Thursday, 21st November 2024

ದೇಶಸೇವೆ ಮಾಡಿ, ಮತ ಹಾಕಿ

ವಿದೇಶವಾಸಿ

dhyapaa@gmail.com

ಕೆಲವರಿಗೆ ಮತದಾನದ ದಿನ ಎಂಬುದು ಪಿಕ್‌ನಿಕ್‌ಗೆ ಹೋಗುವ ದಿನ. ಇತ್ತೀಚಿನ ಕೆಲವು ವರ್ಷಗಳಲ್ಲಿ, ನಗರದ ಹೊರವಲಯದ ಬಹುತೇಕ ರೆಸಾರ್ಟ್‌ಗಳು ಚುನಾವಣೆಯ ದಿನ ಭರ್ತಿಯಾಗಿದ್ದಿದೆ. ಅದರಲ್ಲೂ ಚುನಾವಣೆ ಶುಕ್ರವಾರವೋ, ಸೋಮವಾರವೋ ಬಂದರಂತೂ ಕೇಳುವುದೇ ಬೇಡ!

ಮತ್ತೆ ಚುನಾವಣೆ, ಮತ್ತೆ ಅದೇ ಘೋಷಣೆ…. ಅಲ್ಲ, ರಾಜಕೀಯ ಪಕ್ಷಗಳು ಅಥವಾ ರಾಜಕಾರಣಿಗಳು ಮಾಡುವ ಘೋಷಣೆಯ ಕುರಿತು ಹೇಳುತ್ತಿಲ್ಲ. ‘ಎಲ್ಲರೂ ಮತದಾನ ಮಾಡಿ’, ‘ಮತದಾನ ನಮ್ಮ ಹಕ್ಕು’, ವಗೈರೆ, ವಗೈರೆ. ಪ್ರತಿ ಮತದಾನದ ವೇಳೆಯೂ ಇದು ಇದ್ದದ್ದೇ. ಆದರೂ ನೂರಕ್ಕೆ ನೂರರಷ್ಟು ಮತದಾನ ಎಲ್ಲಿಯೂ ಆಗುವುದಿಲ್ಲ. ನೂರು ಬಿಡಿ, ೮೫, ೯೦ ಪ್ರತಿಶತ ಆದರೂ ಸಾಕು ಎನ್ನಬಹುದಿತ್ತು. ಕೆಲವು ಕಡೆಗಳಲ್ಲಿ ನೂರಕ್ಕೆ ಐವತ್ತರಷ್ಟೂ ಆಗುವುದಿಲ್ಲ. ಅದಕ್ಕೆ ನಮ್ಮ ಬೆಂಗಳೂರು ಉತ್ತಮ ಉದಾಹರಣೆ. ಸುಮಾರು ಅರವತ್ತೈದು ವರ್ಷ ವಯಸ್ಸಿನ ನನ್ನ ಪರಿಚಯದವರೊಬ್ಬರಿದ್ದಾರೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಅವರ ಉಮೇದು ಜೋರಾಗಿರುತ್ತದೆ.

ಈ ಬಾರಿ ಯಾರು ಆರಿಸಿಬರಬಹುದು, ಯಾವ ಪಕ್ಷ ಅಽಕಾರಕ್ಕೆ ಬರಬಹುದು, ಅವರು ಮಾಡಿದ್ದು ಸರಿಯಲ್ಲ, ಇವರು ಇದನ್ನು ಮೊದಲೇ ಮಾಡಬೇಕಿತ್ತು, ಇವರು ಹೀಗೆ ಮಾಡಿದರೆ ಹಾಗೆ ಆಗುತ್ತಿತ್ತು, ಅಬ್ಬಾ… ಅವರ ಬಳಿ ಚುನಾವಣೆ, ಪಕ್ಷ, ಅಭ್ಯರ್ಥಿಗಳ ಕುರಿತು ಸಾವಿರಾರು ಸಲಹೆಗಳಿವೆ, ಮಾತುಗಳಿವೆ. ಹಾಗಂತ ಬರೀ ಕಾಕುಪೋಕು ಮಾತಲ್ಲ, ಜೊಳ್ಳಿನ ಮಾತಲ್ಲ. ಬುದ್ಧಿ ಬಂದಾಗಿನಿಂದಲೂ ರಾಜ್ಯ ಮತ್ತು ದೇಶದ ರಾಜಕೀಯ ಇತಿಹಾಸವನ್ನು ಕಂಡದ್ದಷ್ಟೇ ಅಲ್ಲ, ನೆನಪಿನಲ್ಲೂ ಇಟ್ಟುಕೊಂಡವರು. ಅವರ ಬಳಿ ಚುನಾವಣೆಯ ಕುರಿತಾದ ಎಲ್ಲ ವಿಷಯಗಳೂ ಇವೆ. ಒಂದೇ ಒಂದು ಇಲ್ಲವಾದದ್ದು ಎಂದರೆ, ಮತ ಹಾಕಲು ಬೇಕಾದ ಗುರುತಿನ ಚೀಟಿ ಮಾತ್ರ!

