Sunday, 15th December 2024

ಷೇರು ಮಾರುಕಟ್ಟೆಯತ್ತ ಒಂದು ನೋಟ

ಅರ್ಥಖಾತೆ

ಗೋಪಾಲಕೃಷ್ಣ ಭಟ್ ಬಿ.

ಸರಿಯಾದ ಷೇರುಗಳನ್ನು ಆಯ್ಕೆ ಮಾಡುವುದು ಅಥವಾ ಹೂಡಿಕೆಗಳನ್ನು ಯೋಜಿಸುವುದು ಬಹುಮುಖ್ಯ. ಷೇರುಗಳು ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುವುದರಿಂದ, ಆರಂಭಿಕರು ಹೂಡಿಕೆ ಮಾಡುವಾಗ ತಮ್ಮ ಉಳಿತಾಯದ ಒಂದು ನಿಶ್ಚಿತ ಮೊತ್ತವನ್ನು ಕನಿಷ್ಠ ಬಂಡವಾಳವಾಗಿ ಹೂಡಬೇಕು.

ಷೇರು ಮಾರುಕಟ್ಟೆಯು, ವಿನಿಮಯ ಕೇಂದ್ರಗಳು, ಕಂಪನಿಗಳು ಮತ್ತು ಹೂಡಿಕೆದಾರರಿಗೆ ಈಕ್ವಿಟಿಗಳು, ಉತ್ಪನ್ನಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳಂಥ ವಿವಿಧ ಸೆಕ್ಯುರಿಟಿಗಳನ್ನು ಪಟ್ಟಿ ಮಾಡಲು, ಖರೀದಿಸಲು ಅಥವಾ ಮಾರಾಟ ಮಾಡಲು ಇರುವ ಒಂದು ವೇದಿಕೆಯಾಗಿದೆ. ಸಾಮಾನ್ಯ ವಾಗಿ, ಇದು ಔಪಚಾರಿಕ ಅಥವಾ ಪ್ರತ್ಯಕ್ಷವಾದ ವಿವಿಧ ಷೇರು ವಿನಿಮಯ ಕೇಂದ್ರಗಳನ್ನು ಒಳಗೊಂಡಿರುತ್ತದೆ (ಒ ಟಿ ಸಿ). ಇದು ಹಣಕಾಸಿನ ಉಪಕರಣ ಗಳ ಪಟ್ಟಿಯೊಂದಿಗೆ ಅಂಥ ವಹಿವಾಟುಗಳನ್ನು ಸುಗಮಗೊಳಿಸುತ್ತದೆ.

ಷೇರು ಮಾರುಕಟ್ಟೆ ಕಾರ್ಯಗಳನ್ನು ಪ್ರಾಥಮಿಕವಾಗಿ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಲ್ಲದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಂಥ (ಆರ್ ಬಿಐ) ಸಂಸ್ಥೆಗಳು ನಿರ್ವಹಿಸುತ್ತವೆ ಮತ್ತು ಮೇಲ್ವಿಚಾರಣೆ ಮಾಡುತ್ತವೆ. ಷೇರುಗಳು ಅಂತರ್ಗತ ಅಪಾಯಗಳನ್ನು ಹೊಂದಿರುವ ಕಾರಣ, ಮಾರುಕಟ್ಟೆ ನಿಯಂತ್ರಣದ ಅಗತ್ಯವಿದೆ. ಸೆಬಿಗೆ ಈ ಅಧಿಕಾರವನ್ನು ಒದಗಿಸಲಾಗಿದೆ. ಇದರ ಮೂಲ ಉದ್ದೇಶಗಳಲ್ಲಿ ಆಸಕ್ತಿ ದಾರರ ಹೂಡಿಕೆಯನ್ನು ರಕ್ಷಿಸುವುದು, ಷೇರು ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಅದರ ಕೆಲಸವನ್ನು ನಿಯಂತ್ರಿಸುವುದು ಸೇರಿದೆ.

