Thursday, 12th December 2024

ಇನ್ನಷ್ಟು ಬೇಕೆಮ್ಮ ಭಾರತಕ್ಕೆ ರಾಮ, ರಾಮರಾಜ್ಯ…

ರಾಮರಥ

ಡಾ.ಎ.ಜಯಕುಮಾರ ಶೆಟ್ಟಿ

ರಾಮ ಮತ್ತು ಅಯೋಧ್ಯೆಯ ರಾಮಮಂದಿರವು ಭೂಮಿಯ ಮೇಲಿನ ಸತ್ಯದ ಆದರ್ಶ ಸಾಮ್ರಾಜ್ಯವಾದ ರಾಮರಾಜ್ಯದ ಸಂಕೇತಗಳಾಗಿವೆ. ನಮ್ಮ ಪ್ರಯತ್ನದಿಂದ ನಾವು ರಾಮನನ್ನು ಮರ್ಯಾದಾ ಪುರುಷೋತ್ತಮನಂತೆ ಅನುಕರಿಸಬಹುದು. ಸತ್ಯಕ್ಕಾಗಿ ದೃಢವಾಗಿ ನಿಲ್ಲುವ ಮೂಲಕ ಶ್ರೀರಾಮನು ಪ್ರತಿಯೊಬ್ಬ ಮನುಷ್ಯನಲ್ಲಿರುವ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ನಿಲ್ಲುತ್ತಾನೆ.

ಅಯೋಧ್ಯೆಯ ರಾಮಮಂದಿರವು ಕೇವಲ ಒಂದು ಕಟ್ಟಡವಲ್ಲ; ಅದು ಸಮಾನತೆ ಮತ್ತು ಸಾಮಾಜಿಕ ಸಾಮರಸ್ಯದೊಂದಿಗೆ ರಾಮರಾಜ್ಯದ ಸ್ಥಾಪನೆ
ಯಾಗಬೇಕಿರುವುದರ ದ್ಯೋತಕ. ರಾಷ್ಟ್ರದ ಸಾಮರಸ್ಯದ ಸಂಕೇತವಾಗಿ ರಾಮಮಂದಿರವು ಲೋಕಾರ್ಪಣೆಗೊಂಡಿರುವ ಈ ಕಾಲಘಟ್ಟದಲ್ಲಿ, ‘ನಮಗೆ ರಾಮ ಇನ್ನಷ್ಟು ಬೇಕು’  ಎಂಬ ಹಂಬಲ ಸಹಜವಾಗಿಯೇ ಮೂಡುತ್ತಿದೆ. ರಾಮನ ಆದರ್ಶಗಳನ್ನು ಇನ್ನಷ್ಟು ತಿಳಿದು ಅಳವಡಿಸಿಕೊಂಡು,
ಜಗತ್ತಿಗೇ ಮಾರ್ಗದರ್ಶಿಯಾಗುವ ನಮ್ಮ ಸುಪ್ತಸಾಮರ್ಥ್ಯ ವನ್ನು ಅರಳಿಸುವ ನಿರ್ಧಾರ ನಮ್ಮದಾಗಬೇಕು.

ಅತ್ಯುತ್ತಮ ಆಡಳಿತ ಎಂದಾಕ್ಷಣ ಭಾರತದ ಜನಮಾನಸದಲ್ಲಿ ಸುರಿಸುವ ಮೊದಲ ಹೆಸರು ಬಹುಶಃ ರಾಮನದ್ದೇ. ಆದರ್ಶರಾಜ್ಯ ಅಥವಾ ಆಡಳಿತದ ಪರಿಕಲ್ಪನೆ ಎಂದರೆ ಅದು ‘ರಾಮರಾಜ್ಯ’. ಸದ್ಗುಣ, ನೈತಿಕತೆ ಮತ್ತು ನ್ಯಾಯವು ಪ್ರಮುಖ ಆದರ್ಶಗಳಾಗಿರುವ ಸಮಾಜವನ್ನು ‘ರಾಮ ರಾಜ್ಯ’ವು ಸೃಜಿಸು ತ್ತದೆ. ನಮ್ಮಲ್ಲಿಯ ಆಚಾರ-ವಿಚಾರಗಳು, ವೇಷಭೂಷಣಗಳು, ನಂಬಿಕೆಗಳು ಭಿನ್ನವಾಗಿರಬಹುದು; ಆದರೆ ಅಂತರಾಳದಲ್ಲಿ ಭಾರತವನ್ನು ಜೋಡಿಸುವ ಸಂಸ್ಕೃತಿ ಒಂದೇ ಆಗಿದೆ. ಶ್ರೀರಾಮರ ಸದ್ಗುಣಗಳು ನಮ್ಮಲ್ಲಿ ರಕ್ತಗತ ವಾಗಬೇಕೆಂಬುದು ನಮ್ಮ ಸನಾತನ ಸಂಸ್ಕೃತಿಯ ಆಶಯವೂ
ಹೌದು.

