-ಡಾ. ಆದರ್ಶ್ ನಾಯಕ್, ಸಾಮಾನ್ಯ ವೈದ್ಯ ಸಲಹಾತಜ್ಞರು, ಟ್ರೈಲೈಫ್ ಹಾಸ್ಪಿಟಲ್
ಇತ್ತೀಚಿನ ವರ್ಷಗಳಲ್ಲಿ, ಯುವಜನರ ದೇಹಗಳಲ್ಲಿ ಯುರಿಕ್ ಆಸಿಡ್ ಮಟ್ಟ ಹೆಚ್ಚಾಗುತ್ತಿರುವುದು ಕಾಳಜಿಯ ವಿಷಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಈ ಕಾಳಜಿಯ ವಿಷಯ ಪ್ರವರ್ಧಮಾನಕ್ಕೆ ಬರುತ್ತಿದೆ. ಹಿಂದಿನ ಕಾಲದಲ್ಲಿ ವಯಸ್ಸಾದವರಲ್ಲಿ ಈ ತೊಂದರೆ ಕಾಡುತ್ತಿತ್ತು. ಹೈಪರ್‌ಯುರಿಸಿಮಿಯ ಎಂದು ಕರೆಯುವ ಈ ತೊಂದರೆ ಈಗ ಯುವಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ತೊಂದರೆಯ ಕಾರಣಗಳು ಮತ್ತು ಅದರಿಂದಾಗುವ ಪರಿಣಾಮಗಳನ್ನು ಕುರಿತು ಹತ್ತಿರದಿಂದ ಗಮನಿಸಬೇಕಾದ ಅಗತ್ಯ ಬಂದೊದಗಿದೆ.
ಆಹಾರಕ್ರಮದಲ್ಲಿ ಬಹಳಷ್ಟು ಬದಲಾವಣೆಯಾಗಿರುವುದು, ಯುವಜನತೆಯಲ್ಲಿ ಯುರಿಕ್ ಆಸಿಡ್ ಮಟ್ಟ ಹೆಚ್ಚಾಗಲು ಗಮನಾರ್ಹ ಕೊಡುಗೆ ನೀಡುವ ಅಂಶಗಳಲ್ಲಿ ಒಂದಾಗಿದೆ. ಆಧುನಿಕ ಆಹಾರಕ್ರಮಗಳಲ್ಲಿ ಸಂಸ್ಕೃರಿತ ಆಹಾರಗಳು, ಸಕ್ಕರೆ ತುಂಬಿದ ಪೇಯಗಳು ಮತ್ತು ಕೆಂಪು ಮಾಂಸಗಳ ಸೇವನೆ ಹೆಚ್ಚಾಗಿರುತ್ತದೆ. ಈ ಪದಾರ್ಥಗಳಲ್ಲಿ ಪ್ಯೂರಿನ್‌ಗಳು ಉನ್ನತ ಪ್ರಮಾಣದಲ್ಲಿರುತ್ತವೆ. ಈ ಪ್ಯೂರಿನ್‌ಗಳು ದೇಹದಲ್ಲಿ ಯುರಿಕ್ ಆಸಿಡ್ ಆಗಿ ಪರಿವರ್ತನೆ ಗೊಳ್ಳುತ್ತವೆ. ಇದರಿಂದ ಅವುಗಳನ್ನು ಪರಿಣಾಮಕಾರಿಯಾಗಿ ಸಂಸ್ಕರಣೆಗೊಳಿಸುವ ದೇಹದ ಸಾಮರ್ಥ್ಯ ಕಡಿಮೆಯಾಗುತ್ತದೆ. ಜೊತೆಗೆ ತಂತ್ರಜ್ಞಾನ ಹೆಚ್ಚಿರುವುದು ಹಾಗೂ ಆಲಸಿ ಮನರಂಜನೆಯ ಅಭ್ಯಾಸಗಳು ಹೆಚ್ಚಾಗಿರುವುದರಿಂದ ಯುವಜನರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಆಲಸಿ ಜೀವನಶೈಲಿಯು ತೂಕ ಹೆಚ್ಚಲು ಮತ್ತು ಚಯಾಪಚಯ ಅಂದರೆ ಮೆಟಬಾಲಿಕ್ ಅಸಮತೋಲನಗಳಿಗೆ ಕೊಡುಗೆ ನೀಡುತ್ತದೆ. ಇವೆರಡೂ ಅಂಶಗಳು ದೇಹದಲ್ಲಿನ ಯುರಿಕ್ ಆಸಿಡ್‌ಮಟ್ಟ ಹೆಚ್ಚಾಗುವುದರೊಂದಿಗೆ ಹತ್ತಿರದ ಸಂಪರ್ಕ ಹೊಂದಿರುತ್ತವೆ.