ಷೇರುಗಳಲ್ಲಿ ಟ್ರೇಡಿಂಗ್/ಹೂಡಿಕೆ ಮಾಡಲು ೨ ರೀತಿಯ ಷೇರು ಮಾರುಕಟ್ಟೆಗಳಿವೆ. ಅವು ಪ್ರಾಥಮಿಕ ಮತ್ತು ದ್ವಿತೀಯಕ ಮಾರುಕಟ್ಟೆಗಳು. ಪ್ರಾಥಮಿಕ ಮಾರುಕಟ್ಟೆಯಲ್ಲಿ ಹೂಡಿಕೆಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ನಡೆಯುತ್ತವೆ. ಇಲ್ಲಿ ಬೇಡಿಕೆ ಮತ್ತು ಲಭ್ಯತೆ ಆಧಾರದ
ಮೇಲೆ ಷೇರುಗಳನ್ನು ಹಂಚಲಾಗುತ್ತದೆ. ಐಪಿಒ ನಲ್ಲಿ ಹೂಡಿಕೆ ಮಾಡಲು ಮತ್ತು ಸೆಕೆಂಡರಿ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ಷೇರುಗಳು
ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು. ಹೆಚ್ಚುವರಿಯಾಗಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಹಾಯ ಮಾಡುವ ವ್ಯಾಪಾರ ಖಾತೆಯೂ ಮುಖ್ಯವಾಗಿದೆ. ಇವುಗಳನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಕೊಳ್ಳಬೇಕು. ಐಪಿಒ ಮೂಲಕ, ಖಾಸಗಿ ಅಸ್ತಿತ್ವ ಹೊಂದಿರುವ ಕಂಪನಿಯು ಮೊದಲ ಬಾರಿಗೆ ಷೇರುಗಳನ್ನು ನೀಡಿ ಸಾರ್ವಜನಿಕವಾಗಿ ಟ್ರೇಡಿಂಗ್ ಮಾಡಿದ ಕಂಪನಿಯಾಗುತ್ತದೆ.

ಐಪಿಒ ಮೂಲಕ ಕಂಪನಿಯ ಹೆಸರು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲ್ಪಡುತ್ತದೆ. ಸಂದೇಹವಾದಿಯಾಗಿರುವುದು ಷೇರು ಮಾರುಕಟ್ಟೆಯಲ್ಲಿರುವ ಸಕಾರಾತ್ಮಕ ದೃಷ್ಟಿಕೋನವಾಗಿದೆ. ಸಾಮಾನ್ಯವಾಗಿ ಯಶಸ್ಸಿನ ಸಾಮರ್ಥ್ಯ ಹೊಂದಿರುವ ಐಪಿಒ ಅನ್ನು ದೊಡ್ಡ ಬ್ರೋಕರೇಜ್‌ಗಳು ಬೆಂಬಲಿಸುತ್ತವೆ. ಇಲ್ಲಿ ಹೂಡಿಕೆ ಮಾಡುವಾಗ ಅನೇಕ ಅಂಶಗಳನ್ನು, ತಜ್ಞರ ವರದಿಯನ್ನು ಪರಿಶೀಲಿಸಬೇಕು. ಸರಿಯಾದ ಐಪಿಒ ಆಫರ್ ಅನ್ನು ಆಯ್ಕೆ ಮಾಡಿದರೆ, ಅದು ಹೂಡಿಕೆದಾರರ ಯಶಸ್ಸಿಗೂ ಮೀರಿ ಪೋರ್ಟ್ ಪೋಲಿಯೊದಲ್ಲಿ ಅತ್ಯಂತ ಪ್ರಮುಖ ಆಸ್ತಿಯಾಗಬಹುದು.

