ಬೆಂಗಳೂರು: ಬೆಂಗಳೂರು ಜಿಲ್ಲೆಯಾದ್ಯಂತ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಭಾರತೀಯ ಶಸ್ತ್ರ ಪರವಾನಗಿ ಕಾಯ್ದೆ 1959ರ ಕಲಂ, ಕಲಂ (21) ಮತ್ತು ಕಲಂ 24-ಎ(1) ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸುತ್ತಾ, ಜಿಲ್ಲೆಯಾದ್ಯಂತ ಹೊಂದಿರುವ ಶಸ್ತ್ರ ಪರವಾನಗಿದಾರರು ತಮ್ಮ ಶಸ್ತ್ರಗಳನ್ನು (ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಹಾಗೂ ರಿಸರ್ವ್ ಬ್ಯಾಂಕ್ ಅವರಿಂದ ಅನುಮೋದಿಸಿದ ಷೆಡ್ಯೂಲ್ ಬ್ಯಾಂಕ್ ಗಳ ಸೆಕ್ಯೂರಿಟಿ ಗಾರ್ಡ್ ಗಳ ಶಸ್ತ್ರಗಳನ್ನು ಹೊರತುಪಡಿಸಿ) ತಕ್ಷಣ ದಿಂದಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದಿನಾಂಕ 13-06-2024ರ ವರಗೆ ಠೇವಣಿ ಮಾಡಲು ಆದೇಶಿಸಿದೆ.
ಆದರಂತೆ ಭಾರತೀಯ ದಂಡ ಸಂಹಿತೆ 1973ರ ಕಲಂ 144 ರಡಿ ಯಾವುದೇ ಶಸ್ತ್ರ ಪರವಾನಗಿದಾರರು ತಮ್ಮ ಶಸ್ತ್ರವನ್ನು (ಆಯುಧಗಳನ್ನು) ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಗಳನ್ನು ಹೊತ್ತೊಯ್ಯುವುದನ್ನು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೆ.ಎ.ದಯಾನಂದ ರವರು ಆದೇಶಿಸಿದ್ದಾರೆ.
ಸಾರ್ವಜನಿಕರು ಪಡೆದ “ಪರವಾನಗಿ ಪಡೆದ ಶಸ್ತ್ರಾಸ್ತ್ರಗಳ ಠೇವಣಿ” ಯಿಂದ ವಿನಾಯಿತಿ ಪಡೆಯಲು ಬಯಸುವವರು ದಿನಾಂಕ 23-03-2024ರೊಳಗಾಗಿ ತಮ್ಮ ಮನವಿಗಳನ್ನು ಈ ಕಛೇರಿಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು “ಸ್ಕ್ರೀನಿಂಗ್ ಕಮಿಟಿ” ಯಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಕಮಿಟಿಯ ನಿರ್ಣಯವು ಅಂತಿಮವಾಗಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.