Sunday, 15th December 2024

ಮಾ.19 ರಂದು CAA ಜಾರಿಗೆ ತಡೆ ಕೋರಿದ ಅರ್ಜಿಗಳ ವಿಚಾರಣೆ

supreme-court

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆ (Citizenship Amendment Act – CAA) ಜಾರಿಗೆ ತಡೆ ಕೋರಿದ ಅರ್ಜಿಗಳನ್ನು ಮಾ.19 ರಂದು ಆಲಿಸಲು ಸುಪ್ರೀಂ ಕೋರ್ಟ್ (Supreme court) ಶುಕ್ರವಾರ ಒಪ್ಪಿಕೊಂಡಿದೆ.

ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಮುಂದೆ ಪ್ರಸ್ತಾಪಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಈ ವಿಷಯ ವನ್ನು ಮುಂದಿನ ವಾರ ಪಟ್ಟಿ ಮಾಡಲಾಗುವುದು ಎಂದು ಹೇಳಿದರು.

2019ರಿಂದ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಲಾದ ಇನ್ನೂರಕ್ಕೂ ಹೆಚ್ಚು ಅರ್ಜಿಗಳು CAAಯ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿವೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳಕ್ಕೀಡಾಗಿ 2014ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಪ್ರವೇಶಿಸಿದ ದಾಖಲೆ ರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವಕ್ಕೆ ದಾರಿ ಮಾಡಿಕೊಡುವ ಕಾನೂನನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಸಂಸತ್ತು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಇದನ್ನು ಜಾರಿ ಮಾಡಲಾಗಿದೆ. ಡಿಸೆಂಬರ್ 2019ರಲ್ಲಿ ಕಾನೂನು ಮಾಡಲಾಗಿತ್ತು. ಸೋಮವಾರ ಅದರ ನಿಯಮಗಳನ್ನು ಹೊರಡಿಸಿತು.

ಕಾಯಿದೆಯ ಅಧಿಸೂಚನೆಯು ವಿಪಕ್ಷ ನಾಯಕರಿಂದ ಟೀಕೆಗೆ ಗುರಿಯಾಗಿದೆ. ಅಧಿಸೂಚಿತ ನಿಯಮಗಳು ಅಸಾಂವಿಧಾನಿಕ, ತಾರತಮ್ಯದ್ದು ಹಾಗೂ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ಪೌರತ್ವದ ತತ್ವಗಳ ಉಲ್ಲಂಘನೆಯಾಗಿದೆ ಎಂದು ವಿಪಕ್ಷಗಳು ಹೇಳಿವೆ.

ಸಿಎಎ ಪೌರತ್ವ ನೀಡುವುದರ ಕುರಿತು ಇದೆ ಹೊರತು ದೇಶದ ಯಾವುದೇ ನಾಗರಿಕರು ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಕೇಂದ್ರವು ಸಮರ್ಥಿಸಿಕೊಂಡಿದೆ. ಬಿಜೆಪಿ ನೇತೃತ್ವದ ಸರ್ಕಾರ ಈ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.

ಬಿಜೆಪಿ ಅಥವಾ ಪ್ರಧಾನಿ ಮೋದಿ ಹೇಳುವುದು ಕಲ್ಲಿನಲ್ಲಿ ಕೆತ್ತಿದಂತೆ. ಮೋದಿ ನೀಡಿದ ಪ್ರತಿಯೊಂದು ಭರವಸೆಯೂ ಈಡೇರಿದೆ” ಎಂದು ಅಮಿತ್‌ ಶಾ ಹೇಳಿದ್ದಾರೆ.