ಸ್ಟಾಕ್ ಟ್ರೇಡಿಂಗ್ ಅಂದುಕೊಂಡಷ್ಟು ಕಷ್ಟವೇನಲ್ಲ. ಇಂದಿನ ಟೆಕ್ ಯುಗದಲ್ಲಿ ಬರೋಡ ಥ್ರೀ ಇನ್ ಒನ್ ಡಿಮ್ಯಾಟ್ ಮತ್ತು ಟ್ರೇಡಿಂಗ್, ಇನ್ನಿತರ
ಬ್ಯಾಂಕ್ ಟ್ರೇಡಿಂಗ್ ಪ್ಲಾಟ್ ಫಾರ್ಮ್‌ಗಳು, ಜೀರೋದ ಕೈಟ್, ಅಪ್ ಸ್ಟಾಕ್ಸ್, ಏಂಜಲ್ ಒನ್ ಇತ್ಯಾದಿ ಖಾಸಗಿ ಷೇರು ದಲ್ಲಾಳಿಗಳು/ ವೇದಿಕೆಗಳು ಸೇವೆ ಯಲ್ಲಿವೆ. ಇವುಗಳು ಸುರಕ್ಷಿತ ಏಕೆಂದರೆ ಗ್ರಾಹಕರ/ಷೇರುದಾರರ ಡಿಮ್ಯಾಟ್ ಖಾತೆ ಸೆಂಟ್ರಲ್ ಡೆಪಾಸಿಟಿರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (ಸಿಡಿಎಸ್‌ಲ್) ಇಲ್ಲವೇ ನ್ಯಾಷನಲ್ ಸೆಕ್ಯೂರಿಟಿಸ್ ಡೆಪಾಸಿಟಿರಿ ಲಿಮಿಟೆಡ್ ನಲ್ಲಿ ಠೇವಣಿಯಾಗಿರುತ್ತದೆ. ಇವೆರಡೂ ಸೆಬಿ ನೋಂದಾಯಿತ ರಾಷ್ಟೀಯ ಷೇರು ಠೇವಣಿ ಗಳಾಗಿವೆ. ರಾಷ್ಟೀಯ ಷೇರು ಮಾರುಕಟ್ಟೆ (ಎನ್ ಎಸ್‌ಸಿ) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿ ಎಸ್‌ಇ) ಇವು, ಭಾರತದ ಪ್ರಮುಖ ಎಕ್ಸ್‌ಚೇಂಜ್ ಗಳ ಠೇವಣಿದಾರರನ್ನು ಪ್ರತಿನಿಧಿಸುತ್ತವೆ.

ಭಾರತದಲ್ಲಿ ಹೆಚ್ಚಿನ ಟ್ರೇಡಿಂಗ್ ಅನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ರಾಷ್ಟ್ರೀಯ ಸ್ಟಾಕ್ ಎಕ್ ಚೇಂಜ್‌ನಲ್ಲಿ ಮಾಡಲಾಗುತ್ತದೆ. ಈ ಎರಡೂ
ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಅನ್ನು ಆನ್ ಲೈನ್ ಇಲೆಕ್ಟ್ರಾನಿಕ್ ಲಿಮಿಟ್ ಆದೇಶ ಪುಸ್ತಕದ ಮೂಲಕ ನಡೆಸಲಾಗುತ್ತದೆ. ಹೂಡಿಕೆ ಮಾಡುವ
ಮೊದಲು ಈ ಮುಂದಿನ ಅಂಶಗಳನ್ನು ನೆನಪಿನಲ್ಲಿಡಬೇಕು: ಮೊದಲನೆಯದಾಗಿ, ನಮ್ಮ ಬಂಡವಾಳ ಉತ್ತಮ ಮತ್ತು ಆರೋಗ್ಯಕರವಾಗಿರಲು
ಪೋರ್ಟ್ ಪೋಲಿಯೋವನ್ನು ವೈವಿಧ್ಯಗೊಳಿಸಬೇಕು. ಉದಾಹರಣೆಗೆ ಈಕ್ವಿಟಿಯನ್ನು, ಬಾಂಡುಗಳು ಅಥವಾ ಇತರ ಸಾಲದ ಉಪಕರಣಗಳಲ್ಲಿನ ಹೂಡಿಕೆಗಳೊಂದಿಗೆ ಹೆಚ್ಚಾಗಿ ಸರಿದೂಗಿಸಲಾಗುತ್ತಿದೆ. ಪೋರ್ಟ್ ಪೋಲಿಯೋದಲ್ಲಿನ ಈ ಸಮತೋಲನವು ಮಾರುಕಟ್ಟೆಯ ಬಿಕ್ಕಟ್ಟಿನ ಅವಧಿಯ ವಿರುದ್ಧ ಒಂದನ್ನು ಸುರಕ್ಷಿತಗೊಳಿಸಬಹುದು. ಸರಿಯಾದ ಷೇರುಗಳನ್ನು ಆಯ್ಕೆ ಮಾಡುವುದು ಅಥವಾ ಹೂಡಿಕೆಗಳನ್ನು ಯೋಜಿಸುವುದು ಬಹುಮುಖ್ಯ.