ನಿಜ, ಅವರು ತಮ್ಮ ಇಡೀ ಜೀವನದಲ್ಲಿ ಒಮ್ಮೆ ಮಾತ್ರ ಮತ ಹಾಕಿದ್ದರಂತೆ. ಕಳೆದ ನಾಲ್ಕು ದಶಕದಿಂದಲೂ ಅವರು ಮತವನ್ನೇ ಹಾಕಲಿಲ್ಲ. ಅಲ್ಲ, ಮತ ಹಾಕಲು ಬೇಕಾದ ಗುರುತಿನ ಚೀಟಿಯನ್ನೇ ಮಾಡಿಸಲಿಲ್ಲ! ಇನ್ನು ಗುರುತಿನ ಚೀಟಿ ಇದ್ದವರೆಲ್ಲರೂ ಮತ ಚಲಾಯಿಸುತ್ತಾರೆಯೇ? ಕೆಲವರಿಗೆ ಮತದಾನದ ದಿನವೆಂದರೆ ರಜೆಯ ದಿನಕ್ಕಿಂತ ಹೆಚ್ಚೇನೂ ಅಲ್ಲ. ಕೆಲವರಿಗೆ ಮನೆಯಲ್ಲಿ ವರ್ಷದ ಹಿಂದೆಯೇ ಮಾಡಬೇಕೆಂದು ನಿರ್ಣಯಿಸಿ, ಮತದಾನದ ದಿನಕ್ಕೆ ಆ ಬಾಕಿ ಇದ್ದ ಕೆಲಸಕ್ಕೆ ಮುಹೂರ್ತ ನಿಗದಿ ಮಾಡಿಕೊಂಡು, ಅದರಲ್ಲಿಯೂ ಅರ್ಧ ದಿನ ಮಲಗಿ, ಉಳಿದ ಅರ್ಧ ದಿನ ಟಿವಿ ಮುಂದೆ ಕುಳಿತು, ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯಿತು ಎಂದು ನೋಡಿ, ಮಾಡಬೇಕು ಅಂದುಕೊಂಡಿದ್ದ ಕೆಲಸವನ್ನು ಸಾಯಂಕಾಲದ ವೇಳೆಗೆ ಆರಂಭಿಸಿ, ಕೊನೆಗೂ ಅದಕ್ಕೊಂದು ಗತಿ ಕಾಣಿಸದೆ, ಮುಂದಿನ ರಜಾದಿನದಲ್ಲಿ ಮಾಡಿದರಾಯಿತು ಎಂದು ತಮಗೆ ತಾವೇ ಸಮಜಾಯಿಷಿ ಹೇಳಿಕೊಂಡು ಕಳೆಯುವ
ದಿನ. ಇವರಿಗೂ, ಚುನಾವಣೆಯ ವೇಳೆ ಭರವಸೆ ನೀಡುವ ರಾಜಕಾರಣಿಗಳಿಗೂ ಏನು ವ್ಯತ್ಯಾಸ? ಇಂಥವರು ರಾಜಕಾರಣಿಗಳನ್ನು ಬೈಯಬಾರದು.