ರಾಮರಾಜ್ಯವು ಉತ್ತಮ ಆಡಳಿತ, ಪ್ರಗತಿ, ಸಮೃದ್ಧಿ ಮತ್ತು ಶಾಂತಿಯ ಸಂಕೇತವಾಗಿದೆ. ಏಕೆಂದರೆ, ರಾಮನ ಆಡಳಿತದಲ್ಲಿ ಅಯೋಧ್ಯೆಯು ಅತ್ಯಂತ ಸುಭಿಕ್ಷವಾಗಿತ್ತು ಮತ್ತು ಸಂತೋಷದ ಕಾಲಘಟ್ಟಕ್ಕೆ ಸಾಕ್ಷಿಯಾಗಿತ್ತು. ರಾಮರಾಜ್ಯದ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ. ಘರ್ಷಣೆಗಳು, ಯುದ್ಧಗಳು ಮತ್ತು ಕ್ರೌರ್ಯಗಳಿಂದ ನಲುಗುತ್ತಿರುವ ಇಂದಿನ ಜಗತ್ತಿನಲ್ಲಿ ರಾಮರಾಜ್ಯದ ಪರಿಕಲ್ಪನೆಯು ನಮಗೆ ಭರವಸೆಯನ್ನು ನೀಡುತ್ತದೆ. ರಾಮ
ರಾಜ್ಯದಲ್ಲಿ ಧರ್ಮ ಮತ್ತು ನ್ಯಾಯದ ಆಚರಣೆಯು ‘ಕಣ್ಣೆರಡು, ನೋಟ ಒಂದೇ’ ಎಂಬ ರೀತಿಯಲ್ಲಿ ಕಾಣಬರುತ್ತಿತ್ತು.

ಮಹಾತ್ಮ ಗಾಂಧಿಯವರು ಹೇಳಿದಂತೆ, ದೇವರು ಸತ್ಯ ವಲ್ಲದೆ ಬೇರೇನೂ ಅಲ್ಲ ಮತ್ತು ಅದರ ಅವಿಭಾಜ್ಯ ಅಂಗ ವೆಂದರೆ ಅಹಿಂಸೆ. ಧಾರ್ಮಿಕ-ಮನಸ್ಸಿನ ಎಲ್ಲಾ ಜನರ  ಆಲೋಚನೆಯೂ ಹೀಗೆಯೇ ಇದ್ದರೆ, ಅವರ ಪ್ರತಿಪಾದನೆ ಮತ್ತು ನಡೆಗಳ ನಡುವಿನ ಸಂಘರ್ಷವನ್ನು ಅರಿಯಲು ಸಾಧ್ಯ ಹಾಗೂ ತನ್ಮೂಲಕ ಮಾನವೀಯತೆಗೆ ಸಹಜವಾಗಿ ಒತ್ತುನೀಡಲು ಸಾಧ್ಯವಾಗುತ್ತದೆ. ರಾಮರಾಜ್ಯವು ತನ್ನ ಸಕಾರಾತ್ಮಕ ರೂಪದಲ್ಲಿ ಅಹಿಂಸೆಯ ಶಕ್ತಿಯನ್ನು ಆಧರಿಸಿದ ಸಮಾಜವನ್ನು ಉತ್ತೇಜಿಸುತ್ತದೆ.