ಷೇರುಗಳು ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುವುದರಿಂದ, ಆರಂಭಿಕರು ಹೂಡಿಕೆ ಮಾಡುವಾಗ ಅವರ ಉಳಿತಾಯದ ಒಂದು ನಿಶ್ಚಿತವಾದ ಕನಿಷ್ಠ ಬಂಡವಾಳ ಮಾಡಬೇಕು. ಎಲ್ಲಾ ಉಳಿತಾಯಗಳನ್ನು ಷೇರುಗಳಲ್ಲಿ ಬಂಡವಾಳ ಹೂಡಿ, ಷೇರುಗಳ ಬೆಲೆ ಇಳಿಮುಖವಾದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ
ಅಥವಾ ನಷ್ಟಕ್ಕೆ/ದಿವಾಳಿಗೆ ಒಳಗಾಗುವ ಸಂದರ್ಭ ಬರಬಹುದು. ಅದಕ್ಕಾಗಿ ನಾವು ಹೂಡುವ ಬಂಡವಾಳವನ್ನು ವೈವಿಧ್ಯಮಯಗೊಳಿಸಲು ಬ್ಲೂ ಚಿಪ್ ಕಂಪನಿ ಗಳಲ್ಲಿ ಹೂಡಿಕೆ ಮಾಡಬೇಕು. ದೀರ್ಘಾವಧಿಯಲ್ಲಿ, ಉದಾಹರಣೆಗೆ ಕನಿಷ್ಠ ಐದು ವರ್ಷಗಳಿಗಿಂತಲೂ ಅಧಿಕವಾಗಿದ್ದಲ್ಲಿ, ಸ್ಥಿರವಾದ
ಆದಾಯವನ್ನು ಈ ಷೇರುಗಳು ನೀಡಬಲ್ಲವು.

