Sunday, 15th December 2024

ಲೋಕಸಭಾ ಕದನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

ತುಮಕೂರು: ಲೋಕಸಭಾ ಚುನಾವಣೆಯನ್ನು ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಸಲು ಎಲ್ಲಾ ರೀತಿಯ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗಾಗಿ ಅಂತರರಾಜ್ಯ ಗಡಿ 12, ಅಂತರ ಜಿಲ್ಲಾ ಗಡಿ 16 ಮತ್ತು ಜಿಲ್ಲೆಯೊಳಗೆ 16 ಸೇರಿದಂತೆ ಒಟ್ಟು 44 ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗಿದ್ದು, 50ಸಾವಿರಕ್ಕೂ ಹೆಚ್ಚು ನಗದು ಮತ್ತು 10ಸಾವಿರ ಮೇಲ್ಪಟ್ಟ ವಸ್ತುಗಳನ್ನು ಸಾಗಾಟ ಮಾಡುವಂತಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 22,77,996 ಮತದಾರರಿದ್ದು, ಈ ಪೈಕಿ 11,47,957 ಮಹಿಳಾ ಮತದಾರರು, 11,29,947 ಪುರುಷ ಮತದಾರರಿದ್ದು, 44429 ಯುವ ಮತದಾರರಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಾದ್ಯಂತ 2618 ಮತಗಟ್ಟೆಗಳಿದ್ದು, ಈ ಪೈಕಿ 414 ಕ್ರಿಟಿಕಲ್ ಮತಗಟ್ಟೆಗಳು, 55 ಮಹಿಳಾ ಮತಗಟ್ಟೆಗಳು, 11 ವಿಕಲಚೇತನ ಮತಗಟ್ಟೆಗಳು ಮತ್ತು 22 ಯುವ ಅಧಿಕಾರಿಗಳ ಮತಗಟ್ಟೆಗಳಿರುತ್ತವೆ ಎಂದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿ-ವಿಜಿಲ್ ಆಪ್‌ಅನ್ನು ಉಪಯೋಗಿಸುವ ಮೂಲಕ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ನೀಡಬಹುದು  ಮತ್ತು ಪ್ರತಿ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಸ್ವೀಪ್ ಚಟುವಟಿಕೆಯಡಿ ಈ ಬಾರಿ ಶೇ.65ಕ್ಕಿಂತ ಕಡಿಮೆಯಾಗಿರು ವಂತಹ ಮತಗಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಪ್ರತಿ ಮತಗಟ್ಟೆವಾರು ಸ್ವೀಪ್ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು. ಪ್ರತಿ ತಾಲ್ಲೂಕಿಗೆ 4-5 ಚುನಾವಣಾ ರಾಯಭಾರಿಗಳನ್ನು ಗುರುತಿಸಿ, ಮತದಾನದ ಮಹತ್ವ ಕುರಿತಂತೆ ಪ್ರಚಾರ ಕೈಗೊಳ್ಳಲಾಗುವುದು. ಈ ಬಾರಿ 44,429 ಯುವ ಮತದಾರರು ನೋಂದಣ ಯಾಗಿದ್ದು, ಅವರುಗಳು ಮತಗಟ್ಟೆಗೆ ಬಂದು ತಪ್ಪದೆ ಮತದಾನ ಮಾಡುವಂತೆ ಚಟುವಟಿಕೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಾತನಾಡಿ, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರವಾರು ಪೊಲೀಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಕೆಎಸ್‌ಆರ್‌ಪಿ, ಸಿಪಿಎಫ್ ತುಗಡಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.