ರಾಮನ ಪಾದುಕೆಯ ಅಧಿಕಾರದಡಿಯಲ್ಲಿ ಭರತನೂ ಒಬ್ಬ ಪ್ರಜೆಯೇ ಆಗಿದ್ದ, ಪ್ರಜೆಗಳ ಸಮ್ಮತಿಯ ಮೇರೆಗೆ ಅವರಿಗಾಗಿ ಆಡಳಿತಕಾರ್ಯ
ನಿರ್ವಹಿಸಿದ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಣಬರುವ ನಾಯಕರೂ ಭರತನ ಈ ಆಡಳಿತ ಪರಿಯನ್ನು ರೂಢಿಸಿಕೊಂಡರೆ ಅದೆಷ್ಟು ಚೆನ್ನ, ಅಲ್ಲವೇ? ರಾಮರಾಜ್ಯ ಎಂದರೆ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದ ನಿಯಮವಿರುವ ವ್ಯವಸ್ಥೆ. ಇಲ್ಲಿ ಯೋಜನೆಗಳ ಪ್ರಯೋಜನಗಳು ಬಡವರು, ಅವಕಾಶವಂಚಿತರು, ಬುಡಕಟ್ಟು ಜನರು ಸೇರಿದಂತೆ ಎಲ್ಲರಿಗೂ ತಲುಪುತ್ತವೆ. ಭದ್ರತೆ, ಸೌಲಭ್ಯಗಳು ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕುಗಳು ಪ್ರತಿಯೊಬ್ಬರಿಗೂ ಸಿಗುತ್ತವೆ.

ರಾಮರಾಜ್ಯವೆಂದರೆ ಎಲ್ಲ ರೀತಿಯಲ್ಲೂ ಆದರ್ಶಮಯ ವಾಗಿರುವಂಥದ್ದು. ಪ್ರಜೆಗಳ ಮೇಲೆ ಯಾವುದೇ ಅನಗತ್ಯ ಹೊರೆ ಇರುವುದಿಲ್ಲ. ಪ್ರಜೆಗಳನ್ನು ಆಳುವ ರಾಜನು ದಯಾಮಯನೂ, ಪ್ರೀತಿ-ಕಾಳಜಿ ಇರುವವನೂ, ಪ್ರಜೆ ಗಳನ್ನು ತನ್ನ ಮನೆಯ ಸದಸ್ಯರಂತೆ ನೋಡಿಕೊಳ್ಳುವವನೂ ಆಗಿರುತ್ತಾನೆ.
ಭಾರತೀಯರಾದ ನಾವು ಎಲ್ಲ ಜಾತಿ-ಧರ್ಮ- ಪಂಗಡಗಳನ್ನು ಒಗ್ಗೂಡಿಕೊಂಡು ಎಲ್ಲರ ವಿಶ್ವಾಸದ ಜತೆಗೆ ಅಭಿವೃದ್ಧಿ (ಸಬ್ ಕಾ ಸಾಥ್, ಸಬ್ ಕಾ ವಿಕಾಸ್) ಎಂಬಂತೆ ರಾಮರಾಜ್ಯವನ್ನು ನಿರ್ಮಾಣ ಮಾಡುವುದಕ್ಕೆ ಬಯಸುತ್ತೇವೆ. ಪ್ರಭು ಶ್ರೀರಾಮನು ಮಾನವತೆ ಮತ್ತು ಏಕತೆಯ ಸಂಕೇತವಾಗಿ ದ್ದಾನೆ.