ಏಕೆಂದರೆ ಈ ಕಂಪನಿಗಳು ಷೇರುದಾರರಿಗೆ ಹೆಚ್ಚಿನ ಲಾಭವನ್ನು ಡಿವಿಡೆಂಡ್ ರೂಪದಲ್ಲಿ ನೀಡುತ್ತವೆ, ಕೆಲವೊಮ್ಮೆ ಷೇರುದಾರರಿಗೆ ಬೋನಸ್ ಷೇರು ಗಳನ್ನು ಮತ್ತು ರೈಟ್ಸ್ ಷೇರುಗಳನ್ನು ನೀಡುತ್ತವೆ. ಕಂಪನಿಗಳು ಮರು ಖರೀದಿ ಆಯ್ಕೆಗಳನ್ನೂ ಷೇರುದಾರರಿಗೆ ಕೊಡುತ್ತವೆ. ಬ್ಲೂ ಚಿಪ್ ಕಂಪನಿ ಗಳ ಬ್ರಾಂಡ್ ಮೌಲ್ಯ ಅತ್ಯುತ್ತಮವಾಗಿರುತ್ತದೆ. ಈ ಕಂಪನಿಗಳು ತಮ್ಮ ಉದ್ಯಮಗಳಲ್ಲಿ ಮಾರುಕಟ್ಟೆ ನಾಯಕರಾಗಿರುತ್ತವೆ. ಈ ಸ್ಟಾಕುಗಳು ಉತ್ತಮ ಆರ್ಥಿಕ ಕ್ಷಮತೆಯ ಸುದೀರ್ಘ ಇತಿಹಾಸವನ್ನು ಹೊಂದಿರುವ, ಅತ್ಯಂತ ದೊಡ್ಡ ಮತ್ತು ಹೆಚ್ಚಾಗಿ ಗುರುತಿಸಲ್ಪಟ್ಟ ಕಂಪನಿಯ ಷೇರುಗಳಾಗಿವೆ. ಈ ಕಂಪನಿಯ ಷೇರುಗಳನ್ನು ಸುಲಭವಾಗಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ಕಂಪನಿಗಳ ಮೇಲೆ ವೈವಿಧ್ಯೀಕರಣ, ಆರ್ಥಿಕ ಹಿಂಜರಿತ/ಕುಸಿತ ಮತ್ತು ನಿಶ್ಚಲತೆಯ ಪರಿಣಾಮ ಕಡಿಮೆ. ಇವುಗಳ ಬಲವಾದ ಬ್ಯಾಲೆನ್ಸ್ ಶೀಟುಗಳು, ಸ್ಥಿರವಾದ ನಗದು ಹರಿವುಗಳು, ಸ್ಥಾಪಿತ ವ್ಯಾಪಾರ ತಂತ್ರಗಳು ಮತ್ತು ಡಿವಿಡೆಂಡ್‌ಗಳ ಇತಿಹಾಸದಿಂದಾಗಿ ಅತ್ಯಂತ ಸುರಕ್ಷಿತ ಸ್ಟಾಕ್ ಹೂಡಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ. ಈ ಹೂಡಿಕೆಗಳು ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸ್ಟಾಕ್‌ಗಳು ಮತ್ತು ಫಂಡ್‌ಗಳಂತೆ ಬಾಷ್ಪಶೀಲ (ವೋಲಟೈಲ್) ಆಗಿರುವುದಿಲ್ಲ.

ಆದ್ದರಿಂದ ಈಕ್ವಿಟಿಗಳ ನಡುವೆ ಸುರಕ್ಷಿತ ಆಯ್ಕೆಗಳನ್ನು ಹುಡುಕುವ ಹೊಸ/ಯುವ ಹೂಡಿಕೆದಾರರು ಐದರಿಂದ ಹೆಚ್ಚು ವರ್ಷಗಳ ಹೂಡಿಕೆಯ ನೆಲೆ ಹೊಂದಿದ್ದರೆ, ದೊಡ್ಡ ಬಂಡವಾಳ ಅಥವಾ ಬ್ಲೂ ಚಿಪ್ ಷೇರುಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಹೊಸ ಹೂಡಿಕೆದಾರರು ಟ್ರೇಡಿಂಗ್/ಹೂಡಿಕೆ
ಮಾಡುವ ಮೊದಲು ಮುಂದಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು: ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬುದು ಅವರವರ
ಸಾಮರ್ಥ್ಯಕ್ಕೆ ಬಿಟ್ಟದ್ದು. ಆದರೆ ಹಿಂದೆ ತಿಳಿಸಿದಂತೆ ಕಡಿಮೆ ಮೊತ್ತದ ಹೂಡಿಕೆ ಮಾಡಿದರೆ ಉತ್ತಮ.