ತಾವು ಸ್ವತಃ ಮಾಡಬಹುದಾದ ಕೆಲಸವನ್ನೇ ಮಾಡಿ ಮುಗಿಸದವರು, ಲಕ್ಷಾಂತರ ಜನರ ಕೆಲಸವನ್ನು ಒಂದು ಅವಧಿಯಲ್ಲಿ ಒಬ್ಬ ರಾಜಕಾರಣಿಯಿಂದ
ನಿರೀಕ್ಷಿಸುವುದು ಸರಿಯೇ? ಹಾ, ನಿಮ್ಮ ಕ್ಷೇತ್ರದಿಂದ ಚುನಾಯಿತರಾದವರನ್ನು ಕೇಳಬಹುದು, ಅದು ನಿಮ್ಮ ಹಕ್ಕು. ಯಾವಾಗ? ಮತದ ಹಕ್ಕನ್ನು ಚಲಾಯಿಸಿದಾಗ ಮಾತ್ರ. ಅದು ಯಾವುದೇ ಪಕ್ಷಕ್ಕಿರಲಿ, ಯಾವುದೇ ಅಭ್ಯರ್ಥಿಗಿರಲಿ ಅಥವಾ ‘ನೋಟಾ’ ಆಯ್ಕೆಗೇ ಆಗಿರಲಿ, ಮತ ಹಾಕಿದವನಿಗೆ
ಕೇಳುವ ಹಕ್ಕಿರುತ್ತದೆಯೇ ವಿನಾ ಮತದಾನ ಮಾಡದಿದ್ದರೆ ಅಲ್ಲ. ಇಲ್ಲವಾದರೆ ಅದು ಬ್ಯಾಂಕಿನಲ್ಲಿ ಖಾತೆಯನ್ನೇ ತೆರೆಯದೆ, ಠೇವಣಿಯನ್ನೇ ಇಡದೆ, ಬಡ್ಡಿ ಕೊಡಿ ಎಂದು ಕೇಳಿದಂತೆ.

ಕೆಲವರಿಗೆ ಮತದಾನದ ದಿನ ಎಂಬುದು ಸಂಸಾರದೊಂದಿಗೆ ಪಿಕ್‌ನಿಕ್ ಹೋಗುವ ದಿನ. ಇತ್ತೀಚಿನ ಕೆಲವು ವರ್ಷಗಳನ್ನು ನೋಡಿದರೆ ನಿಮಗೇ ಅರ್ಥವಾಗುತ್ತದೆ. ನಗರದ ಹೊರಗಿರುವ ಬಹುತೇಕ ರೆಸಾರ್ಟ್‌ಗಳೂ ಚುನಾವಣೆಯ ದಿನ ಭರ್ತಿಯಾಗಿರುತ್ತವೆ. ಅದರಲ್ಲೂ ಚುನಾವಣೆ ಶುಕ್ರವಾರವೋ, ಸೋಮವಾರವೋ ಬಂದರಂತೂ ಕೇಳುವುದೇ ಬೇಡ. ಮುಂದೊಂದು ದಿನ ಕುದುರೆ ವ್ಯಾಪಾರ, ಕತ್ತೆ ವ್ಯಾಪಾರ ಅಥವಾ ಅದಕ್ಕೆ ಇತ್ತೀಚೆಗೆ ಹುಟ್ಟಿಕೊಂಡ ಪದ- ‘ಆಪರೇಷನ್’ ನಡೆಯುವ ಸಂದರ್ಭದಲ್ಲಿ ರಾಜಕಾರಣಿಗಳು ರೆಸಾರ್ಟ್‌ನಲ್ಲಿ ಉಳಿದರೆ, ಇದೇ ಜನ ಅವರನ್ನೋ, ಪಕ್ಷದವರನ್ನೋ ತೆಗಳುತ್ತಾರೆ.