ನಮ್ಮ ದೇಶವಿಂದು ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೆ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಸ್ವಾವಲಂಬಿ ಭಾರತದ ಕಲ್ಪನೆಯನ್ನು ನನಸಾಗಿಸುವ ಪ್ರಯತ್ನ ನಡೆಯುತ್ತಿದೆ. ಅಭಿವೃದ್ಧಿ ಹೊಂದಿದ ನವಭಾರತದ ನಿರ್ಮಾಣಕ್ಕಾಗಿ ಕೆಲಸ ಮಾಡಲಾಗುತ್ತಿದೆ. ಭಾರತದ ವಿಶಾಲ ಭೂಪ್ರದೇಶದ ಬಹು ಸಂಖ್ಯಾತ ಜನರ ಹೃದಯ ಮತ್ತು ಮನಸ್ಸಿನಲ್ಲಿ ರಾಮ ಹೇಗೆ ಆಳಿದನೆಂದು ತಿಳಿಯಲು ರಾಮಾಯಣದ ಕಥೆಯನ್ನು ಓದಿದರೆ ಸಾಕು. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪಶ್ಚಿಮದಿಂದ ಪೂರ್ವಕ್ಕೆ, ರಾಮಾಯಣದ ಹೆಜ್ಜೆಗುರುತುಗಳು ಎಲ್ಲೆಡೆ ಹರಡಿವೆ. ಹಿಂದೂ ಧರ್ಮದ ಈ ಸಹಿಷ್ಣು ಗುಣಲಕ್ಷಣವು ಆಧುನಿಕ ಭಾರತವನ್ನು ಪ್ರಜಾಪ್ರಭುತ್ವ ಮತ್ತು ಮುಕ್ತ ಸಮಾಜವನ್ನಾಗಿ ಮಾಡುವಲ್ಲಿ ಆಳವಾದ ಪ್ರಭಾವ ಬೀರಿದೆ.

ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ಎಲ್ಲಾ ಕ್ಷೇತ್ರಗಳ ಲ್ಲಿಯೂ ಮುಂದುವರಿಯುತ್ತಿದೆ. ಅಸಾಧ್ಯಗಳನ್ನು ಸಹ ಸಾಧಿಸಿ ಜಗತ್ತಿಗೆ ಅಚ್ಚರಿ ಮೂಡಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ‘ಡಿಜಿಟಲ್ ಇಂಡಿಯಾ’ ಎಂಬ ಪರಿಕಲ್ಪನೆಯ ಮೂಲಕ ಭಾರತವನ್ನು ಮರುನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಪಂಚವೇ ಭಾರತವನ್ನು ಭರವಸೆಯ ಕಂಗಳಿಂದ ನೋಡುವಂತಾಗಿದೆ. ಇಡೀ ಸಹಸ್ರಮಾನದಲ್ಲೇ ಮಹಾನ್ ಸಂಕಷ್ಟವಾದ ಕೊರೋನಾ ನಂತರ ನವಭಾರತವು ಭರವಸೆ ಹಾಗೂ ಮಹತ್ವಾ ಕಾಂಕ್ಷೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಕಳೆದ ಒಂದು ದಶಕದಲ್ಲಿ ಸರಕಾರವು ಹಣದುಬ್ಬರವನ್ನು ಕಟ್ಟಿಹಾಕುವಲ್ಲಿ ತಕ್ಕಮಟ್ಟಿಗೆ ಯಶಸ್ವಿ ಯಾಗಿದೆ.

ಜನ ಸಾಮಾನ್ಯರ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತ ಸರಕಾರವು ‘ರಾಮರಾಜ್ಯ’ ತತ್ವಗಳನ್ನು ಪ್ರತಿಧ್ವನಿ ಸುವ ‘ನವ ಕಲ್ಯಾಣವಾದ’ ಪ್ರಯಾಣವನ್ನು ಆರಂಭಿಸಿದೆ. ಪ್ರಧಾನಮಂತ್ರಿ ಜನ್‌ಧನ್ ಯೋಜನೆ, ಹಣಕಾಸು ಸೇರ್ಪಡೆ ಕಾರ್ಯಕ್ರಮ, ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಆರ್ಥಿಕ ಸಬಲೀಕರಣದ ತತ್ವವನ್ನು ಸಾಕಾರ ಗೊಳಿಸುತ್ತದೆ. ಅಂತೆಯೇ, ಆಯುಷ್ಮಾನ್ ಭಾರತ್ ಕಾರ್ಯಕ್ರಮವು ಹಿಂದುಳಿದವರಿಗೆ ಆರೋಗ್ಯ ವಿಮೆಯನ್ನು ನೀಡುತ್ತಿದೆ, ಎಲ್ಲರಿಗೂ ಆರೋಗ್ಯ ರಕ್ಷಣೆ ನೀಡುವುದು ರಾಮರಾಜ್ಯ ತತ್ವವನ್ನು ಪ್ರತಿಧ್ವನಿಸುತ್ತದೆ. ಸ್ವಚ್ಛ ಭಾರತ ಅಭಿಯಾನವು ನೈರ್ಮಲ್ಯ ಮತ್ತು ಶುಚಿತ್ವವನ್ನು ಸುಧಾರಿಸುವ ಗುರಿಯನ್ನು
ಹೊಂದಿದೆ.