ಹೂಡಿಕೆ ಶುರುಮಾಡಲು ಇದು ಸೂಕ್ತ ಸಮಯವೇ? ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಈಕ್ವಿಟಿ ಮಾರುಕಟ್ಟೆಗಳು ಬಾಷ್ಪಶೀಲವಾಗಿವೆ. ಆದ್ದರಿಂದ ಹೂಡಿಕೆದಾರರು ಎಚ್ಚರಿಕೆಯಿಂದ ಮುಂದುವರಿಯಬೇಕು. ಆರಂಭಿಕರಿಗೆ ಮಾರುಕಟ್ಟೆಯ ಡೈನಮಿಕ್ಸ್ ಬಗ್ಗೆ ಚೆನ್ನಾಗಿ ತಿಳಿದಿಲ್ಲವಾದರೂ ಷೇರು ಮಾರುಕಟ್ಟೆಯ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಲು ಮಾರುಕಟ್ಟೆ ಯ ಸೂಚ್ಯಂಕಗಳು ಉತ್ತಮ ಉಲ್ಲೇಖವಾಗಿದೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಅನುಕೂಲವಾಗಿದೆಯೇ? ಎಂಬುದನ್ನು ಮಾತ್ರವಲ್ಲದೆ, ಆರ್ಥಿಕ ಕುಸಿತಗಳು, ದೇಶದಲ್ಲಿ ಬಲಿಷ್ಠ ಸರಕಾರ, ಭೌಗೋಳಿಕ ರಾಜಕೀಯ ಘಟನೆಗಳು, ಆರ್‌ಬಿಐ ಹಣಕಾಸು ನೀತಿ, ಬಡ್ಡಿ ದರಗಳಲ್ಲಿನ ಏರಿಳಿತ, ರಫ್ತು ಮತ್ತು ಆಮದು ನೀತಿ, ಹಣದುಬ್ಬರ ದರ ಅಥವಾ ಸವಕಳಿ ದರ, ವಿದೇಶಗಳ ಆರ್ಥಿಕತೆಯ ಮಟ್ಟ, ಅವರ ಹಣಕಾಸು ನಿಯಮಗಳು, ಹೊರ ದೇಶಗಳಲ್ಲಿ ಶಾಂತ ವಾತಾವರಣ ಇದೆಯೇ? ಎಂಬ ಎಲ್ಲ ಅಂಶಗಳನ್ನು ಹೂಡಿಕೆ ದಾರರು ಅಧ್ಯಯನ ಮಾಡಬೇಕಾಗುತ್ತದೆ.

ಕಂಪನಿಯ ಲಾಭಾಂಶ, ಡಿವಿಡೆಂಡ್ ಇತಿಹಾಸ, ಮಾರ್ಕೆಟ್ ವರದಿಗಳು, ತಜ್ಞರ ಅಭಿಪ್ರಾಯ, ದಿನಪತ್ರಿಕೆಗಳಲ್ಲಿ ಬರುವ ಕಂಪನಿ ಬಗೆಗಿನ ಸಮಾಚಾರ, ಸುದ್ದಿವಾಹಿನಿಗಳಲ್ಲಿ ಬರುವ ತಜ್ಞರ ವಿಶ್ಲೇಷಣೆ, ಇನ್ನಿತರ ಮಾಹಿತಿಗಳನ್ನು ಪಡೆದು ಜಾಗರೂಕತೆಯಿಂದ ಟ್ರೇಡಿಂಗ್/ಹೂಡಿಕೆ ಮಾಡಿದರೆ ನಷ್ಟ ಅನುಭವಿಸುವ ಪ್ರಮೇಯಗಳು ಕಡಿಮೆ. ಅದಕ್ಕಾಗಿ ಷೇರು ಮಾರುಕಟ್ಟೆಯ ಬಗ್ಗೆ ಉನ್ನತ ಜ್ಞಾನ ಹೊಂದಿರಬೇಕು ಮತ್ತು ಜಾಗರೂಕತೆಯಿಂದ
ಇರಬೇಕು. ಷೇರು ವ್ಯವಹಾರದಲ್ಲಿ ಅನುಭವ ಹೊಂದಿದ ಮೇಲೆ, ಇತರ ಟ್ರೇಡಿಂಗ್-ಸರಕು ಮಾರುಕಟ್ಟೆ, ಕರೆನ್ಸಿ ಡೆರಿವೆಟಿವ್ಸ್ ಇತ್ಯಾದಿಗಳಲ್ಲಿ ಟ್ರೇಡಿಂಗ್ ನಡೆಸಬಹುದು.