ಅಂಥವರಿಗೆ ಚುನಾವಣೆಯ ದಿನ ತಾವು ಮತದಾನದ ಮಾಡದೇ, ರೆಸಾರ್ಟ್‌ನಲ್ಲಿ ಉಳಿದುಕೊಂಡದ್ದು ನೆನಪಾಗುವುದೇ ಇಲ್ಲ. ಇತ್ತೀಚೆಗೆ ಸಾಕಷ್ಟು ರೆಸಾರ್ಟ್‌ನವರೇ ಚುನಾವಣೆಯ ದಿನ ಮುಚ್ಚುತ್ತಿರುವುದು ಗಮನಾರ್ಹ ಸಂಗತಿ. ಅಂಥವರಿಗೆ ಒಂದು ಧನ್ಯವಾದ ಹೇಳಲೇಬೇಕು. ಇನ್ನು ಕೆಲವು ಸಾಮಾಜಿಕ ಜಾಲತಾಣದ ಹೀರೋಗಳನ್ನು ನೋಡಬೇಕು. ಬೆಳಗ್ಗೆ ಎದ್ದು ಮುಖ ತೊಳೆಯುವುದಕ್ಕೂ ಮುನ್ನ ಇವರ ಫೇಸ್ ಬುಕ್, ಟ್ವಿಟರ್ (ಎಕ್ಸ್), ಇನ್‌ಸ್ಟಾಗ್ರಾಂ ಚಟುವಟಿಕೆ ಆರಂಭವಾದರೆ, ರಾತ್ರಿ ಮಲಗುವಾಗ ಮೊಬೈಲ್ ತಾನಾಗಿಯೇ ಕೈಯಿಂದ ಜಾರಿ ಬೀಳುವವರೆಗೂ ಇವರ ಚುನಾವಣೆ ಸಂಬಂಽತ ಪೋಸ್ಟ್‌ಗಳು, ಎಲ್ಲಿಂದಲೋ ತಳ್ಳಲ್ಪಟ್ಟ ಸಂದೇಶಗಳು, ಮತ ಹಾಕುವಂತೆ ಬೇರೆಯವರನ್ನು ಪ್ರೇರೇಪಿಸುವ ಲೇಖನಗಳು, ಇತ್ಯಾದಿಗಳನ್ನು ಮುಂದೂಡುತ್ತಿ ರುತ್ತಾರೆಯೇ ವಿನಾ ತಾವು ಮತ ಹಾಕಲು ಹೋಗುವುದಿಲ್ಲ. ಅದೇ ತಾವು ಮಾಡುವ ದೊಡ್ಡ ಸೇವೆ ಎಂಬ ಭ್ರಮೆಯಲ್ಲಿರುತ್ತಾರೆ.

ನನ್ನ ಇನ್ನೊಬ್ಬ ಸ್ನೇಹಿತರಿದ್ದಾರೆ. ಸದೃಢ ಕಾಯದ ಆಳು. ಅವರಿಗೆ ಮತ ಹಾಕಲು ಸಾಲಿನಲ್ಲಿ ನಿಲ್ಲುವುದು ಬೇಸರವಂತೆ. ಆನ್‌ಲೈನ್‌ನಲ್ಲಿ ಮತ ಹಾಕುವ ವ್ಯವಸ್ಥೆ ಬರಬೇಕು. ಮತ ಹಾಕುವುದು ನಮ್ಮ ಹಕ್ಕು. ಆದರೆ ಅದಕ್ಕಾಗಿ ನಾವು ಬಿಸಿಲಿನಲ್ಲೋ, ಮಳೆಯಲ್ಲೋ ಯಾಕೆ ನಿಲ್ಲಬೇಕು? ಎನ್ನುವುದು
ಅವರ ವಾದ. ಪ್ರತಿಯೊಂದರ ಕುರಿತೂ ಆನ್‌ಲೈನ್ ಪರ ವಕಾಲತ್ತು. ಬೇಡ ಎನ್ನುವುದಿಲ್ಲ. ಆದರೆ ಆ ವ್ಯವಸ್ಥೆಯೇ ಇಲ್ಲದಿದ್ದರೆ ಏನು ಮಾಡೋಣ? ಅವರು ಒಂದು ದಿನ ಸಿನಿಮಾ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ‘ಇದೇನು ಇಲ್ಲಿ ನಿಂತಿದ್ದೀರಿ? ಆನ್‌ಲೈನ್‌ನಲ್ಲೇ ಬುಕ್ ಮಾಡಬಹುದಿತ್ತಲ್ಲ’
ಎಂದೆ. ‘ಮಾಡಬಹುದಿತ್ತು, ಆದರೆ ಅದಕ್ಕೆ ಐದು ರುಪಾಯಿ ಹೆಚ್ಚು ಕೊಡಬೇಕು’ ಎಂದರು.