ಇದು ಶುದ್ಧ ಮತ್ತು ಆರೋಗ್ಯಕರ ಪರಿಸರವನ್ನು ಆದರ್ಶದೊಂದಿಗೆ ಸಂಯೋಜಿಸುತ್ತದೆ. ಹೆಚ್ಚುವರಿಯಾಗಿ, ಕೈಗೆಟಕುವ ದರದ ವಸತಿಗಳ ಕುರಿತಾದ ಪ್ರಧಾನಮಂತ್ರಿ ಆವಾಸ್ ಯೋಜನೆಯು ಪ್ರತಿಯೊಬ್ಬ ನಾಗರಿಕನ ಗೌರವ ಯುತ ಜೀವನವನ್ನು ಖಾತ್ರಿಪಡಿಸುವ ಬದ್ಧತೆಯನ್ನು ಪ್ರತಿ ಬಿಂಬಿಸುತ್ತದೆ. ಇದು ರಾಮರಾಜ್ಯದ ಎಲ್ಲಾ ಆದರ್ಶಗಳಿಗೆ ಆಶ್ರಯವನ್ನು ಪ್ರತಿಧ್ವನಿಸುತ್ತದೆ.

ಸ್ವಾವಲಂಬಿ ಭಾರತದ ಕಲ್ಪನೆಯನ್ನು ನನಸಾಗಿಸುವ ಪ್ರಯತ್ನ ನಡೆಯುತ್ತಿದೆ. ನವೋದ್ಯಮ ಸ್ಥಾಪಿಸಲು ನೀಡುವ ಉತ್ತೇಜಕಗಳು ಪ್ರತಿಭಾವಂತ ಯುವಕರು ಮತ್ತು ಮಹಿಳೆಯರನ್ನು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ದಾತರನ್ನಾಗಿ ಪರಿವರ್ತಿಸುತ್ತಿರುವುದು ಸಹಜವಾಗಿ ಚೇತೋಹಾರಿಯಾಗಿದೆ. ಕೋವಿಡ್ ಹಾಗೂ ಯದ್ಧದ ಬಿಕ್ಕಟ್ಟಿನ ನಡುವೆಯೂ, ಪ್ರಕ್ಷುಬ್ದ ಪರಿಸ್ಥಿಯಲ್ಲಿಯೂ ಭಾರತ ವನ್ನು ಜಗತ್ತಿನಲ್ಲಿ ಪ್ರಕಾಶಮಾನವಾದ ತಾಣವೆಂದು ಜಾಗತಿಕ ವಾಗಿ ಶ್ಲಾಸಲಾಗಿದೆ. ಕಳೆದ ದಶಕದ ಉತ್ತಮ ಆರ್ಥಿಕ ನೀತಿಗಳು, ಭ್ರಷ್ಟಾಚಾರದ ವಿರುದ್ಧದ ಹೋರಾಟ, ಆಡಳಿತದಲ್ಲಿ ದಕ್ಷತೆ ಹಾಗೂ ಉದಾರ ಕಲ್ಯಾಣ ಯೋಜನೆಗಳು ಭಾರತವನ್ನು ವಿಶ್ವದ ಹತ್ತನೇ ದೊಡ್ಡ ಆರ್ಥಿಕತೆಯಿಂದ ಐದನೇ ಸ್ಥಾನಕ್ಕೆ ಜಿಗಿಯುವಂತೆ ಮಾಡಿವೆ.