ಅಲ್ಪಾವಧಿ ಟ್ರೇಡಿಂಗ್ ನಲ್ಲಿ ಅದೇ ದಿನ ಖರೀದಿ ಮತ್ತು ಮಾರಾಟ ಮಾಡಲು ಪರಿಣತರಾಗಿರಬೇಕು. ಇದು ಊಹಾತ್ಮಕ ವ್ಯವಹಾರವಾಗಿದೆ. ಕೆಲವೊಮ್ಮೆ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳ ಷೇರುಗಳನ್ನು, ಅವುಗಳ ಕಾರ್ಯ ನಿರ್ವಹಣೆ ಉತ್ತಮವಾಗಿದ್ದಲ್ಲಿ, ಹೂಡಿಕೆಯ ಸ್ವಲ್ಪ ಮೊತ್ತವನ್ನು
ಅದೇ ದಿನ ಟ್ರೇಡ್ ಮಾಡಿದರೆ ಲಾಭಗಳು ಬರಬಹುದು; ಇಲ್ಲಿ ಮಾರ್ಕೆಟ್ ಚಂಚಲತೆ ಮುಖ್ಯ ಕಾರಣವಾಗಿರುತ್ತದೆ. ಬಂಡವಾಳ ಲಾಭವನ್ನು ಆದಾಯ ತೆರಿಗೆ ಕಾಯ್ದೆಯ ಅನುಸಾರ ಆದಾಯ ಎಂದು ಪರಿಗಣಿಸಲಾಗುತ್ತದೆ. ಅಲ್ಪಾವಽ ಬಂಡವಾಳ ಲಾಭಗಳಿಗೆ ಶೇ.೧೫ರಷ್ಟು ಮತ್ತು ದೀರ್ಘಾವಧಿ ಬಂಡವಾಳ ಲಾಭಗಳಿಗೆ ಶೇ.೧೦ರಷ್ಟು ದರದಲ್ಲಿ ತೆರಿಗೆ ವಿಽಸಲಾಗುತ್ತದೆ. ಆದರೆ ಅದೇ ದಿನದಂದು ಕೊಳ್ಳುವ ಮತ್ತು ಮಾರಾಟ ಮಾಡುವ ಟ್ರೇಡಿಂಗ್
‘ಊಹಾತ್ಮಕ ಟ್ರೇಡಿಂಗ್’ ಆಗಿರುವುದರಿಂದ, ಇದರ ಆದಾಯವನ್ನು ಐಟಿ ಕಾಯಿದೆ ಅನ್ವಯ ‘ವ್ಯಾಪಾರ ಆದಾಯ’ ಎಂದು ಪರಿಗಣಿಸಲಾಗುತ್ತದೆ.

ಹಿಂದೆ ನಮೂದಿಸಿರುವ ಅಂಶಗಳನ್ನು ಗಮನದಲ್ಲಿಟ್ಟು ಷೇರು ವ್ಯವಹಾರ ಮಾಡಿದರೆ ಉತ್ತಮ ಲಾಭಾಂಶ ಪಡೆಯಬಹುದು. ಇದಕ್ಕೆ ತದ್ವಿರುದ್ಧವಾಗಿ ಕೆಲವು ಕಂಪನಿಗಳ ಷೇರುಗಳು ತುಂಬಾ ಚಂಚಲತೆಯನ್ನು ಹೊಂದಿರುತ್ತವೆ. ಹೂಡಿಕೆದಾರರು ಷೇರು ಟ್ರೇಡಿಂಗ್‌ನಲ್ಲಿ ತಮ್ಮ ತಾಳ್ಮೆಯನ್ನು ಕಳೆದು ಕೊಳ್ಳದೆ, ಸ್ಥಿತಿಗತಿಗಳನ್ನು ಅರಿತುಕೊಂಡು, ಇತಿಮಿತಿಯಾಗಿ ಅತ್ಯಂತ ಸಂಯಮದಿಂದ ಇರಬೇಕು. ದುರಾಸೆಯಿದ್ದರೆ ಅನಾಹುತ ಖಂಡಿತ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)