ಐದು ರುಪಾಯಿ ಉಳಿಸಲು ಸಾಲಿನಲ್ಲಿ ನಿಲ್ಲುವವರಿಗೆ ಐದು ವರ್ಷ ದೇಶವನ್ನೋ, ರಾಜ್ಯವನ್ನೋ ನಡೆಸುವವರನ್ನು ಆರಿಸಲು ಸಾಲಿನಲ್ಲಿ ನಿಲ್ಲುವುದು ಕಷ್ಟ ಎಂದಾದರೆ, ಅಂಥ ದೇಶವನ್ನು ದೇವರೇ ಕಾಪಾಡಬೇಕು! ವಯಸ್ಸಾದವರು, ಆರೋಗ್ಯ ಸರಿ ಇಲ್ಲದವರನ್ನು ಬಿಡೋಣ, ಗಟ್ಟಿಮುಟ್ಟಾಗಿದ್ದು, ಉದ್ದುದ್ದ ಸಿಗಿದರೆ ನಾಲ್ಕು ಆಳಾಗುವವರಿಗೂ ಮತ ಹಾಕುವುದಕ್ಕಾಗಿ ಪ್ರಯಾಣ ಮಾಡುವುದಾಗಲಿ, ಸಾಲಿನಲ್ಲಿ ನಿಲ್ಲುವುದಾಗಲಿ ಕಷ್ಟ ಎಂದರೆ ಏನು
ಹೇಳೋಣ? ದೇವರ ದರ್ಶನಕ್ಕೆ, ಪ್ರಸಾದಕ್ಕೆ, ಸಿನಿಮಾ, ಬಸ್, ರೇಲ್ವೆ ಟಿಕೆಟ್‌ಗೆ, ಆಟೋಕ್ಕೆ, ಟ್ಯಾಕ್ಸಿಗೆ, ವಿಮಾನ ಯಾನದ ಬೋರ್ಡಿಂಗ್ ಪಾಸ್ ಗೆ ಕಿಂಚಿತ್ತೂ ಬೇಸರವಿಲ್ಲದೆ ಕಾಯುವ, ಸರದಿಯಲ್ಲಿ ನಿಲ್ಲುವವರಿಗೆ ಮತ ಹಾಕುವಾಗ ಮಾತ್ರ ಸುಸ್ತು, ನಾಚಿಕೆ ಯಾಕೆ?ಇನ್ನೂ ಒಂದು ಆತಂಕಕಾರಿ ವರ್ಗದ ಜನರಿದ್ದಾರೆ.

‘ನನ್ನೊಬ್ಬನ ಮತದಿಂದ ಏನಾಗುತ್ತದೆ? ನನಗೆ ಈ ಸರಕಾರದಿಂದ ಏನೂ ಬೇಡ, ನಾನು ರಾಜಕೀಯದಿಂದ ದೂರ…’ ಎನ್ನುವವರು. ಅವರು ರಾಜಕೀಯ ದಿಂದ ದೂರವಿರಬಹುದು, ಆದರೆ ರಾಜಕೀಯ ಅವರಿಂದ ದೂರವಿಲ್ಲ. ನಮ್ಮ ಜೀವನದಲ್ಲಿ ಪ್ರತಿನಿತ್ಯ, ಪ್ರತಿ ಕ್ಷಣ ರಾಜಕೀಯದ ಪ್ರಭಾವ ಇದ್ದೇ ಇರುತ್ತದೆ. ಮನೆಯ ಮುಂದಿನ ಗುಂಡಿ ಬಿದ್ದ ರಸ್ತೆ, ಬೀದಿ ದೀಪ, ನಲ್ಲಿ ನೀರು, ವಿದ್ಯುತ್ತು, ಮಕ್ಕಳು ಓದುವ ಪಠ್ಯಕ್ರಮ, ಓಡಾಡಲು ಬಳಸುವ ಪೆಟ್ರೋಲ್, ಉಣ್ಣಲು ಬೇಕಾದ ಅಕ್ಕಿ, ಬೇಳೆ, ತರಕಾರಿ, ತೊಡುವ ಬಟ್ಟೆ, ಔಷಧಿ, ಎಲ್ಲದರಲ್ಲೂ ಸರಕಾರದ ಒಳಗೊಳ್ಳುವಿಕೆ, ಪ್ರಭಾವ ಇದ್ದೇ ಇರುತ್ತದೆ.