ಇoದು ಸಾಂಕ್ರಾಮಿಕದoತೆ ಹರಡುತ್ತಿರುವ ಬೊಜ್ಜು ಮೈ ಅಥವಾ ಸ್ಥೂಲಕಾಯದ ತೊಂದರೆ ಎಲ್ಲಾ ವಯಸ್ಸಿನವರನ್ನು ಕಾಡುತ್ತಿದೆ. ಸಮಾಜದಲ್ಲಿನ ಅತ್ಯಂತ ಕಿರಿಯರನ್ನು ಕೂಡ ಈ ಸಮಸ್ಯೆ ಬಿಟ್ಟಿಲ್ಲ. ಬೊಜ್ಜು ಮೈ ದೇಹದಲ್ಲಿ ಇನ್ಸುಲಿನ್ ನಿರೋಧಕತೆ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ಗಳೊoದಿಗೆ ಸಹಯೋಗ ಹೊಂದಿರುತ್ತದೆ. ಇವೆರಡೂ ತೊಂದರೆಗಳು ದೇಹದಲ್ಲಿ ಯುರಿಕ್ ಆಸಿಡ್ ಮಟ್ಟ ಹೆಚ್ಚಲು ಕಾರಣವಾಗಬಹುದು. ಹಲವಾರು ಅಂಶಗಳ ಕಾರಣದಿಂದ ಇಂದು ಯುವಜನತೆ ಹಿಂದೆoದೂ ಇಲ್ಲದ ಮಟ್ಟದ ಒತ್ತಡವನ್ನು ಎದುರಿಸುತ್ತಿದ್ದಾರೆ. ಈ ಅಂಶಗಳಲ್ಲಿ ಶೈಕ್ಷಣಿಕ ಒತ್ತಡಗಳು ಮತ್ತು ಸಾಮಾಜಿಕ ಮಾಧ್ಯಮ ಸೇರಿರುತ್ತದೆ. ದೀರ್ಘಕಾಲದ ಒತ್ತಡದ ಜೊತೆಗೆ ಕಳಪೆ ನಿದ್ರೆಯ ಅಭ್ಯಾಸಗಳು, ದೇಹದಲ್ಲಿನ ಹಾರ್ಮೋನ್ ಸಮತೋಲನಕ್ಕೆ ಅಡ್ಡಿ ಉಂಟು ಮಾಡುತ್ತವೆಯಲ್ಲದೆ, ಚಯಾಪಚಯದಲ್ಲಿ ಬದಲಾವಣೆಗೆ ಕೊಡುಗೆ ನೀಡಿ ಇದರಿಂದ ಯುರಿಕ್ ಆಸಿಡ್ ಮಟ್ಟಗಳಲ್ಲಿ ಹೆಚ್ಚಳವಾಗ ಬಹುದು.
ಯುವಜನರಲ್ಲಿ ಹೆಚ್ಚಾದ ಯುರಿಕ್ ಆಸಿಡ್ ಮಟ್ಟಗಳನ್ನು ನಿಯಂತ್ರಿಸದಿದ್ದರೆ ಗಂಭೀರ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಗೌಟ್, ಮೂತ್ರಪಿಂಡದಲ್ಲಿ ಕಲ್ಲುಗಳು ಮತ್ತು ಹೃದಯ ರಕ್ತನಾಳಗಳ ರೋಗಗಳು ನಂತರದ ಜೀವನದಲ್ಲಿ ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಹೆಚ್ಚುವರಿಯಾಗಿ, ಈಗಾಗಲೇ ಇರುವಂತಹ ಅಧಿಕರಕ್ತದೊತ್ತಡ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ನoತಹ ತೊಂದರೆಗಳನ್ನು ಹೈಪರ್‌ಯುರಿಸಿಮಿ ಯಾ ಮತ್ತಷ್ಟು ಹದಗೆಡಿಸಬಹುದು.