ಜಾಗತಿಕ ಸವಾಲುಗಳು ಸಾಮಾನ್ಯವಾಗಿ ಭೌಗೋಳಿಕ ಗಡಿಗಳನ್ನು ಮಸುಕುಗೊಳಿಸುತ್ತಿರುವ ಇಂದಿನ ಜಗತ್ತಿನಲ್ಲಿ, ರಾಮಮಂದಿರದಿಂದ ಸಾಕಾರಗೊಂಡಿ ರುವ ಸನಾತನ ಧರ್ಮದ ಬೋಧನೆಗಳು ಸುಸ್ಥಿರ ಜೀವನ ಮತ್ತು ಶಾಂತಿಯುತ ಸಹಬಾಳ್ವೆಗೆ ಅಮೂಲ್ಯವಾದ ನೀಲಿನಕ್ಷೆಯನ್ನು ಒದಗಿಸುತ್ತವೆ. ಭಾರತೀ ಯರಾದ ನಾವು ಎಲ್ಲಾ ಜಾತಿ ಗಳನ್ನು, ಧರ್ಮಗಳನ್ನು ಮತ್ತು ಪಂಗಡಗಳನ್ನು ಒಗ್ಗೂಡಿಕೊಂಡು ಎಲ್ಲರ ವಿಶ್ವಾಸದ ಜತೆಗೆ ಅಭಿವೃದ್ಧಿ ಎಂಬಂತೆ ರಾಮರಾಜ್ಯವನ್ನು ನಿರ್ಮಾಣ ಮಾಡುವುದಕ್ಕೆ ಕಟಿಬದ್ಧ ರಾಗಬೇಕು.

ರಾಮ ಮತ್ತು ಅಯೋಧ್ಯೆಯ ರಾಮಮಂದಿರವು ಭೂಮಿಯ ಮೇಲಿನ ಸತ್ಯದ ಆದರ್ಶ ಸಾಮ್ರಾಜ್ಯವಾದ ರಾಮರಾಜ್ಯದ ಸಂಕೇತಗಳಾಗಿವೆ. ನಮ್ಮ ವೈಯಕ್ತಿಕ ಪ್ರಯತ್ನದಿಂದ ನಾವು ರಾಮನನ್ನು ಮರ್ಯಾದಾ ಪುರುಷೋತ್ತಮನಂತೆ ಅನುಕರಿಸಬಹುದು. ಸತ್ಯಕ್ಕಾಗಿ ದೃಢವಾಗಿ ನಿಲ್ಲುವ ಮೂಲಕ ಶ್ರೀರಾಮನು ಪ್ರತಿಯೊಬ್ಬ ಮನುಷ್ಯ ನಲ್ಲಿರುವ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ನಿಲ್ಲುತ್ತಾನೆ. ಸದ್ಗುಣ, ನೈತಿಕತೆ ಮತ್ತು ನ್ಯಾಯವು ಪ್ರಮುಖ ಆದರ್ಶ
ಗಳಾಗಿರುವ ಸಮಾಜವನ್ನು ’ರಾಮರಾಜ್ಯ’ ಕಲ್ಪಿಸುತ್ತದೆ. ಅದರ ಸುತ್ತ, ರಾಜ್ಯ ಮತ್ತು ನಾಗರಿಕರ ನಡುವೆ ದಿನನಿತ್ಯದ ಸಂವಹನಗಳು ಸಂಭವಿಸುತ್ತವೆ. ಕೋಟ್ಯಂತರ ಹಿಂದೂಗಳಿಗೆ, ರಾಮ ಮತ್ತು ರಾಮರಾಜ್ಯವು ಉತ್ತಮ ಆಡಳಿತ, ಪ್ರಗತಿ, ಸಮೃದ್ಧಿ ಮತ್ತು ಶಾಂತಿಯ ಸಂಕೇತವಾಗಿದೆ. ಏಕೆಂದರೆ
ರಾಮನ ಆಡಳಿತದಲ್ಲಿ ಅಯೋಧ್ಯೆ ಅತ್ಯಂತ ಸುಭಿಕ್ಷ ಮತ್ತು ಸಂತೋಷದ ಕಾಲಘಟ್ಟವನ್ನು ಕಂಡಿತ್ತು.