ಸರಕಾರದ ನೀತಿ ನಮ್ಮ ಜೀವನದ ಅವಿಭಾಜ್ಯ ಅಂಗ. ಇನ್ನು, ‘ನಾನೊಬ್ಬ ವೋಟು ಹಾಕದಿದ್ದರೆ ಏನಾಗುತ್ತದೆ?’ ಎನ್ನುವವರಿಗಾಗಿ ಒಂದು ಕತೆಯಿದೆ. ಒಬ್ಬ ರಾಜ ತನ್ನ ಪ್ರಜೆಗಳ ಪ್ರಾಮಾಣಿಕತೆ ಪರೀಕ್ಷಿಸಲು ಒಂದು ಉಪಾಯ ಮಾಡಿದ. ಅರಮನೆಯ ಮುಂದೆ ಒಂದು ಕೊಪ್ಪರಿಗೆ ಇಟ್ಟು, ಹಸು ಸಾಕಿದವರೆಲ್ಲ ಒಂದು ಸೇರು ಹಾಲನ್ನು ಆ ಕೊಪ್ಪರಿಗೆಯಲ್ಲಿ ಹಾಕಬೇಕು ಎಂದು -ರ್ಮಾನು ಹೊರಡಿಸಿದ. ಅಂದು ಸಾಯಂಕಾಲ ಕೊಪ್ಪರಿಗೆ
ತೆರೆದು ನೋಡಿದಾಗ ರಾಜನಿಗೆ ಆಶ್ಚರ್ಯ ಕಾದಿತ್ತು. ಕೊಪ್ಪರಿಗೆಯ ತುಂಬಾ ಬರೀ ನೀರು ತುಂಬಿತ್ತು. ಎಲ್ಲರೂ ಹಾಲು ಹಾಕುತ್ತಿದ್ದಾರೆ, ತಾನೊಬ್ಬ ನೀರು ಹಾಕಿದರೆ ಗೊತ್ತಾಗುವುದಿಲ್ಲ ಅಂದುಕೊಂಡು ಎಲ್ಲರೂ ಕೊಪ್ಪರಿಗೆಯಲ್ಲಿ ಹಾಲಿನ ಬದಲು ನೀರು ತಂದು ಸುರಿದಿದ್ದರು.