ಆದ್ದರಿಂದ, ಯುವಜನರಲ್ಲಿ ಯುರಿಕ್ ಆಸಿಡ್ ಮಟ್ಟ ಹೆಚ್ಚಾಗುವುದರ ವಿರುದ್ಧ ಹೋರಾಡಲು ಬಹುಮುಖಿ ಮಾರ್ಗದ ಅಗತ್ಯವಿರುತ್ತದೆ. ಇವುಗಳಲ್ಲಿ ಸಾಕಷ್ಟು ನೀರು ಸೇವನೆಯನ್ನು ಪ್ರೋತ್ಸಾಹಿಸುವುದು, ಆರೋಗ್ಯಕರ ಆಹಾರಕ್ರಮ ಬದಲಾವಣೆ, ನಿಗದಿತ ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸು ವುದು, ಒತ್ತಡ ನಿರ್ವಹಣಾ ತಂತ್ರಗಳನ್ನು ಕಲಿಸಿಕೊಡುವುದು, ಸೂಕ್ತ ನಿದ್ರೆಗೆ ಆದ್ಯತೆ ನೀಡುವುದು ಮುಂತಾದವುಗಳು ಈ ಮಾರ್ಗಗಳಲ್ಲಿ ಸೇರಿವೆ. ಇವೆಲ್ಲದರ ಜೊತೆಗೆ ದೇಹದಲ್ಲಿನ ಯುರಿಕ್ ಆಸಿಡ್ ಮಟ್ಟಗಳನ್ನು ಗಮನಿಸಲು ನಿಗದಿತ ಆರೋಗ್ಯ ತಪಾಸಣೆಗಳಿಗೆ ಪ್ರಾಮುಖ್ಯತೆ ನೀಡುವುದು ಹಾಗೂ ದೇಹದಲ್ಲಿ ಅಡಗಿರುವ ವೈದ್ಯಕೀಯ ಸಮಸ್ಯೆಗಳನ್ನು ಗುರುತಿಸುವುದು ಮುಖ್ಯವಾಗಿರುತ್ತದೆ. ಅಲ್ಲದೆ ಯುವಜನರಲ್ಲಿ ಹೆಚ್ಚುತ್ತಿರುವ ಯುರಿಕ್ ಆಸಿಡ್ ಮಟ್ಟಗಳಿಗೆ ಕೊಡುಗೆ ನೀಡುವ ಅಂಶಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿಸುವುದು ಕೂಡ ಮುಖ್ಯವಾಗಿರುತ್ತದೆ. ಯುವಜನತೆ ಮತ್ತು ಅವರಿಗೆ ಆರೈಕೆ ನೀಡುವವರಿಬ್ಬರನ್ನು ಗುರಿಯಾಗಿಟ್ಟುಕೊಂಡ ಶೈಕ್ಷಣಿಕ ಅಭಿಯಾನಗಳು ಅವಶ್ಯಕವಾಗಿವೆ. ಇವು ಈ ಜನರು ಆರೋಗ್ಯಕರ ಜೀವನ ಶೈಲಿಯ ಆಯ್ಕೆಗಳನ್ನು ಕೈಗೊಳ್ಳಲು ಅವರನ್ನು ಸಬಲಿಕರಿಸಬಹುದು. ಜೊತೆಗೆ ಅಗತ್ಯವಿದ್ದಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಹಾಯ ಪಡೆಯಲು ಇದರಿಂದ ನೆರವಾಗುತ್ತದೆ.
ಯುವಜನರಲ್ಲಿ ಯುರಿಕ್ ಆಸಿಡ್ ಮಟ್ಟಗಳು ಹೆಚ್ಚುತ್ತಿರುವುದು ಸಂಕೀರ್ಣ ಸಮಸ್ಯೆಯಾಗಿದೆ. ಜೊತೆಗೆ ಸಾರ್ವಜನಿಕರ ಆರೋಗ್ಯದಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಬಹುದಾಗಿದೆ. ಈ ತೊಂದರೆಗೆ ಕೊಡುಗೆ ನೀಡುವ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಮತ್ತು ಸೂಕ್ತ ಸಕ್ರಿಯ ಕ್ರಮಗಳನ್ನು ಅನುಷ್ಟಾನಕ್ಕೆ ತರುವುದರಿಂದ ನಾವು ಯುವಪೀಳಿಗೆಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಶ್ರಮಿಸಬಹುದು. ಇದರಿಂದ ಆರೋಗ್ಯಕರ ಭವಿಷ್ಯಕ್ಕಾಗಿ ಸಾಧ್ಯವಾದಷ್ಟು ಅತ್ಯುತ್ತಮ ಅಡಿಪಾಯವನ್ನು ಯುವಜನತೆ ಹೊಂದುವ ಖಾತ್ರಿಯನ್ನು ಮಾಡಿಕೊಳ್ಳಬಹುದು.