ಧರ್ಮವು ಜೀವನದಲ್ಲಿ ಅತ್ಯಂತ ಶ್ರೇಷ್ಠವಾದುದು. ಹೀಗೆ ಧರ್ಮವನ್ನು ಅವಲಂಬಿಸಿ, ಆಧರಿಸಿ ರಾಮನ ಬದುಕು ರೂಪುಗೊಂಡಿತು. ಮಾತ್ರವಲ್ಲದೆ ರಾಮನ ಬದುಕಿನ ಜತೆ ಯಲ್ಲಿ, ಲೋಕದ ಬದುಕು ಕೂಡ ಆಧರಿಸಿದೆ. ನಮ್ಮ ಹಿರಿಯರು ಪ್ರತಿಪಾದಿಸಿದ ಮೌಲ್ಯಗಳು ನಮಗೆ ಮಾರ್ಗದರ್ಶಿಯಾದಾಗ ಮಾತ್ರ ಇಂದಿನ ಹಲವು ಸ್ವಯಂಕೃತ ಚೌಕಟ್ಟುಗಳಿಂದ ಹೊರಬಂದು ನೆಮ್ಮದಿಯ ಬಾಳನ್ನು ನಮ್ಮದಾಗಿಸಬಹುದು.

ಹೆಚ್ಚಿನ ಭಾರತೀಯರು ರಾಮನ ಜೀವನದ ಕಥೆಗಳನ್ನು ಕೇಳುತ್ತಾ ಬೆಳೆದಿದ್ದಾರೆ. ಅಯೋಧ್ಯೆಯ ರಾಜನಾಗಿ ಅವನ ಆಳ್ವಿಕೆಯು ಎಷ್ಟು ನ್ಯಾಯಯುತ ವಾಗಿತ್ತೆಂದರೆ ಅಲ್ಲಿ ಯಾರೂ ಹಸಿವಿನಿಂದ ಬಳಲಲಿಲ್ಲ ಮತ್ತು ಯಾರನ್ನೂ  ಎಂದಿಗೂ ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ. ಅದು ರಾಮರಾಜ್ಯದ ಸ್ಥಿತಿ. ಉತ್ತಮ ಆಡಳಿತ ಮತ್ತು ಆದರ್ಶ ರಾಜನ ಕರ್ತವ್ಯಗಳ ವಿಷಯದಲ್ಲಿ ಭಗವಾನ್ ರಾಮನ ಹೆಸರನ್ನು ಮತ್ತೆ ಮತ್ತೆ ತೆಗೆದುಕೊಳ್ಳಲಾಗುತ್ತದೆ. ರಾಮ
ಮತ್ತು ರಾಮರಾಜ್ಯವು ಪ್ರತಿಯೊಬ್ಬ ಭಾರತೀಯನ ಆದರ್ಶ.

ಸಭ್ಯತೆ, ಮಾನವೀಯತೆ, ಶುದ್ಧ ಚಾರಿತ್ರ್ಯ, ಆದರ್ಶ ಜೀವನದ ಬದ್ಧತೆ ಇವೆಲ್ಲಕ್ಕೂ ಒಂದು ಮೌಲ್ಯಪ್ರಜ್ಞೆ ರಾಮ. ಮಾನವತೆ ಮತ್ತು ಏಕತೆಯ ಸಂಕೇತ ವಾದ ಪ್ರಭು ಶ್ರೀರಾಮ ನಮ್ಮ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿ ಅವನ ಆದರ್ಶಗಳು ನಮ್ಮ ಬೆಳವಣಿಗೆಗೆ ದಾರಿದೀಪವಾಗಲಿ ಎಂಬುದೇ ನಮ್ಮೆಲ್ಲರ ಬಯಕೆ.

(ಲೇಖಕರು ನಿವೃತ್ತ ಪ್ರಾಂಶುಪಾಲರು)