ಹಸು ಸಾಕಿದವರಿಗೆಲ್ಲ ರಾಜ ದಂಡ ವಿಧಿಸಿದ, ಅವರೆಲ್ಲ ದಂಡ ತೆತ್ತರು. ಇದು ಕತೆ. ಅಲ್ಲೇನೋ ಹಸು ಸಾಕಿದವರಿಗೆ ಮಾತ್ರ ದಂಡ, ಇಲ್ಲಿ ಮತ ಹಾಕ ದಿದ್ದರೆ ಎಲ್ಲರಿಗೂ ದಂಡ, ಎಲ್ಲವೂ ದಂಡ. ಸರಕಾರ ಪ್ರತಿಯೊಬ್ಬ ಮತದಾರನ ಮೇಲೆ ಮತದಾನಕ್ಕೆಂದೇ ಸುಮಾರು ಐವತ್ತು ರುಪಾಯಿ ಖರ್ಚು ಮಾಡುತ್ತದೆ. ಈಗ ನೂರಕ್ಕೆ ಅರವತ್ತು- ಅರವತ್ತೈದರಷ್ಟು ಮತದಾನವಾಯಿತೆಂ ದಿಟ್ಟುಕೊಳ್ಳೋಣ. ಅದರಲ್ಲಿ ನೋಟಾ, ಮಾನ್ಯತೆ ಇಲ್ಲದ ಮತಗಳ ಸಂಖ್ಯೆಯನ್ನು ಪರಿಗಣಿಸದೇ ಇದ್ದರೂ, ಅಧಿಕಾರಕ್ಕೆ ಬಂದ ಪಕ್ಷ ನೂರಕ್ಕೆ ಐವತ್ತು ಪ್ರತಿಶತ ಮತ ಪಡೆದರೂ ಒಟ್ಟೂ ಮತಗಳಿಕೆಯಲ್ಲಿ ಮೂವತ್ತೈದ ಕ್ಕಿಂತ ಕಡಿಮೆಯಾಯಿತಲ್ಲ? ಪ್ರಾಥಮಿಕ ಶಿಕ್ಷಣದ ಕಲಿಕೆಯಲ್ಲೂ ಉತ್ತೀರ್ಣರಾಗಲು ಶೇ.ಮೂವತ್ತೈದು ಅಂಕ ಬೇಕು. ಹಾಗಾದರೆ, ಸರಕಾರದ ನೀತಿ-ನಿಯಮಗಳನ್ನು ನಿರ್ಮಿಸುವವರಿಗೆ ನಾವು ಕೊಡುವುದು ಅದಕ್ಕಿಂತ ಕಡಿಮೆಯೇ? ಹಾಗೆ ಚುನಾಯಿತವಾದ ಸರಕಾರ ಎಷ್ಟು ಘನಂದಾರಿ ಕೆಲಸ ಮಾಡೀತು? ಇದಕ್ಕೆ ಏನಾದರೂ ಒಂದು ಕಟ್ಟುನಿಟ್ಟಿನ ನಿಯಮ ತಯಾರಾಗಬೇಕು. ಮತದಾನ ಮಾಡಿದವನಿಗೂ, ಮಾಡದವನಿಗೂ ಒಂದೇ ರೀತಿಯ ಸೌಲಭ್ಯ ಏಕೆ? ಮತದಾನ ಮಾಡದವರ ರೇಷನ್ ಕಾರ್ಡನ್ನೋ, ಆಧಾರ್ ಕಾರ್ಡನ್ನೋ, ಡ್ರೈವಿಂಗ್ ಲೈಸೆನ್ಸನ್ನೋ ಯಾಕೆ ರದ್ಧುಗೊಳಿಸಬಾರದು? ವೋಟರ್ ಐಡಿಯನ್ನು ಆಧಾರ್ ಕಾರ್ಡ್‌ನೊಂದಿದೆ ಲಿಂಕ್ ಮಾಡಿ, ಅವರಿಗೆ ಸಿಗುವ ಸಬ್ಸಿಡಿಯನ್ನು ಯಾಕೆ ಕಡಿತಗೊಳಿಸ ಬಾರದು? ಸಂಬಳ, ಬಡ್ತಿ ಯಲ್ಲಿ ಯಾಕೆ ಕಡಿತಗೊಳಿಸಬಾರದು? ಸರಕಾರದ ಸೌಲಭ್ಯಗಳು ಎಲ್ಲರಿಗೂ ಒಂದೇ ರೀತಿ ಇರಲಿ, ಆದರೆ ಸರಕಾರ ನಿರ್ಮಿಸುವ ಕಾರ್ಯದಲ್ಲಿ ಮತ ಹಾಕಿದವನಿಗೂ, ಗುಲಗುಂಜಿಯಷ್ಟೂ ಕಾಳಜಿ ತೋರದವನಿಗೂ ಒಂದೇ ತಕ್ಕಡಿ ಏಕೆ? ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ ಸೇರಿದಂತೆ ಪ್ರಪಂಚದ ಸುಮಾರು ಹತ್ತು ದೇಶಗಳಲ್ಲಿ ಮತದಾನ ಕಡ್ಡಾಯ.

ಭಾರತದಲ್ಲಿಯೂ ಮತದಾನವನ್ನು ಯಾಕೆ ಕಡ್ಡಾಯ ಮಾಡಬಾರದು? ಅಷ್ಟಕ್ಕೂ ಮತದಾನ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅದು ನಮ್ಮ ಹಕ್ಕು, ಕರ್ತವ್ಯ. ಹಕ್ಕು ಚಲಾಯಿಸಿದರೆ ಅಥವಾ ಕರ್ತವ್ಯ ನಿರ್ವಹಿಸಿದರೆ ಅದು ದಾನವಾಗುವುದಿಲ್ಲ. ಇರಲಿ, ಅದನ್ನು ದಾನ ಎಂದೇ ಒಪ್ಪಿಕೊಳ್ಳೋಣ. ಅನ್ನದಾನ ಮಾಡಿದರೆ ಅದು ಒಂದು ಹೊತ್ತಿಗೆ, ರಕ್ತದಾನ ಮಾಡಿದರೆ ಅದು ಒಂದು ವ್ಯಕ್ತಿಗೆ, ಕೆರೆ ಕಟ್ಟೆಗಳನ್ನು ಕಟ್ಟಿಸಿಕೊಟ್ಟರೆ ಅದು ಒಂದು ಊರಿಗೆ. ಆದರೆ, ಮತದಾನ ಮಾಡಿದರೆ ಅದು ಇಡೀ ದೇಶದ ಭವಿಷ್ಯಕ್ಕೆ…! ಮತ ಹಾಕೋಣ, ಹಾಕದಿದ್ದವರನ್ನು ಬಡಿದು ಎಬ್ಬಿಸೋಣ.