಗೆ ಇನ್ನೂ ಹೆಚ್ಚಿನ ಕಪ್ಪುಹಣ ಚಲಾವಣೆಗೆ ದಾರಿಯಾಗುವುದು ನಿಶ್ಚಿತ. ೧೯೯೪ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಯ ಅಂಗಾರರವರು ಸುಳ್ಯ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದಾಗ ಅವರು ಮಾಡಿದ ಒಟ್ಟು ವೆಚ್ಚ ೨೫,೦೦೦ ಸಾವಿರ ರು. ಮಾತ್ರ. ಆ ದಿನದಲ್ಲಿ ಕೇವಲ ಕಾರ್ಯಕರ್ತರ ಬಲದಿಂದ ಚುನಾವಣೆ ಗೆಲ್ಲಬಹುದು ಎಂದು ಅವರು ತೋರಿಸಿಕೊಟ್ಟಿದ್ದರು. ಚುನಾವಣೆಯಲ್ಲಿ ಹಣದ ಪ್ರಭಾವ ತಗ್ಗಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ವಿಷಯಾಧಾರಿತವಾಗಿ ಮತ್ತು ಸಾಧನೆಯ ಮೇಲೆ ಚುನಾವಣೆ ನಡೆದರೆ ಹಣದ ಹೊಳೆಗೆ ಕಡಿವಾಣ
ಬೀಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಣವೇ ಪ್ರಧಾನವಾಗಿ ಪಾಲಿಕೆಯ ಚುನಾವಣೆಗೂ ಅಭ್ಯರ್ಥಿಗಳು ೫ರಿಂದ ೧೦ ಕೋಟಿ ವೆಚ್ಚ ಮಾಡುವುದು
ಸಾಮಾನ್ಯವಾಗಿದೆ.

ವಿಧಾನಸಭೆಯ ಚುನಾವಣಾ ವೆಚ್ಚ ಮೂವತ್ತು ಕೋಟಿ ದಾಟುತ್ತಿದೆ. ಚುನಾವಣಾ ಆಯೋಗವು ಹಲವಾರು ನೀತಿ ನಿಯಮಾವಳಿಯ ಮೂಲಕ ಬಾಹ್ಯ ಪ್ರಚಾರಕ್ಕೆ ಕಡಿವಾಣ ಹಾಕಿರುವುದೆ ವಿನಾ ವೈಯಕ್ತಿಕವಾಗಿ ಅಭ್ಯರ್ಥಿಗಳು ಮಾಡುತ್ತಿರುವ ಹಣದ ವೆಚ್ಚವನ್ನು ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದೆ.

೨೦೨೩ರಿಂದ ಮತ್ತೊಂದು ಅನಿಷ್ಟ ಪದ್ಧತಿಯು ಆರಂಭವಾಗಿದೆ. ಚುನಾವಣಾ ನೀತಿಸಂಹಿತೆಗೆ ಸೆಡ್ಡು ಹೊಡೆದು ಚುನಾವಣಾ ಘೋಷಣೆಗೆ ಮುನ್ನವೇ
ಮತದಾರರಿಗೆ ರೇಷನ್ ಕಿಟ್, ಕುಕ್ಕರ್, ಗ್ಯಾಸ್ ಸಿಲಿಂಡರ್, ಟಿವಿ, ಮೊಬೈಲ್ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೀಗೆ ಹತ್ತು ಹಲವು ಆಮಿಷಗಳನ್ನು ನೀಡುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಕಲುಷಿತಗೊಳಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಚುನಾವಣೆಗೆ ಮಾಡುವ ಒಟ್ಟು ವೆಚ್ಚದಲ್ಲಿ ಶೇ. ಹತ್ತರಷ್ಟು ಕೂಡಾ ಇಲ್ಲದ ಚುನಾವಣಾ ಬಾಂಡ್ ರದ್ದತಿಯು ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಚುನಾವಣಾ ಆಯೋಗ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಎಂದು ಪ್ರಾಮಾಣಿಕವಾಗಿ ಅಪೇಕ್ಷೆ ಪಡುತ್ತಿರುವ ವರು ಚುನಾವಣೆಯಲ್ಲಿ ಹಣದ ಪ್ರಭಾವ ತಗ್ಗಿಸುವ ಪರ್ಯಾಯ ಮಾರ್ಗೋಪಾಯವನ್ನು ಹುಡುಕುವ ಕೆಲಸ ಮಾಡಬೇಕಾಗಿದೆ.

ಚುನಾವಣಾ ಬಾಂಡ್ ಯೋಜನೆಯ ರದ್ದತಿಯ ಸುಪ್ರೀಂಕೋರ್ಟ್ ತೀರ್ಪು ಕೇವಲ ಮೋದಿಯವರ ವಿರೋಧಿಗಳಿಗೆ ಮೋದಿಯವರನ್ನು ಟೀಕಿಸಲು ದೊರೆತಿರುವ ಒಂದು ದುರ್ಬಲ ಅಸ್ತ್ರವಾಗಿರುವುದೇ ವಿನಾ, ಚುನಾವಣಾ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಇದರಿಂದ ಯಾವುದೇ ಪ್ರಯೋಜನವಾಗದು
ಎಂಬುದು ಕಟುಸತ್ಯ.

(ಲೇಖಕರು ಬಿಜೆಪಿಯ
ಮಾಜಿ ಮಾಧ್ಯಮ ಸಂಚಾಲಕರು)